ದುನಿಯಾ ವಿಜಯ್ ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲು ಸಿನಿಮಾಗೆ ಎಂಟ್ರಿ ಕೊಡೋದ್ಯಾರು? ಅಪ್ಪನೇ ನಿರ್ದೇಶಕ?
ದುನಿಯಾ ವಿಜಯ್ ಈಗ ನಟನಷ್ಟೇ ಅಲ್ಲ, ನಿರ್ದೇಶಕ ಕೂಡ ಹೌದು. 'ಸಲಗ' ಸಿನಿಮಾ ಬಳಿಕ ಮತ್ತೆ ಸೆಕೆಂಡ್ ಇನ್ನಿಂಗ್ ಆರಂಭಿಸಿರೋ ವಿಜಯ್ 'ಭೀಮ'ನಾಗಿ ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಸಕಲ ಸಿದ್ಧತೆಗಳನ್ನೂ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಒಂದು ಹಾಡು ಬೇಜಾನ್ ಸದ್ದು ಮಾಡುತ್ತಿದೆ.
ದುನಿಯಾ ವಿಜಯ್ ಸೆಕೆಂಡ್ ಇನ್ನಿಂಗ್ಸ್ ಜೋರಾಗಿಯೇ ಶುರುವಾಗಿದೆ. ಅದೇ ಇನ್ನೊಂದು ಕಡೆ ವೈಯಕ್ತಿಕ ಬದುಕು ಕೂಡ ಸಹಜ ಸ್ಥಿತಿಗೆ ಮರಳಿದೆ. ಇದೇ ಖುಷಿಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡುವುದಕ್ಕೆ ದುನಿಯಾ ವಿಜಯ್ ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದ ಕೆಲವು ದಿನಗಳಿಂದ ದುನಿಯಾ ವಿಜಯ್ ಹೆಣ್ಣು ಮಕ್ಕಳ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆಗಲೇ ಇಬ್ಬರೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡೋದು ಬಹುತೇಕ ಖಚಿತ ಎನ್ನುವಂತಾಗಿತ್ತು. ಆದರೆ, ಮೋನಿಕಾ ಹಾಗೂ ಮೋನಿಷಾ ಇಬ್ಬರಲ್ಲಿ ಯಾರು ಮೊದಲು ಎಂಟ್ರಿ ಕೊಡುತ್ತಾರೆ? ಅನ್ನೋದು ಗುಟ್ಟು ರಟ್ಟಾಗಿರಲಿಲ್ಲ. ಅದೀಗ ರಿವೀಲ್ ಆಗಿದೆ.
ಮೋನಿಕಾ-ಮೋನಿಷಾ ಮೊದಲು ಎಂಟ್ರಿ ಕೊಡೋದ್ಯಾರು?
ದುನಿಯಾ ವಿಜಯ್ ಹಿರಿಯ ಪುತ್ರಿ ಮೋನಿಕಾ. ಕಿರಿಯ ಪುತ್ರಿ ಮೋನಿಷಾ. ಇಬ್ಬರೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಿರಿಯ ಪುತ್ರಿ ಮೋನಿಕಾ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ಈಗಾಗಲೇ ಮೋನಿಕಾ ಶಿಕ್ಷಣ ಕೂಡ ಮುಗಿಸಿದ್ದು, ನಟನೆಗೆ ಬೇಕಾದ ತರಬೇತಿಯನ್ನು ಮುಂಬೈನ ಅನುಮಪ್ ಖೇರ್ ನಟನಾ ತರಬೇತಿ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ಹೀಗಾಗಿ ಮೊದಲು ಮೋನಿಕಾ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ.
ದುನಿಯಾ ವಿಜಯ್ ನಿರ್ದೇಶನ?
ದುನಿಯಾ ವಿಜಯ್ ಇಬ್ಬರೂ ಪುತ್ರಿಯರಿಗೂ ತಮ್ಮ ಕರಿಯರ್ ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಫುಲ್ ಫ್ರೀಡಂ ಕೊಟ್ಟಿದ್ದಾರೆ. ಈಗ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡುವ ಜವಾಬ್ದಾರಿ ದುನಿಯಾ ವಿಜಯ್ ಮೇಲಿದೆ. ಈ ಕಾರಣಕ್ಕೆ ಮೋನಿಕಾ ವಿಜಯ್ ಚೊಚ್ಚಲ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಮಕ್ಕಳ ವಿಷಯದಲ್ಲಿ ವಿಜಯ್ ಹೇಗೆ?
ಇಬ್ಬರು ಹೆಣ್ಣು ಮಕ್ಕಳ ವಿಚಾರದಲ್ಲಿ ದುನಿಯಾ ವಿಜಯ್ ಸ್ಟ್ರಿಕ್ಟ್ ಆಗಿರುತ್ತಾರಾ? ಇಲ್ಲ ಫ್ರೆಂಡ್ಲಿಯಾಗಿ ಇರುತ್ತಾರಾ? ಅಂತ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಕೇಳಲಾಗಿತ್ತು. ಈ ವೇಳೆ ಮೋನಿಕಾ ಹಾಗೂ ಮೋನಿಷಾ ಇಬ್ಬರೂ ತಂದೆ ಬಗ್ಗೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ಹುಡುಗರ ವಿಷಯದಲ್ಲಿ ತುಂಬಾನೇ ಸ್ಟ್ರಿಕ್ಟ್ ಇರುತ್ತಾರೆ. ಅದೇ ಬೇರೆ ಸಮಯದಲ್ಲಿ ಫುಲ್ ಆರಾಮಾಗಿರುತ್ತಾರೆ. ತುಂಬಾ ಫ್ರೆಂಡ್ಲಿಯಾಗಿರುತ್ತಾರೆ. ಎಲ್ಲದೂ ಶೇರ್ ಮಾಡಿಕೊಳ್ಳಬಹುದು. ಓಪನ್ ಆಗಿರುತ್ತಾರೆ. ಆದರೆ, ಏನಾದರೂ ತಪ್ಪು ಮಾಡಿದಾಗ ಹಿಡ್ಕೊಳ್ತಾರೆ." ಎಂದು ಮೋನಿಷಾ ಹಾಗೂ ಮೋನಿಕಾ ಇಬ್ಬರೂ ಹೇಳಿದ್ದಾರೆ.
ಮಕ್ಕಳ ಸಿನಿಮಾ ಎಂಟ್ರಿ ಬಗ್ಗೆ ವಿಜಯ್ ಹೇಳಿದ್ದೇನು?
ಇದೇ ಸಂದರ್ಶನದಲ್ಲಿ ದುನಿಯಾ ವಿಜಯ್ ಕೂಡ ತಮ್ಮ ಹೆಣ್ಣು ಮಕ್ಕಳ ನಿರ್ಧಾರಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. "ನಾನು ಅವರಿಗೆ ಮೊದಲು ಚೆನ್ನಾಗಿ ಓದಿ. ಆ ಮೇಲೆ ನಿಮ್ಮ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಿ ಅಂತ ಹೇಳುತ್ತೇನೆ ಅಷ್ಟೇ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಅದಕ್ಕೆ ಮೊದಲು ಓದಿ ಆಮೇಲೆ ನಿಮಗೆ ಏನು ಸರಿ ಅನಿಸುತ್ತೋ ಆ ನಿರ್ಧಾರವನ್ನು ತೆಗೆದುಕೊಳ್ಳಿ ಅಂತ ಅವರಿಗೆ ಹೇಳಿದ್ದೇನೆ" ಎಂದು ದುನಿಯಾ ವಿಜಯ್ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications











