Hamsalekha: "ಬಾಲಿವುಡ್‌ನಲ್ಲಿ ಬಿ ಗ್ರೇಡ್ ನಟರಿಗೆಲ್ಲ ಪದ್ಮಶ್ರೀ.. ಹಂಸಲೇಖ ಅಂತಹ ಸಾಧಕರಿಗಿಲ್ಲ": ನಿರ್ದೇಶಕ ಶಶಾಂಕ್
ನಾದಬ್ರಹ್ಮ ಹಂಸಲೇಖ ಇಂದು (ಜೂನ್ 23) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗೀತ ರಚನೆಗಾರನಾಗಿ ಅದೆಷ್ಟೋ ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ. ಹಾಗಂತ ಕೇವಲ ಸಂಗೀತ ಅಷ್ಟೇ ಅಲ್ಲ, ಸಿನಿಮಾರಂಗದಲ್ಲಿ ಬರಹಗಾರರಾಗಿ, ನಿರ್ದೇಶಕರಾಗಿದ್ದೂ ಇದೆ. ಹೀಗಾಗಿ ಹಂಸಲೇಖ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ.
ಹಂಸಲೇಖ ಹಾಕಿದ ಟ್ಯೂನ್‌ಗಳು ಇಂದಿಗೂ ಜನಪ್ರಿಯ. ಸಂಗೀತ ಪ್ರಿಯರ ಬಾಯಲ್ಲಿ ಇವರ ಹಾಡುಗಳೇ ಗುನುಗುತ್ತವೆ. ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. ಒಂದು ಕಾಲದಲ್ಲಿ ಹಂಸಲೇಖ ಸಂಗೀತ ಕೊಟ್ಟಿದ್ದಾರೆ ಅಂದ್ರೆ, ಆ ಸಿನಿಮಾ ಹಿಟ್ ಆದಂತೆ ಎಂದು ಸಿನಿಮಾ ಮಂದಿ ಭಾವಿಸುತ್ತಿದ್ದ ಕಾಲವಿತ್ತು.

ತಮ್ಮ ಸಂಗೀತದಿಂದಲೇ ಕನ್ನಡ ಚಿತ್ರರಂಗಕ್ಕೆ ರಾಜಮರ್ಯಾದೆ ಕೊಡಿಸಿದವರಲ್ಲಿ ಹಂಸಲೇಖ ಕೂಡ ಒಬ್ಬರು. ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿಯೇ ಸ್ಯಾಂಡಲ್‌ವುಡ್ ನಟ ಶಶಾಂಕ್ 'ನಾದಬ್ರಹ್ಮ'ಗೆ ಪದ್ಮಶ್ರೀ ಸಿಗಬೇಕು ಅಂತ ಅಭಿಯಾನ ಶುರು ಮಾಡಿದ್ದಾರೆ. ಅಂದ್ಹಾಗೆ, ಶಶಾಂಕ್ ಹಾಗೂ ಹಂಸಲೇಖ ಅವರಿಗೊಂದು ಅವಿನಾಭಾವ ಸಂಬಂಧವಿದೆ. ಹಂಸಲೇಖ ಅವರಿಗೆ ಪದ್ಶಶ್ರೀ ಅಭಿಯಾನದ ಹಿನ್ನೆಲೆ, ಅವರೊಂದಿಗಿನ ಒಡನಾಡದ ಬಗ್ಗೆ ಶಶಾಂಕ್ ಫಿಲ್ಮಿಬೀಟ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
"ಬಾಲಿವುಡ್‌ನಲ್ಲಿ ಬಿ ಗ್ರೇಡ್ ನಟರೆಲ್ಲ ಪದ್ಮಶ್ರೀ"
'ಮೊಗ್ಗಿನ ಮನಸ್ಸು', 'ಕೃಷ್ಣನ್ ಲವ್ ಸ್ಟೋರಿ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರೋ ಶಶಾಂಕ್ ತಮ್ಮ ಗುರುಗಳಿಗೆ ಪದ್ಮಶ್ರೀ ಸಿಗಬೇಕು ಅಂತ ಆಗ್ರಹಿಸಿದ್ದಾರೆ. ಇಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ತಮ್ಮ ಉದ್ದೇಶವೇನು ಅನ್ನೋದನ್ನು ಹೇಳಿದ್ದಾರೆ.

"ಕೇಂದ್ರ ಸರ್ಕಾರ ಹಾಗೂ ಏಜೆನ್ಸಿಗಳಿಗೆಲ್ಲ ಬರೀ ಆರ್ಟಿಸ್ಟ್‌ಗಳೇ ಕಾಣಿಸುತ್ತಾರೆ. ಬಾಲಿವುಡ್‌ನಲ್ಲಿ ಬಿ ಗ್ರೇಡ್ ನಟರೆಲ್ಲ ಪದ್ಮಶ್ರೀ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ಹಂಸಲೇಖ ಅವರು ಮಾಡಿರುವ ಸಾಧನೆ ಅದ್ಭುತ. ಆಮೇಲೆ ಹಂಸಲೇಖ ಅವರದ್ದು ಕ್ರಿಯೇಟಿವ್ ವರ್ಕ್. ಅವರಿಗೆ ಪದ್ಮಶ್ರೀ ಅನ್ನೋದು ಯಾವತ್ತೋ ಸಿಗಬೇಕಿತ್ತು. ಕನ್ನಡ ಚಿತ್ರರಂಗದವನಾಗಿ ನಾವೆಲ್ಲರೂ ಇದಕ್ಕೆ ತಲೆ ತಗ್ಗಿಸಬೇಕು." ಎನ್ನುತ್ತಾರೆ ಶಶಾಂಕ್.
"ಪ್ರಶಸ್ತಿ ಯಾವತ್ತೋ ಸಿಗಬೇಕಿತ್ತು"
ಹಂಸಲೇಖ ಮಾಡಿರುವ ಸಾಧನೆ ಕಮ್ಮಿಯೇನಿಲ್ಲ. ಸಾವಿರಾರು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಸಾಹಿತ್ಯ, ಕಥೆ, ಚಿತ್ರಕಥೆ ಮಾಡಿದ್ದಾರೆ. ಇಂತಹ ಬಹುಮುಖ ಪ್ರತಿಭೆ ಪದ್ಮಶ್ರೀ ಯಾವತ್ತೋ ಸಿಗಬೇಕಿತ್ತು ಎನ್ನುತ್ತಾರೆ ಶಶಾಂಕ್.
"ಕನ್ನಡ ಚಿತ್ರರಂಗ, ಕರ್ನಾಟಕ ಸರ್ಕಾರ ಆಗಿರಬಹುದು, ಹಂಸಲೇಖ ಅಂತಹ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಯಾವತ್ತೋ ಕೊಡಿಸಬೇಕಿತ್ತು. ಆ ಪ್ರಯತ್ನದಲ್ಲಿ ನಾವೆಲ್ಲರೂ ಸೋತಿದ್ದೀವಿ ಅಂತಲೇ ಅರ್ಥ. ಅಂದ್ರೆ, ಪ್ರಶಸ್ತಿ ಕೊಡಿಸಲು ಮನವರಿಗೆ ಮಾಡುವ ಪ್ರಯತ್ನದಲ್ಲಿ ನಾವು ಸೋತಿದ್ದೀವಿ. ಈಗಲಾದರೂ ಯಾರಾದರೂ ಮನಸ್ಸು ಮಾಡಬೇಕು. ನಾವು ಅವರು ಶಿಷ್ಯ ಅಂತ ಹೇಳುತ್ತಿಲ್ಲ. ಕಾಮನ್‌ಮ್ಯಾನ್‌ಗಾಗಿ ಹೇಳುತ್ತಿದ್ದೇನೆ." ಅನ್ನೋದು ಶಶಾಂಕ್ ವಾದ.
ಹಂಸಲೇಖ ಜೊತೆ ಶಶಾಂಕ್ ಒಡನಾಟ
"ನಾನು ಹಂಸಲೇಖ ಅವರ ಅಪ್ಪಟ ಅಭಿಮಾನಿ. ನಾನು ಕಾಲೇಜು ದಿನಗಳಲ್ಲೇ ಅಭಿಮಾನಿಯಾಗಿದ್ದವನು. ನಾನು ಚಿತ್ರರಂಗ ಬಂದಾಗಲೇ ಅವರ ಮಗನಿಗಾಗಿ ಒಂದು ಸಿನಿಮಾ ಮಾಡಿದ್ರು ಸುಗ್ಗಿ ಅಂತ. ಆ ಸಿನಿಮಾಗೆ ನಾನು ಅಸೋಸಿಯೆಟ್ ಡೈರೆಕ್ಟರ್ ಆಗಿದ್ದೆ. ಆ ಸಿನಿಮಾ ಮಾಡುವಾಗ ತೆಗೆದಂತಹ ಫೋಟೊ ಅದು. ಆಗ ಆ ಸಿನಿಮಾಗೆ ನಾನೇ ಅಸೋಸಿಯೆಟ್ ಡೈರೆಕ್ಟರ್. ಆದರೆ, ಆ ಸಿನಿಮಾ ರಿಲೀಸ್ ಆಗಲಿಲ್ಲ." ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ.
"ನಾನು ನಿರ್ದೇಶಕನಾಗಿ ಅವರ ಪ್ರೊಡಕ್ಷನ್ ಹೌಸ್‌ನಿಂದ ಲಾಂಚ್ ಆಗಬೇಕಿತ್ತು. ಅದು ಕಾರಣಾಂತರಗಳಿಂದ ಆಗಿಲ್ಲ. ನಾನು ಆಚೆ ಬಂದು ಸಿನಿಮಾ ಮಾಡಿದೆ. ನನ್ನ ಮೊದಲ ಸಿನಿಮಾ ಸಿಕ್ಸರ್‌ಗೆ ನಮ್ಮ ಗುರುಗಳೇ ಮ್ಯೂಸಿಕ್ ಡೈರೆಕ್ಟರ್ ಆಗಿದ್ದು ಖುಷಿಯಿದೆ" ಎನ್ನುತ್ತಾರೆ ನಿರ್ದೇಶಕ ಶಶಾಂಕ್.


Click it and Unblock the Notifications











