"ದರ್ಶನ್ ಎರಡು ಸಂಸ್ಕಾರ ತೆಗೆದುಕೊಂಡು ಬಂದಿದ್ದಾರೆ": ಡಾ. ಶ್ರೀ ರಾಮಚಂದ್ರ ಗುರೂಜಿ
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇಂದು (ಫೆಬ್ರವರಿ 16) ಹುಟ್ಟುಹಬ್ಬದ ಸಂಭ್ರಮ. ಎಲ್ಲಾ ಸರಿಯಾಗಿದ್ದರೆ, ದರ್ಶನ್ ತಮ್ಮ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುವುದಿಲ್ಲ ಎಂದು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದರು.
ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಹೆಚ್ಚು ಹೊತ್ತು ನಿಲ್ಲುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಹೀಗಾಗಿ ಅಭಿಮಾನಿಗಳಂತೂ ದರ್ಶನ್ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಳ್ಳುತ್ತಿರುವುದರಲ್ಲಿ ಅನುಮಾನವಿಲ್ಲ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದಾಗಲೂ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದರು. ಪ್ರತಿ ಹಂತದಲ್ಲೂ ದರ್ಶನ್ ಪರ ಧ್ವನಿ ಎತ್ತಿದ್ದರು. ಅದಕ್ಕೆ ದರ್ಶನ್ ಕೂಡ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಟ ದರ್ಶನ್ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಮೊದಲನೇ ಬಾರಿ ಜೈಲಿಗೆ ಹೋಗಿ ಹೊರ ಬಂದ್ಮೇಲೆ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.
ಆ ಸಂದರ್ಭದಲ್ಲಿ ಇಲ್ಲಿಗೆ ದರ್ಶನ್ ಕಥೆ ಮುಗೀತು ಅಂತಲೇ ಅಂದುಕೊಂಡಿದ್ದರು. ಆದರೆ, ಆಗಿದ್ದೆಲ್ಲವೂ ಉಲ್ಟಾ. ದರ್ಶನ್ ನಟನೆಯ ಸಾರಥಿ ಸೂಪರ್ ಹಿಟ್ ಆಯ್ತು. ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿಯೇ ಉಳಿದರು. ಭಾರತೀಯ ಚಿತ್ರರಂಗದಲ್ಲಿ ಕೆಲ ನಟರು ಇಂತಹದ್ದೇ ಪರಿಸ್ಥಿತಿಗೆ ಸಿಲುಕಿಕೊಂಡಿದ್ದರು. ಆದರೆ, ಅವರ ವೃತ್ತಿ ಬದುಕು ಅಲ್ಲಿಗೆ ಮುಗಿದು ಹೋಗಿತ್ತು. ಆದರೆ, ದರ್ಶನ್ ಕೇಸ್ ಎಲ್ಲೂ ಉಲ್ಟಾ ಆಗಿದೆ. ಅದಕ್ಕೆ ಆಧ್ಯಾತ್ಮ ಗುರು ಡಾ. ಶ್ರೀ ರಾಮಚಂದ್ರ ಗುರೂಜಿ ಕೊಡುವ ಕಾರಣಗಳು ಬೇರೆನೇ ಇವೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದ ಡಾ. ಶ್ರೀ ರಾಮಚಂದ್ರ ಗುರೂಜಿ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋಗಿ ಜಾಮೀನನ ಮೇಲೆ ಹೊರ ಬಂದಾಗ ಅಲ್ಲಿ ನನ್ನ ಪಾತ್ರವೂ ಇತ್ತು ಎಂದು ಹೇಳಿಕೆ ನೀಡಿದ್ದರು. ಹಾಗೇ ದರ್ಶನ್ ಯಾಕಿಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ಅನ್ನೋದನ್ನು ಹೇಳಿದ್ದಾರೆ. ಅದರ ಸಾರಾಂಶವೂ ಇಲ್ಲಿದೆ.
"ದರ್ಶನ್ ಸಂಸ್ಕಾರ ತೆಗೆದುಕೊಂಡು ಬಂದಿದ್ದಾರೆ. ಆ ಸಂಸ್ಕಾರ ಎರಡು ವಿಧದಲ್ಲಿ ಇದೆ. ಒಂದು ದು:ಖದ ಸಂಸ್ಕಾರವಿದೆ. ಇನ್ನೊಂದು ಖುಷಿಯ ಉತ್ತುಂಗದ ಮಟ್ಟದಲ್ಲಿದೆ. ಅಂದರೆ ಉಚ್ಛ್ರಾಯ ಸ್ಥಿತಿಯನ್ನು ಕಂಡವರು. ಕೆಲವರು ನೀಚ ಸ್ಥಿತಿಗೆ ಹೋಗುವಂತಹದ್ದು. ಈ ಎರಡು ಸಂಸ್ಕಾರಗಳನ್ನು ಇಟ್ಟುಕೊಂಡು ಬಂದಿರುತ್ತಾರೆ." ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಶ್ರೀ ರಾಮಚಂದ್ರ ಗುರೂಜಿ ಹೇಳಿಕೊಂಡಿದ್ದಾರೆ.
ಹಾಗೇ ಎರಡು ಬಾರಿ ಜೈಲಿಗೆ ಹೋಗಿದ್ದ ಬಗ್ಗೆನೂ ಹೇಳಿಕೊಂಡಿದ್ದಾರೆ. "ದರ್ಶನ್ ಎಪಿಸೋಡ್ ಒಂದು. ಇದು ದರ್ಶನ್ ಎಪಿಸೋಡ್ 2 ಅಲ್ವಾ ಜೈಲ್‌ಗೆ ಹೋಗಿದ್ದು. ಎಪಿಸೋಡ್ ಒಂದರಲ್ಲಿ ಅವರು ಜೈಲ್‌ಗೆ ಹೋಗಿ 15 ದಿನ ಇದ್ದರು ಅಂತ ಕಾಣುತ್ತೆ. ಅಲ್ಲಿ ನನ್ನ ಪಾತ್ರವೂ ಇದೆ. ಕುತೂಹಲ ಅಲ್ವಾ? ಅವರು ಜೈಲ್‌ಗೆ ಹೋಗಿ ಬೇಲ್ ಸಿಕ್ಕಿತಲ್ಲ ಆ ಎರಡು ಮೂರು ದಿನ.. (ಇಲ್ಲಿಂದ ಮ್ಯೂಟ್ ಮಾಡಲಾಗಿದೆ).. ಅಂದರೆ ರಾಮಚಂದ್ರ ಗುರೂಜಿ ಪ್ರಾರ್ಥನೆ ಮಾಡಿದ್ದಕ್ಕೆ ಬೇಲ್ ಸಿಕ್ಕಿತು ಅನ್ನೋದೇ ಅದರ ಸಾರಾಂಶ." ಎಂದಿದ್ದಾರೆ.
ಹಾಗೇ "ಅವರ ಸಾರಥಿ ಸಿನಿಮಾಗೆ ನನ್ನ ಸ್ಟುಡೆಂಟ್ ಅನ್ನು ಪರಿಚಯ ಮಾಡಿದ್ದೆ. ಆ ಸಮಯದಲ್ಲಿ ಆಕೆನೇ ಅವರ ಗಮನಕ್ಕೆ ತಂದಿದ್ದರು. ಇದೆಲ್ಲ ಆಗಿದ್ದು ಹಾಯ್ ಬೆಂಗಳೂರಿನಲ್ಲಿ ಸಾಕ್ಷಿ ಸಮೇತ ಇವತ್ತೂ ಫೋಟೊ ಸಮೇತ ಆ ಆರ್ಟಿಕಲ್ ಇದೆ. ಯಾರು ಬೇಕಾದರೂ ಪರಿಶೀಲನೆ ಮಾಡಿಕೊಳ್ಳಬಹುದು. ಅಂದರೆ ಅವರಿಗಾಗಿ ಮೊದಲು ಪ್ರಾರ್ಥನೆ ಮಾಡಿದ್ದು ಇದೆ." ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications










