"ಹಂಸಲೇಖ ಹೇಳ್ತಿದ್ರು.. ಇಲ್ಲಿ ನಮ್ ಮೀಸೆನಾ ನಾವೇ ತಿರುಗಿಸಿಕೊಳ್ಳಬೇಕು": ನಾದಬ್ರಹ್ಮನ ಡೈಲಾಗ್ ನೆನಪಿಸಿದ್ದೇಕೆ ಬಿ ಸಿ ಪಾಟೀಲ್?
ದೀಪಾವಳಿ ಹಬ್ಬಕ್ಕೆ ಕನ್ನಡದಿಂದ 'ಗರಡಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಬಿ ಸಿ ಪಾಟೀಲ್ ಈ ಸಿನಿಮಾ ನಿರ್ಮಾಣ ಮಾಡಿದ್ರೆ, ಅತ್ತ ಯೋಗರಾಜ್ ಭಟ್ ಮಾಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಯಶಸ್ ಸೂರ್ಯ ಹೀರೊ ಆಗಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
'ಗರಡಿ' ಸಿನಿಮಾ ಬೆಳಕಿನ ಹಬ್ಬಕ್ಕೆ ಥಿಯೇಟರ್‌ನಲ್ಲಿ ಜೋರಾಗಿಯೇ ಸದ್ದು ಮಾಡಬಹುದು ಅನ್ನೋ ನಿರೀಕ್ಷೆಯಿದೆ. ಬಹಳ ದಿನಗಳ ಬಳಿಕ ಯೋಗರಾಜ್ ಭಟ್ ಮಾಸ್ ಸಿನಿಮಾಗೆ ಕೈ ಹಾಕಿದ್ದಾರೆ. ಹೀಗಾಗಿ ಸಿನಿಮಾ ತಂಡ ಕೂಡ ಜೋರಾಗಿಯೇ ಪ್ರಚಾರಕ್ಕೆ ಇಳಿದಿದೆ. ಎಲ್ಲಾ ಕಡೆ ಸಂದರ್ಶನಗಳನ್ನು ನೀಡುತ್ತಿದೆ.

'ಗರಡಿ' ಸಿನಿಮಾದ ಪ್ರಚಾರದಲ್ಲಿ ಬಿಸಿ ಪಾಟೀಲ್ ಕೂಡ ಭಾಗಿಯಾಗಿದ್ದಾರೆ. ಇತ್ತೀಚೆಗೆ ಅನುಶ್ರೀ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ ಹಂಸಲೇಖ ಕೌರವ ಸಮಯದಲ್ಲಿ ಹೇಳಿದ ಒಂದು ಮಾತನ್ನು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ನಾದಬ್ರಹ್ಮ ಹೇಳಿದ ಆ ಮಾತೇನು? ಬಿ ಸಿ ಪಾಟೀಲ್ ಆ ಮಾತನ್ನು ಈಗ ನೆನಪಿಸಿಕೊಂಡಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ...
ಬಿ ಸಿ ಪಾಟೀಲ್ 'ಗರಡಿ' ಸಿನಿಮಾದಲ್ಲಿ ಪೈಲ್ವಾನ್‌ನ ಗುರುವಾಗಿ ಕಾಣಿಸಿಕೊಂಡಿದ್ದಾರೆ. ಅದೇ ಗತ್ತು, ಗಾಂಭೀರ್ಯದಿಂದ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಬಿ ಸಿ ಪಾಟೀಲ್ ಅದೆಷ್ಟೇ ಸಿನಿಮಾ ಮಾಡಿದರೂ, ಅವರಿಗೆ ಅಂಟಿಕೊಂಡಿರೋ 'ಕೌರವ' ಟೈಟಲ್ ಮಾತ್ರ ಹೋಗೋದಿಲ್ಲ. ಅದೇ ಅದೇ ಗತ್ತಿನಲ್ಲೇ ಈ ಸಿನಿಮಾ ಪೈಲ್ವಾನ್ ಅಲ್ಲ.. ಪೈಲ್ವಾನ್‌ಗೆ ಗುರುವಿನ ಪಾತ್ರ ಮಾಡಿದ್ದೇನೆಂದು ಹೇಳಿದ್ದಾರೆ. "ನಾನು ಪೈಲ್ವಾನ್ ಅಲ್ಲ.. ಪೈಲ್ವಾನ್ ಆಗಿಬಿಟ್ಟಿದ್ದೀನಿ. ನಾನು ಕೌರವದಲ್ಲಿಯೇ ಪೈಲ್ವಾನ್. ಈಗ ಪೈಲ್ವಾನ್‌ಗೆ ಗುರು ನಾನು." ಎಂದಿದ್ದಾರೆ
ಇದೇ ಸಂದರ್ಭದಲ್ಲಿ ಕೌರವಗಾಗಿ ಮೀಸೆ ಬಿಟ್ಟಾಗ ಹಂಸಲೇಖ ಹೇಳಿದ ಮಾತನ್ನು ಬಿ ಸಿ ಪಾಟೀಲ್ ನೆನಪಿಸಿಕೊಂಡಿದ್ದಾರೆ. "ನಾನು ಮೀಸೆ ಬಿಟ್ಟದಾಗ, ಕೌರವ ಸಿನಿಮಾ ಮಾಡುವಾಗ ಹಂಸಲೇಖ ಹೇಳುತ್ತಿದ್ದರು. ಈ ಇಂಡಸ್ಟ್ರಿಯಲ್ಲಿ ಯಾರೂ ನಮ್ಮ ಮೀಸೆಯನ್ನು ತಿರುಗಿಸಲ್ಲ. ನಮ್ಮ ಮೀಸೆಯನ್ನು ನಾವೇ ತಿರುಗಿಸಿಕೊಳ್ಳಬೇಕು ಅಂತ ಹೇಳ್ತಿದ್ರು. ಅವತ್ತೇ ಮೀಸೆ ತಿರುಗಿಸಿ ಆಗಿದೆ." ಎಂದು ಹೇಳಿದ್ದಾರೆ. ಅಸಲಿಗೆ ಇದು ಹಾಗೇ ಬಂದಿದ್ದಾ? ಇಲ್ಲ ಎದುರಾಳಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾ? ಅನ್ನೋ ಪ್ರಶ್ನೆಯಂತೂ ಮೂಡಿದೆ.

ಹಾಗೇ 'ಗರಡಿ' ಸಿನಿಮಾದಲ್ಲಿ ನಟಿಸೋ ಆಲೋಚನೆ ಬಿ ಸಿ ಪಾಟೀಲ್‌ಗೆ ಇರಲಿಲ್ಲ. ಈ ಪಾತ್ರಕ್ಕೆ ಅನುಪಮ್ ಖೇರ್ ಅಥವಾ ಪ್ರಕಾಶ್ ರೈ ಹಾಕೋಬೇಕು ಅಂತಿದ್ರಂತೆ. ಆದರೆ, ಭಟ್‌ರಿಂದ ಲೆಕ್ಕಾಚಾರವೆಲ್ಲಾ ತಲೆ ಕೆಳಗಾಗಿತ್ತು.
"ಈ ಸಿನಿಮಾದಲ್ಲಿ ನಾನು ಸಿನಿಮಾ ಮಾಡುವ ಆಲೋಚನೆ ಕೂಡ ಇರಲಿಲ್ಲ. ನಾನು ಅನುಪಮ್ ಖೇರ್ ಅಥವಾ ಪ್ರಕಾಶ್ ರೈ ಹಾಕಬೇಕು ಅಂತ ಇದ್ದೆವು. ಅವರ ಡೇಟ್ ಅದು ಇದೂ ಅಂತ ಇದ್ದರು. ಆ ಮೇಲೆ ಭಟ್ಟರು ಹೇಳಿದ್ರು ನೀವೇ ಮಾಡಿಬಿಡಿ ಅಂದಿದ್ರು. ನನಗೆ ಈಗ ಎಲ್ಲಿ ಆಗುತ್ತೆ ಅಷ್ಟೊಂದು ಟೈಮ್ ಇಲ್ಲ ಅಂದಿದ್ದೆ. ಇಲ್ಲ ನಾಲ್ಕೈದು ದಿನ ಆಗೀಗ ಬಂದು ಹೋಗಿಬಿಡಿ ಆಗಿಬಿಡುತ್ತೆ ಎಂದಿದ್ದರು. ಭಟ್ಟರು ಹೇಳಿದ್ರು ಅಂತ ಬಂದಿ ಸಿಕ್ಕಾಕಿಕೊಂಡೆ." ಎನ್ನುತ್ತಾರೆ ಬಿಸಿ ಪಾಟೀಲ್.
ಇದೇ ಸಂದರ್ಶನದಲ್ಲಿ ಮೀಸೆ ಬಗ್ಗೆ ಹೇಳೋದನ್ನು ಮರೆತಿಲ್ಲ. ಇಂಡಸ್ಟ್ರೀಗೆ ಮೀಸೆ ಪರಿಚಯ ಮಾಡಿದ್ದೇ ನಾನು ಅಂತ ಗರ್ವದಿಂದ ಹೇಳಿಕೊಂಡಿದ್ದಾರೆ. "ಮೀಸೆ ಇಂಟ್ರುಡ್ಯೂಸ್ ಮಾಡಿದ್ದೇ ನಾನು.. ಮೀಸೆ ಇತ್ತೂ ಎಲ್ಲರಿಗೂ.. ಆದರೆ, ಗಿರಿಜಾ ಮೀಸೆ ಇಂಟ್ರುಡ್ಯೂಸ್ ಮಾಡಿದ್ದೆ. ನಮ್ಮ ಡೈರೆಕ್ಟರ್ ಎಸ್ ಮಹೇಂದರ್ ಗಿರಿಜಾ ಮೀಸೆ ಅಂತ ಹೇಳಿದ್ರು." ಎಂದು ಕೌರವ ಮೀಸೆ ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











