ಫಸ್ಟ್ ಟೈಮ್ ಅಭಿಮಾನ್ ಸ್ಟುಡಿಯೋಗೆ ಕಾಲಿಡುತ್ತಿಲ್ಲ ದಾದಾ ಫ್ಯಾನ್ಸ್; ಆದರೆ, 100 ಮೀ ಅಂತರದಲ್ಲೇ ಭಾವನಾತ್ಮಕ ಸಂಭ್ರಮ
ಇದೇ ಸೆಪ್ಟೆಂಬರ್ 18ರಂದು ಸಾಹಸ ಸಿಂಹ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬ ನಡೆಯಲಿದೆ. ಅಭಿಮಾನಿಗಳು ಕಳೆದ ಎರಡು-ಮೂರು ತಿಂಗಳಿನಿಂದ ಬರ್ತ್‌ಡೇ ಆಚರಣೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ವಿಷ್ಣುದಾದಗೆ ಗೌರವ ಸೂಚಿಸುವ ಸಲುವಾಗಿ ಅಮೃತಮಹೋತ್ಸವಕ್ಕೂ ಪ್ಲ್ಯಾನ್ ಮಾಡಿದ್ದರು. ಅಷ್ಟರಲ್ಲೇ ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹನ ಸ್ಮಾರಕವನ್ನು ನೆಲಸಮ ಮಾಡಲಾಗಿತ್ತು. ಇದು ಅಭಿಮಾನಿಗಳನ್ನು ಕೆರಳಿಸಿ, ಪ್ರತಿಭಟನೆ, ಕೋರ್ಟ್ ಅಂತ ಬ್ಯುಸಿಯಾದರು.
ಈ ಮಧ್ಯೆ ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆ ಸೇರಿದ್ದು ಎಂದು ಸರ್ಕಾರ ಘೋಷಿಸಿತು. ಸದ್ಯ ಅಭಿಮಾನ್ ಸ್ಟುಡಿಯೋ ವಿವಾದ ಕೋರ್ಟ್‌ನಲ್ಲಿದೆ. ಆದರೂ, ಹುಟ್ಟುಹಬ್ಬದ ದಿನ ಅಭಿಮಾನ್ ಸ್ಟುಡಿಯೋದಲ್ಲಿಯೇ ಬರ್ತ್‌ಡೇ ಸೆಲೆಬ್ರೆಷನ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದರು. ಆದರೆ, ಕೋರ್ಟ್ ಈ ಸಂಭ್ರಮಕ್ಕೆ ತಡೆಯಾಜ್ಞೆ ನೀಡಿದೆ. ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಅಭಿಮಾನ್ ಸ್ಟುಡಿಯೋ ಒಳಗೆ ಕಾಲಿಡಂತೆ ಅಭಿಮಾನಿಗಳಿಗೆ ಸೂಚನೆ ನೀಡಿದೆ.

2009ರಿಂದ ಇದೇ ಮೊದಲ ಬಾರಿಗೆ ವಿಷ್ಣುವರ್ಧನ್ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಒಳಗೆ ಕಾಲಿಡುತ್ತಿಲ್ಲ. ಅಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಇದು ಅಭಿಮಾನಿಗಳಿ ನೋವುಂಟು ಮಾಡಿದೆ. ಹೀಗಾಗಿ ಭಾವನಾತ್ಮಕವಾಗಿ ಅಭಿಮಾನ್ ಸ್ಟುಡಿಯೋದಿಂದ 100 ಮೀಟರ್ ಅಂತರದಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಮುಂದೆ ಓದಿ
ಇದೇ ಮೊದಲ ಬಾರಿಗೆ ಅಭಿಮಾನ್ ಸ್ಟುಡಿಯೋಗೆ ಎಂಟ್ರಿ ಇಲ್ಲ
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುದಾದ ಬರ್ತ್‌ಡೇ ಆಚರಣೆ ಇಲ್ಲ
100 ಮೀಟರ್ ಅಂತರದಲ್ಲಿ ಭಾವನಾತ್ಮಕ ಬರ್ತ್‌ಡೇ ವ್ಯವಸ್ಥೆ
ವಿಷ್ಣುದಾದ 75ನೇ ಹುಟ್ಟುಹಬ್ಬ ಎಲ್ಲಿ? ಹೇಗೆ ನಡೆಯುತ್ತೆ?
ಹೌದು, ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ನಡೆದ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ಆಗಬೇಕು. ಅಲ್ಲಿಯೇ ಎಲ್ಲಾ ಸಂಭ್ರಮಗಳು ನಡೆಯಬೇಕು ಅನ್ನೋದ ಅಭಿಮಾನಿಗಳ ಹಲವು ದಿನಗಳ ಬೇಡಿಕೆ. ಆದರೆ, ಇದನ್ನು ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬ ಒಪ್ಪಲಿಲ್ಲ ಅನ್ನೋದು ಅಷ್ಟೇ ಗೊತ್ತೇ ಇದೆ. ಹಲವು ವರ್ಷಗಳಿಂದ ಈ ಹೋರಾಟ ನಡೆಯುತ್ತಲೇ ಇತ್ತು. ಈಗ ಕೋರ್ಟ್ ಆದೇಶದಂತೆ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಲಾಗಿದೆ. ಹಾಗೇ ವಿವಾಧಿತ ಸ್ಥಳ ಅಭಿಮಾನ್ ಸ್ಟುಡಿಯೋಗೂ ಕಾಲಿಡುವಂತಿಲ್ಲ. ಇದರಿಂದ ರೊಚ್ಚಿಗೆದ್ದು ಅಲ್ಲಿಯೇ 100 ಮೀಟರ್ ಅಂತರದಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ.
2 ಎಕರೆ ಜಾಗದಲ್ಲಿ ವಿಷ್ಣುದಾದ ಬರ್ತ್‌ಡೇ
ಅಭಿಮಾನ್ ಸ್ಟುಡಿಯೋ ಕಾಲಿಡುವುದಕ್ಕೆ ನ್ಯಾಯಾಲಯದಿಂದ ಅನುಮತಿ ಇಲ್ಲ. ಹೀಗಾಗಿ ಪಕ್ಕದಲ್ಲಿಯೇ ಅಶೋಕ್ ಖೇಣಿ ಆಪ್ತರಿಂದ ಒಂದು ದಿನದ ಮಟ್ಟಿಗೆ 2 ಎಕರೆ ಜಮೀನು ಬಾಡಿಗೆ ಪಡೆದು ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ವೀರಕಪುತ್ರ ಶ್ರೀನಿವಾಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಏನೇನು ನಡೆಯುತ್ತೆ? ಬರ್ತ್‌ಡೇ ಸಂಭ್ರಮ ಹೇಗಿರುತ್ತೆ? ಅನ್ನೋದನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಶೇರ್ ಮಾಡಿದ್ದಾರೆ.

"2009ರಿಂದ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ವಿ. ಈ ಸಲ ಅದು ಕೋರ್ಟ್‌ನಲ್ಲಿ ಕೇಸ್ ಇರುವುದರಿಂದ ಅಲ್ಲಿ ಆಚರಣೆ ಮಾಡದೆ ಇರುವಂತೆ ತೀರ್ಪು ಕೊಟ್ಟಿದೆ. ಇದರಿಂದ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಇದೆಲ್ಲವೂ ಗೊತ್ತಿಲ್ಲದೆ ಅಮಾಯಕರಾಗಿ ಬಂದು ಬಿಡುತ್ತಾರೆ. ಇವರು ನಿರಾಶರಾಗಿ ವಾಪಾಸ್ ಹೋಗದೇ ಇರಲಿ ಎಂದು ಅಲ್ಲೇ ಪಕ್ಕದಲ್ಲಿ 2 ಎಕರೆ ಜಾಗ ತೆಗೆದುಕೊಂಡು ಹುಟ್ಟುಹಬ್ಬಕ್ಕೆ ವ್ಯವಸ್ಥೆ ಮಾಡಿದ್ದೇವೆ. ರಾಜಕೀಯ ಮುಖಂಡರು ಹಾಗೂ ಅಶೋಖ್ ಖೇಣಿಯವರ ಒಡನಾಡಿ ರುದ್ರೇಶ್ ಎಂಬುವವರಿಂದ ಅನುಮತಿಯನ್ನು ಪಡೆದು ಅಲ್ಲಿ ಮಂಟಪ ಕಟ್ಟಿ, ಅಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿಯಿಟ್ಟು, ಅಲ್ಲಿಗೆ ಬಂದವರ ಅಭಿಮಾನಿಗಳಿಗೆ ಅನ್ನದಾನ, ರಕ್ತದಾನ, ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡುತ್ತಿದ್ದೇವೆ." ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಕಾನೂನು ಹೋರಾಟ ಮುಂದುವರೆಯುತ್ತೆ
ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡುವ ವಿಚಾರ ಕೋರ್ಟ್‌ನಲ್ಲಿದ್ದು, ಹೋರಾ ಮುಂದುವರೆಸುವುದಾಗಿ ಹೇಳಿದ್ದಾರೆ. "ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅಲ್ಲಿ ನಿರಂತರವಾಗಿ ಕಾರ್ಯಕ್ರಮ ನಡೆಯುತ್ತೆ. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರ ಈ ಸಮಸ್ಯೆಯನ್ನು ಹೇಗೆ ಬಗೆ ಹರಿಸುತ್ತೆ ಎಂದು ಕಾದು ಕೂತಿದ್ದೇವೆ. ಹಾಗೇ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ." ಎಂದು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.


Click it and Unblock the Notifications











