Krishnam Pranaya Sakhi Box Office Day 7: 7ನೇ ದಿನ ಗಣೇಶ್ ಸಿನಿಮಾ ಗೆಲ್ತಾ? 'ಭೀಮ' ಕಲೆಕ್ಷನ್ ಹಿಂದಿಕ್ಕುತ್ತಾ?
'ಕೃಷ್ಣಂ ಪ್ರಣಯ ಸಖಿ' ಗೋಲ್ಡನ್ ಸ್ಟಾರ್ ಗಣೇಶ್‌ಗೆ ಭರ್ಜರಿ ಸಕ್ಸಸ್ ಕೊಟ್ಟಿದೆ. ಇಂತಹದ್ದೊಂದು ಸಕ್ಸಸ್‌ಗಾಗಿ ಗಣೇಶ್ ಎದುರು ನೋಡುತ್ತಿದ್ದರು. ಕೇವಲ ಹಾಡುಗಳನ್ನು ಮುಂದಿಟ್ಟುಕೊಂಡು ಸಿನಿಮಾವನ್ನು ಪ್ರಚಾರ ಮಾಡಲಾಗಿತ್ತು. ಕೊನೆಗೂ ಆ ತಂತ್ರ ಚಿತ್ರತಂಡಕ್ಕೆ ವರ್ಕ್‌ಔಟ್ ಆಗಿದೆ. ಇದು ಕೌಟುಂಬಿಕ ಸಿನಿಮಾ ಆಗಿದ್ದರಿಂದ ಜನರು ಇಷ್ಟಪಟ್ಟು ಸಿನಿಮಾ ನೋಡುತ್ತಿದ್ದಾರೆ.
ಗಣೇಶ್ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಷು ಕೊಟ್ಟಿದೆ. ಎರಡು ವಾರ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಹೀಗಾಗಿ ಸೋಲಿನ ಸುಳಿ ಸಿಲುಕಿ ಒದ್ದಾಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಆಗಿದೆ. ಆದರೆ, 'ಕೃಷ್ಣಂ ಪ್ರಣಯ ಸಖಿ' ವೀಕ್‌ಡೇಸ್‌ನಲ್ಲಿ ಕೊಂಚ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ.

ಐದು, ಆರು ಹಾಗೂ ಏಳನೇ ದಿನ ನಿರಂತರವಾಗಿ ಬಾಕ್ಸಾಫೀಸ್ ಕಲೆಕ್ಷನ್ ಇಳಿಮುಖವಾಗಿದೆ. ಆದರೆ, ಎರಡನೇ ವೀಕೆಂಡ್‌ನಲ್ಲಿ ಮತ್ತೆ ಸಿನಿಮಾ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಮಾಡಬಹುದಾದ 'ಪೌಡರ್' ಸಿನಿಮಾ ಬಿಡುಗಡೆಯಾಗುವುದು ಬಿಟ್ಟರೆ, ದೊಡ್ಡ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿಲ್ಲ. ಹೀಗಾಗಿ 'ಕೃಷ್ಣಂ ಪ್ರಣಯ ಸಖಿ'ಗೆ ಹೆಚ್ಚು ಲಾಭ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಹಾಗಿದ್ದರೆ, ಏಳನೇ ದಿನದ ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ.
'ಕೃಷ್ಣಂ ಪ್ರಯಣ ಸಖಿ' 7ನೇ ದಿನದ ಗಳಿಕೆ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಯಣ ಸಖಿ' 7ನೇ ದಿನದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇತ್ತು. ವಾರ ಆರಂಭ ಆಗುವ ಮೊದಲ ಮೂರ್ನಾಲ್ಕು ದಿನ ಕಲೆಕ್ಷನ್ ಡ್ರಾಪ್ ಆಗುತ್ತೆ. ಆ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದ ಕಲೆಕ್ಷನ್ ಹೇಗಾಗುತ್ತೆ ಅನ್ನೋದನ್ನು ವಿತರಕರ ವಲಯ ಎದುರು ನೋಡುತ್ತಲೇ ಇತ್ತು. ಅದರಂತೆ ಲಕ್ಷಗಳಲ್ಲಿ ಕಲೆಕ್ಷನ್ ಆಗಿದ್ದರೂ, ಉತ್ತಮ ಗಳಿಕೆ ಎನ್ನಲಾಗಿದೆ. ಅಂದ್ಹಾಗೆ ಏಳನೇ ದಿನ 65 ಲಕ್ಷ ರುಪಾಯಿಂದ 70 ಲಕ್ಷ ರೂಪಾಯಿ ಆಗಿರಬಹುದೆಂದು ವಿತರಕರ ವಲಯದಲ್ಲಿ ಚರ್ಚೆ ಆಗುತ್ತಿದೆ.

ಕಲೆಕ್ಷನ್ 10 ಕೋಟಿ ರೂಪಾಯಿ ದಾಟಿತೇ?
'ಕೃಷ್ಣಂ ಪ್ರಯಣ ಸಖಿ' ಸಿನಿಮಾದ ಕಲೆಕ್ಷನ್ ಒಂದು ವಾರದೊಳಗೆ 10 ಕೋಟಿ ರೂಪಾಯಿ ದಾಟಬಹುದಾ? ಅಂತ ಕುತೂಹಲದಿಂದ ಟ್ರೇಡ್ ಎಕ್ಸ್‌ಪರ್ಟ್ಸ್ ನೋಡುತ್ತಲೇ ಇದ್ದರು. ಅದರಂತೆಯೇ ವರ್ಲ್ಡ್‌ವೈಡ್ ಕಲೆಕ್ಷನ್ 10 ಕೋಟಿ ರೂಪಾಯಿ ದಾಟಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಇನ್ನು sacnilk ಪ್ರಕಾರ, 'ಕೃಷ್ಣಂ ಪ್ರಣಯ ಸಖಿ' ಕಲೆಕ್ಷನ್ ವಿಶ್ವದಾದ್ಯಂತ 9.47 ಕೋಟಿ ರೂಪಾಯಿ ಆಗಿದೆ ಎಂದು ವರದಿ ಮಾಡಿದೆ.
ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣು
ಗೋಲ್ಡನ್ ಸ್ಟಾರ್ ಗಣೇಶ್‌ಗೆ ಮತ್ತೆ 'ಕೃಷ್ಣಂ ಪ್ರಣಯ ಸಖಿ' ಮೂಲಕ ಗೋಲ್ಡನ್ ಡೇಸ್ ಆರಂಭ ಆಗಿರುವುದಂತೂ ಸತ್ಯ. ಆದರೆ, ಕಲೆಕ್ಷನ್ ಇಷ್ಟೇ ಸಾಲುವುದಿಲ್ಲ. ಕಮ್ಮಿ ಅಂದರೂ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಬೇಕು. ಸದ್ಯಕ್ಕೆ ರಜಾ ದಿನಗಳು ಕೂಡ ಇಲ್ಲ. ವೀಕೆಂಡ್‌ನಲ್ಲೇ ಸಿನಿಮಾದ ಕಲೆಕ್ಷನ್ ಆಗಬೇಕಿದೆ. ಹೀಗಾಗಿ 25 ಕೋಟಿ ರೂಪಾಯಿ ಕ್ಲಬ್ ಸೇರುತ್ತಾ? ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.
'ಭೀಮ' ಕಲೆಕ್ಷನ್ ಮೀರಿಸುತ್ತಾ?
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕೇವಲ 13 ದಿನಗಳಲ್ಲಿ 23.66 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಇನ್ನು ಆರು ದಿನಗಳಲ್ಲಿ 15 ಕೋಟಿ ಕಲೆಕ್ಷನ್ ಮಾಡಿದರೆ, 2024ರಲ್ಲಿ ಅಲ್ಲಿವರೆಗೂ ತೆರೆಕಂಡ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಕೆ ಕಂಡು ಸಿನಿಮಾ ಆಗಬಹುದು.


Click it and Unblock the Notifications











