ನಿಖಿಲ್ ಕುಮಾರಸ್ವಾಮಿ ಸಿನಿಮಾದಲ್ಲಿ ದುನಿಯಾ ವಿಜಯ್: ಬ್ಲ್ಯಾಕ್ ಕೋಬ್ರಾ ಪಾತ್ರವೇನು? ಒಪ್ಪಿದ್ದೇಕೆ?
ನಿಖಿಲ್ ಕುಮಾರಸ್ವಾಮಿ ಇಷ್ಟು ಚುನಾವಣೆ, ರಾಜಕೀಯ ಅಂತ ಬ್ಯುಸಿಯಾಗಿದ್ದರು. ಆದ್ರೀಗ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಿದ್ದರೂ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೂ ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಈ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದ್ದು, ದುನಿಯಾ ವಿಜಯ್. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಹಾಗೂ ನಿಖಿಲ್ ಕುಮಾರಸ್ವಾಮಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ಪಾತ್ರವೇನು? ಅನ್ನೋದು ಮಾತ್ರ ಇನ್ನೂ ಗುಟ್ಟಾಗಿಯೇ ಇಡಲಾಗಿದೆ.

ನಿಖಿಲ್ ಕುಮಾರಸ್ವಾಮಿ ತಮ್ಮ ಸಿನಿಮಾಗೆ ದುನಿಯಾ ವಿಜಯ್ ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದುನಿಯಾ ವಿಜಯ್ ಸ್ವಾಗತಿಸಿದ ಫೋಟೊವನ್ನು ಹಂಚಿಕೊಂಡಿದ್ದಾರೆ. "ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ಪ್ರೊಡಕ್ಷನ್ ನಂ28 ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸ್ಯಾಂಡಲ್‌ವುಡ್ 'ಸಲಗ' ಕರಿಚಿರತೆ ದುನಿಯಾ ವಿಜಯ್ ಅವರಿಗೆ ಸ್ವಾಗತ. ನಮ್ಮ ಸಿನಿಮಾದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ಅವರ ಜೊತೆ ನಾನು ತೆರೆ ಹಂಚಿಕೊಳ್ಳುತ್ತಿರುವುದು ಸಂತೋಷದ ವಿಚಾರ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅದ್ಧೂರಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಸಂಸ್ಥೆ ಲೈಕಾ ಪ್ರೊಡಕ್ಷನ್. ತಮಿಳಿನಲ್ಲಿಯೇ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಈ ಸಂಸ್ಥೆ ಕನ್ನಡಕ್ಕೂ ಪಾದಾರ್ಪಣೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ ಸಿನಿಮಾವನ್ನು ನಿರ್ಮಾಣದ ಮೂಲಕ ಅಧಿಕೃತವಾಗಿ ಕನ್ನಡಕ್ಕೆ ಕಾಲಿಟ್ಟಿದೆ. ಈ ಸಿನಿಮಾ ಕೂಡ ಕನ್ನಡದ ದುಬಾರಿ ಎಂದು ಹೇಳಲಾಗುತ್ತಿದೆ.
ಈಗ ನಿಖಿಲ್ ಕುಮಾರಸ್ವಾಮಿ ಜೊತೆ ಸ್ಯಾಂಡಲ್‌ವುಡ್ 'ಸಲಗ' ದುನಿಯಾ ವಿಜಯ್ ಕೂಡ ನಟಿಸುತ್ತಿರುವುದರಿಂದ ಸಿನಿಮಾಗೆ ಮತ್ತಷ್ಟು ಪವರ್ ಬಂದಂತಾಗಿದೆ. ಕೆಲವೆಡೆ ದುನಿಯಾ ವಿಜಯ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ವರದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮುಂದಿನ ದಿನಗಳಲ್ಲಿ ವಿಜಯ್ ಪಾತ್ರವೇನು ಅನ್ನೋದು ಗೊತ್ತಾಗಬಹುದು. ಇಷ್ಟೇ ಅಲ್ಲದೆ, ಲೈಕಾ ಪ್ರೊಡಕ್ಷನ್ಸ್ ಬೇರೆ ಭಾಷೆಯಿಂದಲೂ ಸ್ಟಾರ್‌ಗಳನ್ನು ಈ ಸಿನಿಮಾಗಾಗಿ ಕರೆದುಕೊಂಡು ಬರಬಹುದು ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ.
ಅಂದ್ಹಾಗೆ ನಿಖಿಲ್ ಕುಮಾರಸ್ವಾಮಿ ನಾಯಕಿನಾಗಿ ನಟಿಸುತ್ತಿರುವ ಈ ಸಿನಿಮಾ ಲೈಕಾ ನಿರ್ಮಾಣದ 28ನೇ ಸಿನಿಮಾ. ಜೊತೆಗೆ ಮೊದಲ ಕನ್ನಡ ಸಿನಿಮಾ. ಇದೆಲ್ಲದರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಹಾಗೂ ದುನಿಯಾ ವಿಜಯ್ ಅಂತಹ ರೇರ್ ಕಾಂಬಿನೇಷನ್ ಇರುವುದರಿಂದ ಸಿನಿಮಾ ಮೇಲೆ ನಿರೀಕ್ಷೆಗಳು ಸಹಜವಾಗಿಯೇ ದುಪ್ಪಟ್ಟಾಗಿದೆ.


Click it and Unblock the Notifications











