'ಉಗ್ರಂ'ಗೂ ಮುನ್ನ ಪ್ರಶಾಂತ್ ನೀಲ್ ಇಟ್ಟಿದ್ದ ಟೈಟಲ್ ಯಾವುದು? ಶ್ರೀ ಮುರಳಿ ಪಾತ್ರಕ್ಕೆ ಅಗಸ್ತ್ಯ ಹೆಸರು ಬಂದಿದ್ದೇಗೆ?
ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್‌ಗೆ ಬದುಕು ಕೊಟ್ಟ ಸಿನಿಮಾ 'ಉಗ್ರಂ'. ಇಷ್ಟೇ ಯಾಕೆ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸುವಂತಹ ನಿರ್ದೇಶಕನನ್ನು ಕೊಟ್ಟಿದ್ದು ಕೂಡ ಇದೇ ಸಿನಿಮಾ. ಈಗ ಇದೇ 'ಉಗ್ರಂ' ಸಿನಿಮಾ ಬಿಡುಗಡೆಯಾಗಿ 10 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಇಬ್ಬರೂ 'ಉಗ್ರಂ' ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರಳಿಗೆ 'ಉಗ್ರಂ' ಹೊಸ ಬದುಕು ಕೊಟ್ಟಿತ್ತು. ನಿರ್ದೇಶನದ ಗಂಧಗಾಳಿನೇ ಗೊತ್ತಿಲ್ಲದ ಪ್ರಶಾಂತ್ ನೀಲ್ ಡೈರೆಕ್ಟರ್ ಆಗಿದ್ದರು. ಈ ಸಿನಿಮಾ ನಾಲ್ಕು ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಈ ವೇಳೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಅದರಲ್ಲಿ ಟೈಟಲ್ ಕೂಡ ಸೇರಿಕೊಂಡಿದೆ.

ಪ್ರಶಾಂತ್ ನೀಲ್ 'ಉಗ್ರಂ' ಟೈಟಲ್ ಇಟ್ಟಿದ್ದೇಗೆ? 'ಉಗ್ರಂ' ಟೈಟಲ್ ಬರುವುದಕ್ಕೂ ಮುನ್ನ ಪ್ರಶಾಂತ್ ನೀಲ್ ಇಟ್ಟುಕೊಂಡಿದ್ದ ಟೈಟಲ್ ಏನು? ಅದನ್ನು ಬದಲಾಯಿಸಿದ್ದು ಹೇಗೆ? ಹಾಗೇ ಶ್ರೀಮುರಳಿ ಪಾತ್ರಕ್ಕೆ ಅಗಸ್ತ್ಯ ಅನ್ನೋ ಟೈಟಲ್ ಅನ್ನು ಇಟ್ಟಿದ್ದರ ಹಿಂದೆನೂ ಒಂದು ಇಂಟ್ರೆಸ್ಟಿಂಗ್ ಕಥೆ ಇದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.. ಶ್ರೀಮುರಳಿಗೊಂದು ಸಿನಿಮಾ ಮಾಡಬೇಕು ಅಂತ ಪ್ರಶಾಂತ್ ನೀಲ್ ನಿರ್ಧರಿಸಿದ್ದರು. ಆ ವೇಳೆ ಮೊದಲು ಲವ್ ಸ್ಟೋರಿಯೊಂದನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಒಂದು ಘಟನೆ 'ಉಗ್ರಂ' ಸಿನಿಮಾ ಮಾಡುವುದಕ್ಕೆ ಪ್ರೇರಣೆಯಾಯ್ತು.
"ಒಂದು ದಿನ ಶ್ರೀಮುರಳಿ ತುಂಬಾನೇ ತಲೆಕೆಡಿಸಿಕೊಂಡಿದ್ದರು. ಆಗ ಸ್ಕ್ರಿಪ್ಟ್ ಡಿಸ್ಕಷನ್ ನಡೆಯುತ್ತಿತ್ತು. ಅವರ ಕಡೆಯಿಂದ ರಾಮು ಸರ್ ಅಂತ ಬಂದಿದ್ದರು. ನನ್ನ ಜೊತೆ ಅವರೂ ಉಗ್ರಂ ಸಿನಿಮಾಗೆ ಬರೆದಿದ್ದಾರೆ. ಅಲ್ಲಿ ರೂಮ್‌ನಲ್ಲಿ ಕೂತಿದ್ದಾರೆ. ಏನೋ ಗೊತ್ತಿಲ್ಲ ರೂಮ್‌ನಲ್ಲಿ ಲೈಟ್ ಆಫ್ ಮಾಡಿಕೊಂಡಿದ್ದರು. ಅವತ್ತು ಅವರು ಏನಕ್ಕೋ ಅಪ್‌ಸೆಟ್ ಆಗಿದ್ದರು. ಹಾಫ್ ಲೈಟ್‌ನಲ್ಲಿ ಕೂತಿದ್ದರು. ಅವರನ್ನು ನೋಡಿ, ನಾನು ಅವರಿಗಾಗಿ ಮಾಡುತ್ತಿರೋದು ಸಿನಿಮಾ ತಪ್ಪು ಅಂತ ಅನಿಸಿತ್ತು. ಆಗಲೇ ಉಗ್ರಂ ಕ್ರಿಯೇಟ್ ಆಯ್ತು. ಅಗಸ್ತ್ಯ ಹುಟ್ಟಿಕೊಂಡ. " ಎಂದು ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಮಾಸ್ ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದರು. ಶ್ರೀಮುರಳಿಯ ಒಂದು ಪಾತ್ರದಿಂದ 'ಉಗ್ರಂ' ಸಿನಿಮಾ ಹುಟ್ಟಿಕೊಂಡಿತ್ತು. ಅದೇ ಪಾತ್ರಕ್ಕೆ ಅಗಸ್ತ್ಯ ಅನ್ನೋ ಹೆಸರು ಇಟ್ಟಿದ್ದರು. ಆದರೆ, ಈ ಟೈಟಲ್ ಸಿಕ್ಕಿದ್ದು ಕೂಡ ಅಷ್ಟೇ ಇಂಟ್ರೆಸ್ಟಿಂಗ್. "ಮೈಸೂರಿನ ಝೂನಲ್ಲಿ ಸಿಂಹಕ್ಕೆ ಅಗಸ್ತ್ಯ ಅಂತ ಹೆಸರಿಟ್ಟಿದ್ದರು. ರಾಮು ಸರ್ (ಶ್ರೀಮುರಳಿ ಸಹಾಯಕರು) ಅಗಸ್ತ್ಯ ಅಂತ ಸಿಂಹಕ್ಕೆ ಹೆಸರಿಟ್ಟಿದ್ದಾರೆ ಅಂತ ಹೇಳಿದ್ರು. ಅವರು ಆ ಹೆಸರಿನ ಬಗ್ಗೆ ಮಹಾಭಾರತದ ತರನೇ ಹೇಳಿದ್ರು. ಅದೆಲ್ಲ ಬೇಡ. ಹೆಸರು ಚೆನ್ನಾಗಿದೆ ಅಂತ ಇಟ್ಕೊಂಡ್ವಿ." ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಸಖತ್ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, 'ಉಗ್ರಂ'ಗಿಂತಲೂ ಮುನ್ನ ಪ್ರಶಾಂತ್ ನೀಲ್ ಬೇರೊಂದು ಟೈಟಲ್ ಇಟ್ಟುಕೊಂಡಿದ್ದರು. ಅದುವೇ 'ನಂದೇ'. ಆದರೆ ಶ್ರೀಮುರಳಿ ಈ ಟೈಟಲ್ ಬೇಡವೇ ಬೇಡ ಅಂತ ಹಠ ಮಾಡಿದ್ದರು. "ನಂದೇ ಅಂತ ಟೈಟಲ್ ಬೇಡ ಅಂತ ಹೇಳುವುದಕ್ಕೆ ನಾಲ್ಕು ವರ್ಷ ತೆಗೆದುಕೊಳ್ತು. ಒಪ್ಪುತ್ತಲೇ ಇರಲಿಲ್ಲ. ಬೇರೆ ಸಿನಿಮಾದು ಪ್ರೆಸ್‌ಮೀಟ್ ಇತ್ತು. ಮುಂದೆ ಏನು ಮಾಡುತ್ತಿದ್ದೀರ ಮುರಳಿಯವರೇ ಅಂತ ಕೇಳಿದ್ರು. ನಾನು ನಂದೇ.. ಅಂದೆ. ಹೌದು, ನಿಮ್ದೇ ಗೊತ್ತು ಏನದು? ಅನ್ನೋರು. ನೋಡಿ ಎಲ್ಲರೂ ಹೀಗಂತಿದ್ದಾರೆ ಅಂತ ಸೀರಿಯಸ್ ಆಗಿ ಹೇಳಿದೆ. ಟೈಟಲ್ ಚೇಂಜ್ ಮಾಡೋಣ ಅಂದೆ. ಆ ಮೇಲೆ ಉಗ್ರಂ ವೀರಂ ಬಂತು." ಎಂದು ಶ್ರೀ ಮುರಳಿ ರಿವೀಲ್ ಮಾಡಿದ್ದಾರೆ.
'ನಂದೇ' ಅಂತ ಟೈಟಲ್ ಇಡುವುದಕ್ಕೆ ಕಾರಣವಿತ್ತು. 'ಉಗ್ರಂ' ನಲ್ಲಿರುವ "ವೃತ್ತದಲ್ಲಿ ಇರೋದೆಲ್ಲ ನಂದೇ..." ಅನ್ನುವಂತಹ ನಾಲ್ಕೈದು ಸೀನ್‌ಗಳನ್ನು ಪ್ರಶಾಂತ್ ನೀಲ್ ಬರೆದುಕೊಂಡಿದ್ದರು. ಅದಕ್ಕಾಗಿಯೇ 'ನಂದೇ' ಟೈಟಲ್ ಇಟ್ಟುಕೊಂಡಿದ್ದರು. ಬಳಿಕ ಪ್ರಶಾಂತ್ ನೀಲ್ ಅಮ್ಮ "ಉಗ್ರಂ ವೀರಂ ಮಹಾವಿಷ್ಣುಂ.." ಶ್ಲೋಕ ಹೇಳುತ್ತಿದ್ದರು. ಅದನ್ನು ಕೇಳಿ 'ಉಗ್ರಂ' ಟೈಟಲ್ ಇಡಲಾಗಿತ್ತು.
ಹಾಗಂತ 'ನಂದೇ' ಅನ್ನೋ ಟೈಟಲ್ ಅನ್ನು ಬಿಟ್ಟುಕೊಟ್ಟಿಲ್ಲ. ಶ್ರೀಮುರಳಿ ಇನ್ನೂ ಆ ಟೈಟಲ್ ಅನ್ನು ಇಟ್ಟುಕೊಂಡಿದ್ದಾರೆ. "ಈಗ ನಂದೇ ಟೈಟಲ್ ನನಗೆ ಸೂಟ್ ಆಗುತ್ತೆ. ಈಗ ಇಟ್ಕೊಳ್ಬಹುದು. ಈಗ ಮ್ಯಾಚ್ ಆಗುತ್ತೆ. ನಂದೇ ಅಂತ ಈಗ ಇಟ್ಟರೆ ಪ್ರಶಂಸೆ ಮಾಡುತ್ತಾರೆ. ಆಗ ರೇಗಿಸಿಬಿಟ್ರು ನಮ್ಮನ್ನ. ಈಗಲೂ ಆ ಟೈಟಲ್ ಅನ್ನು ಎತ್ತಿಟ್ಟುಕೊಂಡಿದ್ದೇವೆ. ಸರಿಯಾದ ಸಮಯಕ್ಕೆ ಆ ಟೈಟಲ್ ಇಟ್ಟು ಸಿನಿಮಾ ಮಾಡೋಣ ಅಂತ ಇದ್ದೀವಿ." ಎಂದು ಶ್ರೀ ಮುರಳಿ ಹೇಳಿದ್ದಾರೆ.


Click it and Unblock the Notifications











