ಗಾಜನೂರಿನ ಮನೆಯಲ್ಲಿ ವಾಸಿಸಬೇಕೆಂಬ ಡಾ.ರಾಜ್‌ಕುಮಾರ್ ಆಸೆ ಈಡೇರಲೇ ಇಲ್ಲ
ಡಾ.ರಾಜ್‌ಕುಮಾರ್ ಮನಸ್ಸು ಮಾಡಿದರೆ, ಐಷಾರಾಮಿಯಾಗಿ ಬದುಕಬಹುದಿತ್ತು. ಆದರೆ, ಅಣ್ಣಾವ್ರದ್ದು ಸರಳ ವ್ಯಕ್ತಿತ್ವ. ಅದೆಷ್ಟೇ ಎತ್ತರಕ್ಕೆ ಬೆಳೆದರೂ, ಡಾ.ರಾಜ್‌ಕುಮಾರ್ ಮಾತ್ರ ಬದಲಾಗಲಿಲ್ಲ. ಐಶಾರಾಮಿ ಬದುಕಿನಲ್ಲಿ ಮುಳುಗಿ ಹೋಗಲಿಲ್ಲ. ಬೆಂಗಳೂರಿನಲ್ಲಿ ಅದೆಷ್ಟೆ ದೊಡ್ಡ ಬಂಗಲೆ ಇದ್ದರೂ, ಹುಟ್ಟೂರಿನ ಕಡೆಗೆ ಅವರ ಮನಸ್ಸು ಸೆಳೆಯುತ್ತಿತ್ತು. ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ ಬಳಿಕ ವಿಶ್ರಾಂತಿ ದಿನಗಳನ್ನು ತನ್ನ ಹುಟ್ಟೂರಿನಲ್ಲಿಯೇ ಕಳೆಯಬೇಕು ಎಂದು ಬಯಸಿದ್ದರು.
1929, ಏಪ್ರಿಲ್ 24ರಂದು ಗಡಿ ಜಿಲ್ಲೆ ಚಾಮರಾಜನಗರದ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಅಣ್ಣಾವ್ರ ಜನನವಾಯಿತು. ನಾಟಕ, ನಟನೆ ಅಂತ ಬೆಳೆದ ಮುತ್ತುರಾಜ್ ಸಿನಿಮಾಗೆ ಬಂದ ಮೇಲೆ ರಾಜ್‌ಕುಮಾರ್ ಆಗಿ ಬದಲಾಗಿದ್ದು ಗೊತ್ತೇ ಇದೆ. ಸಿನಿಮಾರಂಗದಲ್ಲಿ ಅದೆಷ್ಟೇ ಎತ್ತರಕ್ಕೆ ಬೆಳೆದರೂ, ರಾಜ್‌ಕುಮಾರ್ ಇನ್ನೂ ಮುತ್ತುರಾಜ್ ಆಗಿಯೇ ಇದ್ದರು. ಅದಕ್ಕೆ ತನ್ನ ನಿವೃತ್ತಿ ಬದುಕನ್ನು ಗಾಜನೂರಿನಲ್ಲಿ ಹೊಸದಾಗಿ ಕಟ್ಟಿಸಿದ ಮನೆಯಲ್ಲಿಯೇ ಬದುಕಬೇಕು ಎಂದು ಕನಸು ಕಂಡಿದ್ದರು. ಆದರೆ, ಅದು ಕೊನೆಗೂ ಸಾಧ್ಯವಾಗಲೇ ಇಲ್ಲ.

ಗಾಜನೂರಿನಲ್ಲಿ ಅಣ್ಣಾವ್ರಿಗಾಗಿ ಬಂಗಲೆ
ವರನಟ, ನಟಸಾರ್ವಭೌಮ, ಡಾ ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ ಬಳಿಕ ತಮ್ಮ ಹುಟ್ಟೂರು ಗಾಜನೂರಿನಲ್ಲಿ ಇರಬೇಕಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ವಿಷಯವನ್ನು ತಮ್ಮ ಆಪ್ತರಲ್ಲಿ, ಕುಟುಂಬದ ಸದಸ್ಯರಲ್ಲಿ ಹೇಳಿಕೊಂಡಿದ್ದರು. ಹೀಗಾಗಿಯೇ ಗಾಜನೂರಿನಲ್ಲಿ ಅಣ್ಣಾವ್ರಿಗಾಗಿಯೇ ಬೃಹತ್ ಬಂಗಲೆ ಎದ್ದು ನಿಂತಿತ್ತು. ಆದರೆ, ಈ ಬಂಗಲೆಯಲ್ಲಿ ಅಣ್ಣಾವ್ರು ಕೊನೆಯ ದಿನಗಳನ್ನು ಕಳೆಯಲು ಸಾಧ್ಯವಾಗಲೇ ಇಲ್ಲ.

ಕಿಡ್ನಾಪ್ ಬಳಿಕ ಈಡೇರಲಿಲ್ಲ ಆಸೆ
ಅಣ್ಣಾವ್ರು ಗಾಜನೂರಿನಲ್ಲಿ ಕಾಲಕಳೆಯಬೇಕು ಎನ್ನುವ ಆಸೆಯಿತ್ತು. ಇದೇ ವೇಳೆ ವರನಟನನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಇದರಿಂದ ಮತ್ತೆ ಗಾಜನೂರಿನಲ್ಲಿ ಬಂದು ಉಳಿದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಣ್ಣಾವ್ರು ಅಂದು ಕಂಡಿದ್ದ ಕನಸು ನನಸಾಗಲೇ ಇಲ್ಲ. ವೀರಪ್ಪನ್ ಭಯದಿಂದ ಗಾಜನೂರಿಗೆ ಬರುವುದು ಅಪರೂಪವಾಗಿ ಬಿಟ್ಟಿತ್ತು. ಅಣ್ಣಾವ್ರ ಇದೊಂದು ಕನಸು ಕೊನೆಗೂ ಈಡೇರಲಿಲ್ಲ.
Recommended Video


ಈ ಮನೆಯಲ್ಲಿ ಹಳೆಯ ನೆನಪುಗಳಿವೆ
ಅಣ್ಣಾವ್ರ ಕನಸಿನ ಮನೆಯಲ್ಲಿ ಅವರ ಪ್ರೀತಿ ಸಹೋದರಿ ನಾಗಮ್ಮ ವಾಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಅಣ್ಣಾವ್ರು ಗಾಜನೂರಿಗೆ ಬರುವುದು ಕಡಿಮೆಯಾಗಿದ್ದರೂ, ಅವರ ಮಕ್ಕಳು ಹೆಚ್ಚಾಗಿ ಗಾಜನೂರಿನಲ್ಲಿ ಕಾಲಕಳೆದಿದ್ದಾರೆ. ಶಿವಣ್ಣ, ರಾಘಣ್ಣ, ಪುನೀತ್ ಮೂವರಲ್ಲೂ ಬಾಲ್ಯದ ನೆನಪುಗಳಿವೆ. ಇವರನ್ನು ಸಾಕಿ ಸಲುಹಿದ ಸಹೋದರಿ ನಾಗಮ್ಮ ಇದೇ ಮನೆಯಲ್ಲಿದ್ದಾರೆ.

ಹಳೆ ಮನೆಯಲ್ಲಿ ವರನಟನ ನೆನಪು
ಇದೇ ಗಾಜನೂರಿನಲ್ಲಿ ಡಾ.ರಾಜ್ ಹಾಗೂ ಅವರ ಪೂವರ್ಜರು ಬೆಳೆದ ಹಳೆಯ ಮನೆಯಿದೆ. ಈ ಮನೆ ಡಾ.ರಾಜ್‌ಕುಮಾರ್‌ಗೆ0 ನೆಚ್ಚಿನ ಮನೆಯಾಗಿತ್ತು. ಈ ಕಾರಣಕ್ಕೆ ಶಿವಣ್ಣ, ರಾಘಣ್ಣ, ಪುನೀತ್ ಆಗಾಗ ಬಿಡುವಿದ್ದಾಗಲೆಲ್ಲಾ ಗಾಜನೂರಿಗೆ ಹೋಗಿ ಬರುತ್ತಿದ್ದರು. ಪುನೀತ್ ರಾಜ್‌ಕುಮಾರ್‌ಗಂತೂ ಈ ಹಳೆಯ ಮನೆ ಅಚ್ಚು ಮೆಚ್ಚಾಗಿತ್ತು. ಗಾಜನೂರಿಗೆ ಹೋದಾಗಲೆಲ್ಲಾ ಇಲ್ಲಿಗೆ ವಿಸಿಟ್ ಹಾಕುತ್ತಲೇ ಇದ್ದರು. ಇಂತಹ ಮನೆಯಲ್ಲಿ ಕಾಲಕಳೆಯ ಬೇಕೆಂಬ ಅಣ್ಣಾವ್ರ ಮಹದಾಸೆ, ಕೇವಲ ಆಸೆಯಾಗಿಯೇ ಉಳಿದುಬಿಡ್ತು.


Click it and Unblock the Notifications











