Ghost: 2ನೇ ವಾರಕ್ಕೆ ಕಾಲಿಟ್ಟ 'ಘೋಸ್ಟ್'.. ಮೊದಲನೇ ವಾರದ ಕಲೆಕ್ಷನ್ ಎಷ್ಟು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ. ಮೊದಲೆರಡು ದಿನ ಕಲೆಕ್ಷನ್ ಕೊಂಚ ಮಟ್ಟಿಗೆ ಡಲ್ ಹೊಡಯುತ್ತಿದ್ದರೂ, ಮೌತ್ ಪಬ್ಲಿಸಿಟಿ ಸಿನಿಮಾಗೆ ಉತ್ತಮ ಕಲೆಕ್ಷನ್ ತಂದು ಕೊಟ್ಟಿದೆ. ಮೊದಲ ವಾರ ಯಶಸ್ವಿ ಪ್ರದರ್ಶನ ಕಂಡಿದ್ದು, 2ನೇ ವಾರದತ್ತ ಮುನ್ನುಗ್ಗುತ್ತಿದೆ.
ಶಿವಣ್ಣ-ಶ್ರೀನಿ ಕಾಂಬಿನೇಷನ್‌ನ ಮೊದಲ ಸಿನಿಮಾ 'ಘೋಸ್ಟ್' ಕನ್ನಡ ಚಿತ್ರರಂಗಕ್ಕೆ ಹೊಸ ಬೂಸ್ಟ್ ಕೊಟ್ಟಿದೆ. ಇತ್ತೀಚೆಗಷ್ಟೇ ಸಿನಿಮಾ ತಂಡ ಸಕ್ಸಸ್ ಮೀಟ್ ಮಾಡಿ ಗೆದ್ದಿರುವ ಖುಷಿಯನ್ನು ಹಂಚಿಕೊಂಡಿದೆ. ನಿರ್ಮಾಪಕ ಸಂದೇಶ್ ಸಿನಿಮಾದ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳ ಬಗ್ಗೆ ಶಿವಣ್ಣ ಅಸಮಧಾನ ಹೊರ ಹಾಕಿದ್ದರೂ, ಸಿಕ್ಕ ಶೋಗಳಲ್ಲಿಯೇ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ 'ಘೋಸ್ಟ್' ಯಶಸ್ವಿಯಾಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಕರ್ನಾಟಕದ ವಿತರಕರು ಹಾಗೂ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, ಮೊದಲ ವಾರ ಗಳಿಸಿದ್ದು ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಲಿಯೋ' ಮುಂದೆ ಮಂಕಾಗಿದ್ದ 'ಘೋಸ್ಟ್'
ಅಕ್ಟೋಬರ್ 19ರಂದು ಶಿವಣ್ಣನ 'ಘೋಸ್ಟ್' ರಿಲೀಸ್ ಆಗಿತ್ತು. ಅದೇ ದಿನ ತಮಿಳು ಸಿನಿಮಾ 'ಲಿಯೋ' ಕೂಡ ಬಿಡುಗಡೆ ಆಗಿತ್ತು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋ ನಂಬಿಕೆ ಮೊದಲ ದಿನ ಹುಸಿಯಾಗಿದ್ದು ನಿಜ. 'ಲಿಯೋ' ಕಲೆಕ್ಷನ್ ಮುಂದೆ 'ಘೋಸ್ಟ್' ಕಲೆಕ್ಷನ್ ಮಂಕಾಗಿತ್ತು. ಆದರೆ, ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೆ 'ಲಿಯೋ'ಗೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. 'ಘೋಸ್ಟ್'ಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿತ್ತು. ಆದರೂ ಮೊದಲೆರಡು ದಿನ ವರ್ಕಿಂಗ್ ಡೇ ಆಗಿದ್ದರಿಂದ ಕೊಂಚ ಕಲೆಕ್ಷನ್ ಡ್ರಾಪ್ ಆಗಿತ್ತು.
3ನೇ ದಿನದಿಂದ 'ಘೋಸ್ಟ್' ಅಬ್ಬರ ಶುರು
ಮೂರು ಶೇಡ್‌ಗಳಲ್ಲಿ ಶಿವಣ್ಣನನ್ನು ನೋಡುವುದಕ್ಕೆ ಸಿನಿಪ್ರಿಯರು ಥಿಯೇಟರ್‌ಗೆ ನುಗ್ಗಿದ್ದರು. ಮೂರನೇ ದಿನದಿಂದ 6ನೇ ದಿನದ ವರೆಗೂ ರಜೆ ಇದ್ದಿದ್ದರಿಂದ ಘೋಸ್ಟ್ ಆ ಲಾಭವನ್ನು ಪಡೆದುಕೊಂಡಿದೆ. ಕರ್ನಾಟಕದ ವಿತರಕರ ಪ್ರಕಾರ, 'ಘೋಸ್ಟ್' ಮೊದಲ ವಾರದಲ್ಲಿ 7 ರಿಂದ 8 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜು ಲೆಕ್ಕ ಹಾಕಿದ್ದಾರೆ. ಅದೇ ಇನ್ನೊಂದು ವರ್ಗ 'ಘೋಸ್ಟ್' ಕಲೆಕ್ಷನ್ 10 ಕೋಟಿಯನ್ನು ಮೀರಿಸಿದೆ ಎಂದೂ ವರದಿಯಾಗಿದೆ.

ಮೊದಲ ವಾರ ಘೋಸ್ಟ್ ಕಲೆಕ್ಷನ್ ಎಷ್ಟು?
'ಘೋಸ್ಟ್' ಮೊದಲ ವಾರದ ಕಲೆಕ್ಷನ್ ಬಗ್ಗೆ ಸಿನಿಮಾ ತಂಡ ಖುಷಿಯಾಗಿದೆ. ಆದರೆ, ಚಿತ್ರತಂಡ ಇನ್ನೂ ಅಧಿಕೃತವಾಗಿ ಕಲೆಕ್ಷನ್ ರಿಪೋರ್ಟ್ ಅನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಸಿನಿಮಾ ಕಲೆಕ್ಷನ್ ರಿಪೋರ್ಟ್ ಕೊಡುವ sacnilk 'ಘೋಸ್ಟ್' ಕಲೆಕ್ಷನ್ 10 ಕೋಟಿ ರೂಪಾಯಿ ದಾಟಿದೆ ಎಂದು ವರದಿ ಮಾಡಿದೆ. ಮೊದಲ ದಿನದಿಂದ ಸ್ಟಡಿಯಾಗಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂದು ಲೆಕ್ಕ ತೋರಿಸಿದ್ದು, 10.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದಿದೆ. ಈ ಲೆಕ್ಕಗಳು ಏನೇ ಇದ್ದರೂ, ಚಿತ್ರತಂಡವೇ ಅಧಿಕೃತ ಮಾಹಿತಿ ರಿವೀಲ್ ಮಾಡಬೇಕಿದೆ.
8ನೇ ದಿನ ಹೇಗಿದೆ ರೆಸ್ಪಾನ್ಸ್?
'ಘೋಸ್ಟ್' ಸಿನಿಮಾ ರಿಲೀಸ್ ಆಗಿ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅಷ್ಟರಲ್ಲೇ ಮತ್ತೊಂದು ವೀಕೆಂಡ್ ಬಂದಿದೆ. ಹೀಗಾಗಿ ಈ ವೀಕೆಂಡ್‌ನಲ್ಲೂ ಭಾರೀ ಕಲೆಕ್ಷನ್ ನಿರೀಕ್ಷೆ ಮಾಡಲಾಗಿದೆ. ಅಂದ್ಹಾಗೆ, 8ನೇ ದಿನ ಬೆಂಗಳೂರಿನಲ್ಲಿ 25% ಆಕ್ಯೂಪೆನ್ಸಿ, ಹುಬ್ಬಳ್ಳಿ 23%, ಮೈಸೂರು 20%, ಶಿವಮೊಗ್ಗ 56%, ಕುಂದಾಪುರ 20%, ತುಮಕೂರು 49% ಆಕ್ಯೂಪೆನ್ಸಿ ಸಿಕ್ಕಿದೆ. ಹೀಗಾಗಿ 8ನೇ ದಿನ 80 ಲಕ್ಷದಿಂದ 1 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎನ್ನುತ್ತಾರೆ ಟ್ರೇಡ್ ಎಕ್ಸ್‌ಪರ್ಟ್ಸ್.


Click it and Unblock the Notifications











