ಸ್ಯಾಂಡಲ್‌ವುಡ್ ಅಖಾಡಕ್ಕಿಳಿದ WWE ಮಾಜಿ ಕುಸ್ತಿ ಪಟು 'ದಿ ಗ್ರೇಟ್ ಖಲಿ': ಯಾವುದು ಆ ಸಿನಿಮಾ?
WWE ಕ್ರೇಜ್ ಇರೋರಿಗೆ ದಿ ಗ್ರೇಟ್ ಖಲಿ ಯಾರು? ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. WWEಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕುಸ್ತಿಪಟು 'ದಿ ಗ್ರೇಟ್ ಖಲಿ' ಅದೆಷ್ಟೋ ಪಂದ್ಯಗಳನ್ನು ಗೆದ್ದಿದ್ದಾರೆ. ವಿಶ್ವದ ಟಾಪ್ ಕುಸ್ತಿಪಟುಗಳೊಂದಿಗೆ ಫೈಟ್ ಮಾಡಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದರು. ಸದ್ಯ WWE ಕುಸ್ತಿಯಿಂದ ನಿವೃತ್ತಿ ಪಡೆದಿರೋ ಖಲಿ ರಾಜಕೀಯ, ಜಾಹೀರಾತುಗಳಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ.
ಇದೇ ಮಾಜಿ ಕುಸ್ತಿ ಪಟು 'ದಿ ಗ್ರೇಟ್ ಖಲಿ' ಈಗ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾಕಿ ಸೋಮ್ಲಿ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ 'ಕೆಂಡದ ಸೆರಗು' ಚಿತ್ರದಲ್ಲಿ 'ದಿ ಗ್ರೇಟ್ ಖಲಿ' ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಖಲಿಯನ್ನು ಭೇಟಿ ಮಾಡಿದ ಕಥೆಯನ್ನು ಒಪ್ಪಿಸಿ ಬಂದಿದೆ.

'ಕೆಂಡದ ಸೆರಗು' ಸಿನಿಮಾ ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಅಂದ್ಹಾಗೆ ಈ ಸಿನಿಮಾ ಕುಸ್ತಿಯನ್ನು ಆಧರಿಸಿದ ಸಿನಿಮಾ. ನಟಿ ಭೂಮಿ ಶೆಟ್ಟಿ ಹಾಗೂ ಕನಸಿನ ರಾಣಿ ಮಾಲಾಶ್ರೀ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕುಸ್ತಿ ಪಟು ಖಲಿಯನ್ನು ಕರೆದುಕೊಂಡು ಬರುವ ಮೂಲಕ ಚಿತ್ರತಂಡ ಹೊಸ ಅಪ್ಡೇಟ್ ಕೊಟ್ಟಿದೆ.
'ಕೆಂಡದ ಸೆರಗು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಸಿನಿ ಜಗತ್ತಿಗೆ WWE ವಿಶ್ವ ಚಾಂಪಿಯನ್ ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟಿರೋದು ಕುತೂಹಲ ಕೆರಳಿಸಿದೆ. ನಿರ್ದೇಶಕ ರಾಕಿ ಸೋಮ್ಲಿ 'ದಿ ಗ್ರೇಟ್ ಖಲಿ'ಯನ್ನು ಕೆಲವು ದಿನಗಳ ಹಿಂದಷ್ಟೇ ಭೇಟಿ ಮಾಡಿ, ಸಿನಿಮಾದ ಕಥೆ ಹೇಳಿದ್ದಾರೆ. ಅವರ ಪಾತ್ರದ ಪ್ರಾಮುಖ್ಯತೆಯನ್ನು ವಿವರಿಸಿದ್ದರು. ಸಿನಿಮಾದ ಕಥೆ ಕೇಳಿ ಕುಸ್ತಿ ಪಟು ಖಲಿ ಥ್ರಿಲ್ ಆಗಿದ್ದು, ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಿ ಗ್ರೇಟ್ ಖಲಿ ಭೇಟಿ ಮಾಡಿದ ಸಂದರ್ಭದಲ್ಲಿ ನಿರ್ದೇಶಕ ರಾಕಿ ಸೋಮ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅದೇ ಫೋಟೊಗಳನ್ನು ನಿರ್ದೇಶಕರು ಶೇರ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ 'ದಿ ಗ್ರೇಟ್ ಖಲಿ' ಕನ್ನಡ ಸಿನಿಮಾ 'ಕೆಂಡದ ಸೆರಗು' ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಶೂಟಿಂಗ್ ಶುರುವಾಗಲಿದೆ.
ರಾಕಿ ಸೋಮ್ಲಿ 'ಕೆಂಡದ ಸೆರಗು' ಅನ್ನೋ ಕಾದಂಬರಿಯನ್ನು ಬರೆದಿದ್ದರು. ಈಗ ಅದೇ ಕಥೆಯನ್ನು ಆಧರಿಸಿದ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಕಥೆಯುಳ್ಳ ಸಿನಿಮಾ ಆಗಿದ್ದು, ಕುಸ್ತಿ ಪಟುವಿನ ಕಥೆಯನ್ನು ತೆರೆಮೇಲೆ ತರಲಿದ್ದಾರೆ. ಇದೊಂದು ಕಂಟೆಂಟ್ ಸಿನಿಮಾ ಆಗಿದ್ದರೂ, ಕಮರ್ಶಿಯಲ್ ಎಳೆಯನ್ನು ಸಿನಿಮಾದಲ್ಲಿ ತರಲಾಗಿದೆ.
ಕುಸ್ತಿ ಸುತ್ತ ಹೆಣೆಯಲಾದ ಈ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಕೆ.ಕೊಟ್ರೇಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮಾಲಾಶ್ರೀ, ಭೂಮಿ ಶೆಟ್ಟಿ ಜೊತೆ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ನಟಿಸಿದ್ದಾರೆ.


Click it and Unblock the Notifications











