"ಜನ್ಮದಿನವೇ ಭಗವಾನ್ ಹೋಗಿದ್ದು ಪರಮಾತ್ಮನ ಕೈವಾಡವೇ.. ದೊರೈ ಅಗಲಿದ್ದೂ ಇದೇ ದಿನ" – ಅನಂತ್ ನಾಗ್!
ದೊರೈ-ಭಗವಾನ್ ಜೋಡಿ ನಿರ್ದೇಶಿಸಿದ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿದೆ. ಅದರಲ್ಲೂ ಡಾ.ರಾಜ್‌ಕುಮಾರ್ ಹಾಗೂ ಅನಂತ್‌ನಾಗ್ ಅವರಿಗೆ ನಿರ್ದೇಶಿಸಿದ ಸಿನಿಮಾಗಳು ಜನಮೆಚ್ಚುಗೆ ಗಳಿಸಿವೆ. ಈ ಕಾರಣಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಭಗವಾನ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೂ ಭಗವಾನ್ ಅವರಿಗೂ ಸುಮಾರು 50 ವರ್ಷಗಳ ಒಡನಾಟವಿತ್ತು. ಇಬ್ಬರ ಕಾಂಬಿನೇಷನ್‌ನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದೆ. ಹೀಗಾಗಿ ಭಗವಾನ್ ಅಗಲಿಕೆಯಿಂದ ಅವರು ಒಂದು ಯುಗವನ್ನೇ ಕಳೆದುಕೊಂಡಂತೆ ಆಗಿದೆ ಎಂದಿದ್ದಾರೆ.
ಅಲ್ಲದೆ ಭಾಗವಾನ್ ಜನ್ಮದಿನದಂದೇ ಇಹಲೋಕ ತ್ಯಜಿಸಿದ್ದಾರೆ. ಅಶ್ವರ್ಯ ಅಂದ್ರೆ, ಅವರ ಸ್ನೇಹಿತ ಕಮ್ ಪಾರ್ಟ್ನರ್ ದೊರೈ ರಾಜ್ ಕೂಡ ಫೆಬ್ರವರಿ 20ರಂದೇ ಕೊನೆಯುಸಿರೆಳೆದಿದ್ದರು ಎಂದು ಅನಂತ್ ನಾಗ್ ಅವರು ನೆನಪಿಸಿಕೊಂಡಿದ್ದಾರೆ. ಭಗವಾನ್ ಅಗಲಿದ ಸಂದರ್ಭದಲ್ಲಿ ಅನಂತ್ ನಾಗ್ ಆಡಿದ ಮಾತುಗಳ ಬಗ್ಗೆ ಝಲಕ್ ಇಲ್ಲಿದೆ.

ಈ ಅಗಲಿಕೆ ಪರಮಾತ್ಮನ ಕೈವಾಡ
"ಭಗವಾನ್ ಅವರ ಜೊತೆ ಒಂದು ಯುಗವೇ ಕಳೆದಂತಿದೆ. ರಿಚಿ ಅವರ ಹಿರಿಯ ಮಗ ಹೇಳಿದ್ರು. ಇವತ್ತು ಅವರ ಜನ್ಮ ದಿನ ಕೂಡ. ಜನ್ಮ ದಿವಸದಲ್ಲೇ ಹೋಗಬೇಕು ಅಂದರೆ, ಪರಮಾತ್ಮನ ಕೈವಾಡವಿಲ್ಲದೆ ಇದು ಸಾಧ್ಯವಿಲ್ಲ." ಎಂದು ಅನಂತ್ ನಾಗ್ ಅಭಿಪ್ರಾಯ ಪಟ್ಟಿದ್ದಾರೆ.

ದೊರೈ ಅಗಲಿದ್ದೂ ಇದೇ ದಿನ
"2000ನೇ ಇಸವಿಯಲ್ಲಿ ದೊರೈ ರಾಜ್ ಅಂತ ಏನಿದ್ದರು. ಅವರ ಜೊತೆ ವರ್ಷಗಳಿಂದ ಇದ್ದವರು. ಅವರು ಕೂಡ ಫೆಬ್ರವರಿ 20ರಂದೇ ನಿರ್ಗಮಿಸಿದ್ದರು ಅಂತ ಕೇಳಿ ಆಶ್ಚರ್ಯ ಆಗುತ್ತೆ. ಕಳೆದ ತಿಂಗಳೇ ನಾನು ಅವರೊಂದಿಗೆ ಮಾತಾಡಿದ್ದೆ. ಕಳೆದ ಸುಮಾರು 20 ವರ್ಷಗಳಿಂದ ನಾವು ಒಬ್ಬರ ಹತ್ತಿರ ಒಬ್ಬರು ಮಾತಾಡುತ್ತಿದ್ದೆವು. ಮೆಸೇಜ್ ಕಳಿಸುತ್ತಿದ್ದರು. ಅದಕ್ಕೆ ಉತ್ತರ ಕೊಡುತ್ತಿದ್ದೆ." ಎಂದು ಭಗವಾನ್ ಅವರನ್ನು ನೆನಪಿಸಿಕೊಂಡಿದ್ದಾರೆ.

ರಾಜ್‌ಕುಮಾರ್ ಜೊತೆ ಅದೆಂಥಾ ಬಾಂಧವ್ಯ?
" ಬಯಲುದಾರಿ ಚಿತ್ರಕ್ಕಾಗಿ ಅವರು ನನ್ನನ್ನು ಕರೆಸಿಕೊಂಡಿದ್ದರು. ಅದೇನೋ ಯೋಗಾಯೋಗವೋ ಅವರು ನಮ್ಮ ರಾಜ್‌ಕುಮಾರ್ ಜೊತೆ 38 ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲೂ 38-40 ಸಿನಿಮಾ ರಾಜ್‌ಕುಮಾರ್ ಅವರೊಂದಿಗೆ ಮಾಡಿದ್ದಾರೆ ಅಂದ್ರೆ, ಅದೆಂಥಾ ಬಾಂಧವ್ಯ? ಅದೆಂಥಾ ಋಣ. ಅಲ್ಲದೆ, ಅವರೊಂದಿಗೆ ಮಾಡಿದ ಎಲ್ಲಾ ಸಿನಿಮಾಗಳು ಹಿಟ್, ಸೂಪರ್ ಆಗಿವೆ. ಸಂಗೀತ ಪ್ರಜ್ಞೆ ಇರುವಂತಹ ಸಿನಿಮಾಗಳೇ ಆಗಿವೆ." ಎನ್ನುತ್ತಾರೆ ಅನಂತ್‌ನಾಗ್.

'ಬಯಲುದಾರಿ' ಸಿನಿಮಾ ಸಿಕ್ಕಿದ್ದೇಗೆ?
"ರಾಜ್‌ಕುಮಾರ್ ಅವರು ಬಹಳ ಬ್ಯುಸಿ ಆಗಿದ್ದರು. ಆಗ ಡೇಟ್ಸ್ ಕೇಳಲು ಬಂದಾಗ, ಡೇಟ್ಸ್ ಈಗ ಕಷ್ಟ. ಆದರೆ, ಬಹಳ ಒಳ್ಳೆಯ ಕಾದಂಬರಿ ಇದೆ. ಅದನ್ನು ನೀವು ಸಿನಿಮಾ ಮಾಡಿದರೆ ಚೆನ್ನಾಗಿರುತ್ತೆ. ಬೇರೆ ಹೊಸಬರನ್ನು ಹಾಕಿಕೊಂಡು ಮಾಡಿ. ರಾಜ್‌ಕುಮಾರ್ ಬ್ಯುಸಿ ಇದ್ದರೆ, ನೀವ್ಯಾಕೆ ಸುಮ್ಮನಿರಬೇಕು ಅಂತ ಶ್ರೀಮತಿ ಪಾರ್ವತಮ್ಮನವರೇ ಹೇಳಿ, ಆ ಸಂದರ್ಭದಲ್ಲಿ ಭಗವಾನ್ ಅವರು ನನ್ನನ್ನು ಸಂಪರ್ಕಿಸಿ ಕೇಳಿದ್ರು. ನಾನು ಒಪ್ಪಿಕೊಂಡ ಮೇಲೆ ಪಾರ್ವತಮ್ಮನವರೂ ಹೇಳಿದ್ಮೇಲೆ ಬಯಲು ದಾರಿ ಲಾಂಚ್ ಆಗಿದ್ದೇ ಆ ಹಿನ್ನೆಲೆಯಲ್ಲಿ." ಎಂದು ಬಯಲು ದಾರಿ ಕಥೆಯನ್ನು ಅನಂತ್ ನಾಗ್ ಬಿಚ್ಚಿಟ್ಟಿದ್ದಾರೆ.

ಭಗವಾನ್ ಜೊತೆ ಅನಂತ್ ನಾಗ್ 10 ಸಿನಿಮಾ
"ಸೂಪರ್‌ಸ್ಟಾರ್ ಕಲ್ಪನಾ ಜೊತೆ ಎಲಿಕಾಪ್ಟರ್‌ನಲ್ಲಿ ಹಾಡು. ಎಲ್ಲಿಂದ ಎಲ್ಲಿಗೆ ಬಂದೆ ಭಗವಂತ. ನನ್ನನ್ನು ಹಾರಾಡೋಕೆ ಎಲ್ಲಿಂದ ಎಲ್ಲಿಗೆ ತಲುಪಿಸಿದ್ದಾನೆ ಅಂತ ಅನಿಸಿತ್ತು. ಆಮೇಲೆ ತರಾಸು ಅವರ ಮೂರು ಕಾದಂಬರಿ ಬೆಂಕಿಯ ಬಲೆ, ಚಂದನದ ಗೊಂಬೆ,ಬಿಡುಗಡೆಯ ಬೇಡಿ ಮೂರಕ್ಕೆ ಮೂರು ಸೂಪರ್ ಹಿಟ್ ಆಗಿತ್ತು. ಭಗವಾನ್, ರಾಜನ್ ನಾಗೇಂದ್ರ, ಚಿ ಉದಯ್ ಶಂಕರ್ ಕಾಂಬಿನೇಷನ್‌ನಲ್ಲಿ ಬೆಳೆದು ಬಂದೆ. ಸುಮಾರು 10 ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರ ಕೊನೆಯ ಸಿನಿಮಾ ಆಡಿಸುವ ಬೊಂಬೆ ಕೂಡ ನಾನು ನಟಿಸಿದ್ದೇನೆ." ಎಂದು ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











