"ಯುವ ನೋಡಿ ಅಭಿಮಾನಿಗಳು ಕಾಲರ್ ಎತ್ಕೊಂಡು ಓಡಾಡುತ್ತೀರ"; ಅಪ್ಪು ಫ್ಯಾನ್ಸ್‌ಗೆ ಸಂತೋಷ್ ಆನಂದ್‌ರಾಮ್ ಭರವಸೆ!
ಚಾಮರಾಜನಗರ: ಅಪ್ಪು ಅಗಲಿಕೆ ಬಳಿಕ ಅವರ ಅಭಿಮಾನಿಗಳ ಭರವಸೆ ಬೆಳಕಾಗಿರೋದು ಯುವ ರಾಜ್‌ಕುಮಾರ್. ದೊಡ್ಮನೆಯ ಅಭಿಮಾನಿಗಳು ಯುವ ರಾಜ್‌ಕುಮಾರ್ ಮೂಲಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನೋಡುತ್ತಿದ್ದಾರೆ. ಹೀಗಾಗಿ 'ಯುವ' ಸಿನಿಮಾ ಅನೌನ್ಸ್ ಆದಲ್ಲಿಂದ ಮೊದಲನೇ ಹಾಡು ರಿಲೀಸ್ ಮಾಡುವವರೆಗೂ ಫ್ಯಾನ್ಸ್ ತಂಡದ ಜೊತೆ ನಿಂತಿದ್ದಾರೆ. ಇದಕ್ಕೆ ಕಾರಣಕ್ಕೆ ಸಂತೋಷ್ ಆನಂದ್‌ರಾಮ್ ಕೂಡ ಮೊದಲ ಹಾಡು ರಿಲೀಸ್ ಮಾಡಿ ಭರವಸೆ ಕೊಟ್ಟಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನೆಚ್ಚಿನ ನಿರ್ದೇಶಕ ಸಂತೋಷ್ ಆನಂದ್‌ರಾಮ್. 'ರಾಜಕುಮಾರ', 'ಯುವರತ್ನ' ಸಿನಿಮಾಗಳ ಮೂಲಕ ಈ ಜೋಡಿ ಅಭಿಮಾನಿಗಳನ್ನು ರಂಜಿಸಿತ್ತು. ಈಗ ಸಂತೋಷ್ ಆನಂದ್‌ರಾಮ್ ಮತ್ತೆ ದೊಡ್ಮನೆ ಕುಡಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಣ್ಣಾವ್ರ ಮೊಮ್ಮಗನ್ನು ಸ್ಯಾಂಡಲ್‌ವುಡ್‌ಗೆ ಪವರ್‌ಫುಲ್ ನಟನಾಗಿ ಪರಿಚಯಿಸುವುದಕ್ಕೆ ಜವಾಬ್ದಾರಿ ಹೊತ್ತಿದ್ದಾರೆ.

'ಯುವ' ಸಿನಿಮಾ ಕಂಪ್ಲೀಟ್ ಆಗಿ ಮುಗಿದಿದೆ. ಇನ್ನೇನು ಬಿಡುಗಡೆಯಾಗಬೇಕು ಅಷ್ಟೇ. ಇದೇ ತಿಂಗಳ 29ರಂದು ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾದ ಪ್ರಚಾರನೂ ಮೊದಲ ಹಾಡಿನಿಂದಲೇ ಆರಂಭ ಆಗಿದೆ. ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಅಪ್ಪು ಅಭಿಮಾನಿಗಳು ಮಾರ್ಚ್ 29ಕ್ಕೆ ಕಾಲರ್ ಎತ್ತಿಕೊಂಡು ಓಡಾಡುತ್ತಿದ್ದಾರೆಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹೇಳಿದ್ದಾರೆ.
"7 ವರ್ಷ.. ಏಳು ಜನ್ಮಕ್ಕಾಗುವಷ್ಟು ನೆನಪು"
'ಯುವ' ಹಾಡು ರಿಲೀಸ್ ಮಾಡಿದ ಬಳಿಕ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆ. "ನನ್ನ 10 ವರ್ಷದ ಜರ್ನಿಯಲ್ಲಿ 7 ವರ್ಷ ಕಳೆದಿರೋದು ಅಪ್ಪು ಸರ್ ಜೊತೆನೇ. 2015 ರಿಂದ 2021ರವರೆಗೂ ಈ 7 ವರ್ಷ ಏಳು ಜನ್ಮಕ್ಕೆ ಆಗುವಷ್ಟು ನೆನಪುಗಳಿದ್ದಾವೆ. ಸರ್ ಅಗಲಿದ ಮೇಲೂ ಅವರ ಅಭಿಮಾನಿಗಳು ನನ್ನನ್ನು ಒಬ್ಬಂಟಿಯಾಗಿ ಬಿಡಲೇ ಇಲ್ಲ. ಯಾವಾಗ ನೋಡಿದರೂ ಕಮೆಂಟ್‌ನಲ್ಲಿ ನಾವಿದ್ದೀವಿ. ಯಾವ ಸಿನಿಮಾವನ್ನೇ ಮಾಡಿ ನಾವಿದ್ದೀವಿ ಅಂತಿದ್ರು. ಅಪ್ಪು ಸರ್ ನನಗೆ ಇಂತಹ ದೊಡ್ಡ ಕುಟುಂಬ ಬಿಟ್ಟು ಹೋಗಿದ್ದಾರೆ." ಎಂದು ಹೇಳಿದ್ದಾರೆ.
"ಯುವ ಕ್ಯಾರವ್ಯಾನ್‌ನಿಂದ ಬರುವಾಗ ಅಪ್ಪು ನೆನಪಾಗ್ತಿದ್ರು"
ಅಪ್ಪು ನೆನೆಯುತ್ತಲೇ ಯುವ ರಾಜ್‌ಕುಮಾರ್ ಬಗ್ಗೆನೂ ನೆನೆದಿದ್ದಾರೆ. "ಯುವ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವಂತಹ ಸುಸಂದರ್ಭ ಕ್ರಿಯೇಟ್ ಮಾಡಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೇ. ಯಾಕೆ ಹೇಳ್ತಿದ್ದೀನಿ ಅಂದರೆ, ಅವರು ಬಿಟ್ಟು ಹೋಗಿದ್ದ ಜರ್ನಿ, ನೆನಪು ಎಲ್ಲಾ ಇದೆ. ಯುವ ಶೂಟಿಂಗ್ ಮಾಡುವಾಗ ಅವರು ಕ್ಯಾರವ್ಯಾನ್ ಇಳಿದು ಬರೋರು. ಅವಾಗ ಅವರನ್ನು ನೋಡಿದಾಗ ನನಗೆ ಈ ಸಿನಿಮಾ ಮೇಲೆ ಅಪ್ಪು ಸರ್ ಆಶೀರ್ವಾದ ಇದೆ ಅಂತ ಅನಿಸಿತ್ತು. ಅದಕ್ಕೆ ಈ ಸಿನಿಮಾ ಮಾರ್ಚ್‌ನಲ್ಲೇ ಮುಹೂರ್ತ ಆಯ್ತು. ಮಾರ್ಚ್‌ನಲ್ಲೇ ರಿಲೀಸ್ ಆಗುತ್ತಿದೆ." ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹೇಳಿದ್ದಾರೆ.

"ಅಪ್ಪು ಫ್ಯಾನ್ಸ್ ಕಾಲರ್ ಎತ್ತಿಕೊಂಡು ಓಡಾಡ್ತಿರ"
ಅಪ್ಪು ಅಭಿಮಾನಿಗಳು ಯುವ ರಾಜ್‌ಕುಮಾರ್ ಮೇಲೆ ಭರವಸೆ ಇಟ್ಟುಕೊಂಡು ಕಾಯ್ತಿದ್ದಾರೆ. ಅದಕ್ಕೆ ಸಂತೋಷ್ ಆನಂದ್‌ರಾಮ್ 'ಯುವ' ಕಾಲರ್ ಎತ್ತಿಕೊಂಡು ಓಡಾಡುತ್ತಿರ ಎಂದು ಫ್ಯಾನ್ಸ್‌ಗೆ ಪ್ರಾಮಿಸ್ ಮಾಡಿದ್ದಾರೆ. "ಈ ಸಿನಿಮಾ ನೀವೆಲ್ಲರೂ ಹೆಮ್ಮೆ ಪಡುವಂತಹ ಸಿನಿಮಾ ಆಗುತ್ತೆ. ಇದು ನಾನು ಡೈರೆಕ್ಟ್ ಮಾಡಿದ್ದೀನಿ. ನನ್ನ ಸಿನಿಮಾ ಅಂತ ಹೇಳಿಕೊಳ್ಳುತ್ತಿಲ್ಲ. ಹಂಡ್ರೆಡ್ ಪರ್ಸೆಂಟ್ ಮಾರ್ಚ್ 29 ನೀವೆಲ್ಲರೂ ಹೆಮ್ಮೆ ಪಡುತ್ತೀರ. ಅದರಲ್ಲೂ ಅಭಿಮಾನಿಗಳ ಸ್ಟೈಲ್‌ನಲ್ಲಿ ಹೇಳಬೇಕಂದ್ರೆ, ಕಾಲರ್ ಎತ್ತಿಕೊಂಡು ಓಡಾಡುತ್ತೀರ. ನಮ್ಮ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನೀವೆಲ್ಲರೂ ಕೈ ಹಿಡಿಯಿರಿ." ಎಂದಿದ್ದಾರೆ.
ಅಪ್ಪು ಬರ್ತ್‌ಡೇ ದಿನವೇ ಸ್ಪೆಷಲ್ ಸಾಂಗ್
"ಅಪ್ಪು ಸರ್ ಬರ್ತ್‌ಡೇ ಒಂದು ಹಾಡು ಬರುತ್ತೆ. ನೀವೆಲ್ಲರೂ ತುಂಬಾನೇ ಖುಷಿ ಪಡ್ತೀರ. ಅದು ತುಂಬಾನೇ ಚೆನ್ನಾಗಿದೆ ಹಾಡು ಮನಸ್ಸಿನಲ್ಲಿ ಉಳಿದುಕೊಂಡು ಬಿಡುತ್ತೆ. ಮಾರ್ಚ್ ಮೂರನೇ ವಾರದಲ್ಲಿ ಟ್ರೈಲರ್ ಇರುತ್ತೆ. ಅದೇ ವಾರದಲ್ಲಿಸ ಪ್ರಿ ರಿಲೀಸ್ ಇವೆಂಟ್ ಇರುತ್ತೆ. ಈ ಮಾರ್ಚ್ ತಿಂಗಳು ಪೂರ್ತಿ ನಾವು ನಿಮ್ಮ ಜೊತೆನೇ ಇರುತ್ತೇವೆ. ನೀವು ಇರಬೇಕು ಅಂತ ಕೇಳಿಕೊಳ್ಳುತ್ತೇನೆ." ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹೇಳಿದ್ದಾರೆ.


Click it and Unblock the Notifications











