ರಕ್ಷಿತ್ ಶೆಟ್ಟಿಯ '777 ಚಾರ್ಲಿ' ನೋಡಿ ಶ್ವಾನ ಪ್ರಿಯೆ ರಮ್ಯಾ ಭಾವನಾತ್ಮಕವಾಗಿ ಹೇಳಿದ್ದೇನು?
ಮೋಹಕತಾರೆ ರಮ್ಯಾ ಶ್ವಾನ ಪ್ರಿಯೆ ಅನ್ನೋದು ಗೊತ್ತಿರುವ ವಿಷಯವೇ. ಆಗಾಗ ಇನ್‌ಸ್ಟಾಗ್ರಾಂ ತಮ್ಮ ಪ್ರೀತಿಯ ನಾಯಿಯೊಂದಿಗೆ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಈಗ ರಕ್ಷಿತ್ ಶೆಟ್ಟಿ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ '777 ಚಾರ್ಲಿ'ಯನ್ನು ವೀಕ್ಷಿಸಿದ್ದಾರೆ. ಅಷ್ಟೇ ಸಿನಿಮಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನಟಿ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ, ಇತ್ತೀಚೆಗೆ ರಮ್ಯಾ ರಾಜಕೀಯದಿಂದಲೂ ದೂರ ಉಳಿದಿದ್ದಾರೆ. ಹಾಗಂತ ಸಿನಿಮಾದಿಂದ ಏನೂ ದೂರ ಉಳಿದಿಲ್ಲ. ಮತ್ತೆ ಗ್ರ್ಯಾಂಡ್ ಆಗಿ ಕಮ್ ಬ್ಯಾಕ್ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಈಗ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿ ಮನಸಾರೆ ಮೆಚ್ಚಿಕೊಂಡಿದ್ದಾರೆ. '777 ಚಾರ್ಲಿ' ಸಿನಿಮಾ ನೋಡಿ ಮೋಹಕತಾರೆ ಹೇಳಿದ್ದೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.
'777 ಚಾರ್ಲಿ' ಸಿನಿಮಾ ನೋಡಿ ರಮ್ಯಾ ಹೇಳಿದ್ದೇನು?
ಇತ್ತೀಚೆಗೆ '777 ಚಾರ್ಲಿ' ಸಿನಿಮಾವನ್ನು ಕೇವಲ ಸೆಲೆಬ್ರೆಟಿಗಳಿಗಾಗಿಯೇ ಆಯೋಜಿಸಲಾಗಿತ್ತು. ಈ ವಿಶೇಷ ಪ್ರದರ್ಶನದಲ್ಲಿ '777 ಚಾರ್ಲಿ' ಸಿನಿಮಾವನ್ನು ಲಕ್ಕಿ ಗರ್ಲ್ ರಮ್ಯಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಭಾವನಾತ್ಮಕವಾಗಿ ಪತ್ರವನ್ನೂ ಬರೆದಿದ್ದಾರೆ. ಮೊದಲೇ ಶ್ವಾನ ಪ್ರಿಯೆಯಾಗಿರುವ ಮೋಹಕತಾರೆಗೆ '777 ಚಾರ್ಲಿ'ಯ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ.

" 777 ಚಾರ್ಲಿ ಒಂದು ಭಾವನಾತ್ಮಕ ಸಿನಿಮಾ. ಮನುಷ್ಯರು ಪ್ರೀತಿ ಮತ್ತು ಬದುಕಿನ ನಡುವಿನ ಪ್ರಾಮುಖ್ಯತೆಯನ್ನು ಈ ಸಿನಿಮಾ ತಿಳಿಸಿಕೊಡುತ್ತದೆ. ಕಣ್ಣೀರು ತರಿಸುವ ಇಂತಹ ಬೆಚ್ಚನೆಯ ಸಿನಿಮಾವನ್ನು ನೀಡಿದ್ದಕ್ಕೆ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರಿಗೆ ಧನ್ಯವಾದಗಳು ಎಂದು ರಮ್ಯಾ ಹೇಳಿದ್ದಾರೆ.
ಸಿನಿಮಾ ಎಂಟ್ರಿ ಕೊಟ್ಟಿರುವ ಮೋಹಕ ತಾರೆ
ಮೋಹಕತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಮಾತು ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಹೇಗೆ ಎಂಟ್ರಿ ಕೊಡುತ್ತಾರೆ ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಮೂಲಗಳ ಪ್ರಕಾರ, ರಮ್ಯಾ ಈಗಾಗಲೇ ಚಿಕ್ಕ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದು ಆಗಿದೆ. ಹೊಸಬರ ಸಿನಿಮಾವೊಂದರಲ್ಲಿ ರಮ್ಯಾ ಎರಡು ನಿಮಿಷದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನೊಂದು ಕಡೆ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂದು ಅಭಿಮಾನಿ ಆಸೆ ವ್ಯಕ್ತಪಡಿಸಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ ಮೋಹಕತಾರೆ ರಮ್ಯಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಆ ಕಡೆ ರಮ್ಯಾ ಕೂಡ ರಕ್ಷಿತ್ ಶೆಟ್ಟಿ ಗ್ಯಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ, ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಸದ್ಯ ರಮ್ಯಾಗಂತೂ '777 ಚಾರ್ಲಿ' ತುಂಬಾನೇ ಇಷ್ಟ ಆಗಿರುವುದಂತೂ ಸತ್ಯ.


Click it and Unblock the Notifications











