'ಗಣಪ', 'ಕರಿಯ 2' ಸಿನಿಮಾಗಳ ನಾಯಕ ನಟ ಸಂತೋಷ್ ಬಾಲರಾಜ್ ನಿಧನ: ಜಾಂಡೀಸ್‌ನಿಂದ ಕೋಮಾಗೆ ಜಾರಿದ್ದ ನಟ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ದಿವಂಗತ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳಿಂದ ಜಾಂಡೀಸ್‌ನಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಾಂಡೀಸ್‌ನಿಂದ ಬಳಲುತ್ತಿದ್ದ ನಟನ ಸ್ಥಿತಿ ಗಂಭೀರವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಸಂತೋಷ್ ಬಾಲರಾಜ್ ಸ್ಯಾಂಡಲ್‌ವುಡ್‌ನ ಚಿರಪರಿಚಿತ ನಟ. 'ಕೆಂಪ', 'ಜನ್ಮ', 'ಕರಿಯ 2', 'ಗಣಪ'ದಂತಹ ಸಿನಿಮಾಗಳಲ್ಲಿ ನಟಿಸಿದ್ದರು. 38 ವರ್ಷದ ನಟ ಕಳೆದ ಕೆಲವು ದಿನಗಳಿಂದ ಜಾಂಡೀಸ್‌ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಪರಿಸ್ಥಿತಿ ಕೈ ಮೀರಿದ್ದರಿಂದ ಅವರನ್ನು ಐಸಿಯುನಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಮೂಲಗಳ ಪ್ರಕಾರ ಕಳೆದ ಎರಡು ದಿನಗಳಿಂದ ಅವರು ಕೃತಕ ಉಸಿರಾಟ ವ್ಯವಸ್ಥೆ ಮಾಡಿ ವೈದ್ಯರು ಟ್ರೀಟ್ಮೆಂಟ್ ಕೊಡುತ್ತಿದ್ದರು.
ಸಂತೋಷ್ ಬಾಲರಾಜ್ ಅವರು ಈ ಹಿಂದೆ ಕೂಡ ಜಾಂಡೀಸ್‌ನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಆ ವೇಳೆ ಅವರು ಜಾಂಡೀಸ್‌ನಿಂದ ರಿಕವರಿ ಆಗಿದ್ದರು. ಆದರೆ, ಈ ಬಾರಿ ಅವರ ಪರಿಸ್ಥಿತಿ ಹದಗೆಟ್ಟಿತ್ತು. ಯಕೃತ್ತು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಟ ಕೋಮಾಗೂ ಜಾರಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾರಂಗದಲ್ಲಿ ದೊಡ್ಡ ಕನಸು ಕಂಡಿದ್ದ ನಟ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕೆಲವು ವರ್ಷಗಳ ಹಿಂದಷ್ಟೇ ಸಂತೋಷ್ ಬಾಲರಾಜ್ ಅವರ ತಂದೆ, ನಿರ್ಮಾಪಕ ಆನೇಕಲ್ ಬಾಲರಾಜ್ ಅಪಘಾತದಲ್ಲಿ ನಿಧನರಾಗಿದ್ದರು. ದರ್ಶನ್ ನಟಿಸಿದ 'ಕರಿಯ' ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಪುತ್ರ ಸಂತೋಷ್ ಅವರನ್ನು ಹೀರೋ ಮಾಡುವುದಕ್ಕೆ ಶತಪ್ರಯತ್ನ ಪಟ್ಟಿದ್ದರು. ತಂದೆಯ ಆಸೆಯಂತೆಯೇ ಸಂತೋಷ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಶ್ರಮವಹಿಸಿದ್ದರು.
ಸಂತೋಷ್ ಬಾಲರಾಜ್ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಅವರು ಮದುವೆ ಆಗಿರಲಿಲ್ಲ. ತಾಯಿಯೊಂದಿಗೆ ವಾಸವಿದ್ದ ಸಂತೋಷ್ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಸಂತೋಷ್ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ 'ಸತ್ಯಂ' ಎನ್ನುವ ಸಿನಿಮಾದಲ್ಲಿ ಸಂತೋಷ್ ಬಾಲರಾಜ್ ನಟಿಸಿದ್ದರು. ಆ ಸಿನಿಮಾ ಅವರ ವೃತ್ತಿ ಬದುಕಿನ ದೊಡ್ಡ ಸಿನಿಮಾ ಆಗಿತ್ತು.
ತಂದೆ ಆನೇಕಲ್ ಬಾಲರಾಜ್ ನಿರ್ಮಿಸಿದ್ದ 'ಕೆಂಪ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ 'ಒಲವಿನ ಉಡುಗೊರೆ', 'ಜನ್ಮ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆ ಸಿನಿಮಾಗಳು ಗೆಲ್ಲಲಿಲ್ಲ. ಆನಂತರ 'ಗಣಪ' ಹಾಗೂ 'ಕರಿಯ 2' ಸಿನಿಮಾಗಳು ಸಂತೋಷ್ ಬಾಲರಾಜ್‌ಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿದ್ದವು. ಇನ್ನು ಅವರು ನಟಿಸಿದ ಎರಡು ಸಿನಿಮಾಗಳು 'ಬರ್ಕ್ಲಿ' ಹಾಗೂ 'ಸತ್ಯಂ' ಸಿನಿಮಾಗಳು ಬಿಡುಗಡೆ ಆಗಬೇಕಿವೆ.


Click it and Unblock the Notifications











