ಚಿತ್ರರಂಗನೂ ಬಂದ್ ಇಲ್ಲ, ಥಿಯೇಟರ್‌ಗಳೂ ಬಂದ್ ಆಗಲ್ಲ: ಸಭೆಯಲ್ಲಿ ಏನಾಯ್ತು ನಿರ್ಧಾರ?
2024 ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ತಮಿಳು, ತೆಲುಗು ಚಿತ್ರರಂಗ ಕೂಡ ಸೊರಗಿ ಹೋಗಿವೆ. ಮೆಗಾ ಹಿಟ್ ಎನ್ನುವಂತಹ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹೀಗಾಗಿ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬಾರದೆ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ. ಈ ಸಂಬಂಧ ಇತ್ತೀಚೆಗೆ ತೆಲಂಗಾಣದಲ್ಲಿ ಚಿತ್ರಮಂದಿರಗಳನ್ನು ಕೆಲವು ದಿನಗಳ ಕಾಲ ಬಂದ್ ಮಾಡುವುದಕ್ಕೆ ನಿರ್ಧರಿಸಿದ್ದರು.
ಕಳೆದ ಕೆಲವು ದಿನಗಳಿಂದ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಇದೇ ವೇಳೆ ಲೋಕಸಭೆ ಚುನಾವಣೆ ಕಾವು ಜೋರಾಗಿತ್ತು. ಈ ಸಂಬಂಧ ಜನರ ಗಮನ ಐಪಿಎಲ್ ಹಾಗೂ ಚುನಾವಣೆ ಮೇಲೆ ಇತ್ತು. ಈ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಹೇಳಲಾಗುತ್ತಿತ್ತು. ಅದರಲ್ಲೂ ಸಿಂಗಲ್ ಸ್ಕ್ರೀನ್‌ಗಳಂತೂ ಸಿಕ್ಕಾಪಟ್ಟೆ ನಷ್ಟದಲ್ಲಿ ಇದ್ದವು.

ಇದೇ ವೇಳೆ ಚಿತ್ರಮಂದಿರಗಳನ್ನು ಉರುಳಿಸಿ, ಕಾಂಪ್ಲೆಕ್ಸ್ ಕಟ್ಟಲು ಕೆಲವು ಮಾಲೀಕರು ಮುಂದಾಗಿದ್ದರು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್‌ಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರ ಜೊತೆ ಫಿಲ್ಮ್ ಚೇಂಬರ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ತೆಲಂಗಾಣದಲ್ಲಿ ಚಿತ್ರಮಂದಿರ ಬಂದ್ ಮಾಡಿದಂತೆ ಕರ್ನಾಟಕದಲ್ಲಿ ಥಿಯೇಟರ್‌ಗಳನ್ನು ಕೆಲವು ಕಾಲ ಮುಚ್ಚಲಾಗುತ್ತೆ ಅನ್ನೋ ಸುದ್ದಿ ಹರಿದಾಡಿತ್ತು. ಇಂದು (ಮೇ 23) ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಹಿರಿಯ ನಿರ್ಮಾಪಕ ಕೆ. ಮಂಜು, ನಿರ್ಮಾಪಕ-ವಿತರಕ ಜಯಣ್ಣ, ನಿರ್ದೇಶಕ- ನಿರ್ಮಾಪಕ ಆರ್.ಚಂದ್ರು, ಲಹರಿ ವೇಲು, ಕೆಪಿ ಶ್ರೀಕಾಂತ್, ಹೊಂಬಾಳೆ ಫಿಲ್ಮ್ಸ್ ಪ್ರತಿನಿಧಿ ಜೊತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಹಾಗೂ ಪದಾಧಿಕಾರಿಗಳು ಚರ್ಚೆ ನಡೆಸಿದರು.
ಈ ಸಭೆಯಲ್ಲಿ "ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದಲ್ಲಿ ಥಿಯೇಟರ್‌ಗಳನ್ನು ಬಂದ್ ಮಾಡುವುದಿಲ್ಲ" ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗೇ " ಕನ್ನಡದ ಹಲವು ನಿರ್ಮಾಪಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕನ್ನಡ ಚಿತ್ರಮಂದಿರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಗಿದೆ. ನಾವು ಥಿಯೇಟರ್‌ಗಳನ್ನು ಬಂದ್ ಮಾಡುತ್ತೇವೆ ಎಂದೂ ಹೇಳಿರಲಿಲ್ಲ. ಸದ್ಯ ಪರಿಸ್ಥಿಯಲ್ಲಿ ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಚರ್ಚೆ ಮಾಡಲಾಗಿದೆ" ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಹೇಳಿದ್ದಾರೆ.
ಕನ್ನಡ ಚಿತ್ರರಂಗ ಕಳೆದ ಒಂದೂವರೆ ವರ್ಷದಿಂದ ಸಂಕಷ್ಟದಲ್ಲಿ ಇದೆ. 'ಕಾಂತಾರ' ಬಳಿಕ ಇಲ್ಲಿವರೆಗೆ ತೆರೆಕಂಡ ಸಿನಿಮಾಗಳಲ್ಲಿ ದರ್ಶನ್ ನಟಿಸಿದ 'ಕಾಟೇರ' ಮೆಗಾ ಹಿಟ್ ಆಗಿದ್ದು ಬಿಟ್ಟರೆ, ಬೇರೆ ಸಿನಿಮಾಗಳು ಚಿತ್ರಮಂದಿರಕ್ಕೆ ಜನರನ್ನು ಕರೆತರುವುದರಲ್ಲಿ ಸೋತಿದ್ದವು. ಹೀಗಾಗಿ ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಸಿಲುಕಿದೆ.
ಇನ್ನೊಂದು ಕಡೆ ದರ್ಶನ್ ಬಿಟ್ಟು ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ತಗುಲುತ್ತಿದೆ. ಕೇರಳ ಸರ್ಕಾರ ಅವರದ್ದೇ ಓಟಿಟಿ ವೇದಿಕೆ ಮಾಡಿದೆ. ಹಾಗೇ ಯುಎಫ್, ಕ್ಯೂಬ್ ಅವರದ್ದೇ ಇರುವುದರಿಂದ ದರ ಕೂಡ ಕಡಿಮೆ ಇದೆ. ಈ ಮಾದರಿ ಕರ್ನಾಟಕದಲ್ಲಿ ಬಂದರೆ, ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಬಹುದು ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











