ವೋಟ್ ಮಾಡಲು ಅಮೆರಿಕದಿಂದ ಬಂದ ದುನಿಯಾ ವಿಜಿ ಪುತ್ರಿ ಮೊನಿಷಾ; ಸ್ಟಾರ್ ನಟಿಯರಿಗೆ ಮಾದರಿ
ಏಪ್ರಿಲ್ 26ಕ್ಕೆ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ. ಜನ ಸಾಮಾನ್ಯರ ಜೊತೆಗೆ ಚಿತ್ರರಂಗವೂ ಉತ್ಸಾಹದಿಂದಲೇ ಮತದಾನದ ಹಬ್ಬದಲ್ಲಿ ಪಾಲ್ಗೊಂಡಿತ್ತು. ಬೇರೆ ಬೇರೆ ರಾಜ್ಯ- ದೇಶಗಳಿಂದೆಲ್ಲಾ ಜನ ತಮ್ಮೂರಿಗೆ ಬಂದು ಮತ ಚಲಾಯಿಸಿದ್ರು. ಈ ಸಾಲಿಗೆ ಮತ್ತೊಂದು ಸೇರ್ಪಡೆ ದುನಿಯಾ ವಿಜಯ್ ಮಗಳು ಮೊನಿಷಾ.
ಅಂದ್ಹಾಗೆ ದುನಿಯಾ ವಿಜಯ್ ಮಗಳು ಮೊನಿಷಾ ಅಮೆರಿಕದ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚುನಾವಣೆ ಇಂಥಾ ದಿನ ಇದೆ ಅನ್ನೋದು ಗೊತ್ತಾದ ಕೂಡಲೇ ವೋಟ್ ಮಾಡುವುದರ ಜೊತೆಗೆ ಕುಟುಂಬದ ಜೊತೆಗೂ ಸ್ವಲ್ಪ ಸಮಯ ಕಳೆಯುವಂತಾಗಲಿ ಎಂದು ಪ್ಲಾನ್ ಮಾಡಿಕೊಂಡೇ ಬೆಂಗಳೂರಿಗೆ ಬಂದಿಳಿದಿದ್ದರು.

ಏಪ್ರಿಲ್ 26ಕ್ಕೆ ತಮ್ಮ ಅಮೂಲ್ಯ ಮತ ಚಲಾಯಿಸಿದ ಮೊನಿಷಾ ಮರಳಿ ಅಮೆರಿಕಗೆ ಹಾರೋಕೆ ರೆಡಿಯಾಗಿದ್ದಾರೆ. ಮೊನಿಷಾಗೆ ಚಿತ್ರರಂಗಕ್ಕೆ ಬರುವ ಆಸೆಯಿದೆ. ನಟಿಯಾಗುವ ಕನಸಿದೆ. ಈ ಬಗ್ಗೆ ಹಿಂದೊಮ್ಮೆ ಅವರು ಪತ್ರಿಕೆಗಳೊಂದಿಗೆ ಮಾತನಾಡಿದ್ದರು.
"ನಾನು ಮತ್ತು ಸಹೋದರಿ ಮೊನಿಕಾ ಇಬ್ಬರೂ ಸಿನಿಮಾ ಇಂಡಸ್ಟ್ರಿಗೆ ಬರೋಕೆ ಆಸಕ್ತಿ ಇದೆ ಎಂದಿದ್ದೆವು. ಅಪ್ಪನಿಗೆ ಇದು ಖಂಡಿತಾ ಇಷ್ಟ ಆಗಿರಲಿಲ್ಲ. ನಾನು ನಟಿಯಾಗ್ತೀನಿ ಅಂದಿದ್ದಕ್ಕೆ ಅವರು ನಿರಾಕರಿಸಿದ್ದರು. ಆದರೆ, ನಂತರ ನನ್ನ ಸೀರಿಯಸ್‌ನೆಸ್ ನೋಡಿ ಒಪ್ಪಿಗೆ ಕೊಟ್ಟರು. ಚಿತ್ರರಂಗಕ್ಕೆ ಬರೋದೇ ಹೌದು ಅಂತಾದ್ಮೇಲೆ ಸರಿಯಾಗಿ ತರಬೇತಿ ಪಡೆದೇ ಬಾ ಎಂದರು. ನಟನೆ, ಸಿನಿಮಾದ ಬೇರೆ ಬೇರೆ ಹಂತಗಳು, ತಂತ್ರಜ್ಞಾನ, ಮಾಧ್ಯಮಗಳೊಂದಿಗೆ ವ್ಯವಹರಿಸುವ ರೀತಿ, ನನ್ನನ್ನು ನಾನು ಕ್ಯಾರಿ ಮಾಡಬೇಕಾದ ಬಗೆ - ಹೀಗೆ ಎಲ್ಲಾ ವಿಚಾರಗಳನ್ನು ಸರಿಯಾಗಿ ಕಲಿತು ಬರುವುದೇ ಸರಿ ಎಂದು ನಿರ್ಧರಿಸಿ, ನನ್ನನ್ನು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಸೇರಿಸಿದರು. ನಾನೀಗ ಅಲ್ಲಿ ವ್ಯಾಸಂಗ ಮಾಡುತ್ತಿದ್ದೀನಿ. ಕೋರ್ಸ್ ಮುಗಿದ ನಂತರ ಸ್ಯಾಂಡಲ್‌ವುಡ್‌ಗೆ ಬರುತ್ತೇನೆ" ಎಂದಿದ್ದರು ಮೊನಿಷಾ.

ಇನ್ನು ಏಪ್ರಿಲ್ 26ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ಮತ ಚಲಾಯಿಸಿದರು. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನೆನಪಿರಲಿ ಪ್ರೇಮ್, ಮೇಘನಾ ರಾಜ್, ಪ್ರಜ್ವಲ್ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಹಿರಿಕಿರಿಯ ಕಲಾವಿದರು ಮತ ಚಲಾಯಿಸಿ, ಜನರನ್ನು ವೋಟ್ ಮಾಡಲು ಪ್ರೇರೇಪಿಸಿದರು. ರಾಷ್ಟ್ರದ ಅತಿ ದೊಡ್ಡ ಸಂವಿಧಾನದ ಹಬ್ಬದಲ್ಲಿ ಭಾಗಿಯಾಗಿ ವೋಟ್ ಹಾಕುವುದಕ್ಕಾಗಿ ದೂರದ ಅಮೆರಿಕದಿಂದ ಬಂದಿಳಿದ ದುನಿಯಾ ವಿಜಿ ಮಗಳ ನಡೆ ಎಲ್ಲರ ಮೆಚ್ಚುಗೆ ಗಳಿಸಿದೆ.


Click it and Unblock the Notifications











