ದುನಿಯಾ ವಿಜಯ್ ಇರದೇ ಹೋಗಿದ್ದರೆ ಗುರುಪ್ರಸಾದ್ ಅಂತ್ಯಕ್ರಿಯೆ ಸರಾಗವಾಗಿ ಸಾಗುತ್ತಿರಲಿಲ್ಲ; ಅಂತಿಮ ಯಾತ್ರೆಯಲ್ಲಿ ನಡೆದಿದ್ದೇನು?
ಕನ್ನಡದ ಕ್ರಿಯೇಟಿವ್ ನಿರ್ದೇಶಕ ಗುರುಪ್ರಸಾದ್ ನೇಣಿಗೆ ಶರಣಾಗಿರುವ ವಿಷಯ ಸ್ಯಾಂಡಲ್‌ವುಡ್ ದೊಡ್ಡ ಮಟ್ಟಕ್ಕೆ ಶಾಕ್ ಆಗಿತ್ತು. ತನ್ನ ಬರವಣಿಗೆಯಿಂದ, ವಿಭಿನ್ನ ಆಲೋಚನೆಗಳಿಂದ ಸಿನಿಪ್ರಿಯರಿಗೆ ಇಷ್ಟವಾಗುತ್ತಿದ್ದ ಗುರುಪ್ರಸಾದ್ ಚಿತ್ರರಂಗಕ್ಕೆ ಅವರದ್ದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ಕ್ರಿಯಾಶೀಲತೆಗೆ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾಗಳೇ ಸಾಕ್ಷಿ.
ತನ್ನ ಕ್ರಿಯಾಶೀಲತೆಯನ್ನು ಗುರುಪ್ರಸಾದ್ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು ಅನ್ನೋದು ಕನ್ನಡದ ಚಿತ್ರರಂಗಕ್ಕೆ ಆದ ನಷ್ಟ ಅನ್ನೋದರಲ್ಲಿ ಎರಡು ಮಾತಿಲ್ಲ. ತನ್ನ ಪ್ರತಿಭೆಯನ್ನು ಬಳಸಿಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ನೀಡಬಹುದಾಗಿದ್ದ ಗುರುಪ್ರಸಾದ್ ಜೀವನ ಶೈಲಿಯೇ ಅವರನ್ನು ಸಂಕಷ್ಟಕ್ಕೆ ಸಿಲುಕಿತ್ತು. ಸಾಲ, ಖಿನ್ನತೆ, ಸಾಂಸಾರಿಕ ಜೀವನ ಇವೆಲ್ಲವೂ ಅವರನ್ನು ಬಲಿ ಪಡೆದು ಬಿಟ್ಟಿದೆ.

ಗುರುಪ್ರಸಾದ್ ಸಾವಿನ ಬಳಿಕವೂ ಅವರ ಕೊನೆಯ ಜರ್ನಿ ಅಷ್ಟೊಂದು ಸುಗಮವಾಗಿರುತ್ತಿರಲಿಲ್ಲ. ನಟ ದುನಿಯಾ ವಿಜಯ್ ಇರದೇ ಹೋಗಿದ್ದರೆ, ನೇಣು ಹಾಕಿಕೊಂಡ ಮನೆಯಿಂದ ಚಿತಾಗಾರದವರೆಗೂ ಅವರ ಕೊನೆಯ ಜರ್ನಿ ಸರಾಗವಾಗಿ ಸಾಗುತ್ತಲೇ ಇರಲಿಲ್ಲ. ಗುರುಪ್ರಸಾದ್ ಜೊತೆ ಕೆಲಸ ಮಾಡದೇ ಇದ್ದರೂ ಅವರ ಕೊನೆಯ ಜರ್ನಿಯಲ್ಲಿ ನೆರವಾಗಿದ್ದು ಇದೇ ದುನಿಯಾ ವಿಜಯ್. ಅಷ್ಟಕ್ಕೂ ದುನಿಯಾ ವಿಜಯ್ ನೀಡಿದ ನೆರವು ಹೇಗಿತ್ತು? ಅವರ ಆಪ್ತರು ವಿಜಯ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದು ಯಾಕೆ? ತಿಳಿಯಲು ಮುಂದೆ ಓದಿ.
ಗುರುಪ್ರಸಾದ್ ಹಾಗೂ ದುನಿಯಾ ವಿಜಯ್ ಇಬ್ಬರೂ ಒಂದೇ ಒಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿಲ್ಲ. ಹಾಗೇ ಹೆಚ್ಚೇನು ಒಡನಾಟವನ್ನೂ ಇಟ್ಟುಕೊಂಡಿರಲಿಲ್ಲ. ಆದರೆ, ಗುರುಪ್ರಸಾದ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೆರವಿಗೆ ಬಂದಿದ್ದು ಇದೇ ನಟ. ಮನೆಯಿಂದ ವಿಕ್ಟೋರಿಯಾಗೆ ಮೃತದೇಹವನ್ನು ಸಾಗಿಸುವ ವೇಳೆ ನಾಲ್ಕು ಬಾರಿ ಆಂಬ್ಯುಲೆನ್ಸ್ ಕೆಟ್ಟ ನಿಂತಿತ್ತು. ಇಲ್ಲಿಂದ ಒಂದೊಂದು ಸವಾಲು ಎದುರಾಗಿತ್ತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರು ಪತ್ನಿಯರ ಮಧ್ಯೆ ಗೊಂದಲವಿತ್ತು. ಮೊದಲ ಪತ್ನಿ ಆರತಿಯವರಿಗೆ ಬ್ರಾಹ್ಮಣ ಸಂಪ್ರದಾಯಂತೆ ಅಂತ್ಯ ಸಂಸ್ಕಾರ ಆಗಬೇಕು ಅಂತಿತ್ತು. ಎರಡನೇ ಪತ್ನಿ ಸುಮಿತ್ರಾ ಅವರಿಗೆ ಗೌಡರ ಸಂಪ್ರದಾಯದಂತೆ ವಿಧಿ ವಿಧಾನಗಳು ನಡೆಯಬೇಕು ಅಂತಿತ್ತು. ಈ ಗೊಂದಲ ಬೇರೆ ವಾತಾವರಣವನ್ನೇ ಸೃಷ್ಟಿಸಬಹುದಿತ್ತು. ಆ ವೇಳೆ ದುನಿಯಾ ವಿಜಯ್ ಮುಂದೆ ಬಂದಿದ್ದರು. ಇಬ್ಬರು ಪತ್ನಿಯರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ ಅಂತ್ಯ ಸಂಸ್ಕಾರಕ್ಕೆ ಒಪ್ಪಿಸಿದ್ದರು.
ಮರಣೋತ್ತರ ಪರೀಕ್ಷೆ ಬಳಿಕ ಎರಡನೇ ಪತ್ನಿ ಸುಮಿತ್ರಾ ಪತಿ ಗುರುಪ್ರಸಾದ್ ಮುಖ ನೋಡಬೇಕು ಅಂತ ಹಠ ಹಿಡಿದಿದ್ದರು. ಆದರೆ, ಅದಾಗಲೇ ದೇಹ ಕೊಳೆತು ವಾಸನೆ ಬರುತ್ತಿತ್ತು. ಹೀಗಾಗಿ ಮುಖ ನೋಡುವಂತಹ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆ ಮೂಲಕ ಅವರ ಮೃತದೇಹವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹಾಗೇ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುವುದಾಗಿ ಸುಮಿತ್ರಾ ಹಠ ಹಿಡಿದಿದ್ದರು. ಆ ವೇಳೆ ಅವರ ಭಾವನೆಗಳಿಗೆ ನೋವಾಗದಂತೆ ದುನಿಯಾ ವಿಜಯ್ ಪರಿಸ್ಥಿತಿಯನ್ನು ಅರ್ಥ ಮಾಡಿಸಿದ್ದರು.
ಸಮಸ್ಯೆ ಇಲ್ಲಿಗೆ ಮುಗಿದಿರಲಿಲ್ಲ. ಮರಣೋತ್ತರ ಪರೀಕ್ಷೆ ಮುಗಿಯುವ ವೇಳೆಗೆ ಸಂಜೆಯಾಗಿತ್ತು. ವಿಲ್ಸನ್ ಗಾರ್ಡನ್ ಚಿತಾಗಾರ 7ಕ್ಕೆ ಕೆಲಸ ನಿಲ್ಲಿಸುತ್ತಿತ್ತು. ಈ ವೇಳೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ತಡವಾಗುತ್ತೆ ಎಂದು ತಮ್ಮ ಹುಡುಗರನ್ನು ಕಳಿಸಿ ವ್ಯವಸ್ಥೆ ಮಾಡಿಸಿದ್ದರು. ಇದೇ ಸಂದರ್ಭದಲ್ಲಿ ಅವರ ಅಣ್ಣನನ್ನು ಕನಕಪುರದಿಂದ ಕರೆಸುವ ವ್ಯವಸ್ಥೆಯನ್ನು ಮಾಡಿದ್ದರು.
ಈ ವೇಳೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ಪೊಲೀಸರ ಸಹಿ ಇಲ್ಲದೆ ಗುರುಪ್ರಸಾದ್ ಮೃಹದೇಹವನ್ನು ತೆಗೆದುಕೊಳ್ಳುವುದಿಲ್ಲ ಎಂದು ಚಿತಾಗಾರದ ಸಿಬ್ಬಂದಿ ಹೇಳಿದ್ದರು. ಆ ವೇಳೆ ದುನಿಯಾ ವಿಜಯ್ ಅವರೇ ಮನವಿ ಮಾಡಿಕೊಂಡು ಮೃತದೇಹ ಕೊಳೆತಿದೆ. ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ನಾಳೆ ತಾನೇ ಸಹಿ ಹಾಕಿಸಿ ತಂದು ಕೊಡುವುದಾಗಿ ಒಪ್ಪಿಸಿ ಅಂತ್ಯಕ್ರಿಯೆ ನಡೆಯುವಂತೆ ನೋಡಿಕೊಂಡಿದ್ದರು.
ಕೊನೆಯ ಕ್ಷಣದಲ್ಲಿ ಅಣ್ಣ ಹಾಗೂ ಸುಮಿತ್ರಾ ಅವರ ಸಹೋದರನ್ನು ಕೂರಿಸಿ ಅಂತ್ಯಕ್ರಿಯೆ ಮಾಡಿಸಿದ್ದರು. ಜೊತೆಗೆ ಮೊದಲ ಪತ್ನಿಯ ಪುತ್ರಿ ಹಾಗೂ ಎರಡನೇ ಪತ್ನಿಯಿಂದ ದೇಹವನ್ನು ಮುಟ್ಟಿಸಿ ಚಿತೆಗೆ ಮೃತದೇಹವನ್ನು ತಳ್ಳುವವರೆಗೂ ಜೊತೆಯಲ್ಲಿ ನಿಂತಿದ್ದರು. ದುನಿಯಾ ವಿಜಯ್ ಇರದೇ ಹೋಗಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ ಎಂದು ಗುರುಪ್ರಸಾದ್‌ಗೆ ಆಪ್ತರು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಗೊಂದಲವಾಗುತ್ತಿದ್ದ ಅಂತ್ಯಕ್ರಿಯೆ ಸರಾಗವಾಗಿ ನಡೆಯುವಂತೆ ನೋಡಿಕೊಂಡ ದುನಿಯಾ ವಿಜಯ್ ಅವರಿಗೆ ಗುರುಪ್ರಸಾದ್ ಆಪ್ತರು ಹಾಗೂ ಕುಟುಂಬ ಧನ್ಯವಾದಗಳನ್ನು ಹೇಳಿದೆ. ಈ ವಿಷಯವನ್ನು ಗುರುಪ್ರಸಾದ್ ಆಪ್ತ ಪುನೀತ್ ತಿಳಿಸಿದ್ದು, ವಿಜಯ್ ಅವರ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











