"ಕನಿಷ್ಟ 25 ವರ್ಷ ದಾಟುವವರೆಗಾದ್ರೂ ಯಾರೂ ಮದುವೆ ಆಗಬಾರದು": ಮಿಲನಾ ನಾಗರಾಜ್ ವಿಡಿಯೋ ವೈರಲ್?
ತಾಯಿಯಾಗ್ತಿರೋ ಮಿಲನಾ ನಾಗರಾಜ್ ಈಗ ತಮ್ಮ ಬದುಕಿನ ಸಂತಸದ ಘಟ್ಟದಲ್ಲಿ ಇದ್ದಾರೆ. ಮಿಲನಾ ಮತ್ತು ಪತಿ ಡಾರ್ಲಿಂಗ್ ಕೃಷ್ಣ ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮಿಲನಾ ನಾಗರಾಜ್ ಯಾವಾಗಲೂ ಪ್ರಬುದ್ಧತೆಯಿಂದಲೇ ಮಾತನಾಡಿದ್ದಾರೆ.
ಬದುಕು, ಆಲೋಚನೆ ಇವುಗಳ ಬಗ್ಗೆಯೆಲ್ಲಾ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಈ ಹಿಂದೆ ಒಮ್ಮೆ ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಮಿಲನಾ ನಾಗರಾಜ್ ಮದುವೆ ಮತ್ತಿತರ ವಿಚಾರಗಳ ಬಗ್ಗೆ ಆಡಿದ ಮಾತಿನ ವಿಡಿಯೋ ತುಣುಕು ಈಗ ಮತ್ತೆ ವೈರಲ್ ಆಗಿದೆ.

"ನಿಮಗೆ 25 ವರ್ಷಗಳಿಗಿಂತ ಹೆಚ್ಚು ವಯಸ್ಸಾಗುವವರಗೆ ಖಂಡಿತಾ ಮದುವೆಯಾಗ್ಬೇಡಿ. ಮೊದಲು ನೀವು ದುಡಿಯಿರಿ, ಗಳಿಸಿ, ಸ್ವತಂತ್ರರಾಗಿ, ಮಾನಸಿಕವಾಗಿ ಗಟ್ಟಿಯಾಗಿ, ಪ್ರಬುದ್ಧರಾಗಿ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಷ್ಟು ಗಟ್ಟಿಯಾಗಿ- ಆಗ ಮದುವೆಯಾಗಿ. ಅನೇಕ ಹುಡುಗಿಯರು, ಹುಡುಗರು ಕೂಡಾ ಗೊಂದಲದಲ್ಲೇ ಮದುವೆಯಾಗ್ತಾರೆ. ಹಾಗೆ ಆಗಬಾರದು." ಎಂದು ನಟಿ ಮಿಲನಾ ಹೇಳಿದ್ದರು.
ಹಾಗೆಯೇ "ಹೊಂದಾಣಿಕೆ ಸುಲಭವಲ್ಲ. ಮನೆಯಲ್ಲಿ ನಾವು ನಮ್ಮ ತಂದೆ- ತಾಯಿ ಜೊತೆಗೇ ಚಿಕ್ಕ ಚಿಕ್ಕ ವಿಚಾರಗಳಿಗೆ ಜಗಳ ಆಡುತ್ತಿರುತ್ತೇವೆ. ಆದರೆ ಮಕ್ಕಳು ಎನ್ನುವ ಕಾರಣಕ್ಕೆ ತಂದೆ ತಾಯಿ ಹೊಂದಿಕೊಳ್ಳುತ್ತಾರೆ. ಸುಲಭವಾಗಿ ಕ್ಷಮಿಸಿಬಿಡುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ಒಬ್ಬ ಹೊಸ ವ್ಯಕ್ತಿ ಬಂದಾಗ ಹಾಗಿರುವುದಿಲ್ಲ. ಅವರು ಈ ಎಲ್ಲಾ ವಿಚಾರಗಳಿಗೆ ರೆಡಿ ಇರುವುದಿಲ್ಲ. ಅವರು ನಮ್ಮಿಂದ ಒಳ್ಳೆಯ ವಿಚಾರಗಳನ್ನ, ಸಿಹಿಯಾದ ವಿಚಾರಗಳನ್ನಷ್ಟೇ ಬಯಸುತ್ತಾರೆ. ಹಾಗಾಗಿ ಈ ಪ್ರಬುದ್ಧತೆ ಸಂಸಾರ ಸಾಮರಸ್ಯದಲ್ಲಿ ಬಹಳ ಮುಖ್ಯ" ಎಂದಿದ್ದಾರೆ ಮಿಲನಾ ನಾಗರಾಜ್.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹೆಚ್ಚು ಹರಿದಾಡುತ್ತಿದೆ. ಮದುವೆ, ಸಂಬಂಧಗಳು, ಬಹುದು- ಭವಿಷ್ಯ ಈ ಎಲ್ಲದರ ಬಗ್ಗೆ ಅದೆಷ್ಟು ಸರಳವಾಗಿ ಮಿಲನಾ ವಿವರಿಸಿದ್ದಾರೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಹೊಸಾ ವರ್ಷದ ದಿನ ಅಂದರೆ, ಜನವರಿ ಒಂದರಂದು ಮಿಲನಾ ಗರ್ಭಿಣಿ ಎನ್ನುವ ವಿಚಾರ ಈ ದಂಪತಿಗೆ ತಿಳಿಯಿತಂತೆ. ಆದರೆ, ಸ್ಕ್ಯಾನಿಂಗ್ ಮಾಡಿಸಿದ ನಂತರ ಮೂರು ತಿಂಗಳು ಕಳೆಯುವವರಗೆ ಯಾರಿಗೂ ತಿಳಿಸದೆ ಸುಮ್ಮನಿದ್ದರಂತೆ. ಮೂರು ತಿಂಗಳು ಆದ ನಂತರ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಮತ್ತು ಎಲ್ಲರಿಗೂ ಮಹಾಶಿವರಾತ್ರಿಯ ಸಂದರ್ಭದಲ್ಲಿ ಈ ಶುಭ ಸುದ್ದಿಯನ್ನು ಹಂಚಿಕೊಂಡೆವು ಎಂದು ಡಾರ್ಲಿಂಗ್ ಕೃಷ್ಣ ಮಾಧ್ಯಮಗಳಿಗೆ ಹೇಳಿದ್ದರು.
ಇನ್ನು ಈ ವರ್ಷ ಪೂರ್ತಿ ಡಾರ್ಲಿಂಗ್ ಕೃಷ್ಣ ಬಹಳ ಬ್ಯುಸಿಯಂತೆ. ಸಾಲು ಸಾಲು ಪ್ರಾಜೆಕ್ಟ್ ಗಳ ನಡುವೆ ಪತ್ನಿ ಜೊತೆ ಸಮಯ ಕಳೆಯಲು ಸಾಕಷ್ಟು ಪ್ಲಾನಿಂಗ್ ಮಾಡಿಕೊಳ್ತಿದ್ದಾರಂತೆ. ಮೊದಲ ಎರಡು ತಿಂಗಳು ನನಗೂ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಿದ್ದವು, ಆದರೆ ನಂತರ ನಿಧಾನಕ್ಕೆ ದೇಹ ಮತ್ತು ಮನಸ್ಸು ಈ ಸನ್ನಿವೇಶಕ್ಕೆ ಹೊಂದಿಕೊಂಡಿದೆ. ಸೆಪ್ಟೆಂಬರ್ ಗಾಗಿ ಎದುರುನೋಡುತ್ತಿದ್ದೇವೆ ಎಂದು ಮಿಲನಾ ನಾಗರಾಜ್ ಖುಷಿಯಿಂದ ತಿಳಿಸಿದ್ದಾರೆ.


Click it and Unblock the Notifications











