"ನಾನೊಂದು ಮನೆ ಕಟ್ಟಿದ್ದೀನಿ.. ಮಾರಲಾಗದ ಮನೆ" ಎಂದಿದ್ದ ದ್ವಾರಕೀಶ್; ಎಲ್ಲಿದೆ ಆ ಮನೆ?
ಕನ್ನಡದ 'ಪ್ರಚಂಡ ಕುಳ್ಳ' ದ್ವಾರಕೀಶ್ ಸಾಹಸಗಳು ಒಂದೆರಡಲ್ಲ. ಪ್ರತಿಕ್ಷಣವೂ ಸಿನಿಮಾಗಾಗಿಯೇ ತುಡಿಯುತ್ತಿದ್ದ ಜೀವವದು. ಸಿನಿಮಾದಲ್ಲಿ ನಟಿಸಬೇಕು. ಸಿನಿಮಾ ಮಾಡಬೇಕು ಅಂತಷ್ಟೇ ಆಸೆಯನ್ನು ಹೊಂದಿದ್ದ ಕನ್ನಡ ಚಿತ್ರರಂಗದ ದಿಗ್ಗಜ. ಸಿನಿಮಾ ನಿರ್ಮಾಣಕ್ಕೆ ಇಳಿದಾಗ, ಬಜೆಟ್ ಹಾಕಿ ಮಾಡಿದವರೇ ಅಲ್ಲ.
ದ್ವಾರಕೀಶ್ ತಮ್ಮ ತಮ್ಮ ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯಿಂದ ಸುಮಾರು 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಸಿನಿಮಾಗಳು ಸಿಕ್ಕಾಪಟ್ಟೆ ಹಣ ತಂದುಕೊಟ್ಟಿದೆ. ಮತ್ತೆ ಕೆಲವು ಸೋತು ಸುಣ್ಣವಾಗಿವೆ. ಆದರೆ, ಸೋತ ಸಿನಿಮಾಗಳು ಕೂಡ ಇಂದಿಗೂ ಒಂದೊಂದು ಕಥೆಯನ್ನು ಹೇಳುತ್ತಿವೆ. ದ್ವಾರಕೀಶ್ ಸಿನಿಮಾ ಬಗ್ಗೆ ಅಂತಹ ಪ್ಯಾಷನ್ ಇಟ್ಟುಕೊಂಡಿದ್ದವರು.

ಇದೇ ಹುಚ್ಚ ಸಾಹಸಗಳು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೂ ಕೂಡ ಇದೆ. ಇಷ್ಟ ಪಟ್ಟು ಮಾಡಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಖಾಡೆ ಮಲಗಿದ್ದವು. ಇದರಿಂದ ಸಾಕಷ್ಟು ಹಣ ಕಳೆದುಕೊಂಡಿದ್ದರು. ಇನ್ನೇನು ದ್ವಾರಕೀಶ್ ಕಥೆ ಮುಗೀತು ಅನ್ನುವಾಗಲೇ 'ಆಪ್ತಮಿತ್ರ' ಸಿನಿಮಾ ಕೈ ಹಿಡಿದಿತ್ತು. ಅಷ್ಟರಲ್ಲೇ ಒಂದಿಷ್ಟು ಮನೆಗಳು ಮಾರಿಕೊಂಡಿದ್ದರು. 'ಆಪ್ತಮಿತ್ರ' ಸಿನಿಮಾದಿಂದ ಮತ್ತೆ ಮನೆ ಕಟ್ಟಿದ್ದರು. ಮತ್ತೆ ಸೋಲು ಆ ಮನೆಯನ್ನು ಮಾರುವಂತೆ ಮಾಡಿತ್ತು. ಆ ಬಗ್ಗೆ ದ್ವಾರಕೀಶ್ 80ನೇ ವರ್ಷದ ಸಂಭ್ರಮದಲ್ಲಿ ಮನಬಿಚ್ಚಿ ಮಾತಾಡಿದ್ದರು.
ದ್ವಾರಕೀಶ್ ಬಿಗ್ ಬಜೆಟ್ ಸಿನಿಮಾಗಳು ಸೋತಾಗಲೆಲ್ಲಾ ಮನೆ ಮಾರಿಕೊಂಡ ಉದಾಹರಣೆಗಳಿವೆ. ಬೆಂಗಳೂರು, ಚೆನ್ನೈ ಎಲ್ಲೆಲ್ಲಿ ಮನೆ ಇತ್ತೋ ಅಲ್ಲೆಲ್ಲಾ ಮಾರಿದ್ದಾರೆ. ಅದಕ್ಕೆ ಯಾರೂ ಮಾರಲಾಗದ ಮನೆಯನ್ನು ಕಟ್ಟಿದ್ದೇನೆ ಎಂದು ಅಂದು ಹೇಳಿಕೊಂಡಿದ್ದರು.

"ಪ್ಯಾಲೇಸ್ ಮನೆ ಮಾರಿಬಿಟ್ಟ. ಎನ್‌ಆರ್ ಕಾಲೋನಿ ಮನೆ ಮಾರಿಬಿಟ್ಟ. ಇಂದಿರಾನಗರದ ಮನೆ ಮಾರಿಬಿಟ್ಟ ಅಂತೆಲ್ಲ ಹೇಳಿದರು. ನಾನೊಂದು ಮನೆಯನ್ನು ಕಟ್ಟಿದ್ದೀನಿ. ಮಾರುವುದಕ್ಕೆ ಆಗದ ಮನೆ. ಎಂದಿಗೂ ಮಾರುವುದಕ್ಕೆ ಆಗದ ಮನೆಯೊಂದನ್ನು ಕಟ್ಟಿದ್ದೀನಿ. ಅದನ್ನು ಎಲ್ಲಿ ಕಟ್ಟಿದ್ದೀನಿ ಅಂದರೆ, ಮಂತ್ರಾಲಯದಲ್ಲಿ ಕಟ್ಟಿದ್ದೀನಿ." ಎಂದು ಹೇಳಿಕೊಂಡಿದ್ದರು.
"ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ನನ್ನದೇ ಆದ ಒಂದು ಮನೆಯನ್ನು ಕಟ್ಟಿದ್ದೀನಿ. ಆ ಮನೆಯನ್ನು ನನ್ನ ಕೈಯಲ್ಲಿ ಮಾರುವುದಕ್ಕೆ ಆಗಲ್ಲ. ಇನ್ಯಾವ ಮನೆಯನ್ನು ಬೇಕಾದರೂ ಮಾರಲು ಸಾಧ್ಯ. ನನಗೆ ಮಂತ್ರಾಲಯದಲ್ಲಿ ಮನೆಯಿದೆ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತೆ." ಎಂದು ದ್ವಾರಕೀಶ್ ಹೇಳಿದ್ದರು.
ವರ ನಟ ಡಾ.ರಾಜ್‌ಕುಮಾರ್ ಅಂತೆಯೇ ದ್ವಾರಕೀಶ್ ಕೂಡ ಅಷ್ಟೇ ರಾಯರ ಭಕ್ತರು. 60ರ ದಶಕದಿಂದಲೂ ಅವರನ್ನು ಆರಾಧಿಸಿಕೊಂಡು ಬಂದಿದ್ದಾರೆ. "1964ರಲ್ಲಿ ಮಂತ್ರಾಲಯಕ್ಕೆ ಹೋದಾಗ, ರಾಘವೇಂದ್ರ ಸ್ವಾಮಿಯನ್ನು ಕೇಳಿಕೊಂಡಿದ್ದೆ. ಇಲ್ಲೊಂದು ಮನೆಯನ್ನು ಕಟ್ಟಬೇಕು ಅಂತ. ಅಲ್ಲಿ ಮನೆಯನ್ನು ಕಟ್ಟಿದೆ. ನನಗೆ ಸಾಕು. ಅಲ್ಲಿದೆ ಮನೆ. ಇನ್ಯಾವ ಮನೆಯನ್ನು ದೇವರಲ್ಲಿ ಕೇಳಿಕೊಳ್ಳುವುದಕ್ಕೆ ನಾನು ಇಷ್ಟ ಪಡುವುದಿಲ್ಲ. ಇಲ್ಲಿಲ್ಲ ನಮ್ಮ ಮನೆ. ಅಲ್ಲಿದೆ ನಮ್ಮ ಮನೆ. ಇವೆಲ್ಲ ಕೇವಲ ಕ್ಷಣಿಕ. ನಿದ್ದೆ ಬರೋನಿಗೆ ಎಲ್ಲಿ ಮಲಗಿದರೂ ನಿದ್ದೆ ಬರುತ್ತೆ. ನಿದ್ದೆ ಬಾರದವನಿಗೆ ಎಲ್ಲಿ ಮಲಗಿಸಿದರೂ ನಿದ್ದೆ ಬರೋದಿಲ್ಲ." ಎಂದು ಮನೆಗಳನ್ನು ಕಳೆದುಕೊಂಡಿದ್ದರ ಬಗ್ಗೆ ಓಪನ್ ಆಗಿ ಮಾತಾಡಿದ್ದರು.
ಇನ್ನು ಚಿತ್ರರಂಗಕ್ಕೆ ಅದೆಷ್ಟೋ ಮಂದಿಯನ್ನು ಪರಿಚಯಿಸಿದ್ದಾರೆ. ಅವರೇನನ್ನ ಆಸ್ತಿ ಎಂದು ದ್ವಾರಕೀಶ್ ಹೇಳಿಕೊಂಡಿದ್ದರು. "ನನ್ನ ಕಲಾವಿದರು ನನ್ನ ನೋಡಲು ಬಂದವರು ಅವರೇ ನನ್ನ ಆಸ್ತಿ. ಅದಕ್ಕಿಂತ ಆಸ್ತಿ ಬೇರೆ ಯಾವುದೂ ಇಲ್ಲ. ನನಗೆ ಯಾವುದೇ ಪ್ರಾಪರ್ಟಿ ಬೇಡ. ಭವ್ಯಾ, ವಿಷ್ಣುವರ್ಧನ್, ರಾಜ್‌ಕುಮಾರ್ ನನ್ನ ಆಸ್ತಿ. ಅದಕ್ಕಿಂತ ನನಗೆ ಇನ್ನೇನು ಬೇಕು. ಮನೆ ಮಾರಿಬಿಟ್ಟೆ, ಕಾರು ಮಾರಿದೆ ಅಂತ ಫೀಲ್ ಮಾಡಿದವನೇ ಅಲ್ಲ. ನಾನು ಇಂಪೊರ್ಟೆಡ್ ಕಾರು ಖರೀದಿಸಿದ ಮೊದಲ ನಟ. ಮದ್ರಾಸ್‌ನಲ್ಲಿ ನನ್ನ ಮನೆ ಸೈಜ್ ಗೊತ್ತಾ?" ಎಂದು ದ್ವಾರಕೀಶ್ ಮನೆಯ ಬಗ್ಗೆ ಓಪನ್ ಆಗಿ ಮಾತಾಡಿದ್ದರು.


Click it and Unblock the Notifications











