ಯುವ ರಾಜ್‌ಕುಮಾರ್ 2ನೇ ಸಿನಿಮಾ 'ಎಕ್ಕ' ಟೈಟಲ್ ಇಟ್ಟಿದ್ದೇಕೆ? ಕಿಂಗ್‌ಗಿಂತ ಮೇಲಿರುವವನೇ 'ಎಕ್ಕ'.. ಏನಿದ ಅರ್ಥ?
'ಉತ್ತರಕಾಂಡ' ಸಿನಿಮಾ ಮಾಡುತ್ತಿರುವಾಗ ಶಿವಣ್ಣಗೆ ಹುಷಾರಿಲ್ಲದ ವಿಷಯ ಗೊತ್ತಾಗಿತ್ತು. ಆಗ ಒಂದು ಚಿಕ್ಕದೊಂದು ವಿರಾಮ ತೆಗೆದುಕೊಳ್ಳಬೇಕು ಎನ್ನುವ ನ್ಯೂಸ್ ಬಂತು. ಅದು ಇಡೀ ತಂಡಕ್ಕೆ ದೊಡ್ಡ ಶಾಕ್ ಆಗಿತ್ತು. ಆಗ ಎಲ್ಲರಲ್ಲೂ ಮುಂದೆ ಏನು ಮಾಡಬೇಕು ಅನ್ನೋ ಆಲೋಚನೆ. ಆಗ ಕೆಆರ್‌ಜಿ ಸ್ಟುಡಿಯೋದ ಯೋಗಿ ಹಾಗೂ ಕಾರ್ತಿಕ್ ಚರ್ಚೆ ಮಾಡುತ್ತಲೇ ಇದ್ದರು. ಆಗ ಕಾರ್ತಿಕ್, ಜಯಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೂವರು ಸ್ಕ್ರಿಪ್ಟ್‌ಗಳನ್ನು ಹುಡುಕುವುದಕ್ಕೆ ಶುರು ಮಾಡಿದ್ದರು. 15 ರಿಂದ 20 ದಿನ ಕೇವಲ ಆ ಹೀರೋ, ಈ ಹೀರೋ, ಆ ಕಥೆ, ಈ ಕಥೆ ಅಂತ ಚರ್ಚೆ ಮಾಡುತ್ತಲೇ ಇದ್ದರು. ಆ ಸಮಯದಲ್ಲಿ ಹೊಳೆದಿದ್ದು 'ಎಕ್ಕ'.
ರೋಹಿತ್ ಪದಕಿ ಹೇಳಿದ ಕಥೆ ಎಲ್ಲರಿಗೂ ಇಷ್ಟ ಆಗಿತ್ತು. ಆಗ ಹೀರೋ ಯಾರು ಅಂತ ಯೋಚನೆ ಮಾಡುತ್ತಿರುವಾಗ ಜಯಣ್ಣ ಅವರೇ ಯುವ ರಾಜ್‌ಕುಮಾರ್ ಅವರನ್ನು ಹೆಸರು ಹೇಳಿದ್ದರು. ಯುವ ಈ ಸಿನಿಮಾಗೆ ಸೂಟ್ ಆಗುತ್ತಾರೆಂದು ಜಯಣ್ಣ ಹೇಳುತ್ತಿದ್ದಂತೆ. ಮೂವರು ನಿರ್ಮಾಪಕರೂ ಸಮ್ಮತಿಸಿದ್ದರು.

ಇತ್ತ ಯುವ ರಾಜ್‌ಕುಮಾರ್ ಹಾಗೂ ರೋಹಿತ್ ಪದಕಿ ಇಬ್ಬರೂ ಸುಮಾರು ವರ್ಷಗಳಿಂದ ಟಚ್‌ನಲ್ಲಿಇದ್ದರು. ರೋಹಿತ್ ಪದಕಿ ಜೊತೆ ಸಿನಿಮಾ ಮಾಡಬೇಕು ಅಂತ ಯುವ ರಾಜ್‌ಕುಮಾರ್‌ಗೂ ಆಸೆಯಿತ್ತು. ಆಗ ರೋಹಿತ್ ಪದಕಿ ಹೇಳಿದ 'ಎಕ್ಕ' ಕಥೆ ಎಲ್ಲರಿಗೂ ಇಷ್ಟ ಆಗಿತ್ತು. ಎಕ್ಕದ ಕಥೆ ಹೇಳಿದಾಗ ಯುವ ರಾಜ್‌ಕುಮಾರ್‌ಗೆ ಈ ಪಾತ್ರದಲ್ಲಿ ಒಂದು ವೆರೈಟಿ ಇದೆ ಎಂದು ಅನಿಸಿತ್ತು. ಪಾತ್ರದ ಮ್ಯಾನರಿಸಂ, ಟ್ರಾನ್ಸ್‌ಫರ್ಮೆಷನ್ ಎಲ್ಲವೂ ಇಷ್ಟ ಆಗಿತ್ತು.
'ಎಕ್ಕ' ಸಿನಿಮಾದ ಕಥೆ ಏನೋ ಇಷ್ಟ ಆಗಿತ್ತು. ಆದರೆ, ಇಷ್ಟು ಸಮಯದೊಳಗೆ ಸಿನಿಮಾ ಮುಗಿಯಲೇಬೇಕಿತ್ತು. ಯಾಕಂದ್ರೆ, ರೋಹಿತ್ ಪದಕಿಯವರೇ 'ಉತ್ತರಕಾಂಡ'ಗೂ ನಿರ್ದೇಶಕರಾಗಿದ್ದರಿಂದ ಅದನ್ನು ಶುರು ಮಾಡಬೇಕಿತ್ತು. ಹೀಗಾಗಿ ಆರು ತಿಂಗಳ ಒಳಗೆ ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿ, ಶೂಟಿಂಗ್ ಮುಗಿಸಬೇಕಿತ್ತು. ಸೆಪ್ಟೆಂಬರ್‌ನಲ್ಲಿ ಶುರುವಾಗಿದ್ದು, ನವೆಂಬರ್‌ನಲ್ಲಿ ಪೂಜೆನೇ ಆಗಿ ಹೋಯ್ತು.
ಇನ್ನು ಈ ಪ್ರಾಜೆಕ್ಟ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿಕೊಂಡಿದ್ದರು. ವಜ್ರೇಶ್ವರಿ ಹಾಗೂ ಪಿಆರ್‌ಕೆ ಬ್ಯಾನರ್‌ನ ಪದ್ದತಿಯ ಪ್ರಕಾರ ಒಂದೇ ಶೆಡ್ಯೂಲ್‌ನಲ್ಲಿ ಸಿನಿಮಾ ಮುಗಿಸಿಬಿಡಬೇಕು. ಇಡೀ ಒಂದೇ ಪ್ರಾಜೆಕ್ಟ್ ಕಡೆಗೆ ಗಮನ ಹರಿಸುವುದು. ಹೀಗಾಗಿ ಎಲ್ಲವೂ ಹಿಂದೆ ಹಿಂದೆನೇ ರೆಡಿಯಾಗಿತ್ತು. ಈಗ ಯುವ ರಾಜ್‌ಕುಮಾರ್ ಅಭಿನಯದ ಎರಡನೇ ಸಿನಿಮಾ 'ಎಕ್ಕ' ಹುಟ್ಟಿತ್ತು.

ಆದರೆ, ಸಿನಿಮಾ ಶುರು ಮಾಡುವಾಗ ಇನ್ನೂ 'ಎಕ್ಕ' ಅಂತ ಟೈಟಲ್ ಇಟ್ಟಿರಲಿಲ್ಲ. ಕ್ಯಾರೆಕ್ಟರ್ ಇತ್ತು. ಕ್ಯಾರೆಕ್ಟರ್ ಜರ್ನಿ ಇತ್ತು. ಆರು ತಿಂಗಳಲ್ಲಿ ಜರ್ನಿ ಮಾಡಬೇಕು. ಯಾರಾದರೂ ಈ ಪ್ರಾಜೆಕ್ಟ್ ಅನ್ನು ಹಗಲು ರಾತ್ರಿ ಎನ್ನದೆ ಮಾಡಬೇಕಿತ್ತು. ಬೇಗನೇ ಮುಗಿಸಬೇಕಿತ್ತು. ಆಗ ರೋಹಿತ್ ಪದಕಿ ಒಬ್ಬ ವಿಕ್ರಂ ಹತ್ವಾರ್ ಎಂಬ ಲೇಖಕರನ್ನು ಪರಿಚಯಿಸಿದರು. ಅವರಿಗೆ ಸಿನಿಮಾ ಬರವಣಿಗೆ ಬಗ್ಗೆ ಆಸಕ್ತಿಯಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಬೆಳೆದಿದ್ದರು. ಹೀಗಾಗಿ ಸಿನಿಮಾ ಥೀಮ್ ಏನಿರಬೇಕು? ಅನ್ನೋದರ ಕ್ಲಾರಿಟಿ ತೆಗೆದುಕೊಂಡು ವಿಕ್ರಂ ಹತ್ವಾರ್ ಕಥೆಯನ್ನು ಸೃಷ್ಟಿ ಮಾಡುತ್ತಾ ಹೋದರು.
"ಎಕ್ಕ ಅಂದರೆ ಕಿಂಗ್‌ಗಿಂತ ಮೇಲೆ ಇರೋದು. ಆಟದಲ್ಲಿ ಕಿಂಗ್‌ಗಿಂತ ಮೇಲೆ ಆಡುವುದಕ್ಕೆ ಸಾಧ್ಯತೆ ಇರೋದು ಎಕ್ಕಗೇನೆ. ನಮ್ಮ ಸಮಾಜದಲ್ಲಿ ಕಿಂಗ್‌ಗಿಂತ ಮೇಲೆ ಇರೋದು ಕಾಮನ್ ಮ್ಯಾನ್. ಈ ಕಾಮನ್ ಮ್ಯಾನ್ ಇಲ್ಲಿ ಎಕ್ಕ. ಅದೇ ಈ ಕಥೆಯ ಯೋಚನೆ. ಈ ಟೈಟಲ್‌ನ ಯೋಚನೆ. ಕಿಂಗ್‌ಗಿಂತ ಮೇಲೆ ಇರುವವನೇ ಎಕ್ಕ." ಎಂದು ನಿರ್ದೇಶಕ ರೋಹಿತ್ ಪದಕಿ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಎಕ್ಕ'ದ ಚಿತ್ರಕಥೆಯನ್ನು ಬರೆಯುವಾಗ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಆಮೇಲೆ ಹಂತ ಹಂತವಾಗಿ ಬೇರೆ ಬೇರೆ ಬದಲಾವಣೆಗಳು ಆಗುತ್ತಾ ಹೋಯ್ತು. ಕಾಮಿಡಿ ಸೀನ್‌ಗಳು, ಎಮೋಷನ್‌ಗಳು, ಸ್ನೇಹಿತರ ಒಡನಾಟ, ಹಾಗೇ ಎಲ್ಲಾ ಪಾತ್ರಗಳು ಚೆನ್ನಾಗಿ ಸಿಕ್ಕಿದವು. ಹಾಗೇ ಒಂದು ಕಮರ್ಷಿಯಲ್ ಸಿನಿಮಾ ಹೇಗೆ ಮಾಡಬೇಕು ಅನ್ನೋದನ್ನು ಚರ್ಚೆ ಮಾಡಿ ಸಿನಿಮಾ ಮೇಕಿಂಗ್ ಇಳಿದಿದ್ದರು. ರೈಟಿಂಗ್‌ನಿಂದ ಹಿಡಿದು ಮೇಕಿಂಗ್ ಎಲ್ಲವೂ ಹೊಸದಾಗಿ ಇರಬೇಕು ಅಂತ ಇಡೀ ಟೀಮ್ ತೀರ್ಮಾನ ಮಾಡಿತ್ತು.


Click it and Unblock the Notifications











