ದುನಿಯಾ ವಿಜಯ್-ಶ್ರೇಯಸ್ ಮಂಜು 'ಮಾರುತ' ಸಿನಿಮಾ ಪೋಸ್ಟ್‌ಪೋನ್; ಯಾವಾಗ ರಿಲೀಸ್?
ದುನಿಯಾ ವಿಜಯ್-ಶ್ರೇಯಸ್ ಮಂಜು ನಟಿಸಿರುವ 'ಮಾರುತ' ಇದೇ ತಿಂಗಳ ಕೊನೆಯಲ್ಲಿ ರಿಲೀಸ್ ಆಗಬೇಕಿತ್ತು. ಕಲಾ ಸಾಮ್ರಾಜ್ ಎಸ್.ನಾರಾಯಣ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿನಿಮಾ ತಂಡ ಭರ್ಜರಿ ಪ್ರಚಾರ ಮಾಡಿತ್ತು. ಈ ಸಿನಿಮಾವನ್ನು ಕನ್ನಡದ ಇಬ್ಬರು ಖ್ಯಾತ ನಿರ್ಮಾಪಕರಾದ ಕೆ.ಮಂಜು - ರಮೇಶ್ ಯಾದವ್ ಮಾಡಿದ್ದಾರೆ.
ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಈ ಸಿನಿಮಾದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಆಗಿವೆ. ಇವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಚಿತ್ರತಂಡ ಅಕ್ಟೋಬರ್ 31ಕ್ಕೆ ಅದ್ಧೂರಿಯಾಗಿ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಇಡೀ ತಂಡ ಈಗಾಗಲೇ ಅನೌನ್ಸ್ ಮಾಡಿದ ದಿನಾಂಕದಂದು ಸಿನಿಮಾ ರಿಲೀಸ್ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದಾರೆ.

ಈಗಾಗಲೇ 'ಮಾರುತ' ಸಿನಿಮಾದ ಪ್ರಚಾರವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಆದರೆ, ಬಿಡುಗಡೆಗೆ ಇನ್ನು 15 ದಿನಗಳು ಬಾಕಿ ಇರುವಂತೆಯೇ ಸಿನಿಮಾವನ್ನು ಪೋಸ್‌ಪೋನ್ ಮಾಡಲಾಗಿದೆ. ಅದಕ್ಕೆ ಚಿತ್ರತಂಡ ಕೊಡುತ್ತಿರುವ ಚಿತ್ರಮಂದಿರಗಳ ಅಭಾವ. ಈ ಕಾರಣಕ್ಕೆ 'ಮಾರುತ' ಸಿನಿಮಾವನ್ನು ಮೂರು ವಾರಗಳ ಕಾಲ ಮುಂದೂಡುವುದಕ್ಕೆ ನಿರ್ಧರಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ ಚಾಪ್ಟರ್ 1' ರಾಜ್ಯದಾದ್ಯಂತ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ 'ಕಾಂತಾರ ಚಾಪ್ಟರ್ 1' ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 31ಕ್ಕೆ ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ 'ಬ್ರ್ಯಾಟ್' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರಮಂದಿರ ಅಭಾವ ಎದುರಾಗಬಹುದೆಂದು ಮನಗಂಡು ಬಿಡುಗಡೆಯನ್ನು ಮುಂದೂಡಲಾಗಿದೆ.
ಎಸ್.ನಾರಾಯಣ್ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸುವ ಡೈರೆಕ್ಟರ್. ಇನ್ನೊಂದು ಕಡೆ ಖಡಕ್ ಲುಕ್‌ನಲ್ಲಿ ದುನಿಯಾ ವಿಜಯ್ ಹಾಗೂ ಉತ್ಸಾಹಿ ಯುವ ನಟ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀನಿಯರ್-ಜೂನಿಯರ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಕಾಯುತ್ತಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಸದ್ಯ ಸಿನಿಮಾ ಮುಂದೂಡಿದ್ದು, ಸಣ್ಣ ಗ್ಯಾಪ್ ಬಳಿಕ ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಾರೆ.
'ಮಾರುತ' ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಎಸ್.ನಾರಾಯಣ್ ಕಥೆ ಬರೆದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ. ಎಸ್ ನಾರಾಯಣ್ ಹಾಗೂ ಜೆಸ್ಸಿಗಿಫ್ಟ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.
ಇನ್ನು ದುನಿಯಾ ವಿಜಯ್ ಹಾಗೂ ಶ್ರೇಯಸ್ ಕೆ ಮಂಜು ಜೊತೆ ಬೃಂದಾ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಸಾಧುಕೋಕಿಲ, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ನಟಿಸಿದ್ದಾರೆ.


Click it and Unblock the Notifications











