Kabzaa: 30 ವಿಂಟೇಜ್ ಕಾರು.. 30 ಲಾರಿ.. 300 ಬೈಕ್.. 70 ಜೀಪು: 'ಕಬ್ಜ' ಅಸಲಿ ಖಬರ್ ಏನು?
ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ದೇಶದೆಲ್ಲಡೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಟ್ರೈಲರ್ ರಿಲೀಸ್ ಆದ ಕ್ಷಣದಿಂದ ಎಲ್ಲರ ಬಾಯಲ್ಲೂ 'ಕಬ್ಜ'ನೇ ಓಡಾಡುತ್ತಿದೆ. ಅದರಲ್ಲೂ ರೆಟ್ರೋ ಸ್ಟೋರಿಯನ್ನಿಟ್ಕೊಂಡು ಸಿನಿಮಾ ಮಾಡಬೇಕು ಅಂತ ಹೊರಟಾಗ ನೂರೆಂಟು ಸವಾಲುಗಳು ಎದುರಾಗುತ್ತವೆ. ಒಂದೊಂದು ಫ್ರೇಮ್ ಕೂಡ ಆ ಕಾಲದಂತೆಯೇ ಕಾರಣಬೇಕು. ನಾರ್ಮಲ್ ಮಾಸ್ ಸಿನಿಮಾ ಮಾಡುವುದಕ್ಕಿಂತ ರೆಟ್ರೋ ಸಿನಿಮಾ ಮಾಡೋದು ಕಷ್ಟದ ಕೆಲಸ.
'ಕಬ್ಜ' ಹೇಳಿ-ಕೇಳಿ 1945ರಲ್ಲಿ ನಡೆಯೋ ಕಥೆ. ಹೀಗಾಗಿ ಅಂದಿನ ಕಾಲಕ್ಕೆ ಹೋಲುವಂತಹದ್ದೇ ವಾತಾವರಣ ಸೃಷ್ಟಿ ಮಾಡಬೇಕು. ಇದಕ್ಕಾಗಿ ನಿರ್ದೇಶಕ ಆರ್ ಚಂದ್ರು ಸಾಕಷ್ಟು ಪೂರ್ವ ತಯಾರಿಗಳನ್ನೇ ಮಾಡಿಕೊಂಡಿದ್ದರು. ಒಂದೇ ಒಂದು ಚಿಕ್ಕ ಫ್ರೇಮ್ ಕೂಡ ಟೀಕೆಗೆ ಒಳಗಾಗಬಾರದು ಎಂದು ಬಯಸಿದ್ದರು. ಅದರಂತೆಯೇ ನೂರೆಂಟು ಪ್ರಾಪರ್ಟಿಗಳನ್ನು ಬಳಸಿದ್ದಾರೆ. ಅದರಲ್ಲೂ 'ಕಬ್ಜ'ದಲ್ಲಿ ಬಳಸಿರೋ ನೂರಾರು ವಿಂಟೇಜ್ ವಾಹನಗಳೇ ಇದಕ್ಕೆ ಸಾಕ್ಷಿ.

'ಕಬ್ಜ'ದಲ್ಲಿ ವಿಂಟೇಜ್ ವಾಹನಗಳದ್ದೇ ಹಬ್ಬ
'ಕಬ್ಜ' ಸದ್ಯಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ ಸ್ಯಾಂಡಲ್‌ವುಡ್‌ನ ಮೂವರು ದಿಗ್ಗಜರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಾಗ, ಅದರ ಕ್ರೇಜ್ ಹೇಗಿರುತ್ತೆ? ಅನ್ನೋದನ್ನು ಈಗ ಊಹಿಸಿಕೊಳ್ಳಬಹುದು. ಇವರೆಲ್ಲರೂ ಪವರ್‌ಫುಲ್ ಆಗಿ ಕಾಣಿಸಿಕೊಳ್ಳಬೇಕು ಅಂದರೆ, ಸಿನಿಮಾದಲ್ಲಿ ಬರುವ ವಿಂಟೇಜ್ ಕಾರುಗಳು, ಬೈಕ್‌ಗಳು, ಲಾರಿಗಳು ಕೂಡ ಗಮನ ಸೆಳೆಯುತ್ತಿವೆ. ಈಗಾಗಲೇ ರಿಲೀಸ್ ಆಗಿರೋ ಟ್ರೈಲರ್‌ಗಳಲ್ಲಿ ಅವುಗಳ ಝಲಕ್ ಎದ್ದು ಕಾಣಿಸುತ್ತಿದೆ. ತೀರ ಅಪರೂಪಕ್ಕೆ ಕಾಣ ಸಿಗುವ ವಿಂಟೇಜ್ ಕಾರುಗಳೂ ಈ ಸಿನಿಮಾದ ಹೈಲೈಟ್‌ಗಳಲ್ಲೊಂದು.
ಅಂದ್ಹಾಗೆ 'ಕಬ್ಜ' ಸಿನಿಮಾದ ಶೂಟಿಂಗ್‌ಗಾಗಿ ಕಲಾ ಫಾರ್ಮ್‌ನಿಂದ 30 ವಿಂಟೇಜ್ ಕಾರುಗಳನ್ನು ತರಿಸಿ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಈ ಸಿನಿಮಾ 30 ಲಾರಿಗಳನ್ನು ಬಳಸಲಾಗಿದ್ದು, ಬೇರೆ ಬೇರೆ ಕಡೆಗಳಿಂದ ತರಿಸಲಾಗಿತ್ತು. ಇಷ್ಟೇ ಅಲ್ಲ 40 ಹಾಗೂ 50 ದಶಕದ ಸುಮಾರು 300 ಬೈಕ್‌ಗಳನ್ನು ಈ ಸಿನಿಮಾದಲ್ಲಿಯೇ ಬಳಸಿಕೊಳ್ಳಲಾಗಿದೆ. ಇದರೊಂದಿಗೆ 70 ಜೀಪ್‌ಗಳು ಕೂಡ ಸದ್ದು ಮಾಡಲಿವೆ. ಇದು ರೆಟ್ರೋ ಪ್ರಿಯರಿಗೆ ಮಸ್ತ್ ಮಜಾ ಕೊಡಲಿದೆ.
4 ದಶಕಗಳ ಕಥೆಗೆ ವಿಂಟೇಜ್ ಟಚ್.. ಸವಾಲುಗಳೇನಿತ್ತು?
ವಿಂಟೇಜ್ ಕಾರುಗಳನ್ನು ಸಿನಿಮಾ ಸೆಟ್ಟಿಗೆ ತರಿಸೋದು ದೊಡ್ಡ ಮಾತು ಅಲ್ಲವೇ ಅಲ್ಲ. ಆದರೆ, ಅವುಗಳನ್ನು ಇಟ್ಕೊಂಡು ನೂರಾರು ದಿನಗಳ ಕಾಲ ಶೂಟಿಂಗ್ ಮಾಡೋದು ಅಷ್ಟೊಂದು ಸುಲಭ ಅಲ್ಲವೇ ಅಲ್ಲ. ಅದರಲ್ಲೂ ಆ್ಯಕ್ಷನ್ ಸೀನ್ ಮಾಡುವಾಗ ಜಾಗರೂಕರಾಗಿ ಇರಲೇಬೇಕು. ಒಂದೇ ಒಂದು ಕಾರಿಗೂ ನಷ್ಟ ಆಗದೆ ಇರುವಂತೆ ನೋಡಿಕೊಳ್ಳಬೇಕು. ಆ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಸಿನಿಮಾ ಶೂಟಿಂಗ್ ಮಾಡಲಾಗಿದೆ.

'ಕಬ್ಜ' ಸಿನಿಮಾ 1945ರಿಂದ 1987ರವರೆಗೆ ನಡೆಯುವ ಕಥೆ. ಈ ಕಾಲದಲ್ಲಿ ಸದ್ದು ಮಾಡಿದ್ದ ವಾಹನಗಳನ್ನು ಇಲ್ಲಿಯೂ ತರಲಾಗಿದೆ. ಹೀಗಾಗಿ ತೆರೆಮೇಲೆ ಇಷ್ಟೆಲ್ಲ ವಾಹನಗಳನ್ನು ಹೇಗೆ ತರಲಾಗಿದೆ. ಈ ಸಿನಿಮಾದ ಕಥೆಗೆ ಅದೆಲ್ಲ ಎಷ್ಟು ಮುಖ್ಯ ಅನ್ನೋದು ಸಿನಿಮಾ ತೆರೆಕಂಡ ಬಳಿಕವೇ ಗೊತ್ತಾಗಲಿದೆ.
ಕೋಟಿ ಕೋಟಿ ಸುರಿದ 'ಕಬ್ಜ'
'ಕಬ್ಜ' ಸಿನಿಮಾ ಸುಮ್‌ಸುಮ್ಮನೆ ಆರಂಭ ಆಗಿದ್ದಲ್ಲ. ಇದು ಆರ್ ಚಂದ್ರು ದೊಡ್ಡ ಕನಸು. 'ಕೆಜಿಎಫ್' ಸಿನಿಮಾದಂತೆ 'ಕಬ್ಜ' ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆಯಬೇಕು ಅಂತ ಶತಪ್ರಯತ್ನ ಮಾಡಲಾಗಿದೆ. ಇದು ಈ ಸಿನಿಮಾದಲ್ಲಿ ಬಳಸಲಾದ ಕಾರುಗಳನ್ನು ನೋಡಿದ್ರೆ, ಸಿನಿಮಾ ಹೇಗಿರಬಹುದು ಅಂತ ಗೆಸ್ ಮಾಡಬಹುದು.
'ಕಬ್ಜ' ಸಿನಿಮಾ ಇದೇ ತಿಂಗಳು (ಮಾರ್ಚ್ 17) ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಉಪೇಂದ್ರ, ಶಿವಣ್ಣ, ಕಿಚ್ಚ ಸುದೀಪ್ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡುತ್ತೆ ಅನ್ನೋ ನಂಬಿಕೆಯಿದೆ. ಅಲ್ಲದೆ, ಸದ್ದಿಲ್ಲದೆ ಬಿಡುಗಡೆಗೂ ಮುನ್ನವೇ 'ಕಬ್ಜ 2'ಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ ಆರ್ ಚಂದ್ರು. ಹೀಗಾಗಿ 'ಕಬ್ಜ' ಮೇಲೆ ನಿರೀಕ್ಷೆಗಳು ಹೆಚ್ಚಾಗಿಯೇ ಇದೆ.


Click it and Unblock the Notifications











