Dhananjay Wedding: ಡಾಲಿ ಮದುವೆಗೆ ಜರ್ಮನಿಯಿಂದ ಬಂದ ರಂಗಭೂಮಿ ನಿರ್ದೇಶಕ; ಇವರ ಹಿನ್ನೆಲೆಯೇನು?
ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ನಾಳೆ (ಫೆಬ್ರವರಿ 13) ಹಾಗೂ ನಾಡಿದ್ದು (ಫೆಬ್ರವರಿ 14) ಧನಂಜಯ್ ಹಾಗೂ ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಎರಡೂ ಮನೆಯಲ್ಲೂ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಮೈಸೂರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಈ ಸೆಲೆಬ್ರಿಟಿ ಮದುವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಧನಂಜಯ್ ಆತ್ಮೀಯರ ಗೆಳೆಯರು ಆಗಮಿಸಲಿದ್ದಾರೆ. ತನ್ನ ಆತ್ಮೀಯರಿಗೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಚಿತ್ರರಂಗದ ಗಣ್ಯರು, ರಂಗಭೂಮಿ ಗಣ್ಯರು ಡಾಲಿ ಮದುವೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ಈ ಮಧ್ಯೆ ವಿಶ್ವದ ಜನಪ್ರಿಯ ರಂಗಭೂಮಿ ನಿರ್ದೇಶಕ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಡಾಲಿ ಧನಂಜಯ್ ವಿವಾಹ ನಿಜಕ್ಕೂ ವಿಶೇಷ ಅಂತ ಅನಿಸುತ್ತಿದೆ. ಅರ್ಥಪೂರ್ಣ ಕಲ್ಯಾಣಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಅಂದ್ಹಾಗೆ ಡಾಲಿ ಮದುವೆಗೆ ಜರ್ಮನಿಯಿಂದ ಬಂದ ರಂಗಭೂಮಿ ನಿರ್ದೇಶಕ ಯಾರು? ಅವರ ಹಿನ್ನೆಲೆ ಏನು? ಜರ್ಮನಿಯ ರಂಗಭೂಮಿ ನಿರ್ದೇಶಕನಿಗೂ ಡಾಲಿ ಧನಂಜಯ್‌ಗೂ ನಂಟು ಬೆಳೆದಿದ್ದು ಹೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಹೌದು, ಡಾಲಿ ಮದುವೆಗೆ ಜರ್ಮನಿಯಿಂದ ಜನಪ್ರಿಯ ರಂಗಭೂಮಿ ನಿರ್ದೇಶಕ ಕ್ರಿಸ್ಟೆನ್ ಸ್ಟುಕೆಲ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಗಿದೆ. ಧನಂಜಯ್ ಗೆಳೆಯ ಹಾಗೂ ನಟ ಪೂರ್ಣಚಂದ್ರ ಮೈಸೂರು ಜರ್ಮನಿಯಿಂದ ಬಂದ ನಿರ್ದೇಶಕರಿಗೆ ಸ್ವಾಗತ ಕೋರಿದ್ದಾರೆ. ಆದರೆ, ಡಾಲಿಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜರ್ಮನಿಯ ರಂಗಭೂಮಿ ನಿರ್ದೇಶಕರಿಗೂ ನಂಟು ಬೆಳೆದಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಮೈಸೂರಿನಲ್ಲಿಯೇ ಸಿಗುತ್ತೆ.

ಜರ್ಮನಿಯ ಒಬೆರಮ್ಮೆರ್ಗೌ ಮೂಲದ ಕ್ರಿಸ್ಟೆನ್ ಸ್ಟುಕೆಲ್ ಅಂತರಾಷ್ಟ್ರೀಯ ಮಟ್ಟದ ರಂಗಭೂಮಿ ನಿರ್ದೇಶಕ. 1961ರಲ್ಲಿ ಜನಿಸಿದ ಕ್ರಿಸ್ಟೆನ್ ಸ್ಟುಕೆಲ್ 81ರಲ್ಲಿ ತಮ್ಮದೇ ಸ್ವಂತ ಡ್ರಾಮ ಗ್ರೂಪ್ ಅನ್ನು ಕಟ್ಟುತ್ತಾರೆ. ಇದಾದ ಕೇವಲ ಆರು ವರ್ಷಗಳಲ್ಲೇ 'ಒಬೆರಮ್ಮೆರ್ಗೌ ಪ್ಯಾಷನ್ ಪ್ಲೇ' ನಿರ್ದೇಶಕರಾಗಿದ್ದರು. 1981ರಿಂದ ಇಲ್ಲಿವರೆಗೂ ನಿರಂತರವಾಗಿ ನಾಟಕಗಳನ್ನು ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ಅವು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ.
ಅಂದ್ಹಾಗೆ, 63 ವರ್ಷದ ಕ್ರಿಸ್ಟೆನ್ ಸ್ಟುಕೆಲ್‌ಗೂ ಡಾಲಿ ಧನಂಜಯ್‌ಗೂ ನಂಟು ಬೆಳೆದಿದ್ದು ಕೂಡ ಮೈಸೂರಿನಲ್ಲಿಯೇ. ಇಲ್ಲಿನ ಜಗತ್ಪ್ರಸಿದ್ದ ರಂಗಾಯಣದಲ್ಲಿ ಧನಂಜಯ್ ಹಾಗೂ ಕ್ರಿಸ್ಟೆನ್ ಸ್ಟುಕೆಲ್ ಪರಿಚಯ ಆಗಿತ್ತು. ಸಿನಿಮಾಗೂ ಮುನ್ನ ರಂಗಭೂಮಿಯಲ್ಲಿ ಹೆಚ್ಚಾಗಿ ಆಸಕ್ತಿ ಬೆಳೆಸಿಕೊಂಡಿದ್ದ ಧನಂಜಯ್‌ಗೆ ಕಾರ್ಯಗಾರದಲ್ಲಿ ಪರಿಚಯವಾಗಿತ್ತು ಎನ್ನಲಾಗಿತ್ತು. ಅಲ್ಲಿಂದ ಇಬ್ಬರೂ ಸಂಪರ್ಕದಲ್ಲಿ ಇದ್ದರು. ಹೀಗಾಗಿ ಡಾಲಿ ಮದುವೆಗೆ ಜರ್ಮನಿಯಿಂದ ಸೀದಾ ಕರ್ನಾಟಕ ಹಾರಿಬಂದಿದ್ದಾರೆ.
ಧನಂಜಯ್ ಹಾಗೂ ಧನ್ಯತಾ ವಿವಾಹಕ್ಕೆ ಮೈಸೂರು ಸಕಲ ರೀತಿಯಲ್ಲೂ ಸಜ್ಜಾಗಿದೆ. ತಮ್ಮ ಜೀವನದ ಬಹುಮುಖ್ಯ ಭಾಗವಾಗಿರುವ ಮೈಸೂರಿನಲ್ಲೇ ಧನಂಜಯ್ ವಿವಾಹವಾಗುವುದಕ್ಕೆ ನಿರ್ಧರಿಸಿದ್ದಾರೆ. ಅದರಂತೆ ಮೈಸೂರಿನ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಈ ಜೋಡಿ ಅರಿಶಿಣ ಶಾಸ್ತ್ರ, ಮೆಹೆಂದಿ ಶಾಸ್ತ್ರಗಳಲ್ಲಿ ಮಿಂದೇಳುತ್ತಿದೆ. ಇನ್ನು ಡಾಲಿ ಅಭಿಮಾನಿಗಳು ಕೂಡ ಈ ಮದುವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರದಿಂದ ಕಾಯುತ್ತಿದೆ.


Click it and Unblock the Notifications











