'ಎಲ್ಲೋ ಜೋಗಪ್ಪ ನಿನ್ನರಮನೆ' ಎನ್ನುತ್ತಿರೋ 'ಕಂಬ್ಳಿಹುಳ' ಹೀರೊ ಅಂಜನ್ ನಾಗೇಂದ್ರ
ಸ್ಯಾಂಡಲ್‌ವುಡ್‌ನಲ್ಲಿ 'ಕಂಬ್ಲಿಹುಳ' ಅನ್ನೋ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೇ ಸಿನಿಮಾದ ಹೀರೊ ಅಂಜಯ್ ನಾಗೇಂದ್ರ ಮತ್ತೊಂದು ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದುವೇ 'ಎಲ್ಲೋ ಜೋಗಪ್ಪ ನಿನ್ನರಮನೆ'.
ಟೈಟಲ್ ಪಕ್ಕಾ ಗ್ರಾಮೀಣ ಸೊಗಡಿನಿಂದ ಕೂಡಿದೆ. ಆದರೆ, ಸಿನಿಮಾದ ಥೀಮ್ ಬೇರೆನೇ ಇದೆ. ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸುವ ಹಯವದನ ಇದೇ ಮೊದಲ ಬಾರಿಗೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾದ ಬಹುತೇಕ ಶೂಟಿಂಗ್ ಈಗಾಗಲೇ ಮುಗಿದಿದೆ. ಒಂದು ಹಾಡಿನ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿದಿದೆ. ನಿರ್ದೇಶಕ ಹಯವದನ ಯಾರು ಸಲೀಸಾಗಿ ಚಿತ್ರೀಕರಣ ಮಾಡಲಾಗದ ಸ್ಥಳದಲ್ಲಿ ಶೂಟಿಂಗ್ ಮಾಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ, ಉತ್ತರಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಿಮಾಲಯದ ಕೊರೆಯುವ ಚಳಿಯಲ್ಲಿಯೂ ಶೂಟಿಂಗ್ ಮಾಡಿದ್ದಾರೆ.
ಶೂಟಿಂಗ್ ಮುಗಿಸಿರೋ 'ಎಲ್ಲೋ ಜೋಗಪ್ಪ ನಿನ್ನರಮನೆ' ತಂಡ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದೆ. ಅಂದ್ಹಾಗೆ, 'ಎಲ್ಲೋ ಜೋಗಪ್ಪ ನಿನ್ನರಮನೆ' ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧವೇ ಈ ಸಿನಿಮಾ ಹೈಲೈಟ್.

ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಸಿನಿಮಾದಲ್ಲಿ 'ಕಂಬ್ಳಿಹುಳ' ಹೀರೊ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ರೆ, ಯುವ ನಟಿ ವೆನ್ಯ ರೈ ನಾಯಕಿಯಾಗಿದ್ದಾರೆ. 'ಕೆಟಿಎಂ', 'ಮೂನ್ ವಾಕ್' ಹಾಗೂ ಮಲಯಾಳಂನ'ಮನಸ್ಮಿತ' ಅನ್ನೋ ಸಿನಿಮಾದ ನಟಿ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾದಲ್ಲಿ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ನಟಿಸಿದ್ದಾರೆ. ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್ ಇದೆ. ಸದ್ಯ ಡಬ್ಬಿಂಗ್ ಮಾಡುತ್ತಿದ್ದು, ಸೆಪ್ಟಂಬರ್‌ಗೆ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.


Click it and Unblock the Notifications











