Yuvarajkumar Birthday:ಯುವ ರಾಜ್‌ಕುಮಾರ್ 'ಎಕ್ಕ' ಟೀಸರ್ ರಿಲೀಸ್ ಮುಂದೂಡಿಕೆ; ಏನಂತಾರೆ ಕಾರ್ತಿಕ್ ಗೌಡ?
ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಯುವರಾಜ್‌ಕುಮಾರ್ ಇಂದು (ಏಪ್ರಿಲ್ 23) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಯುವರಾಜ್‌ಕುಮಾರ್ ಸದ್ಯಕ್ಕೆ ಎರಡನೇ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಯುವ' ಸಿನಿಮಾ ಬಳಿಕ ಮತ್ತೊಂದು ಸಿನಿಮಾಗೆ ಒಪ್ಪಿಕೊಂಡಿದ್ದು ಶೂಟಿಂಗ್ ನಡೆಯುತ್ತಿದೆ. ಅಂದ್ಹಾಗೆ ಆ ಸಿನಿಮಾ ಹೆಸರು 'ಎಕ್ಕ'.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ದೊಡ್ಮನೆ ಅಭಿಮಾನಿಗಳಲ್ಲಿ ಯುವ ರಾಜ್‌ಕುಮಾರ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಪ್ಪುವನ್ನು ಯುವರಾಜ್‌ಕುಮಾರ್ ಅವರಲ್ಲಿ ಕಾಣುತ್ತಿದ್ದಾರೆ. 'ಯುವ' ಮೂಲಕ ಪುನೀತ್ ರಾಜ್‌ಕುಮಾರ್ ಅವರಂತೆಯೇ ಡ್ಯಾನ್ಸ್, ಫೈಟ್‌ನಲ್ಲಿ ಗಮನ ಸೆಳೆದಿರುವ ಯುವ ಎರಡನೇ ಸಿನಿಮಾದಲ್ಲಿ ಕಂಪ್ಲೀಟ್ ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಒಂದು ಹಾಡು ಕೂಡ ರಿಲೀಸ್ ಆಗಿದ್ದು, 'ಎಕ್ಕ'ದಲ್ಲಿ ಯುವ ರಾಜ್‌ಕುಮಾರ್ ಪಕ್ಕಾ ಮಾಸ್ ರಗಡ್ ಫೀಲ್‌ನಲ್ಲಿ ಕಾಣಿಸಿಕೊಳ್ಳುತ್ತಿರೋದು ಖಾತ್ರಿಯಾಗಿದೆ. ಇನ್ನು ಇಂದು (ಏಪ್ರಿಲ್ 23) ಬೆಳಗ್ಗೆ ಯುವ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ, ಅದನ್ನು ಮುಂದೂಡಿರುವುದಾಗಿ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
'ಎಕ್ಕ' ಟೀಸರ್ ಪೋಸ್ಟ್‌ಪೋನ್
ಯುವರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾವಿದು. 'ರತ್ನನ್ ಪ್ರಪಂಚ' ಬಳಿಕ 'ಉತ್ತರಕಾಂಡ'ಕ್ಕೆ ಕೈ ಹಾಕಿದ್ದ ರೋಹಿತ್ ಪದಕಿ, ಅರ್ಧಕ್ಕೆ ನಿಲ್ಲಿಸಿ 'ಎಕ್ಕ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಅನ್ನು ಮಾಸ್ ರಗಡ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ನಿಲ್ಲಿಸುವ ಜವಾಬ್ದಾರಿ ಇವರ ಮೇಲಿದೆ. ಇತ್ತ ದೊಡ್ಮೆನೆ ಅಭಿಮಾನಿಗಳು ಕೂಡ ಅದೇ ನಿರೀಕ್ಷೆಯಲ್ಲಿ ಇದ್ದರು. 'ಎಕ್ಕ' ಝಲಕ್ ತೋರಿಸುವುದಕ್ಕೆ ಯುವ ಹುಟ್ಟುಹಬ್ಬ ಒಳ್ಳೆಯ ದಿನ ಎಂದು ಭಾವಿಸಿದ್ದ ಚಿತ್ರರಂಗದ ಟೀಸರ್ ರಿಲೀಸ್‌ಗೆ ತಯಾರಿ ನಡೆಸಿತ್ತು. ಆದರೆ, ಬೆಳಗ್ಗೆ ಟೀಸರ್ ರಿಲೀಸ್ ಆಗಲಿಲ್ಲ. ಕೂಡಲೇ ಟೀಸರ್ ರಿಲೀಸ್ ಅನ್ನು ಮುಂದೂಡಲಾಗಿದೆ ಎಂದು ನಿರ್ಮಾಪಕರೇ ಹೇಳಿದ್ದಾರೆ.

ಕಾರ್ತಿಕ್ ಗೌಡ ಹೇಳಿದ್ದೇನು?
'ಎಕ್ಕ' ಸಿನಿಮಾದ ಟೀಸರ್ ಅನ್ನು ಇಂದು (ಏಪ್ರಿಲ್ 23) ಬೆಳಗ್ಗೆ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆಗಿದ್ದರಿಂದ 'ಎಕ್ಕ' ಟೀಸರ್ ಅನ್ನು ರಿಲೀಸ್ ಮಾಡಿರಲಿಲ್ಲ. ಈ ಸಂಬಂಧ ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಶೇರ್ ಮಾಡಿದ್ದಾರೆ. "ಪಹಲ್ಗಾಮ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ನಮ್ಮ ಎಕ್ಕ ಸಿನಿಮಾ ಟೀಸರ್ ಅನ್ನು ಮುಂದೂಡಿಕೆ ಮಾಡಿದ್ದು, ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ" ಎಂದು ಹೇಳಿದ್ದಾರೆ.
'ಎಕ್ಕ' ಮೇಲೆ ಹೆಚ್ಚಿದ ನಿರೀಕ್ಷೆ
'ಎಕ್ಕ' ಸಿನಿಮಾ ಮೂಲಕ ಯುವರಾಜ್‌ಕುಮಾರ್‌ಗೆ ಅಭಿಮಾನಿಗಳು 'ಸ್ಯಾಂಡಲ್‌ವುಡ್ ಉಸ್ತಾದ್' ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ರೋಹಿತ್ ಪದನಿ ನಿರ್ದೇಶನ ಮಾಡುತ್ತಿರುವುದರಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ಟೀಸರ್ ಅನ್ನು ಕಣ್ತುಂಬಿಕೊಳ್ಳುವುದಕ್ಕೆ ಯುವ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಎಕ್ಕ ಫ್ಯಾನ್ಸ್ ಕಿಕ್ ಕೊಡುತ್ತಾ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿದೆ. ಪುನೀತ್ ರಾಜ್‌ಕುಮಾರ್ ದೊಡ್ಮನೆ ಅಭಿಮಾನಿಗಳ ಮನ ಗೆಲ್ಲುತ್ತಾರಾ? ಅನ್ನೋ ಕುತೂಹಲವಿದೆ. ಈ ಸಿನಿಮಾವನ್ನು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾವ್ ಅವರ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.


Click it and Unblock the Notifications











