Bangarada Manushya:'ಬಂಗಾರದ ಮನುಷ್ಯ'ನಿಗೆ 50 ವರ್ಷ: 12 ಲಕ್ಷ ಬಜೆಟ್ ಸಿನಿಮಾ ಸೃಷ್ಟಿಸಿದ ಇತಿಹಾಸವೇನು?
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ 'ಬಂಗಾರದ ಮನುಷ್ಯ'. ಇದು ಕೇವಲ ಸಿನಿಮಾ ಅಷ್ಟೇ ಅಲ್ಲ. ಜನರ ಮನಸ್ಥಿತಿಯನ್ನೇ ಬದಲಿಸಿದ ಸಿನಿಮಾವಿದು. ಕರ್ನಾಟಕದಲ್ಲಿ ಹಸಿರು ಕ್ರಾಂತಿಯನ್ನು ಮಾಡಿದ ಸಿನಿಮಾ 'ಬಂಗಾರದ ಮನುಷ್ಯ'. ಈ ಸಿನಿಮಾ ನೋಡಿ ರೈತರಾದ ಅದೆಷ್ಟು ಉದಾಹರಣಗಳು ಇವೆ. ಸಮಾಜದ ಮೇಲೆ ಪರಿಣಾಮ ಬೀರಿದ ಈ ಸಿನಿಮಾಗೀಗ 50 ವರ್ಷ.
50 ವರ್ಷ ಕಳೆದರೂ 'ಬಂಗಾರ ಮನುಷ್ಯ' ಸಿನಿಮಾ ಜನ ಮಾನಸದಿಂದ ಕಾಣಿಯಾಗಿಲ್ಲ. ಇಂದಿನ ಯುವಕರಿಗೂ 'ಬಂಗಾರದ ಮನುಷ್ಯ' ಅಚ್ಚು ಮೆಚ್ಚಿನ ಸಿನಿಮಾ. ಅಣ್ಣಾವ್ರ ಅಭಿನಯ, ಸಿದ್ಧಲಿಂಗಯ್ಯ ಅವರ ನಿರ್ದೇಶನ, ಜಿಕೆ ವೆಂಕಟೇಶ್ ಸಂಗೀತ ಎಲ್ಲವೂ ಮರೆಯಲೂ ಸಾಧ್ಯವಿಲ್ಲ. 'ನಗುನಗುತಾ ಏನೇ ಆಗಲಿ..' 'ಆಗದು ಎಂದು ಕೈ ಕಟ್ಟು ಕುಳಿತರೆ ಎಂಬ ಹಾಡುಗಳು ಇಂದಿನ ಪೀಳಿಗೆಗೂ ಚಿರಪರಿಚಿತ.
ಡಾ.ರಾಜ್‌ಕುಮಾರ್ ಜೊತೆ ಭಾರತಿ, ಆರತಿ, ಶ್ರೀನಾಥ್, ದ್ವಾರಕೀಶ್ ಅಂತಹ ಮೇರು ನಟರು ನಟಿಸಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ನಿರ್ಮಿಸಿದ್ದು, ಆರ್ ಲಕ್ಷ್ಮಣ್. ಇವರು 'ಸಂಗೊಳ್ಳಿರಾಯಣ್ಣ', 'ಕುರುಕ್ಷೇತ್ರ'ದಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ನಾಗಣ್ಣ ಅವರ ತಂದೆ. 1972ರಲ್ಲಿ ತೆರೆಕಂಡ ಈ ಸಿನಿಮಾ ಬಗ್ಗೆ ನಾಗಣ್ಣ ಇಂಟ್ರೆಸ್ಟಿಂಗ್ ವಿಷಯಗಳನ್ನು ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

ಕಾದಂಬರಿ ತಂದುಕೊಟ್ಟಿದ್ದೇ ನಾನು
ಟಿ ಕೆ ರಾಮರಾಮ್ ಬರೆದ 'ಬಂಗಾರದ ಮನುಷ್ಯ' ಕಾದಂಬರಿಯನ್ನು ಆಧರಿಸಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿತ್ತು. ಆಗ ತಾನೇ ಬಿಡುಗಡೆಯಾಗಿದ್ದ ಕಾದಂಬರಿಯನ್ನು ತಂದೆ ಲಕ್ಷ್ಮಣ್ ಅವರಿಗೆ ನಾಗಣ್ಣ ತಂದುಕೊಟ್ಟಿದ್ದರು. ಅಲ್ಲಿಂದ 'ಬಂಗಾರದ ಮನುಷ್ಯ'ನ ನೆನಪಿನ ಬುತ್ತಿ ಆರಂಭ ಆಗುತ್ತೆ. " ಜ್ಯೋತಿ ಸ್ಟೋರ್‌ನಲ್ಲಿ ಬಂಗಾರದ ಮನುಷ್ಯ ಪುಸ್ತಕ ಬಂದಿತ್ತು. ಬಾಳೆಪೇಟೆಯಲ್ಲಿ ಶಾಪ್ ಇತ್ತು. ಅಲ್ಲಿಗೆ ಹೋಗಿ ಕಾದಂಬರಿಯನ್ನು ನಾನೇ ನಮ್ಮ ತಂದೆಗೆ ತಂದು ಕೊಟ್ಟಿದ್ದೆ. ನಮ್ಮ ಅಪ್ಪ ತುಂಬಾ ಕಾದಂಬರಿಯನ್ನು ಓದುತ್ತಿದ್ದರು. ಈಗ ನಿರ್ಮಾಪಕರು ಯಾರು ಕಾದಂಬರಿ ಓದುತ್ತಾರೆ. ಆಗ ಆ ಮಟ್ಟಿಗೆ ಕಮಿಟ್ಮೆಂಟ್ ಇತ್ತು. ಕಥೆ ಇಷ್ಟ ಆದ ಬಳಿಕ ಸಿನಿಮಾ ಆರಂಭ ಮಾಡಲಾಯಿತು." ಎಂಬುದನ್ನು ನಾಗಣ್ಣ ನೆನಪಿಸಿಕೊಳ್ಳುತ್ತಾರೆ.

12 ಲಕ್ಷದಲ್ಲಿ ಸಿನಿಮಾ ನಿರ್ಮಾಣ ಆಗಿತ್ತು
"ಬಂಗಾರದ ಮನುಷ್ಯ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗಿತ್ತು. 50 ವರ್ಷಗಳ ಹಿಂದೆನೇ ಸುಮಾರು 12 ಲಕ್ಷ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದಾಗಿ ನಮ್ಮ ತಂದೆ ನನಗೆ ಹೇಳುತ್ತಿದ್ದರು. ಈಗಿನ ಕಾಲಕ್ಕೆ ಸುಮಾರು 20 ಕೋಟಿಗೂ ಅಧಿಕ ಎನ್ನಬಹುದು. ಆ ಮಟ್ಟಿಗೆ ಯಾವುದಕ್ಕೂ ಕಾಂಪ್ರಮೈಸ್ ಆಗದಂತೆ ಸಿನಿಮಾ ಮಾಡಲಾಗಿತ್ತು. ಈ ಕಾರಣಕ್ಕೆ ಸಿನಿಮಾ ಅಷ್ಟೊಂದು ಅದ್ದೂರಿಯಾಗಿ ಮೂಡಿ ಬಂದಿತ್ತು." ಎನ್ನುತ್ತಾರೆ ನಾಗಣ್ಣ.

ಕ್ಲೈಮ್ಯಾಕ್ಸ್‌ಗೆ ತಾರ್ಕಿಕ ಅಂತ್ಯ!
"ಸಿನಿಮಾ ಕ್ಲೈಮ್ಯಾಕ್ಸ್ ಬಗ್ಗೆ ಮೊದಲೇ ಚರ್ಚೆಯಾಗಿತ್ತು. ಡಾ. ರಾಜ್‌ಕುಮಾರ್ ಸಾಯುವ ದೃಶ್ಯವನ್ನು ತೋರಿಸುವುದನ್ನು ಜನರು ಒಪ್ಪುವುದಿಲ್ಲ. ಇದು ಸಿನಿಮಾಗೆ ತುಂಬಾನೇ ಏಟು ಕೊಡಬಹುದು. ಹಾಗಂತ ಕಾದಂಬರಿಗೂ ಧಕ್ಕೆ ತರುವಂತಿರಲಿಲ್ಲ. ಈ ಕಾರಣಕ್ಕೆ ಆ ದೃಶ್ಯ ಬೇಡ ಎಂದು ಚರ್ಚೆಯಾಗಿತ್ತು. ಬಳಿಕ ನಿರ್ದೇಶಕ ಸಿದ್ಧಲಿಂಗಯ್ಯ ಅವರು ಸೂರ್ಯಾಸ್ತದ ಮೂಲಕ ರಾಜ್‌ಕುಮಾರ್ ನಿರ್ಗಮಿಸುವ ದೃಶ್ಯ ತೆಗೆದಿದ್ದರು. ಅಲ್ಲಿಗೆ ಕ್ಲೈಮ್ಯಾಕ್ಸ್ ಅನ್ನು ಜನರಿಗೆ ಬಿಟ್ಟು ಬಿಡೋಣ ಅಂತ ತೀರ್ಮಾನಿಸಲಾಯಿತು." ಎನ್ನುತ್ತಾರೆ ನಿರ್ಮಾಪಕ ಲಕ್ಷ್ಮಣ್ ಅವರ ಪುತ್ರ ನಾಗಣ್ಣ.

2 ಕಡೆ ಬಂಗಾರದ ಮನುಷ್ಯ ಶೂಟ್
"ಬಂಗಾರದ ಮನುಷ್ಯ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವನ್ನು ಎರಡು ಕಡೆ ಚಿತ್ರೀಕರಿಸಲಾಗಿತ್ತು. ಸೂರ್ಯ ಮುಳುಗುವ ದೃಶ್ಯವನ್ನು ಒಮ್ಮೆ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ಬಳಿಕ ಮತ್ತೊಮ್ಮೆ ನಂದಿ ಬೆಟ್ಟದಲ್ಲಿ ಇದೇ ದೃಶ್ಯವನ್ನು ಮತ್ತೆ ಚಿತ್ರೀಕರಣ ಮಾಡಲಾಗಿತ್ತು. ಒಂದೇ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಎರಡು ಬಾರಿ ಚಿತ್ರೀಕರಣ ಮಾಡಲಾಗಿತ್ತು." ಎಂದು ನಾಗಣ್ಣ ಹೇಳುತ್ತಾರೆ.


Click it and Unblock the Notifications











