"ನನಗೆ ಬೇಡ.. ಹಾಸ್ಟೆಲ್ ಹುಡುಗರಿಗೆ ಪೂಜೆ ಮಾಡು" ಎಂದಿದ್ದ ಅಪ್ಪು: ಅಚ್ಚೊತ್ತಿದಂತೆ ಅಂದಿನ ಘಟನೆ ವಿವರಿಸಿದ ಪೂಜಾರಿ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸರಳತೆಗೆ, ಸಮಾಜ ಸೇವೆಗೆ ಹೆಸರಾದವರು. ಅಪ್ಪು ಅಗಲಿದ ಬಳಿಕ ಅವರ ಒಂದೊಂದೇ ಉತ್ತಮ ಕೆಲಸಗಳು ಹೊರಬರುತ್ತಿದೆ. ಒಂದೊಂದು ಘಟನೆಯನ್ನೂ ಕಣ್ಣಿಗೆ ಅಚ್ಚೊತ್ತಿದಂತೆ ವಿವರಿಸಿದ ಅದೆಷ್ಟೋ ಘಟನೆಗಳು ಇವೆ. ಇದರಲ್ಲೊಂದು ಸದಾಶಿವನಗರದ ಗಣೇಶ ದೇವಸ್ಥಾನದ ಪೂಜಾರಿ ವಿವರಿಸಿದ ಘಟನೆ ಕೂಡ ಒಂದು.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೊಸಬರ ಸಿನಿಮಾ. ಇದಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ನಟ, ನಟಿಯರು ಬೆಂಬಲ ಕೊಟ್ಟಂತೆ ಮತ್ಯಾರೂ ಕೊಟ್ಟಿಲ್ಲವೇನೋ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಂದ ಹಿಡಿದು ಧ್ರುವ ಸರ್ಜಾವರೆಗೂ ಬೆನ್ನೆಲುಬಾಗಿ ನಿಂತಿದ್ದಾರೆ. ಹೊಸ ಹುಡುಗರಿಗೆ ಸಪೂರ್ಟ್ ಮಾಡುತ್ತಿದ್ದಾರೆ.

ಈಗ ಸದಾಶಿವನಗರದ ಪೂಜಾರಿ ನೆನಪಿಸಿಕೊಂಡಿರೋ ಆ ಘಟನೆ ಕೂಡ ಇದೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಜೊತೆ ತಳುಕು ಹಾಕಿಕೊಳ್ಳುತ್ತೆ. ಎರಡನೇ ಲಾಕ್‌ಡೌನ್ ಸಮಯದಲ್ಲಿ ಅಪ್ಪು ದೇವಸ್ಥಾನಕ್ಕೆ ಹೋಗಿದ್ದಾಗ ನಡೆದ ಘಟನೆಯನ್ನು ಅದೆ ದೇವಸ್ಥಾನದ ಪೂಜಾರಿ ವಿವರಿಸಿದ್ದರು. ಆ ಘಟನೆ ಏನು? ದೇವಸ್ಥಾನದಲ್ಲಿ ಪೂಜಾರಿಗೆ ಅಪ್ಪು ಹೇಳಿದ ಮಾತೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.
ಸದಾಶಿವನಗರದ ಗಣೇಶ ದೇವಸ್ಥಾನದಲ್ಲಿ ನಡೆದಿದ್ದೇನು?
ಅದು ಎರಡನೇ ಲಾಕ್‌ಡೌನ್ ಸಮಯ. ಈ ವೇಳೆ ಮಾಸ್ಕ್ ಕಡ್ಡಾಯವಿತ್ತು. ನಿಯಮದ ಅನುಸಾರವೇ ಹೊರಗೆ ಓಡಾಡಬೇಕಿತ್ತು. ಈ ವೇಳೆ ಒಂದು ದಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಮನೆಯ ಹತ್ತಿರದಲ್ಲೇ ಇರುವ ಗಣೇಶ ದೇವಸ್ಥಾನಕ್ಕೆ ಹೋಗಿದ್ದರು. ಅಂದು ಅಲ್ಲಿ ವಿಶೇಷವಾಗಿ ಪೂಜೆ ಮಾಡಿಸಿದ್ದರು. ಆದರೆ, ತಮಗಾಗಿ ಅಲ್ಲ. ಹೊಸಬರು ನಿರ್ಮಿಸುತ್ತಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಅನ್ನೋ ತಂಡಕ್ಕಾಗಿ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡದ ಪರವಾಗಿ ಮೊದಲು ನಿಂತಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್. ಆರಂಭದ ದಿನಗಳಿಂದ ಸಪೂರ್ಟ್ ಮಾಡುತ್ತಲೇ ಬಂದಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆಯೇ ಸದಾಶಿವನಗರದ ದೇವಸ್ಥಾನದಲ್ಲಿ ನಡೆದ ಘಟನೆ. ಆ ಘಟನೆಯನ್ನು ದೇವಸ್ಥಾನದ ಪೂಜಾರಿಯೇ ವಿವರಿಸಿದ್ದಾರೆ.
"ಹಾಸ್ಟೆಲ್ ಹುಡುಗರಿಗಾಗಿ ಪೂಜೆ ಮಾಡಿ ಎಂದಿದ್ರು"
2020ರಲ್ಲಿ ನಡೆದ ಘಟನೆಯನ್ನು ಸದಾಶಿವನಗರದ ದೇವಸ್ಥಾನದ ಪೂಜೆ ಮಾಡುತ್ತಿದ್ದ ಮನೋಜ್ ವಿವರಿಸಿದ್ದರು. ತಮ್ಮ ಬಗ್ಗೆ ಪೂಜೆ ಮಾಡಿಸದೇ ಹೊಸರ ಸಿನಿಮಾಗೆ ಒಳ್ಳೆದಾಗಲು ಎಂದು ಪೂಜೆ ಸಲ್ಲಿಸಿದ್ದರು. ಇದನ್ನು ಪುನೀತ್ ರಾಜ್‌ಕುಮಾರ್ ತೀರಿಕೊಂಡಾಗ, ಹಾಸ್ಟೆಲ್ ಹುಡುಗರು ತಂಡ ಗೌರವ ಸೂಚಿಸಲು ಒಂದು ವಿಡಿಯೋ ಮಾಡಿದ್ದರು. ಅದಕ್ಕೆ ಕಮೆಂಟ್ ಮಾಡಿ, ಈ ಘಟನೆಯನ್ನು ವಿವರಿಸಿದ್ದರು.
"ನಾನು ಸದಾಶಿವನಗರದ ಗಣೇಶ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದೆ. 2020ರ ಎಂಡಿಂಗ್. ತಿಂಗಳು ನೆನಪು ಇಲ್ಲ. ಅಪ್ಪು ಅವರು ಬ್ಲ್ಯಾಕ್ ಟಿ ಶರ್ಟ್ ಹಾಕೊಂಡು ಅವರ ಬಾಡಿಗಾರ್ಡ್ ಜೊತೆ ಬಂದಿದ್ದರು. ಮಸ್ಕ್ ಹಾಕಿರಲಿಲ್ಲ. ಮಾಸ್ಕ್ ಹಾಕಿಲ್ಲ ಕಣೋ ಸಾರಿ. ಬೇಗ ಬಂದು ಪೂಜೆ ಮಾಡಿ ಕೊಡ್ತೀಯಾ ಅಂತ ಕೇಳಿದ್ರು. ನಾನು ಸರಿ ಅಂದು ಅರ್ಚನೆ ಮಾಡುವುದಕ್ಕೆ ಹೋದೆ. ಅವಾಗ ಅವರು ನನಗೆ ಅರ್ಚನೆ ಬೇಡ. ಒಂದು ಪೋಸ್ಟರ್ ರಿವೀಲ್ ಮಾಡೋಕೆ ಹೋಗ್ತಿದ್ದೀನಿ. ಆ ಫಿಲ್ಮ್ ಹೆಸರಲ್ಲಿ ಮಾಡು ಅಂದ್ರು. ನಾನು ಫಿಲ್ಮ್ ನೇಮ್ ಕೇಳ್ದೆ. ಹಾಸ್ಟೆಲ್ ಅಂತ ಏನೋ ಹೇಳಿದ್ರು. ಬಹುಶ: ಅವರು ಈ ಸಿನಿಮಾ ಪೋಸ್ಟರ್ ರಿವೀಲ್ ಮಾಡೋಕೆ ಹೋಗ್ತಿದ್ರು." ಎಂದು ಪೂಜಾರಿ ಟ್ರಿಬ್ಯೂಟ್ ಮಾಡಿದ ವಿಡಿಯೋ ಕೆಳಗೆ ಕಮೆಂಟ್ ಮಾಡಿದ್ದರು.
ಈ ಘಟನೆ ಬಗ್ಗೆ ಏನು ಹೇಳುತ್ತೆ ಚಿತ್ರತಂಡ?
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸದಾ ಬೆಂಬಲವಾಗಿ ನಿಂತಿದ್ದರು. ಹೀಗಾಗಿ ಅಪ್ಪು ಅಗಲಿದಾಗ, ಟ್ರಿಬ್ಯೂಟ್ ನೀಡಲು ವಿಡಿಯೋ ಮಾಡಿದಾಗ ಸದಾಶಿವನಗರದ ಗಣೇಶ ದೇವಸ್ಥಾನದ ಪೂಜಾರಿ ಮಾಡಿದ ಕಮೆಂಟ್ ಅವರ ಕಣ್ಣಿಗೂ ಬಿದ್ದಿತ್ತು.
"ಅಪ್ಪು ಸರ್ ಅಗಲಿದಾಗ, ನಾವೊಂದು ಟ್ರಿಬ್ಯೂಟ್ ವಿಡಿಯೋ ಮಾಡಿದ್ದೆವು. ಆಗ ಈ ಕಮೆಂಟ್ ನೋಡಿದ್ದೆವು. ನಾವು ಮೊದಲ ಬಾರಿಗೆ ಅವರನ್ನು ಪೋಸ್ಟರ್ ರಿವೀಲ್ ಮಾಡುವಂತೆ ಕೇಳಿಕೊಂಡಿದ್ದೇವು. ಆ ವೇಳೆ ಪೂಜೆ ಮಾಡಿಸಿದ್ದರು. ಇದೂ ನಮಗೂ ಗೊತ್ತಿರಲಿಲ್ಲ. ಈ ಕಮೆಂಟ್ ನೋಡಿದ ಬಳಿಕವೇ ಗೊತ್ತಾಗಿದ್ದು" ಎನ್ನುತ್ತಾರೆ ಹಾಸ್ಟೆಲ್ ಹುಡುಗರು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ವರುಣ್ ಗೌಡ.


Click it and Unblock the Notifications











