ನಿರ್ದೇಶಕ, ನಟ 'ಜೋಗಿ' ಪ್ರೇಮ್ ತಾಯಿ ಭಾಗ್ಯಮ್ಮ ನಿಧನ
ನಟ, ನಿರ್ದೇಶಕ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ಶುಕ್ರವಾರ ನಿಧನರಾದರು. ಅವರು ಕಳೆದ ಆರು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್‌ನಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು.
Recommended Video
ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಭಾಗ್ಯಮ್ಮ ಅವರು ನಿಧನರಾದ ಸುದ್ದಿಯನ್ನು ಪ್ರೇಮ್ ಪತ್ನಿ, ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಭಾಗ್ಯಮ್ಮ ಮಂಡ್ಯದ ಬೆಸಗರಹಳ್ಳಿಯವರು. ಪ್ರೇಮ್ ಅವರ ಬಹುತೇಕ ಎಲ್ಲ ಸಿನಿಮಾಗಳಲ್ಲಿ ತಾಯಿ ಪ್ರೀತಿಯ ಸೆಂಟಿಮೆಂಟ್ ದೃಶ್ಯಗಳು ಸಾಮಾನ್ಯವಾಗಿದ್ದವು. ತಾಯಿ ಸೆಂಟಿಮೆಂಟ್ ಅನ್ನು ತೆರೆಯ ಮೇಲೆ ತೋರಿಸುವುದಲ್ಲಿ ಪ್ರಸಿದ್ಧರಾಗಿದ್ದ ನಿರ್ದೇಶಕ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾಗ್ಯಮ್ಮ ಅವರಿಗೆ ಕಿರಣ್ (ಪ್ರೇಮ್) ಮತ್ತು ಅರುಣ್ ಎಂಬ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳು ಇದ್ದಾರೆ.
'ಪ್ರೇಮ್ ಅವರ ತಾಯಿಯನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಪ್ರೇಮ್ ಅವರ ಬಳಿ ಕೆಲಸ ಮಾಡುವಾಗ ಅವರನ್ನು ಕರೆದುಕೊಂಡು ಬರಲು ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆ. ಅವರ ತಾಯಿ ಬಹಳ ಚೆನ್ನಾಗಿ ಮಾತಾಡೋರು. ಪ್ರೇಮ್ ಅವರ ಹೆಸರು ಕಿರಣ್ ಎಂದು. ಮಗನನ್ನು ಕಿರಣ ಎಂದೇ ಕರೆಯುತ್ತಿದ್ದರು. ಬಹಳ ಮುಗ್ಧ ಮತ್ತು ವಿನಯದ ವ್ಯಕ್ತಿತ್ವ ಅವರದು. ಪ್ರೇಮ್ ಅವರ ಬಳಿ ನೇರವಾಗಿ ಏನನ್ನೂ ಹೇಳುತ್ತಿರಲಿಲ್ಲ. ಏನಾದರೂ ಹೇಳಬೇಕು ಎಂದರೆ ನಮ್ಮ ಮೂಲಕ ಮಗನಿಗೆ ಹೇಳಿಸುತ್ತಿದ್ದರು' ಎಂದು ಪ್ರೇಮ್ ಅವರ ಸಹಾಯಕನಾಗಿ ಕೆಲಸ ಮಾಡಿದ್ದ ನಿರ್ದೇಶಕ ಹರಿ ಸಂತೋಷ್ 'ಫಿಲ್ಮಿ ಬೀಟ್'ಗೆ ತಿಳಿಸಿದರು.


Click it and Unblock the Notifications











