ಹೆಣ್ಣು ಮಕ್ಕಳ ಎಂಟ್ರಿ ಆಯ್ತು.. ದುನಿಯಾ ವಿಜಯ್ ಪುತ್ರ ಬರೋದ್ಯಾವಾಗ? ಈಗ ಮಾಡ್ತಿರೋದೇನು?
ಪ್ರತಿ ವರ್ಷ ಭಾರತೀಯ ಚಿತ್ರರಂಗದಿಂದ ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. 2026 ಕೂಡ ಕೆಲ ತಾರೆಯರ ಮಕ್ಕಳು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇನ್ನು ಕೆಲ ತಾರೆಯರ ಮಕ್ಕಳು ಚಿತ್ರರಂಗದಿಂದ ಸದ್ಯಕ್ಕೆ ದೂರ ಉಳಿದಿದ್ದು, ತಮ್ಮ ಶಿಕ್ಷಣದ ಕಡೆಗೆ ಗಮನ ಹರಿಸಿದ್ದಾರೆ. ಇಂತಹವರಲ್ಲಿ ದುನಿಯಾ ವಿಜಯ್ ಅವರ ಪುತ್ರ ಕೂಡ ಒಬ್ಬರು.
ದುನಿಯಾ ವಿಜಯ್ ಇಬ್ಬರು ಪುತ್ರಿಯರು ರಿತಾನ್ಯಾ ಹಾಗೂ ಮೋನಿಷಾ ಇಬ್ಬರೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಇನ್ನು ಇವರಿಬ್ಬರಿಗೂ ಮುನ್ನವೇ ಪುತ್ರ ಸಾಮ್ರಾಟ್ ವಿಜಯ್ ನಾಯಕನಾಗಿ ಎಂಟ್ರಿ ಕೊಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಸಾಮ್ರಾಟ್ ಪ್ರವೇಶಕ್ಕೂ ಮುನ್ನ ಪುತ್ರಿ ಅದ್ಧೂರಿಯಾಗಿ ಪ್ರವೇಶ ಮಾಡಿದ್ದಾರೆ. ಹೀಗಾಗಿ ವಿಜಯ್ ಚಿತ್ರರಂಗಕ್ಕೆ ಕಾಲಿಡೋದು ಯಾವಾಗ ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇತ್ತೀಚೆಗೆ ದುನಿಯಾ ವಿಜಯ್ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಈ ವೇಳೆ ತಮ್ಮ ಪುತ್ರ ಸಾಮ್ರಾಟ್ ಈಗೇನು ಮಾಡುತ್ತಿದ್ದಾರೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಲ್ಯಾಂಡ್‌ಲಾರ್ಡ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ವಿಜಯ್ ಚಿತ್ರರಂಗಕ್ಕೆ ಮಕ್ಕಳ ಎಂಟ್ರಿ, ಕಷ್ಟದ ದಿನಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಅಪವಾದ ಅನ್ನೋದು ಚಕ್ರವ್ಯೂಹಕ್ಕಿಂತ ದೊಡ್ಡದು
ಈ ಸಂದರ್ಶನದಲ್ಲಿ ಚಿತ್ರರಂಗದಲ್ಲಿ ತಮ್ಮನ್ನು ಆಡಿಕೊಂಡವರಿಂದಲೇ ಈ ಮಟ್ಟಕ್ಕೆ ಬೆಳೆದಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅಪವಾದ, ಅನುಮಾನ ಅನ್ನೋದು ಚಕ್ರವ್ಯೂಹಕ್ಕಿಂತ ದೊಡ್ಡದು ಎಂದಿದ್ದಾರೆ. "ನಮ್ಮನ್ನು ಆಡಿಕೊಂಡವರು, ನಮ್ಮನ್ನು ತೆಗಳಿದವರಿಗೆ ನಾನು ಥ್ಯಾಂಕ್ಸ್ ಹೇಳಿದೆ. ಅವತ್ತು ನೀವು ಆಡಿಕೊಳ್ಳದೇ ಹೋಗಿದ್ದರೆ, ಇವತ್ತು ನಾನು ಈ ಮಟ್ಟಿಗೆ ಬರುತ್ತಿರಲಿಲ್ಲ. ಅವತ್ತು ನೀವು ತೋರಿಸಿದ ಕಪ್ಪು ಮೋಡವೇ ನಿಜ ಅನ್ನೋ ನಂಬಿಕೆಯನ್ನು ಹುಟ್ಟಿಸಿದ್ರಿ. ಅದು ಬರೀ ಧೂಳಾಗಿತ್ತು ಅಷ್ಟೇನೆ. ಅದಲ್ಲ, ಈಗ ನಿಜವಾದ ಸೂರ್ಯನ ಕಿರಣಗಳು ಬೀಳುವುದಕ್ಕೆ ಶುರುವಾಗಿದೆ. ಪ್ರತಿಯೊಬ್ಬ ಕಷ್ಟ ಪಡುವವನೂ ಈ ಸೈಕಲ್‌ನಲ್ಲಿ ಹೋಗಲೇ ಬೇಕು. ಅಪವಾದ, ಅನುಮಾನ ಅನ್ನೋದು ಚಕ್ರವ್ಯೂಹಕ್ಕಿಂತ ದೊಡ್ಡದು. ಇದೆಲ್ಲವೂ ಸಾಧನೆ ಮಾಡುವವನಿಗೆ ಇದ್ದಿದ್ದೇನೆ. ಆ ಸೈಕಲ್ ಅನ್ನು ದಾಟಲೇ ಬೇಕು. ಈಗ ಎಲ್ಲಾ ಒಳ್ಳೆಯ ಕಾಲ ಬಂದಿದೆ. ಎಲ್ಲಾ ಹೊಸದಾಗಿದೆ. ಎಲ್ಲವೂ ತುಂಬಾನೇ ಚೆನ್ನಾಗಿದೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.
"ಸೈಕಲ್ ಹೊಡೆಯುವಾಗ ಪಂಚರ್‌ಗಳಾಗಿವೆ"
ಚಿತ್ರರಂಗದಲ್ಲಿ ದುನಿಯಾ ವಿಜಯ್ ಈ ಮಟ್ಟಕ್ಕೆ ಬೆಳೆಯುವುದಕ್ಕೆ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದಾಗಿ ಹೇಳಿಕೊಂಡಿದ್ದಾರೆ. "ನಾನು ಸೈಕಲ್ ಹೊಡೆಯುವಾಗ ತುಂಬಾನೇ ಪಂಚರ್‌ಗಳಾಗಿವೆ. ಅದಾದ್ಮೇಲೂ ಓಡಿಸಬೇಕಿತ್ತು. ಕೆಲವು ದಿನ ಪಂಚರ್ ಅಂಗಡಿ ಸಿಗುತ್ತಿರಲಿಲ್ಲ. ಸ್ವಲ್ಪ ದೂರ ಹೋದರೆ, ಟ್ಯೂಬ್ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಹೆಗಲ ಮೇಲೆ ಇಟ್ಟುಕೊಂಡು ಹೋಗಬೇಕಿತ್ತು. ಕೆಲವೊಮ್ಮೆ ಕೈ ಹಿಡಿದುಕೊಂಡು ಎತ್ಕೊಂಡು ಹೋಗಬೇಕಿತ್ತು. ಅದೆಲ್ಲವನ್ನೂ ನಾನು ನೋಡಿದ್ದೇನೆ" ಎಂದು ವಿಜಯ್ ಹೇಳಿದ್ದಾರೆ.

"ನಾನು ಕಳಂಕಿತನಾಗಿದ್ದವನು"
"ಕಳೆದುಕೊಂಡಿದ್ದೆಲ್ಲ ಅನುಭವಗಳು. ಪಡೆದುಕೊಂಡಿದ್ದೆಲ್ಲ ಅರ್ಥಗಳು. ಕೆಟ್ಟ ಅನುಭವಗಳ ಮಧ್ಯೆ ಒಳ್ಳೆ ಅರ್ಥ ಹುಡುಕಿಕೊಂಡು ತುಂಬಾನೇ ಅರ್ಥ ಪೂರ್ಣವಾಗಿ ಇರಬೇಕೆಂಬ ಆಸೆ. ಕೆಟ್ಟ ಅನುಭವಗಳು ಬದುಕಿನ ಪಾಠ ಕಲಿಸಿದೆ. ಅದೇ ನನ್ನನ್ನು ನಿರ್ದೇಶಕನನ್ನಾಗಿ ಮಾಡಿತು. ಅವರ ನಿರ್ದೇಶನದಲ್ಲಿ ನೀನು ಕಳಂಕಿತನಾಗಿರೋದೇ ಆದರೆ, ನೀನು ನಿರ್ದೇಶನ ಮಾಡು. ಅದೇನು ಅಂತ ಜನರು ಹೇಳಲಿ ಅನ್ನೋದೇ ನನ್ನನ್ನು ನಿರ್ದೇಶಕರನ್ನಾಗಿ ಮಾಡಿದೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ದುನಿಯಾ ವಿಜಯ್ ಮಗ ಏನ್ಮಾಡ್ತಿದ್ದಾನೆ?
"ಅವನು ಈಗ ಲಾ ಮಾಡುತ್ತಿದ್ದಾನೆ. ನನಗೆ ಆಸೆ ಇತ್ತು ಚೆನ್ನಾಗಿ ಓದಲಿ ಅಂತ. ನನ್ನ ಮಕ್ಕಳಿಗೆ ಅಂತಲ್ಲ. ಎಲ್ಲರಿಗೂ ಹೇಳೋದು ಏನು ಅಂದರೆ, ಮುಂದೊಂದು ದಿನ ಗಾರೆ ಕೆಲಸ ಮಾಡುವುದಕ್ಕೂ ಡಿಗ್ರಿ ಬೇಕಾಗುವಂತೆ ಪರಿಸ್ಥಿತಿ ಬರಬಹುದು. ಗಾರೆ ಕೆಲಸ, ಕೂಲಿ ಕೆಲಸ ಮಾಡಿದರೂ, ಒಂದು ಡಿಗ್ರಿ ಮಾಡಿದರೆ, ಅದರ ಬೆಲೆ ಏನು ಅಂತ ಗೊತ್ತಾಗುತ್ತೆ. ಡಿಗ್ರಿ ಅನ್ನೋದು ಒಂದು ಬೇಸಿಕ್" ಎಂದು ದುನಿಯಾ ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











