Bangarada Manushya : ಬೋರ್ ವೆಲ್, ಕ್ರೇನ್ ಬಳಸಿದ ಮೊದಲ ಚಿತ್ರ ಅಣ್ಣಾವ್ರ 'ಬಂಗಾರದ ಮನುಷ್ಯ'
'ಬಂಗಾರದ ಮನುಷ್ಯ' ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ ಆಗಲು ಹಲವು ಕಾರಣಗಳಿವೆ. ಇದು ಯುವಕರಿಗೆ ಹೃದಯವನ್ನು ಸ್ಪರ್ಷಿಸಿದ ಸಿನಿಮಾ ಆಯ್ತು. ಹುಟ್ಟೂರನ್ನು ಬಿಟ್ಟು ದುಡಿಮೆಗೆಂದು ನಗರಕ್ಕೆ ಬಂದಿದ್ದ ಯುವಕರ ಮನ ಕದಲಿಸಿತ್ತು. ಡಾ. ರಾಜ್‌ಕುಮಾರ್ ಅಂತಹ ಮೇರು ನಟ ರಾಜೀವನಾಗಿ ಇಂತಹ ಯುವಕರನ್ನು ಪ್ರತಿನಿಧಿಸಿದ್ದರು.
ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಮಾಡಿದ ಸಿನಿಮಾ ಆಯ್ತು. ವಿಪರ್ಯಾಸ ಅಂದರೆ, ಕನ್ನಡ ಚಿತ್ರರಂಗದಲ್ಲಿ ಮತ್ತೊಂದು 'ಬಂಗಾರ ಮನುಷ್ಯ' ದಂತಹ ಸಿನಿಮಾ ಬರಲೇ ಇಲ್ಲ. ಡಾ.ರಾಜ್‌ಕುಮಾರ್ ಹಾಗೂ ಸಿದ್ಧಲಿಂಗಯ್ಯ ಜೋಡಿ ಬೆಳ್ಳಿತೆರೆ ಮೇಲೆ ಮಾಡಿದ ಮೋಡಿ ಮತ್ಯಾರೂ ಮಾಡಲೇ ಇಲ್ಲ.
ಆರ್. ಲಕ್ಷ್ಮಣ್, ಗೋಪಾಲ್ ಹಾಗೂ ಕೆ ಸಿ ಎನ್ ಗೌಡರು ಈ ದುಬಾರಿ ಸಿನಿಮಾ ಮಾಡಿದ್ದರು. ಕಥೆಯೇ ಮುಖ್ಯ ಎನ್ನುವ ತಾರ್ಕಿಕ ನಿಲುವುಗಳನ್ನು ಮುಂದಿಟ್ಟುಕೊಂಡು ಈ ಸಿನಿಮಾ ಮಾಡಲಾಗಿತ್ತು. ಕೆಲವು ಮೊದಲುಗಳನ್ನು ಇದೇ ಸಿನಿಮಾ ಮೂಲಕ ಪರಿಚಯ ಮಾಡಲಾಗಿತ್ತು. 'ಬಂಗಾರದ ಮನುಷ್ಯ' ಚಿತ್ರದಲ್ಲಿ ಏನೆಲ್ಲಾ ಹೊಸತನ್ನು ಪರಿಚಯಿಸಲಾಯಿತು ಎಂಬ ಇಂಟ್ರೆಸ್ಟಿಂಗ್ ಮಾಹಿತಿಯನ್ನು ನಿರ್ಮಾಪಕರಲ್ಲಿ ಒಬ್ಬರಾದ ಲಕ್ಷ್ಮಣ್ ಅವರ ಪುತ್ರ ನಾಗಣ್ಣ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ಬೋರ್‌ವೆಲ್ ತೋರಿಸಿದ ಮೊದಲ ಚಿತ್ರ
1970ರ ಕಾಲ. ಆಗತಾನೇ ಸರ್ಕಾರ ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ಅಳವಡಿಸಿತ್ತು. ಆ ಬೋರ್‌ವೆಲ್‌ಗಳನ್ನು ಈ ಸಿನಿಮಾದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. "ಈ ಸಿನಿಮಾದಲ್ಲಿ ಮತ್ತೊಂದು ವಿಶೇಷವಿದೆ. ಆಗ ತಾನೇ ಬೋರ್‌ವೆಲ್‌ಗಳನ್ನು ಪರಿಚಯ ಮಾಡಲಾಗಿತ್ತು. ಬೋರ್‌ವೆಲ್‌ಗಳ ಬಗ್ಗೆನೇ ಎಲ್ಲರೂ ಮಾತಾಡುತ್ತಿದ್ದರು. ಬಂಗಾರದ ಮನುಷ್ಯ ಸಿನಿಮಾದಲ್ಲಿ ಮೊದಲ ಬಾರಿಗೆ ಬೋರ್‌ವೆಲ್ ಅನ್ನು ಇದೇ ಸಿನಿಮಾದಲ್ಲಿ ಇಂಟ್ರುಡ್ಯೂಸ್ ಮಾಡಲಾಗಿತ್ತು. ಈ ಸಿನಿಮಾದ ಕೆಲವು ದೃಶ್ಯಗಳಲ್ಲಿ ಬೋರ್‌ವೆಲ್‌ಗಳನ್ನು ಕಾಣಬಹುದು." ಎನ್ನುತ್ತಾರೆ ನಾಗಣ್ಣ.

ಕ್ರೇನ್ ಬಳಸಿದ ಮೊದಲ ಚಿತ್ರ
'ಬಂಗಾರದ ಮನುಷ್ಯ' ಸಿನಿಮಾದಲ್ಲಿ ಹಲವು ಸಾಹಸವನ್ನು ಮಾಡಲಾಗಿತ್ತು. ಹಾಡುಗಳ ಚಿತ್ರೀಕರಣಕ್ಕೆ ಕ್ರೇನ್ ಬಳಸಬೇಕು ಎಂದು ನಿರ್ಮಾಪಕರು ತೀರ್ಮಾನ ಮಾಡಿದ್ದರು. " ಕನ್ನಡದಲ್ಲಿ ಮೊದಲ ಬಾರಿಗೆ ಕ್ರೇನ್ ಬಳಿಸಿದ ಸಿನಿಮಾ 'ಬಂಗಾರದ ಮನುಷ್ಯ'. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕ್ರೇನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ, ಕನ್ನಡದಲ್ಲಿ ಈ ಕ್ರೇನ್ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಮ್ಮ ತಂದೆ ಈ ಸಿನಿಮಾಗಾಗಿ ಕ್ರೇನ್ ತಂದಿದ್ದರು. ಹಾಡನ್ನು ಅದರಲ್ಲೇ ಶೂಟ್ ಮಾಡಿದ್ದರು." ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ನಾಗಣ್ಣ.

ಕ್ರೇನ್ ಆಪರೇಟ್ ಮಾಡಲು 15 ಮಂದಿ ಬೇಕಿತ್ತು
"ಬಂಗಾರದ ಮನುಷ್ಯ ಸಿನಿಮಾವನ್ನು ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಒಂದು ಲಾರಿಯಲ್ಲಿ ಕ್ರೇನ್ ಅನ್ನು ತರುತ್ತಿದ್ದರು. ಬಳಿಕ ಎತ್ತರದ ಪ್ರದೇಶಕ್ಕೆ ಆ ಲಾರಿ ತೆಗೆದುಕೊಂಡು ಹೋಗಿ ಅಲ್ಲಿ ಕ್ರೇನ್ ಅನ್ನು ಇಳಿಸಲಾಗುತ್ತಿತ್ತು. ಈಗಿನ ಹಾಗೆ ಕ್ರೇನ್ ಅನ್ನು ಡಿಸ್‌ಮ್ಯಾಂಟಲ್ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಕ್ರೇನ್ ಆಪರೇಟ್ ಮಾಡುವುದಕ್ಕಂತಲೇ ಸುಮಾರು 15 ರಿಂದ 20 ಮಂದಿ ಕೆಲಸ ಮಾಡುತ್ತಿದ್ದರು." ಅಂತಾರೆ ನಾಗಣ್ಣ.

6 ನಿಮಿಷದ 6 ಹಾಡುಗಳಿವೆ
ಜಿ ಕೆ ವೆಂಕಟೇಶ್ ಕಂಪೋಸ್ ಮಾಡಿದ ಹಾಡುಗಳು ಸಿನಿಮಾದ ಹೈಲೈಟ್ ಆಗಿದ್ದವು. ಚಿತ್ರದ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾ ಎಲ್ಲಾ ಹಾಡುಗಳಲ್ಲೂ ಒಂದು ವಿಶೇಷವಿದೆ. "ಬಂಗಾರದ ಮನುಷ್ಯ ಸಿನಿಮಾಗೆ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಆರು ಹಾಡುಗಳನ್ನು ಕಂಪೋಸ್ ಮಾಡಿದ್ದರು. ವಿಶೇಷ ಅಂದರೆ, ಈ ಆರೂ ಹಾಡುಗಳೂ ಆರು ನಿಮಿಷ ಇತ್ತು. ಅಂದಿನ ಕಾಲಕ್ಕೆ ಈ ಹಾಡು ನಿಜಕ್ಕೂ ವಿಶೇಷ." ಎನ್ನುತ್ತಾರೆ ನಾಗಣ್ಣ.


Click it and Unblock the Notifications











