ಗುರುಪ್ರಸಾದ್ ಕೊನೆಯ ಆಸೆ ಏನಾಗಿತ್ತು? ಆಪ್ತರ ಬಳಿಕ ಹೇಳಿಕೊಂಡಿದ್ದ ಕೊನೆಗೂ ಈಡೇರಲಿಲ್ಲ
ಕನ್ನಡ ಚಿತ್ರರಂಗಕ್ಕೆ ಗುರುಪ್ರಸಾದ್ ಅಗಲಿಕೆ ನಿಜಕ್ಕೂ ದೊಡ್ಡ ನಷ್ಟ. ಕಳೆದ 15 ವರ್ಷಗಳಲ್ಲಿ ಸಿನಿಮಾವನ್ನು ವಿಭಿನ್ನವಾಗಿ ನೋಡಿದ ನಿರ್ದೇಶಕ. ತನ್ನಿಷ್ಟದ ಸಿನಿಮಾಗಳನ್ನು ವೀಕ್ಷಿಸಿ, ಅದನ್ನು ಡಿಕೋಡ್ ಮಾಡುತ್ತಿದ್ದ ನಿರ್ದೇಶಕ. ಗುರುಪ್ರಸಾದ್ ಅನ್ನೋ ವ್ಯಕ್ತಿ ಬದುಕಿದ್ದಗಲೂ ಯಾರಿಗೂ ನಿಲುಕ ವ್ಯಕ್ತಿಯಾಗಿದ್ದರು. ಅಗಲಿದ ಬಳಿಕವೂ ತಮ್ಮ ಬದುಕಿನ ಬಗ್ಗೆ ಒಂದು ಆಶ್ಚರ್ಯವನ್ನು ಬಿಟ್ಟು ಹೋಗಿದ್ದಾರೆ.
ಗುರುಪ್ರಸಾದ್ ಮಾತುಗಳನ್ನು ಕೇಳುವುದಕ್ಕೆ ಖುಷಿ. ಸದಾ ಉತ್ಸಾಹದಲ್ಲಿ ಮಾತಾಡುತ್ತಿದ್ದ ಕ್ರಿಯಾಶೀಲ ನಿರ್ದೇಶಕ. ಅದ್ಯಾರೇ ಆಗಿದ್ದರೂ ಅವರೊಂದಿಗೆ ಮಾತಿಗೆ ಕೂತರೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಆಚೆ ಹೋಗುತ್ತಿದ್ದರು. ಸದಾ ಸಿನಿಮಾ ಬಗ್ಗೆನೇ ಜ್ಞಾನ. ಅವರದ್ದೇ ಶೈಲಿಯಲ್ಲಿ ಒಂದಿಷ್ಟು ಉಪದೇಶ. ಅವರ ಗರಡಿಯಲ್ಲಿ ಒಂದಿಷ್ಟು ಅದ್ಭುತ ನಿರ್ದೇಶಕರನ್ನು ಹುಟ್ಟಾಕಬೇಕು ಅನ್ನೋ ಆಸೆಯಿತ್ತು. ಆ ಕೆಲಸವನ್ನು ಮಾಡಿದ್ದರು.

ವಾಗ್ಮಿ, ಜ್ಞಾನಿಯಾಗಿದ್ದ ಗುರುಪ್ರಸಾದ್ ಅದ್ಯಾಕೆ ಯಾವಾಗಲೂ ಸಾವಿನ ಬಗ್ಗೆ ಮಾತಾಡುತ್ತಿದ್ದರೋ ಗೊತ್ತಿಲ್ಲ. ಅವರ ಪ್ರತಿಯೊಂದು ಭಾಷಣದಲ್ಲೂ ಇಂತಹದ್ದೊಂದು ಪದೇ ಇದ್ದೇ ಇರುತ್ತಿತ್ತು. ರಂಗನಾಯಕ ಸಿನಿಮಾದ ಪತ್ರಿಕಾಗೋಷ್ಠಿಯಲ್ಲೂ ಮಗಳನ್ನು ಕಂಕುಳಲ್ಲಿ ಎತ್ತಿಕೊಂಡು ತನ್ನ ಸಾವಿನ ಬಗ್ಗೆಯೇ ಕುಚೇಷ್ಠೆ ಮಾಡಿಕೊಂಡಿದ್ದರು. ಆಗ ಇದೆಲ್ಲ ತಮಾಷೆಗೆ ಅಂತಲೇ ಅನಿಸಿತ್ತು. ಆ ಮಾತುಗಳು ಈಗ ಭಯಾನಕ ಅಂತ ಅನಿಸುತ್ತಿದೆ. ಇಷ್ಟೇ ಅಲ್ಲ ತನ್ನ ಆಪ್ತರ ಬಳಿ ತನ್ನ ಅಂತಿಮ ಯಾತ್ರೆ ಹೇಗಿರಬೇಕು ಎಂದು ಹೇಳಿಕೊಂಡಿದ್ದರು.
ನಿರ್ದೇಶಕ ಗುರುಪ್ರಸಾದ್ ಬದುಕು ಹೀಗೆ ಮುಗಿದು ಹೋಗುತ್ತೆ ಅನ್ನೋ ಚಿಕ್ಕ ಕಲ್ಪನೆ ಕೂಡ ಅವರ ಆತ್ಮೀಯರಲ್ಲಿ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. 'ರಂಗನಾಯಕ' ಸೋತಿದ್ದರೂ, ಇನ್ನೊಂದು ಸಿನಿಮಾಗೆ ಕೈ ಹಾಕಿದ್ದರು. 'ಎದ್ದೇಳು ಮಂಜುನಾಥ 2' ಸಿನಿಮಾದಲ್ಲಿ ತಾವೇ ನಟಿಸಿ, ನಿರ್ದೇಶಿಸಿದ್ದರು. ಆ ಸಿನಿಮಾವನ್ನೂ ಮುಗಿಸಿದ್ದರು. ಹೀಗಿದ್ದರೂ, ದಿಢೀರನೇ ಆತ್ಮಹತ್ಯೆಗೆ ಶರಣಾಗುವಂತಹ ಮನಸ್ಸು ಹೇಗೆ ಬಂತು ಅನ್ನೋದು ಅವರ ಆಪ್ತರ ನೋವು.
ಗುರುಪ್ರಸಾದ್ ತಮ್ಮ ಆಪ್ತರೊಬ್ಬರ (ಹೆಸರನ್ನು ಹೇಳಲು ಇಷ್ಟವಿಲ್ಲ) ಬಳಿ ತಮ್ಮ ಬದುಕಿನ ಅಂತಿಮ ಜರ್ನಿ ಹೇಗಿರಬೇಕು ಅನ್ನೋದನ್ನು ಒಮ್ಮೆ ಹೇಳಿಕೊಂಡಿದ್ದರು. ತಾನು ಸತ್ತಾಗ ತನ್ನ ಮೃತದೇಹವನ್ನು ನಾಲ್ಕು ಮಂದಿ ನನ್ನ ಬಳಿ ತರಬೇತಿ ಪಡೆದ ನಿರ್ದೇಶಕರು ಹೊರಬೇಕು. ಅವರಿಂದಲೇ ತನ್ನ ಅಂತಿಮ ಯಾತ್ರೆ ನಡೆಯಬೇಕು ಎಂದು ಗುರುಪ್ರಸಾದ್ ಹೇಳಿಕೊಂಡಿದ್ದನ್ನು ಆಪ್ತರು ದು:ಖದಿಂದಲೇ ನೆನಪಿಸಿಕೊಳ್ಳುತ್ತಾರೆ.

ಆದರೆ, ವಿಪರ್ಯಾಸ ಅಂದರೆ, ಕೊನೆಗೂ ಅದೂ ನಡೆಯಲಿಲ್ಲ. ಅವರ ಗರಡಿಯಲ್ಲಿ ಪಳಗಿದ ನಾಲ್ವರು ನಿರ್ದೇಶಕರಿಗೆ ಆ ಅವಕಾಶವನ್ನು ಕೊಡದೇ ಹೋಗಿಬಿಟ್ಟರು. ಗುರುಪ್ರಸಾದ್ ಸಾವಿನಲ್ಲೂ ಕೆಲವು ನಿಗೂಢತೆಯನ್ನು ಬಿಟ್ಟು ಹೋಗಿದ್ದಾರೆ. ಇವರ ಸಾವು ಪಾಠವಾಗಬೇಕೋ? ಅಥವಾ ಮರುಕ ಪಡಬೇಕೋ ಗೊತ್ತಿಲ್ಲ. ಇವರ ಸಾವು ಕೆಲವರಿಗೆ ದು:ಖ ಭರಿಸಿದೆ. ಮತ್ತೆ ಕೆಲವರಿಗೆ ಕೋಪ ತರಿಸಿದೆ. ಗುರುಪ್ರಸಾದ್ ಅವರದ್ದು ನಿಜಕ್ಕೂ ದುರಂತ ಸಾವು.
'ರಂಗನಾಯಕ' ಸಮಯದಲ್ಲೂ ತಮ್ಮ ಮೂರು ವರ್ಷದ ಮಗಳನ್ನು ಕಂಕಳಲ್ಲಿ ಇಟ್ಟುಕೊಂಡು ಸಾವಿನ ಬಗ್ಗೆ ತಮಾಷೆ ಮಾಡಿದ್ದರು. ತಮ್ಮ ಸಾವನ್ನು ಇಟ್ಟುಕೊಂಡು ಹಾಸ್ಯ ಮಾಡುತ್ತಿದ್ದ ಏಕೈಕ ವ್ಯಕ್ತಿ ಅಂದರೆ, ಇವರೇ ಇರಬಹುದೇನೋ? ಏನೇ ಹೇಳಿದರೂ ಗುರುಪ್ರಸಾದ್ ಈಗ ನೆನಪು ಅಷ್ಟೇ. ಅವರ ಎರಡು ಸಿನಿಮಾಗಳು 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸದಾ ಜೀವಂತವಾಗಿ ಇರುತ್ತವೆ.


Click it and Unblock the Notifications











