ಸೋಲಿಲ್ಲದ ಸರದಾರ.. ಟಗರು ಪ್ರಿಯರ ಫೇವರಿಟ್.. ಡಾಕ್ಯೂಮೆಂಟರಿಯಲ್ಲಿ 'ಬೊಳ್ಳೂಡಿ ಕಾಳಿ' ಯಶೋಗಾಥೆ
ಉತ್ತರ ಕರ್ನಾಟಕದ ಮಂದಿಗೆ 'ಟಗರು ಕಾಳಗ' ಅಂದರೆ ಒಂದು ಹಬ್ಬ. ಎರಡು ಟಗರುಗಳು ಯುದ್ಧಕ್ಕೆ ನಿಲ್ಲುವುದನ್ನು ನೋಡುವುದೇ ಅವರಿಗೊಂದು ಮನರಂಜನೆ. ಇಂತಹ ಕಾಳಗದಲ್ಲಿ ಸೋಲಿಲ್ಲದ ಸರದಾರ ಎಂದು ಹೆಸರು ಮಾಡಿದ್ದು 'ಬೊಳ್ಳೊಡಿ ಕಾಳಿ'. ರಾಜ್ಯದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲಿ ಈ ಟಗರು ಸದ್ದು ಮಾಡಿತ್ತು.
ರಾಷ್ಟ್ರ ಮಟ್ಟದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದ 'ಬೊಳ್ಳೊಡಿ ಕಾಳಿ' ಸೋಲಿಲ್ಲದ ಸರದಾರ ಎನಿಸಿಕೊಂಡಿತ್ತು. ಸುಮಾರು 25 ರಿಂದ 30 ಕಾಳಗದಲ್ಲಿ ಭಾಗಿಯಾಗಿದ್ದ ಈ ಟಗರು ಸೋತೇ ಇಲ್ಲ. ಹೀಗಾಗಿ ಈ ಟಗರಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಇದೆ. ವಿವಿಧ ಟಗರು ಕಾಳಗದಲ್ಲಿ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.

ಕಾಳಗದ ಕಣಕ್ಕೆ ಬಂತು ಅಂದರೆ ಆ ಗತ್ತು, ಆ ಗಾಂಭೀರ್ಯವೇ ಜನರನ್ನು ಸೆಳೆಯುತ್ತಿತ್ತು. ಕಾಳಿಯ ರೌದ್ರಾವತಾರವನ್ನು ತಮ್ಮ ಕಣ್ಣಾರೆ ನೋಡುವುದಕ್ಕೆ ದೂರದ ಊರುಗಳಿಂದ ಅಭಿಮಾನಿಗಳು ಬರುತ್ತಿದ್ದರು. 'ಬೆಳ್ಳೂಡಿ ಕಾಳಿ' ಕಣಕ್ಕೆ ಎಂಟ್ರಿ ಕೊಡುತ್ತಿದೆ ಅಂತ ಗೊತ್ತಾದರೆ ಉಳಿದ ಟಗರಿನ ಮಾಲೀಕರು ತಮ್ಮ ಟಗರುಗಳನ್ನು ಯುದ್ಧಕ್ಕೆ ಇಳಿಸುತ್ತಲೇ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಟಗರು ಕಾಳಗದಲ್ಲಿ ಕಾಳಿ ಹೆಸರು ಮಾಡಿತ್ತು. ಈ ಟಗರಿನ ಮೇಲೆ ಡಾಕ್ಯೂಮೆಂಟರಿ ಫಿಲ್ಮ್ ಮಾಡುವುದಕ್ಕೆ ಯುವ ನಿರ್ದೇಶಕ ಗಿರೀಶ್ ಜಿ ಮುಂದೆ ಬಂದಿದ್ದಾರೆ.
'ಬೆಳ್ಳೂಡಿ ಕಾಳಿ' ಅಂತಲೇ ಜನಪ್ರಿಯವಾಗಿದ್ದ ಈ ಟಗರು ಇದ್ದಕ್ಕಿದ್ದ ಹಾಗೇ ಅನಾರೋಗ್ಯಕ್ಕೆ ತುತ್ತಾಗಿತ್ತು. ಎರಡು ವಾರಗಳ ಕಾಲ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದರೂ ಬದುಕಿ ಉಳಿದಿರಲಿಲ್ಲ. 2024ರಲ್ಲಿ ಕೊನೆಯುಸಿರೆಳೆದಿದ್ದ 'ಬೆಳ್ಳೂಡಿ ಕಾಳಿ'ಗೆ ಅಂತಿಮ ವಿದಾಯ ಹೇಳುವುದಕ್ಕೆ ದೂರದ ಊರುಗಳಿಂದ ದೊಡ್ಡ ಮಟ್ಟಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಅಲ್ಲದೆ, ಹಿಂದೂ ಧರ್ಮದ ವಿಧಿವಿಧಾನದಂತೆ ಈ ಟಗರಿನ ಅಂತ್ಯ ಸಂಸ್ಕಾರ ಮಾಡಲಾಗಿತ್ತು. 'ಬೆಳ್ಳೂಡಿ ಕಾಳಿ'ಯ ಮಾಲೀಕ ರಾಘವೇಂದ್ರ ಮತ್ತು ಅವರ ತಂಡದಿಂದ ತಮ್ಮ ನೆಚ್ಚಿನ ಟಗರಿಗೆ ಸಮಾಧಿ ನಿರ್ಮಾಣ ಮಾಡಲಾಗಿತ್ತು.
ಇಷ್ಟೇ ಸದ್ದು ಮಾಡಿದ್ದ 'ಬೆಳ್ಳೂಡಿ ಕಾಳಿ'ಯ ಚರಿತ್ರೆ ಡಾಕ್ಯೂಮೆಂಟರಿ ರೂಪ ಪಡೆದುಕೊಳ್ಳುತ್ತಿದೆ. ಗಿರೀಶ್ ಜಿ ಎಂಬುವವರು ಈ ಡಾಕ್ಯೂಮೆಂಟರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 'ಫಸ್ಟ್ ಡೇ ಫಸ್ಟ್ ಶೋ', 'ಶಾಲಿವಾಹನ ಶಕೆ', 'ಒಂದ್ ಕಥೆ ಹೇಳ್ಲಾ' ಹಾಗೂ 'ವಾವ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ಗಿರೀಶ್ ಜಿ ಈಗ 'ಬೆಳ್ಳೂಡಿ ಕಾಳಿ'ಯ ಯಶೋಗಾಥೆಯನ್ನು ಡಾಕ್ಯುಮೆಂಟರಿ ಫಿಲ್ಮ್ ಮೂಲಕ ಹೇಳಲು ಹೊರಟಿದ್ದಾರೆ.

'ಬೆಳ್ಳೂಡಿ ಕಾಳಿ' ಡಾಕ್ಯುಮೆಂಟರಿಗೆ ಗಿರೀಶ್ ಜಿ 'ಕಾಳಿ-ದಿ ಗೋಟ್' ಎಂದು ಟೈಟಲ್ ಇಟ್ಟಿದ್ದಾರೆ. ಇದರ ಮೂಲಕ ವಿಶ್ವದಾದ್ಯಂತ 'ಕಾಳಿ' ಸಾಧನೆಯನ್ನು ವಿಶ್ವಮಟ್ಟದಲ್ಲಿ ತಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಪಯಣವನ್ನು ಈ ಡಾಕ್ಯುಮೆಂಟರಿ ಫಿಲ್ಮ್ ಮೂಲಕ ನಿರ್ದೇಶಕ ಗಿರೀಶ್ ಹೇಳಲು ಸಜ್ಜಾಗಿದ್ದಾರೆ.
ಇನ್ನು ಎರಡು ವರ್ಷಗಳ ಹಿಂದೆ ಅಗಲಿದೆ 'ಬೆಳ್ಳೂಡಿ ಕಾಳಿ'ಗೆ ಶಿವಮೊಗ್ಗ ರಸ್ತೆಯಲ್ಲಿರುವ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಸಮಾಧಿ ನಿರ್ಮಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ನಿತ್ಯವು ಈ ಟಗರಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ ಅನ್ನೋದು ವಿಶೇಷತೆ. ಈ ಟಗರಿನ ಯಶೋಗಾಥೆಯನ್ನು ನಿರ್ದೇಶಕ ಗಿರೀಶ್ ಡಾಕ್ಯುಮೆಂಟರಿ ರೂಪಕ್ಕೆ ಇಳಿಸುತ್ತಿದ್ದಾರೆ.
'ಬೆಳ್ಳೂಡಿ ಕಾಳಿ' ಡಾಕ್ಯೂಮೆಂಟರಿಯನ್ನು ಜೈನ್ ಯೂನಿವರ್ಸಿಟಿ ಸೇರಿದಂತೆ ಹಲವು ಸಿನಿಮಾ ವಿದ್ಯಾರ್ಥಿಗಳನ್ನು ಸೇರಿಸಿ ಹೊಸ ತಂತ್ರಜ್ಞಾರನ್ನು ಸೇರಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಬಹುತೇಕ ದಾವಣಗೆರೆ ಮತ್ತು ಬಾಗಲಕೋಟೆ ಕಡೆಗಳಲ್ಲಿ ಈ ಟಗರಿನ ಡಾಕ್ಯುಮೆಂಟರಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಜೋರಾಗಿ ನಡೆಯುತ್ತಿದೆ. 'ಬೆಳ್ಳೂಡಿ ಕಾಳಿ' ಡಾಕ್ಯೂಮೆಂಟರಿ ಫಿಲ್ಮ್ ಅನ್ನು ದೊಡ್ಡ ಫ್ಲಾಟ್ ಫಾರ್ಮ್‌ನಲ್ಲಿ ರಿಲೀಸ್ ಮಾಡುವ ಯೋಚನೆ ಇದೆ. ಕನ್ನಡದ ಜೊತೆಗೆ ಇಂಗ್ಲೀಷ್ ನಲ್ಲೂ ಶೂಟಿಂಗ್ ಆಗುತ್ತಿದ್ದು, ಇನ್ನೂ ಎರಡು ಮೂರು ತಿಂಗಳಲ್ಲಿ ರಿಲೀಸ್ ಮಾಡುವ ಆಲೋಚನೆಯಿದೆ.


Click it and Unblock the Notifications