ವಿಷ್ಣುದಾದನ ಪುಣ್ಯಭೂಮಿಗಾಗಿ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ: ಬಾಲಣ್ಣನ ಕುಟುಂಬ, ಸರ್ಕಾರದ ವಿರುದ್ಧ ಆಕ್ರೋಶ!
ಡಾ.ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದೆ. ಆದರೆ, ಅಭಿಮಾನಿಗಳು ಸ್ಮಾರಕ ಮೈಸೂರಿನಲ್ಲೇ ಆದರೂ, ಅಂತ್ಯ ಸಂಸ್ಕಾರ ನಡೆದ ಜಾಗವನ್ನು ಪುಣ್ಯಭೂಮಿಯನ್ನಾಗಿ ಮಾರ್ಪಾಡು ಮಾಡಬೇಕು ಎಂದು ಒತ್ತಾಯ ಮಾಡುತ್ತಲೇ ಇದ್ದಾರೆ.
ಬೆಂಗಳೂರಿನಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೆರವೇರಿತ್ತು. ಅಲ್ಲಿಂದ ಇಲ್ಲಿವರೆಗೂ ಸುಮಾರು 14 ವರ್ಷಗಳಾಗುವೆ. ಅಭಿಮಾನಿಗಳ ಆಸೆಯಂತೆ ಪುಣ್ಯಭೂಮಿ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಒಂದಲ್ಲ ಇಂದು ಅಡೆತಡೆಗಳು ಎದುರಾಗುತ್ತಲೇ ಇವೆ. ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಮಕ್ಕಳು ಹಾಗೂ ಸರ್ಕಾರ ಜೊತೆ ಮಾತುಕತೆ ನಡೆಯುತ್ತಲೇ ಇತ್ತು. ಆದರೆ, ಅದು ಫಲಪ್ರದವಾಗಿರಲಿಲ್ಲ.

ಸಾಹಸ ಸಿಂಹ ಅಗಲಿ ಸುಮಾರು 14 ವರ್ಷಗಳಾಗಿವೆ. ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿವರ್ಷ ಅಭಿಮಾನ್ ಸ್ಟುಡಿಯೋಗೆ ತೆರಳಿ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ಈಗ ಅಭಿಮಾನ್ ಸ್ಟುಡಿಯೋದ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ ಎಂಬುದು ಅಭಿಮಾನಿಗಳ ಆರೋಪ.
ಇದೇ ವಿಚಾರವಾಗಿ ಈಗಾಗಲೇ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಭೇಟಿ ಇಟ್ಟಿದ್ದರು. ಒಬ್ಬ ನಟನಿಗೆ ಎರಡೆರಡು ಕಡೆ ಸ್ಮಾರಕ, ಪುಣ್ಯಭೂಮಿ ಮಾಡುವುದು ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನು ಹಾಗೂ ಪುಣ್ಯಭೂಮಿ ಅಭಿವೃದ್ಧಿಗೆ ತಗುಲುವ ಹಣವನ್ನು ಅಭಿಮಾನಿಗಳೇ ಭರಿಸುವುದಾಗಿ ತಿಳಿಸಿದ್ದೇವೆ. ಆದರೂ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲವೆಂದು ಪ್ರತಿಭಟನೆ ಮುಂದಾಗಿದ್ದಾರೆ.

ಅಸಲಿಗೆ ಅಂತ್ಯಸಂಸ್ಕಾರಗೊಂಡ ಜಾಗವನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಯಾವುದೇ ಸರ್ಕಾರ ಮಾಡಿಲ್ಲ ಅನ್ನೋದು ಅಭಿಮಾನಿಗಳ ಆಕ್ರೋಶ. ಹಾಗೇ ಹಿರಿಯ ಕಲಾವಿದ ಬಾಲಕೃಷ್ಣ ಅವರ ಕುಟುಂಬದ ಮೇಲೂ ಕಿಡಿಕಾರಿದ್ದಾರೆ. ಹಿರಿಯ ನಟ ಬಾಲಣ್ಣ ಅವರಿಗೆ ಸರ್ಕಾರ ಅನುದಾನವಾಗಿ ಅಭಿಮಾನ್ ಸ್ಟುಡಿಯೋ ನೀಡಿತ್ತು. ಬಾಲಣ್ಣ ಸ್ಟುಡಿಯೋ ಕಟ್ಟುವ ಕನಸಿಗಾಗಿ ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್ ಸ್ಟುಡಿಯೋ ನಿರ್ಮಿಸಿದ್ದರು. ಅವರ ಅಗಲಿಕೆಯ ಬಳಿಕ 2004ರಲ್ಲಿ ಅವರ ಮಕ್ಕಳು ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆಂದೂ ಆರೋಪಿಸಿದ್ದಾರೆ.
ಹೀಗಾಗಿ ವಿಷ್ಣುವರ್ಧನ್ ಪುಣ್ಯಭೂಮಿಗೆ ಆಗುತ್ತಿರುವ ಅಡೆತಡೆಯಿಂದ ಸಿಟ್ಟಿಗೆದ್ದಿರೋ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ ಡಿಸೆಂಬರ್ 17ರಂದು ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಿಗ್ಗೆ ಹತ್ತರಿಂದ ಸಂಜೆ ಆರು ಗಂಟೆವರೆಗೂ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಂದು ಸುಮಾರು ಐವತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆಯೆಂದು ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಈ ಪ್ರತಿಭಟನೆಗೂ ಸರ್ಕಾರ ಜಗ್ಗದೇ ಹೋದರೆ, ದೆಹಲಿಗೆ ಹೋಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಸರ್ಕಾರದ ಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶನಕ್ಕೆ ಡಾ.ವಿಷ್ಣುವರ್ಧನ್ ಒಕ್ಕೂಟ ಮುಂದಾಗಲಿದೆ.


Click it and Unblock the Notifications











