42 ವರ್ಷಗಳ ಹಿಂದೆ ಸಿದ್ಧಗಂಗಾ ಮಠಕ್ಕೆ ಡಾ.ರಾಜ್ ಭೇಟಿ:ಶ್ರೀಗಳ ಪಾದ ಸ್ಪರ್ಶಿಸಿ ಅಣ್ಣಾವ್ರು ಹೇಳಿದ್ದಿದ್ದೇನು?
ಡಾ.ರಾಜ್‌ಕುಮಾರ್ ಕನ್ನಡ ನಾಡಿನ ವರನಟ, ನಟಸಾರ್ವಭೌಮ. ಕನ್ನಡಿಗರ ಪಾಲಿಗೆ ಅಣ್ಣಾವ್ರು. ಇಂತಹ ಮೇರು ನಟನಿಗಾಗಿ ಕರ್ನಾಟಕದ ಜನರು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದರು. ಅದೇ ಇನ್ನೊಂದು ಕಡೆ ನಡೆದಾಡುವ ದೇವರು ಎಂದೇ ಪೂಜಿಸುತ್ತಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು. ಈ ಇಬ್ಬರು ಮಹಾನೀಯರ ಸಂಗಮ 42 ವರ್ಷಗಳ ಹಿಂದೆ ಆಗಿತ್ತು.
ತಮ್ಮ ಯಶಸ್ಸಿನ ಉತ್ತುಂಗದಲ್ಲಿ ಡಾ.ರಾಜ್‌ಕುಮಾರ್ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. 1981, ಡಿಸೆಂಬರ್ 26ರಂದು ಅಣ್ಣಾವ್ರು ತಮ್ಮ ಪುತ್ರನೊಂದಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶ್ರೀ ಶಿವಕುಮಾರ ಸ್ವಾಮಿಗಳ ಪಾದ ಸ್ಪರ್ಶಿಸಿ ಅವರ ಆಶೀರ್ವಾದವನ್ನು ಪಡೆದಿದ್ದರು. ಅದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿದ್ಧಗಂಗಾ ಮಠಕ್ಕೆ ಅಣ್ಣಾವ್ರರಿಂದ 10 ಸಾವಿರ ಕಾಣಿಕೆ
ಶ್ರೀ ಸಿದ್ಧಗಂಗಾ ಮಠದ ಫೇಸ್‌ಬುಕ್ ಪೇಜ್‌ನಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಅಣ್ಣಾವ್ರು ತಲೆಬಾಗಿ ಆಶೀರ್ವಾದವನ್ನು ಪಡೆದ ಫೋಟೊವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಣ್ಣಾವ್ರು ಅಲ್ಲಿ ನೆರೆದಿದ್ದ ಜನರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಏನು ಹೇಳಿದ್ದರು? ಅಂದು ಕ್ಷೇತ್ರವಾರ್ತೆ ಅನ್ನೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಹಂಚಿಕೊಂಡಿದ್ದಾರೆ. ಅದರದೊಂದು ಝಲಕ್ ಇಲ್ಲಿದೆ.
"ದಿನಾಂಕ 26-12-1981ರಂದು ಕನ್ನಡನಾಡಿನ ಖ್ಯಾತ ಚಿತ್ರನಟರಾದ ನಟಸಾರ್ವಭೌಮ ಶ್ರೀ ಡಾ. ರಾಜಕುಮಾರರವರು ತಮ್ಮ ಕುಟುಂಬದವರೊಂದಿಗೆ ಶ್ರೀ ಸಿದ್ಧಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ವಯಂ ಪ್ರೇರಣೆಯಿಂದ ಶ್ರೀ ಕ್ಷೇತ್ರದ ದಾಸೋಹಕ್ಕೆ 10,001 ರೂಪಾಯಿಗಳ ಕಾಣಿಕೆಯನ್ನು ಕೊಟ್ಟು ಶ್ರೀ ಶ್ರೀಗಳವರ ಆಶೀರ್ವಾದವನ್ನು ಪಡೆದರು." ಎಂದು ವರದಿಯಲ್ಲಿ ಹೇಳಲಾಗಿದೆ.

ಶ್ರೀಗಳ ಪಾದ ಸ್ಪರ್ಶಿಸಿ ಅಣ್ಣಾವ್ರು ಹೇಳಿದ್ದಿದ್ದೇನು?
"ಶ್ರೀಯುತರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರದಲ್ಲಿ ಶ್ರೀ ಶ್ರೀ ಸ್ವಾಮೀಜಿಯವರ ದರ್ಶನ, ಉಪದೇಶದ ಭಾಗ್ಯವನ್ನು ದಿನನಿತ್ಯವೂ ಕೇಳುತ್ತಿರುವ ನೀವು ಪುಣ್ಯವಂತರು, ಪುಣ್ಯ ಪುರುಷರೊಬ್ಬರ ಆದರ್ಶ ಜೀವನವನ್ನು ಪ್ರತ್ಯಕ್ಷವಾಗಿ ಕಂಡ ನೀವು ನಿಜಕ್ಕೂ ಭಾಗ್ಯಶಾಲಿಗಳು. ನಾವುಗಳು ದೇವರು ಎಲ್ಲಿದ್ದಾನೆಂದು ಎಲ್ಲ ಕಡೆ ಹುಡುಕುತ್ತಿದ್ದೇವೆ. ಆದರೆ ಅಂತಹ ಪ್ರತ್ಯಕ್ಷ ಪರಮಾತ್ಮ ಸ್ವರೂಪರಾದ ಪೂಜ್ಯರು ನಿಮಗೆಲ್ಲ ಆಶ್ರಯದಾತರಾಗಿರುವುದು ಅತ್ಯಂತ ಪರಮ ಸಂತೋಷ." ಎಂದು ಸಿದ್ಧಗಂಗಾ ಮಠದ ವಿದ್ಯಾರ್ಥಿಗಳನ್ನು ಉದ್ದೇಶಿ ಡಾ.ರಾಜ್‌ಕುಮಾರ್ ಮಾತಾಡಿದ್ದರು.
"ಪೂಜ್ಯರ ಆಶೀರ್ವಾದವನ್ನು ಪಡೆದಿರುವ ನೀವುಗಳು ಜೀವನದಲ್ಲಿ ಉತ್ತಮ ಸ್ಥಾನಗಳನ್ನು ಗಳಿಸಿಕೊಂಡು ತಮಗೆ ಆಶ್ರಯ ಕೊಟ್ಟ ಸಂಸ್ಥೆಗೆ ಮತ್ತು ನಿಮ್ಮ ತಾಯಿ-ತಂದೆಯರಿಗೆ ಕೀರ್ತಿ ತರುವವರಾಗಿರಿ. ಶ್ರದ್ದೆಯಿಂದ ಸಾಧನೆ ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಕಾಣುವಿರಿ ಮತ್ತು ನೀವೆಲ್ಲರೂ ರಾಜಕುಮಾರರೇ ಆಗುವಿರೆಂಬ ಹಾಸ್ಯ ಚಟಾಕಿಯನ್ನು ಹಾರಿಸಿ ಒಂದು ದಾಸರ ಕೀರ್ತನೆಯನ್ನು ಹಾಡಿ, ಪೂಜ್ಯರಿಗೆ ವಂದಿಸಿ ಮುಕ್ತಾಯ ಮಾಡಿದರು. ಅವರ ಮಗ ಮಾಸ್ಟರ್ ರಾಜಕುಮಾರ ಕೂಡ ಸಂಗೀತವನ್ನು ಹಾಡಿ ಆನಂದಗೊಳಿಸಿದನು." ಎಂದು ಕ್ಷೇತ್ರ ವಾರ್ತೆ ಅನ್ನೋ ಪತ್ರಿಕೆ ಪ್ರಕಟಿಸಿತ್ತು. ಅಂದಿನ ಫೋಟೊವನ್ನು ಫೇಸ್‌ಬುಕ್‌ನ ಶ್ರೀ ಸಿದ್ಧಗಂಗಾ ಮಠ ಹಂಚಿಕೊಂಡಿದೆ.


Click it and Unblock the Notifications











