ಕನ್ನಡ ಜನಪ್ರಿಯ ಪಿಆರ್‌ಓ ಸುಧೀಂದ್ರ ವೆಂಕಟೇಶ್ ಪುತ್ರ ಪವನ್ ವೆಂಕಟೇಶ್ ಈಗ ನಿರ್ದೇಶಕ; 'ಫಸ್ಟ್ ಸ್ಯಾಲರಿ' ಪೋಸ್ಟರ್ ಔಟ್
ಸ್ಯಾಂಡಲ್‌ವುಡ್‌ನ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಫೇವರಿಟ್ ಪಿಆರ್‌ಓ ಸುಧೀಂದ್ರ ವೆಂಕಟೇಶ್. ಕಳೆದ ಐದು ದಶಕಗಳಿಂದ ಸಿನಿಮಾ ತಂಡಕ್ಕೂ ಹಾಗೂ ಸಿನಿಮಾ ಪತ್ರಕರ್ತರಿಗೂ ಸಂಪರ್ಕಕೊಂಡಿಯಾಗಿ ಇವರ 'ಶ್ರೀ ರಾಘವೇಂದ್ರ ಚಿತ್ರವಾಣಿ' ಸಂಸ್ಥೆ ಕೆಲಸ ಮಾಡುತ್ತಿದೆ. ಹಾಗಂತ ಕೇವಲ ಸಿನಿಮಾ ಪ್ರಚಾರ ಅಷ್ಟೇ ಅಲ್ಲ. ಸಿನಿಮಾ ನಿರ್ಮಾಣದಲ್ಲಿಯೂ ಗುರುತಿಸಿಕೊಂಡು ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆ ಮತ್ತು ಸೇವೆ ಕೊಡುತ್ತಿದೆ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ ಡಿ.ವಿ ಸುಧೀಂದ್ರ ಕನ್ನಡ ಚಿತ್ರರಂಗ ಕಂಡ ಅಗ್ರ ಸಿನಿಮಾ ಪಿಆರ್‌ಓ. ಇವರು ಈ ಸಂಸ್ಥೆಯಿಂದ ಅಂಬರೀಷ್ ನಟನೆಯ 'ಒಲವಿನ ಉಡುಗೊರೆ' ಸೇರಿದಂತೆ 'ಗಣೇಶನ ಮದುವೆ', 'ಗುಂಡನ ಮದುವೆ', 'ಪಟ್ಟಣಕ್ಕೆ ಬಂದ ಪುಟ್ಟ', 'ನಗು ನಗುತಾ ನಲಿ' ಅಂತಹ ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಹೀಗಾಗಿ ಸಿನಿಮಾ ನಿರ್ಮಾಣದ ಅನುಭವ ಕೂಡ ಇದೆ.

ಹಲವು ವರ್ಷಗಳಿಂದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಮುನ್ನಡೆಸುತ್ತಿದ್ದಾರೆ. ಈಗ ಅವರು ಹೊಸ ಸಾಹಸಕ್ಕೆ ಕೈಹಾಕಿದ್ದು, ತಮ್ಮ ಪುತ್ರ ಪವನ್ ವೆಂಕಟೇಶ್ ಆಕ್ಷನ್ ಕಟ್ ಹೇಳಿರುವ 'ಫಸ್ಟ್ ಸ್ಯಾಲರಿ' ಶಾರ್ಟ್ ಫಿಲ್ಮ್‌ಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಶೀರ್ಷಿಕೆ ಕೆಳಗೆ ಕನಸುಗಳ ಹಾದಿ ಎನ್ನುವ ಅಡಿಬರಹದೊಂದಿಗೆ ಡಿ.ವಿ ಸುಧೀಂದ್ರ ಅವರ ಆಶೀರ್ವಾದ ಜೊತೆಗೆ 'ಫಸ್ಟ್ ಸ್ಯಾಲರಿ' ಕಿರುಚಿತ್ರದ ಪೋಸ್ಟರ್ ಅನ್ನು ದೀಪಾವಳಿ ಸಂದರ್ಭದಲ್ಲಿ ರಿಲೀಸ್ ಮಾಡಲಾಗಿದೆ.
ಪವನ್ ವೆಂಕಟೇಟ್ ಕೋವಿಡ್ ಸಮಯದಲ್ಲಿ 'ಕರೋನ ಕರಾಳ ರೋಗ ನಾಶ' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಇದರೊಂದಿಗೆ ಹಲವು ಶಾರ್ಟ್ ಫಿಲ್ಮ್ ಅನ್ನು ನಿರ್ದೇಶನ ಮಾಡಿ ಅನುಭವ ಪವನ್ ಅವರಿಗಿದೆ. ಈಗ 'ಫಸ್ಟ್ ಸ್ಯಾಲರಿ' ಎಂಬ ಮತ್ತೊಂದು ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಹರಿಣಿ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ವಿಜಯ್ ಶಿವಕುಮಾರ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ ಮತ್ತು ರಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್‍ನಲ್ಲೇ ಈ ಶಾರ್ಟ್‌ಫಿಲ್ಮ್ ರಿಲೀಸ್ ಆಗಲಿದೆ.

"ಕೋವಿಡ್ ಸಮಯದಲ್ಲಿ 'ಕರೋನ ಕರಾಳ ರೋಗ ನಾಶ' ಕಿರುಚಿತ್ರ ಮಾಡಿದ್ದೆ. ಇದರ ಜೊತೆ ಕನ್ನಡದ ಅಗ್ರಗಣ್ಯ ಸಿನಿಮಾ ಪ್ರಚಾರಕರ್ತ ದಿ ಡಿ.ವಿ ಸುಧೀಂದ್ರ ಅವರ ಬದುಕಿನ ಕುರಿತಾದ 'ಡಿ ವಿ ಸುಧೀಂದ್ರ ಸಿನಿ ಪಯಣ' ಸಾಕ್ಷ್ಯ ಚಿತ್ರ ಹಾಗೂ ಆನಿಮೇಷನ್‌ನಲ್ಲಿ 'ರಾಮಜನ್ಮ ಭೂಮಿ' ಕಿರುಚಿತ್ರ ನಿರ್ದೇಶನ ಮಾಡಿದ್ದೆ. ಈಗ ಮತ್ತೊಂದು ಶಾರ್ಟ್ ಫಿಲ್ಮ್ 'ಫಸ್ಟ್ ಸ್ಯಾಲರಿ' ಮಾಡಿದ್ದೇನೆ. ನೋಡುಗರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶ ಇದರಲ್ಲಿ ಇರುತ್ತೆ." ಎನ್ನುತ್ತಾ ಪವನ್ ವೆಂಕಟೇಶ್.
'ಫಸ್ಟ್ ಸ್ಯಾಲರಿ' ಇದು ತಾಯಿಯ ಸೆಂಟಿಮೆಂಟ್ ಇರುವ ಕಿರುಚಿತ್ರ. ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಕಡಿಮೆ ಒಂದು ತಿಂಗಳು ಆಗಿದೆ. ಕಿರುಚಿತ್ರದಲ್ಲಿ 1 ಹಾಡಿದೆ. ಡಿಐ ಸೇರಿದಂತೆ ಒಟ್ಟಾರೆ ಕಿರುಚಿತ್ರದ ತಯಾರಿಕೆಗೆ 2 ರಿಂದ ಮೂರು ತಿಂಗಳು ಹಿಡಿದಿದೆ .'ಫಸ್ಟ್ ಸ್ಯಾಲರಿ' ಒಟ್ಟು 24 ನಿಮಿಷಗಳ ಶಾರ್ಟ್ ಫಿಲ್ಮ್ ಎನ್ನುತ್ತಾರೆ ಪವನ್.
ಇನ್ನು ಈ ಕಿರುಚಿತ್ರದ ನಿರ್ದೇಶನ ತಂಡದಲ್ಲಿ ಮನೋಜ್ ಕುಮಾರ್ ಎಚ್.ಎನ್., ರವಿ ಸಾಸನೂರು ಕೆಲಸ ಮಾಡಿದ್ದಾರೆ. ವಿಜಯ್ ಶಿವಕುಮಾರ್ ರಚನೆ, ರಿಚರ್ಡ್ ಡ್ಯಾನಿಯಲ್ ಛಾಯಾಗ್ರಾಹಣದ ಜೊತೆಗೆ ಸಂಕಲನ ಮಾಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ಧಾರೆ. ಡಿ.ಎಸ್ ಸುನೀಲ್ ಸುಧೀಂದ್ರ ಮತ್ತು ಡಿ.ಜಿ ವಾಸುದೇವ್ ಪತ್ರಿಕಾ ಸಂಪರ್ಕವಿದ್ದು ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಚಂದನ ಪ್ರಸನ್ನ ಕಾರ್ಯನಿರ್ವಹಿಸಿದ್ದಾರೆ.


Click it and Unblock the Notifications











