Exclusive: 15 ವರ್ಷಗಳ ಬಳಿಕ ಹಳ್ಳಿ ಕಡೆಗೆ ಹೊರಟ ಶಿವಣ್ಣ; ವಿಲೇಜ್ ಸ್ಟೋರಿಗೆ ಗ್ರೀನ್ ಸಿಗ್ನಲ್.. ಅವರಲ್ಲ ಡೈರೆಕ್ಟರ್
ಶಿವಣ್ಣ ನಟಿಸಿದ 'ತವರಿಗೆ ಬಾ ತಂಗಿ', 'ಭಾಗ್ಯದ ಬಳೆಗಾರ', 'ದೇವರು ಕೊಟ್ಟ ತಂಗಿ' ಅಂತಹ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಸಿಹಿ ಸುದ್ದಿ. ಶಿವರಾಜ್‌ಕುಮಾರ್ ಹೈದನಾಗಿ ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಜನರು ಮುಗಿಬಿದ್ದು ಈ ಸಿನಿಮಾಗಳನ್ನು ನೋಡಿ ಕಣ್ಣೀರು ಹಾಕಿದ್ದರು. ಶಿವಣ್ಣನ ಸೆಂಟಿಮೆಂಟ್ ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದವು. ಆದರೆ, 'ದೇವರು ಕೊಟ್ಟ ತಂಗಿ'ಯ ಬಳಿಕ ಶಿವಣ್ಣ ಹಳ್ಳಿ ಹೈದನಾಗಿ ಪೂರ್ಣ ಪ್ರಮಾಣದಲ್ಲಿ ನಟಿಸಿರಲಿಲ್ಲ.
ಈ ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ 15 ವರ್ಷಗಳಾಗಿವೆ. ಅಲ್ಲಿಂದ ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದರೂ, ಹಳ್ಳಿಯ ಹಿನ್ನೆಲೆಯುಳ್ಳ ಕಥೆಯನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಆದ್ರೀಗ ತಮಿಳಿನ ನಿರ್ದೇಶಕರೊಬ್ಬರು ಹೆಣೆದಿರುವ ವಿಲೇಜ್ ಸ್ಟೋರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೇ ವರ್ಷ ಆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ತಮಿಳಿನ ಜನಪ್ರಿಯ ನಿರ್ದೇಶಕ ಕಥೆ ಕೇಳಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ಲೀನ್ ಬೋಲ್ಡ್ ಆಗಿದ್ದಾರೆ ಎನ್ನಲಾಗಿದೆ.

ಶಿವಣ್ಣನಿಗೆ ಹಳ್ಳಿ ಹಿನ್ನೆಲೆಯುಳ್ಳ ಸಿನಿಮಾಗಳು ಸೂಟ್ ಆಗುತ್ತವೆ. ಕನ್ನಡದ ಬೇರೆ ಯಾವ ಸ್ಟಾರ್ ನಟರಿಗೂ ಸಿಗದ ಯಶಸ್ಸು ಶಿವಣ್ಣನಿಗೆ ಸಿಕ್ಕಿದೆ. ಆದರೂ, ಕಳೆದ ಒಂದೂವರೆ ದಶಕಗಳಿಂದ ಕನ್ನಡದ ನಿರ್ಮಾಪಕರು ಮತ್ತೆ ಇಂತಹ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಶಿವಣ್ಣನನ್ನು ಹಳ್ಳಿ ಹೈದನಾಗಿ ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಅವರ ಹುಟ್ಟುಹಬ್ಬದಂದೇ ಗುಡ್ ನ್ಯೂಸ್ ಸಿಕ್ಕಿದೆ.
ಎಕ್ಸ್‌ಕ್ಲೂಸಿವ್ ಡಿಟೈಲ್ಸ್
ತಮಿಳು-ಹಿಂದಿ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್
ವಿಜಯಕಾಂತ್, ಅಜಿತ್, ಸನ್ನಿ ಡಿಯೋಲ್ ಸಿನಿಮಾಗಳ ನಿರ್ದೇಶಕ
ಶಿವಣ್ಣನಿಗೆ ಇದೇ ಮೊದಲ ಬಾರಿಗೆ ಆಕ್ಷನ್ ಕಟ್
ಶಿವಣ್ಣ ಅಭಿಮಾನಿಗಳಿಗಾಗಿಯೇ ಮಾಡಿದ ಸ್ಕ್ರಿಪ್ಟ್ ಎಂದ ಡೈರೆಕ್ಟರ್
ಹೌದು, ಕೆಲವು ತಿಂಗಳ ಹಿಂದೆ ಶಿವರಾಜ್‌ಕುಮಾರ್‌ಗೆ ಈ ವಿಲೇಜ್ ಸ್ಟೋರಿಯನ್ನು ಹೇಳಲಾಗಿತ್ತು. ಅದು ಶಿವಣ್ಣನಿಗೆ ಇಷ್ಟ ಆದ್ಮೇಲೆ ಇಡೀ ತಂಡ ಸ್ಕ್ರಿಪ್ಟ್‌ಗೆ ಕೂತಿತ್ತು. ಶಿವಣ್ಣನೊಂದಿಗೆ ಬೇರೆ ಬೇರೆ ಭಾಷೆಯ ಸ್ಟಾರ್‌ಗಳನ್ನು ಈ ಸಿನಿಮಾಗೆ ಕರೆದುಕೊಂಡು ಬರುವುದಕ್ಕೆ ನಿರ್ದೇಶಕರು ಮಾತುಕತೆ ನಡೆಸುತ್ತಿದ್ದಾರೆ. ಅಂದ್ಹಾಗೆ ಆ ನಿರ್ದೇಶಕ ಎನ್.ಕೆ ಮಹಾರಾಜನ್. ಮತ್ತೆ ಶಿವಣ್ಣನನ್ನು ಹಳ್ಳಿಗೆ ಕರೆದುಕೊಂಡು ಹೋಗುತ್ತಿರುವ ತಮಿಳು ನಿರ್ದೇಶಕರು ಇವರೇ.
ತಮಿಳು ಚಿತ್ರರಂಗಕ್ಕೆ ಎನ್.ಕೆ. ಮಹಾರಾಜನ್ ಜನಪ್ರಿಯ ನಿರ್ದೇಶಕ. ತಮಿಳಿನ ಜೊತೆ ಹಿಂದಿಯಲ್ಲಿಯೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆರಂಭದಲ್ಲಿ ತಮಿಳು ಹಾಗೂ ಹಿಂದಿ ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದರು. ವಿಜಯಕಾಂತ್ ನಟಿಸಿದ 'ವಲ್ಲರಸು' ಮಹಾರಾಜನ್ ನಿರ್ದೇಶಿಸಿದ ಚೊಚ್ಚಲ ತಮಿಳು ಸಿನಿಮಾ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದು ತಮಿಳು ಚಿತ್ರರಂಗ ಬೆಸ್ಟ್ ಪೊಲೀಸ್ ಸಿನಿಮಾಗಳಲ್ಲಿ ಒಂದಾಗಿದೆ.
ಇದೇ ಸಿನಿಮಾವನ್ನು ಹಿಂದಿಯಲ್ಲಿ ಸನ್ನಿ ಡಿಯೋಲ್ ಇಟ್ಟುಕೊಂಡು ಇಂಡಿಯನ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದೂ ಕೂಡ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿತ್ತು. ಹಾಗೇ ಅಜಿತ್ ನಟಿಸಿದ 'ಆಂಜನೇಯ' ಸಿನಿಮಾವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ಹಾಗೇ ಹಿಂದಿ ಭಾಷೆಯ 'ಚಾಂಪಿಯನ್', 'ಕ್ರಾಂತಿ' ಅಂತ ಸಿನಿಮಾಗಳಿಗೆ ಸ್ಕ್ರಿಪ್ಟ್ ಕೂಡ ಮಾಡಿದ್ದಾರೆ. ಈಗ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಶಿವಣ್ಣನನ್ನು ಮತ್ತೆ ಹೈಳ್ಳಿ ಹೈದನಾಗಿ ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ.

ನಿರ್ದೇಶಕ ಮಹಾರಾಜನ್ ಹೇಳಿದ ಕತೆಯನ್ನು ಕೇಳಿ ಶಿವರಾಜ್‌ಕುಮಾರ್ ಥ್ರಿಲ್ ಆಗಿದ್ದು, ಕೂಡಲೇ ಕಥೆಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದೊಂದು ಸಹೋದರ ಕಥೆಯಾಗಿದ್ದು, ಶಿವಣ್ಣನನ್ನು ಗಮನದಲ್ಲಿ ಇಟ್ಟುಕೊಂಡೇ ಕಥೆಯನ್ನು ಹೆಣೆಯಲಾಗಿದೆ. ಮತ್ತೊಬ್ಬ ಸಹೋದರನ ಪಾತ್ರಕ್ಕೆ ಸ್ಟಾರ್ ನಟನನ್ನೇ ಆಯ್ಕೆ ಮಾಡುವುದಕ್ಕೆ ನಿರ್ದೇಶಕರ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಪ್ರಮುಖ ಪಾತ್ರಕ್ಕೆ ಬಾಲಿವುಡ್ ನಟ ನೀಲ್ ನಿತಿನ್ ಮುಖೇಕ್‌ರನ್ನು ಕರೆತರುವ ಸಾಧ್ಯತೆಯಿದೆ.
ಹೆಚ್ಚು ಕಡಿಮೆ 15 ವರ್ಷಗಳ ಬಳಿಕ ವಿಲೇಜ್ ಸಬ್ಜೆಕ್ಟ್‌ನಲ್ಲಿ ನಟಸುತ್ತಿರುವ ಶಿವಣ್ಣನ ಸಿನಿಮಾಗೆ ಚೇತನ್ ಕುಮಾರ್ ಸಂಭಾಷಣೆ ಹಾಗೂ ಸಾಹಿತ್ಯ ರಚಿಸುತ್ತಿದ್ದಾರೆ ಎಂಬ ಸುದ್ದಿನೂ ಓಡಾಡುತ್ತಿದೆ. ಏನೇ ಇದ್ದರೂ ಇದು ಇನ್ನೂ ಕನ್ಫರ್ಮ್ ಆಗಬೇಕಿದೆ. ಈ ಸಿನಿಮಾವನ್ನು ಖೇಮಚಂದ್ ಖಡ್ಗಿ ಮತ್ತು ಮನೋಜ್ ಬಾನೊಡೆ ಅವರ ಆಡ್ ಒನ್ ಫಿಲ್ಮ್ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಟಾಪ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದೂ ಹೇಳಲಾಗಿದೆ.


Click it and Unblock the Notifications











