"ಕಬ್ಜದಿಂದ ಸರ್ಕಾರಕ್ಕೆ ₹20 ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ.. ಹಗುರವಾಗಿ ಮಾತಾಡ್ಬೇಡಿ"; ಆರ್. ಚಂದ್ರು ಭಾವುಕ
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ತೆರೆಕಂಡ ಬಳಿಕ ನಿರ್ದೇಶಕ ಆರ್.ಚಂದ್ರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಒಂದೇ ವೇದಿಕೆ ಮೇಲೆ ಐದು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಇಂತಹ ಸಾಹಸಕ್ಕೆ ಕನ್ನಡ ಹಾಗೂ ಬಾಲಿವುಡ್ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು.
ಆರ್.ಚಂದ್ರು ಈ ಬಾರಿ ಸುಮಾರು 400 ಕೋಟಿ ವೆಚ್ಚದಲ್ಲಿ ಐದು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ಆನಂದ್ ಪಂಡಿತ್ ಹಾಗೂ ಕನ್ನಡದವರೇ ಆದ ಅಲಂಕಾರ್ ಪಾಂಡಿಯನ್ ಹಣದ ನೆರವು ನೀಡುತ್ತಿದ್ದಾರೆ. ಈಗಾಗಲೇ ಆರ್. ಚಂದ್ರು 'ಕಬ್ಜ'- 2 ಅನೌನ್ಸ್ ಮಾಡಿದ್ದಾರೆ. ಇದರೊಂದಿಗೆ 'ಶ್ರೀರಾಮ ಬಾಣ ಚರಿತ', 'ಫಾದರ್', 'DOG', 'POK' ಎಂಬ ಹೊಸ ನಾಲ್ಕು ಸಿನಿಮಾಗಳು ಅವರ ಆರ್‌ಸಿ ಸ್ಟುಡಿಯೋದಲ್ಲಿ ಅನೌನ್ಸ್ ಆಗಿವೆ.

'ಕಬ್ಜ' ಸಿನಿಮಾ ಬಳಿಕ ಆರ್.ಚಂದ್ರು ವಿರುದ್ಧ ಚಿತ್ರರಂಗ ಅಪಸ್ವರ ಎತ್ತಿದ್ದರು. ಕೆಲ ಸಿನಿಮಾ ಮಂದಿ ಅವರಿಂದಲೇ ಕನ್ನಡ ಚಿತ್ರರಂಗಕ್ಕೆ ಸಂಕಷ್ಟ ಬಂದಿದೆ ಅಂತ ಮಾತಾಡಿಕೊಂಡಿದ್ದೂ ಇದೆ. 'ಕಬ್ಜ' ಸಿನಿಮಾ ಖರೀದಿ ಬಳಿಕವೇ ಓಟಿಟಿ ವೇದಿಕೆಗಳು ಸಿನಿಮಾ ಖರೀದಿ ಮಾಡುತ್ತಿಲ್ಲ ಅಂತ ಮಾತುಗಳು ಕೇಳಿ ಬಂದಿದ್ದವು. ಅದಕ್ಕೀಗ ಆರ್. ಚಂದ್ರು ಐದು ಸಿನಿಮಾಗಳನ್ನು ಅನೌನ್ಸ್ ಮಾಡಿ, ವೇದಿಕೆ ಮೇಲೆ ತಿರುಗೇಟು ನೀಡಿದ್ದಾರೆ. ಇದರ ಝಲಕ್ ಇಲ್ಲಿದೆ.
"ನನಗೆ ಐದು ಸಿನಿಮಾ ಕಷ್ಟನೇ ಅಲ್ಲ"
"ನನ್ನ ಜೀವನದಲ್ಲಿ ಇದೊಂದು ಮಹತ್ವವಾದ ಘಟ್ಟ. ನಾನು ಒಬ್ಬಂಟಿಯಾಗಿ 12 ಸಿನಿಮಾ ಮಾಡಿದ್ದೇನೆ. ನನಗೀಗ ಒಂದು ದೊಡ್ಡ ತಂಡ ಸಿಕ್ಕಿದೆ. ಅದಕ್ಕೆ ಐದು ಸಿನಿಮಾ ಮಾಡುತ್ತಿದ್ದೇನೆ. ನನಗೆ ಐದು ಸಿನಿಮಾ ಕಷ್ಟನೇ ಅಲ್ಲ. ನಿಮ್ಮ ಆಶೀರ್ವಾದವಿದ್ದರೆ 50 ಸಿನಿಮಾವನ್ನೂ ಮಾಡುತ್ತೇನೆ. ಯಾಕಂದ್ರೆ ನಮ್ಮ ಟೀಮ್ ಹಾಗಿದೆ. ಆ ಸ್ಥಾನವನ್ನು ನಾನು ಹಾಗೆ ಉಳಿಸಿಕೊಂಡಿದ್ದೇನೆ."- ಆರ್. ಚಂದ್ರು.
"ಹತ್ತು ತಿಂಗಳು ಸುಮ್ಮನೆ ಕೂತಿರಲಿಲ್ಲ"
"ಇದು ಸ್ಪಷ್ಟನೆ ಕೊಡುವ ಸಮಯವಲ್ಲ. ಆದರೂ, ಈ ಹತ್ತು ತಿಂಗಳು ಸುಮ್ಮನೆ ಕೂತಿರಲಿಲ್ಲ. ಮಾಡಿದರೆ ಬೇರೆ ಏನೋ ಮಾಡಬೇಕು. ಕಲ್ಲು ಹೊಡೆದರೆ ಲೈಟ್ ಕಂಬಕ್ಕೆ ಹೊಡೆಯಬಾರದು. ಚಂದ್ರಲೋಕಕ್ಕೆ ಕಲ್ಲು ಹೊಡೆಯಬೇಕು ಅಂತ. ಅಂದರೆ, ಹಾರ್ಡ್ ವರ್ಕ್ ಮಾಡಿದ್ದೀನಿ." ಎಂದು ಆರ್.ಚಂದ್ರು ಹೇಳಿದ್ದಾರೆ.
"100 ಕೋಟಿ ರೂ. ಹಾಕಿದ್ದು ತಪ್ಪಾ ನಾನು?"
"ಯಾರೋ ಒಬ್ಬ ದೊಡ್ಡ ನಿರ್ಮಾಪಕರು ಅಣ್ಣಾ ಹಿಂಗೆ ಮಾಡಿಬಿಟ್ಟ ಪೋನ್ ಮಾಡಿದ್ದಾರೆ. ಅವರ ಹೆಸರನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟ ಪಡುವುದಿಲ್ಲ. ಹೌದಾ, ಚಂದ್ರು ಆ ಮಟ್ಟಿಗೆ ಮಾಡಿದ್ದಾನಾ? ಅಂದ್ಕೊಂಡ್ರು. 100 ಕೋಟಿ ಹಾಕಿದ್ದು ತಪ್ಪಾ ನಾನು? ಇಷ್ಟು ಜನರಿಗೆ ಕೆಲಸ ಕೊಡಿಸಿದ್ದು ತಪ್ಪಾ? ನಾನು ಯಾರಿಗೂ ನೋವು ಮಾಡುವುದಿಲ್ಲ. ಪಾಸಿಟಿವ್ ಆಗಿ ನುಗ್ಗುವವನು ನಾನು." ಎಂದು ಕಾಲೆಳೆದವರಿಗೆ ತಿರುಗೇಟು ನೀಡಿದ್ದಾರೆ.

"ಸರ್ಕಾರಕ್ಕೆ 20 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದೀನಿ"
"ಮಾಡಿದ್ದೆಲ್ಲ ಸಿನಿಮಾ ಹಿಟ್ ಆಗೋದಿಲ್ಲ. ಪ್ರಭಾಸ್ ಸಿನಿಮಾ ಫ್ಲಾಪ್ ಆಗುತ್ತೆ. ರಜನಿ ಸಾರ್ ಸಿನಿಮಾ ಫ್ಲಾಪ್ ಆಗುತ್ತೆ. ಎಲ್ಲರ ಸಿನಿಮಾನೂ ಫ್ಲಾಪ್ ಆಗುತ್ತೆ. ನಂದೂ ಕೂಡ ಒಂದು ಸಣ್ಣ ಕ್ರ್ಯಾಶ್ ಆಗಿರಬಹುದು. 'ಕಬ್ಜ'ಯಿಂದ ಸರ್ಕಾರಕ್ಕೆ ನಾನು 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಓಪನ್ ಆಗಿ ಹೇಳುತ್ತಿದ್ದೇನೆ. ಯಾರಾದೂ ಹೇಳುತ್ತಾರಾ?" ಎಂದು ಆರ್ ಚಂದ್ರು ಸವಾಲೆಸೆದಿದ್ದಾರೆ.
"ಮುಂಬೈಗೆ ಹೋದ್ರ ನಾಲ್ಕೇ ಸಿನಿಮಾ ಹೇಳೋದು"
"ಇವತ್ತು ಮುಂಬೈಗೆ ಹೋದರೆ 'ಕಬ್ಜ', 'ಕಾಂತಾರ', 'ಕೆಜಿಎಫ್','ವಿಕ್ರಾಂತ್ ರೋಣ' ಈ ನಾಲ್ಕು ಸಿನಿಮಾ ಇದ್ದಿದ್ದರಿಂದ ಮತ್ತೆ ಮಾತಾಡೋ ಹಾಗಾಯ್ತು. ಒಂದು ಮಾಹಿತಿಗೆ ಹೇಳುತ್ತೇನೆ ಅಮೆಜಾನ್ ಓಟಿಟಿ ಇನ್ನೊಂದು ಮತ್ತೊಂದು ಯಾರಿಂದ ಯಾರೂ ಆಗಲ್ಲ. ಅವರೂ ಬುದ್ಧಿವಂತರು. ಎಲ್ಲಾರದ್ದೂ ಮಲ್ಟಿನ್ಯಾಷನಲ್ ಕಂಪನಿ. 16 ಜನ ಕಬ್ಜ ಸಿನಿಮಾದ ಕಥೆ ಕೇಳಿದ್ರು. ಅವರಿಗೆ ಜಡ್ಜ್‌ಮೆಂಟ್ ಇರಲಿಲ್ವಾ? ನಾಲ್ಕು ಗಂಟೆ ಫುಟೇಜ್ ನೋಡಿದ್ರು. ಜಡ್ಜ್‌ಮೆಂಟ್ ಇರಲಿಲ್ವಾ?" ಎಂದು ಆರ್ ಚಂದ್ರು ಪ್ರಶ್ನೆ ಮಾಡಿದ್ದಾರೆ.
"ನನ್ನ ಹಿಂದೆ ಮಾತಾಡೋರಿಗೆ ನನ್ನದೊಂದು ಮನವಿ"
"ನನ್ನ ಹಿಂದೆ ಮಾತಾಡೋರಿಗೆ ನನ್ನದೊಂದು ಮನವಿ. ನನಗೆ ಡೈರೆಕ್ಟ್ ಮಾತಾಡಿ. ನಿಮಗೆ ಏನೇ ಕ್ಲಾರಿಟಿ ಬೇಕಿದ್ದರೂ ನಾನೇ ಕೊಡುತ್ತೇನೆ. ಇದು ಹೇಳಬೇಕಾಗಿತ್ತು. ನಾನು 10 ತಿಂಗಳಿಂದ ಮಾತಾಡಿರಲಿಲ್ಲ. ಹಾಗಂತ ಸುಮ್ಮನೆ ಕೂತಿರಲಿಲ್ಲ. ಐದು ಸಿನಿಮಾ ರೆಡಿ ಮಾಡುತ್ತಿದ್ದೆ. ಒಂದೊಂದೇ ಫ್ಲೋರ್‌ಗೆ ಹೋಗುತ್ತೆ. ಇದೇ ವರ್ಷ ಈ ಐದೂ ಸಿನಿಮಾ ರಿಲೀಸ್ ಮಾಡೋ ಟಾರ್ಗೆಟ್ ಇದೆ." ಎಂದು ಆರ್.ಚಂದ್ರು ಮನವಿ ಮಾಡಿದ್ದಾರೆ.


Click it and Unblock the Notifications











