ಅಪ್ಪು ಅಗಲುವ ಕೊನೆಯ ಕ್ಷಣದಲ್ಲಿ ವಿತರಕರಿಂದ ಫೋನ್ ಕಾಲ್; ಹಲೋ.. ಎನ್ನುತ್ತಲೇ ಹೇಳಿದ್ದೇನು?
ಇಂದು (ಅಕ್ಟೋಬರ್ 29) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ. ಅಪ್ಪು ಸಮಾಧಿ ಮುಂದೆ ಅಭಿಮಾನಿಗಳು ಭಾವುಕರಾಗಿ ನಿಂತಿದ್ದಾರೆ. ಅವರ ಸಿನಿಮಾಗಳನ್ನು, ನಟನೆಯನ್ನು, ಒಳ್ಳೆಯ ಗುಣಗಳನ್ನು ಮೆಲುಕು ಹಾಕುತ್ತಿದ್ದಾರೆ. ಅತ್ತ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅವರ ಪತ್ನಿ ಮಂಗಳಾ, ಪುತ್ರರಾದ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿ ಇಡೀ ಕುಟುಂಬ ಸಮಾಧಿ ಪೂಜೆಯನ್ನು ಸಲ್ಲಿಸಿದೆ.
ಅಪ್ಪು ಅಗಲಿ ನಾಲ್ಕು ವರ್ಷಗಳಾಗಿದ್ದರೂ ಅಭಿಮಾನಿಗಳು ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಪುನೀತ್ ಅವರ ರಾಯಲ್ ಹಾಗೂ ಲಾಯಲ್ ಅಭಿಮಾನಿಗಳಾಗಿಯೇ ಉಳಿದುಕೊಂಡಿದ್ದಾರೆ. ಹುಟ್ಟುಹಬ್ಬದಿಂದ ಹಿಡಿದು ಅವರನ್ನು ನೆನಪಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿದ್ದರೂ ಬಿಡುವುದಿಲ್ಲ. ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಕನ್ನಡ ವಿತರಕರೊಬ್ಬರು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಅಪ್ಪು ಅಗಲುವ ಕೆಲವೇ ಕ್ಷಣಗಳ ಮುನ್ನ ಕನ್ನಡದ ವಿತರಕರಾದ ಮಂಜುನಾಥ್ ಅವರೊಂದಿಗೆ ಮಾತಾಡಿದ ಕ್ಷಣಗಳನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದಷ್ಟೇ ಪುನೀತ್ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿ ಬಂದಿದ್ದರು. ಅಪ್ಪು ಅಗಲುವ ಕೇವಲ 20 ನಿಮಿಷಗಳ ಮುನ್ನ ಫೋನ್ ಮಾಡಿದ್ದರು. ಆ ವೇಳೆ ಇಬ್ಬರ ನಡುವೆ ಏನು ಸಂಭಾಷಣೆ ನಡೀತು? ಅನ್ನೋದನ್ನು ಹೇಳಿಕೊಂಡಿದ್ದಾರೆ.
ಮಂಜುನಾಥ್ ಪ್ರತಿ ಶುಕ್ರವಾರ ಪುನೀತ್ ರಾಜ್‌ಕುಮಾರ್ ಅವರಿಗೆ ಫೋನ್ ಮಾಡುತ್ತಿದ್ದರು. ರಿಲೀಸ್ ಆದ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಕೊಡುತ್ತಿದ್ದರು. ಹಾಗೇ 'ಭಜರಂಗಿ 2' ಸಿನಿಮಾ ನೋಡಿ ಅಪ್‌ಡೇಟ್ ಕೊಡುವುದಕ್ಕೆ ಕರೆ ಮಾಡಿದ್ದರು. ಆಗ ಇಬ್ಬರ ನಡುವೆ ನಡೆದ ಸಂಭಾಷಣೆ ಹೀಗಿದೆ ನೋಡಿ.
ಮಂಜುನಾಥ್ ಹಾಗೂ ಪುನೀತ್ ಜೊತೆ ನಡೆದ ಕೊನೆಯ ಸಂಭಾಷಣೆ
"ಪುನೀತ್: ಹಲೋ..
ಮಂಜುನಾಥ್: ಬಾಸ್.. ಗುಡ್ ಮಾರ್ನಿಂಗ್
ಪುನೀತ್: ಗುಡ್ ಮಾರ್ನಿಂಗ್.. ಹೆಂಗಿದೆ?
ಮಂಜುನಾಥ್: ಫಸ್ಟ್ ಹಾಫ್ ಚೂರು ಸ್ಲೋ ಅನಿಸಿತು. ಸೆಕೆಂಡ್ ಹಾಫ್ ಚೆನ್ನಾಗಿದೆ. ವಿಶ್ಯೂವಲ್ಸ್ ಹಾಗೂ ಸಿಜಿ ವರ್ಕ್ ಮಾತ್ರ ತುಂಬಾ ಜೋರಾಗಿ ಮಾಡಿದ್ದಾರೆ. ಪಿಕ್ಚರ್ ಓವರ್ ಆಲ್ ಚೆನ್ನಾಗಿದೆ.
ಪುನೀತ್: ಚೆನ್ನಾಗಿದೆಯಾ.. ಓಕೆ ಓಕೆ.. ಸೀಂಫೋನಿಯಲ್ಲಿ ಯಾವುದು ಹಾಕಿದ್ದೀರ ಈಗ. ಶಂಕರ್‌ನಾಗ್ ಸಿಂಫೋನಿಯಲ್ಲಿ.
ಮಂಜುನಾಥ್: ಶಂಕರ್‌ನಾಗ್‌ನಲ್ಲಿ ಇದೇನೆ ಭಜರಂಗಿನೇ ಹಾಕಿರೋದು. 3 ಶೋಗಳು.
ಪುನೀತ್: ತ್ರಿ ಶೋಸಾ.. ಓಕೆ ಓಕೆ ಥ್ಯಾಂಕ್ ಯೂ.. ಥ್ಯಾಂಕ್ ಯೂ.. ನಾನು ಫೋನ್ ಮಾಡ್ತೀನಿ. ಆಮೇಲೆ 1ನೇ ತಾರೀಖಿನ ಮೇಲೆ ಟೀಸರ್ ಕಳಿಸುತ್ತೇನೆ.
ಮಂಜುನಾಥ್: ಓಕೆ ಬಾಸ್.. ಮೊನ್ನೆ ತೋರಿಸಿದ್ರಲ್ಲ ಅದನ್ನು ಕಳಿಸಿಕೊಡಿ. ಅದನ್ನು ಪ್ಲೇ ಮಾಡಿಸುತ್ತೇನೆ ಬಾಸು.
ಪುನೀತ್: ಪ್ಲೇ ಮಾಡಿಸಿ, ಯಾವ್ಯಾವ ಜಾಗದಲ್ಲಿ ಆಗುತ್ತೋ ಮಾಡಿಸಿ." ಎಂದು ಪುನೀತ್ ಮನವಿ ಮಾಡಿಕೊಂಡಿದ್ದರು.

"ಪುನೀತ್ ರಾಜ್‌ಕುಮಾರ್ ಅಗಲುವ ಕೆಲವೇ ಕ್ಷಣ ಅಂದರೆ, 11 ಗಂಟೆ 10 ನಿಮಿಷಕ್ಕೆ ಮಾತಾಡಿದ್ದೆ. ಸಾಮಾನ್ಯವಾಗಿ ಪ್ರತಿ ಶುಕ್ರವಾರ ಅವರಿಗೆ ಫೋನ್ ಮಾಡುತ್ತಿದ್ದೆ. ಯಾವುದೇ ಸಿನಿಮಾ ಬಂದರೂ ಅವರಿಗೆ ಹೇಗಿದೆ ಅಂತ ಹೇಳುವುದಕ್ಕೆ ಫೋನ್ ಮಾಡುತ್ತಿರುತ್ತೇನೆ. ಅವತ್ತು ನಾನು ಭಜರಂಗಿ ಫ್ಯಾನ್ ಶೋ ಸಿನಿಮಾವನ್ನು ನೋಡಿಕೊಂಡು ಬಂದಿದ್ದೆ. ಅದಕ್ಕೆ 11.10 ಕ್ಕೆ ಫೋನ್ ಮಾಡಿದ್ದೆ. ಭಜರಂಗಿ ಸಿನಿಮಾ ಹೇಗಿದೆ ಅಂತ ಕೇಳಿದ್ದರು ಹೇಳಿದ್ದೆ. ಆ ಸಮಯದಲ್ಲಿ ನಾರ್ಮಲ್ ಆಗಿಯೇ ಮಾತಾಡಿದ್ದರು." ಎಂದು ಹೇಳಿದ್ದಾರೆ.
ಎಲ್ಲರ ಸಿನಿಮಾ ಓಡಬೇಕು
"ಶುಕ್ರವಾರ ಫೋನ್ ಮಾಡಿದರೆ, ಅವರು ಯಾವತ್ತೂ ಸಿನಿಮಾ ಬಗ್ಗೆನೇ ಮಾತಾಡೋರು. ಕೋವಿಡ್ ಆದ್ಮೇಲೆ ಏನಾಯ್ತು? ಜನರು ಥಿಯೇಟರ್ ಕಡೆಗೆ ಬರುತ್ತಿದ್ದಾರಾ? ಇದರ ಬಗ್ಗೆನೇ ಜಾಸ್ತಿ ಮತಾಡುತ್ತಿದ್ದರು. ಅವರ ಸಿನಿಮಾ ಅಂತಲ್ಲ ಎಲ್ಲಾ ಚಿತ್ರಗಳ ಬಗ್ಗೆನೇ ಮಾತಾಡುತ್ತಿದ್ದರು. ಸುದೀಪ್, ದರ್ಶನ್, ದುನಿಯಾ ವಿಜಯ್ ಸೇರಿದಂತೆ ಎಲ್ಲರ ಸಿನಿಮಾಗಳ ಬಗ್ಗೆನೇ ಮಾತಾಡುತ್ತಿದ್ದರು. ಎಲ್ಲರ ಸಿನಿಮಾಗಳೂ ಚೆನ್ನಾಗಿ ಓಡಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಎಂದು ಹೇಳುತ್ತಿದ್ದರು" ಎಂದು ಮಂಜುನಾಥ್ ಫಿಲ್ಮಿಬೀಟ್‌ಗೆ ಹೇಳಿದ್ದಾರೆ.
ಇದೇ ಸಂಭಾಷಣೆಯಲ್ಲಿ 'ಗಂಧದ ಗುಡಿ' ಸಿನಿಮಾ ಬಗ್ಗೆನೂ ಮಾತಾಡಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೆ ಗಂಧದ ಗುಡಿ ಟ್ರೈಲರ್ ಅನ್ನು ಥಿಯೇಟರ್‌ನಲ್ಲಿ ಪ್ರಸಾರ ಮಾಡಿಸುವಂತೆ ಮನವಿ ಮಾಡಿದ್ದರು. ಇಷ್ಟೆಲ್ಲ ಮಾತಾಡಿದ ಕೆಲವೇ ಕ್ಷಣಗಳಲ್ಲಿ ಅಪ್ಪು ಅಗಲಿದ ಸುದ್ದಿ ಬರಸಿಡಿಲಿನಂತೆ ಬಂದಿತ್ತು.


Click it and Unblock the Notifications











