Bheema Box Office Day 5; ಬಾಕ್ಸಾಫೀಸ್‌ನಲ್ಲಿ 'ಭೀಮ' ಸೌಂಡು; 5ನೇ ದಿನವೂ ಅಚ್ಚರಿಯ ಕಲೆಕ್ಷನ್
ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಬಾರದೆ ಇರುವುದನ್ನು ನೋಡಿ ಸಿನಿಮಾ ಮಂದಿ ಕಂಗಲಾಗಿದ್ದರು. ಕಳೆದ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುವಂತಹ ಸಿನಿಮಾ ರಿಲೀಸ್ ಆಗಿಲ್ಲ. ಸ್ಟಾರ್ ಸಿನಿಮಾಗಳು ರಿಲೀಸ್ ಕೂಡ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಅದರಲ್ಲೂ 2024 ರಲ್ಲಿ ಕನ್ನಡದ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಲಾಭ ಮಾಡಿದ ಉದಾಹರಣೆ ಇಲ್ಲ.
ಇನ್ನೇನು 2024 ಮುಗೀತು ಅನ್ನುವ ಹಂತದಲ್ಲಿ ಕನ್ನಡ ಚಿತ್ರರಂಗಕ್ಕೊಂದು ಹಿಟ್ ಸಿನಿಮಾ ಸಿಕ್ಕಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಬಿಡುಗಡೆಯಾದ ದಿನದಿಂದ 'ಭೀಮ' ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಮತ್ತೆ ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆ ಬೀರಿದಂತೆ ಆಗಿದೆ.

ದುನಿಯಾ ವಿಜಯ್ ಸಿನಿಮಾ 'ಭೀಮ' ಆಗಸ್ಟ್ 9 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಮೊದಲ ಮೂರು ದಿನಗಳು ಕಲೆಕ್ಷನ್ ಸೂಪರ್ ಆಗಿಯೇ ಆಗಿದೆ. ಇದೇ ಗೆಲುವಿನ ಓಟ ಮುಂದಿನ ದಿನಗಳವರೆಗೂ ಇರುತ್ತಾ? ಅನ್ನೋ ಪ್ರಶ್ನೆಗೆ ಐದನೇ ದಿನದ ಕಲೆಕ್ಷನ್ ಉತ್ತರ ಕೊಟ್ಟಿದೆ. ಹಾಗಿದ್ದರೆ, ಐದನೇ ದಿನದ ಕಲೆಕ್ಷನ್ ಹೇಗಿದೆ? ದುನಿಯಾ ವಿಜಯ್ ಸಿನಿಮಾ ಬಗ್ಗೆ ಬಾಕ್ಸಾಫೀಸ್ ಪಂಡಿತರು ನುಡಿಯುತ್ತಿರುವ ಭವಿಷ್ಯವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಭೀಮ' 5ನೇ ದಿನ ಕಲೆಕ್ಷನ್ ಎಷ್ಟು?
ಈ ವಾರದ ಆರಂಭದಿಂದ ಭೀಮ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಇದನ್ನು ಎಲ್ಲಾ ಸಿನಿಮಾಗಳು ನಿರೀಕ್ಷೆ ಮಾಡಿರುತ್ತವೆ. ವೀಕೆಂಡ್‌ಗಳಲ್ಲಿ, ರಜೆಯ ದಿನಗಳಲ್ಲಿ ಕಲೆಕ್ಷನ್ ಹೆಚ್ಚು ಇರುತ್ತೆ. ಅದೇ ವರ್ಕಿಂಗ್ ಡೇಸ್‌ನಲ್ಲಿ ಕಲೆಕ್ಷನ್ ಡ್ರಾಪ್ ಆಗುತ್ತೆ. ಐದನೇ ದಿನ ಅಂದರೆ ನಿನ್ನೆ(ಆಗಸ್ಟ್ 13) ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಐದನೇ ದಿನ ಕಲೆಕ್ಷನ್ 1.3 ಕೋಟಿ ರೂಪಾಯಿ ಎನ್ನಲಾಗಿದೆ. ಇದು ವೀಕ್ ಡೇಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ.
5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಕಳೆದ ಐದು ದಿನಗಳಲ್ಲಿ 'ಭೀಮ' ಬಾಕ್ಸಾಫೀಸ್ ಕಲೆಕ್ಷನ್ ಉತ್ತಮವಾಗಿದೆ. ಮೊದಲ ದಿನ 4.1 ಕೋಟಿ ರೂಪಾಯಿ, ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ 4.3 ಕೋಟಿ ರೂಪಾಯಿ, ನಾಲ್ಕನೇ ದಿನ 1.5 ಕೋಟಿ ರೂಪಾಯಿ ಹಾಗೂ ಐದನೇ ದಿನ 1.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಐದು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 15 ಕೋಟಿ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಮಾಡಿದ್ದಾರೆ.

'ಭೀಮ' ಭವಿಷ್ಯವೇನು?
ದುನಿಯಾ ವಿಜಯ್ 'ಭೀಮ'ಗೆ ಬ್ಯಾಕ್ ಟು ಬ್ಯಾಕ್ ರಜೆಗಳು ಇವೆ. ಆಗಸ್ಟ್ 15 ರಿಂದ ನಾಲ್ಕು ದಿನಗಳ ರಜೆಗಳು ಸಿಗುತ್ತಿದೆ. ಈ ನಾಲ್ಕು ದಿನಗಳಲ್ಲಿ 'ಭೀಮ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ. ಇನ್ನು ನಾಲ್ಕು ದಿನಗಳಲ್ಲಿ 'ಭೀಮ' ಕಲೆಕ್ಷನ್ 8 ರಿಂದ 10 ಕೋಟಿ ರೂಪಾಯಿ ಆಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ ಅಂದಾಜು ಹಾಕಿದ್ದಾರೆ. ಏನಕ್ಕೂ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿಯನ್ನು ಹೊರ ಹಾಕಬೇಕಿದೆ.
'ಭೀಮ'ನ ಕಥೆಯೇನು?
ಸ್ಯಾಂಡಲ್‌ವುಡ್‌ಗೆ 'ಭೀಮ' ಹೊಸ ಭರವಸೆಯನ್ನು ಮೂಡಿಸಿದೆ. ದುನಿಯಾ ವಿಜಯ್ ತಮ್ಮ ಎರಡನೇ ನಿರ್ದೇಶನದಲ್ಲೂ ಗೆದ್ದಿದ್ದಾರೆ. ಪಕ್ಕಾ ಲೋಕಲ್ ಸಬ್ಜೆಕ್ಟ್ ಅನ್ನು ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿದ್ದಾರೆ. ಹಸಿ ಬಿಸಿ ಡೈಲಾಗ್‌ಗಳನ್ನು ಇಟ್ಟುಕೊಂಡು, ರಿಯಲ್ ಲೈಫ್ ಕ್ಯಾರೆಕ್ಟರ್‌ಗಳಿಗೆ ತೀರಾ ಹತ್ತಿರ ಇರುವಂತೆಯೇ ಕಥೆಯನ್ನು ಹೆಣೆಯಲಾಗಿದೆ. ಮಾದಕ ವ್ಯಸನಿಗಳಾಗುತ್ತಿರುವ ಯುವಕರ ಮೇಲೆ ಈ ಸಿನಿಮಾವನ್ನು ಮಾಡಲಾಗಿದೆ.


Click it and Unblock the Notifications











