'ಗಿಚ್ಚಿ ಗಿಲಿ ಗಿಲಿ'ಯ ಡಬಲ್ ಮೀನಿಂಗ್ ಚಂದ್ರಪ್ರಭ ಈ ಗಾರೆ ಕೆಲಸ ಮಾಡ್ತಿರೋದ್ಯಾಕೆ? 2 ತಿಂಗಳಿಂದ ಈ ಕೆಲಸ.. ಸಂಬಳ ಎಷ್ಟು?
'ಗಿಚ್ಚಿ ಗಿಲಿ ಗಿಲಿ' ಕಾಮಿಡಿ ಶೋ ಮೂಲಕ ಸದ್ದು ಮಾಡಿದ್ದ ಹಾಸ್ಯ ನಟ ಚಂದ್ರಪ್ರಭ. ಇವರ ಕಾಮಿಡಿ ಡೈಲಾಗ್‌ಗಳನ್ನು ಇಷ್ಟ ಪಟ್ಟವರೂ ಇದ್ದಾರೆ. ಅದೇ ಮತ್ತೆ ಕೆಲವರು ಟೀಕೆ ಮಾಡಿದ್ದಾರೆ. ಆದರೆ, ಯಾವುದೇ ಕಾಮಿಡಿ ಶೋನಲ್ಲಿ ಚಂದ್ರಪ್ರಭ ಇದ್ದರೆ ಅಲ್ಲಿ ನಗುವಿಗೇನು ಕೊರತೆ ಇಲ್ಲ. ಡಬಲ್ ಮೀನಿಂಗ್ ಡೈಲಾಗ್ ಹೇಳ್ತಾರೆ ಅನ್ನೋ ಆರೋಪ ಮಾಡುತ್ತಲೇ ಆ ಶೋ ಎಂಜಾಯ್ ಮಾಡಿದವರು ಬಹಳಷ್ಟು ಮಂದಿ ಇದ್ದಾರೆ.
ಕಳೆದ 10 ವರ್ಷಗಳಿಂದ ಕಲರ್ಸ್ ಕನ್ನಡದ ಕಾಮಿಡಿ ಶೋಗಳಲ್ಲಿ ಚಂದ್ರಪ್ರಭಗೆ ಒಳ್ಳೆಯ ಅವಕಾಶಗಳು ಸಿಕ್ಕಿದ್ದವು. ಆದ್ರೀಗ ಕಳೆದ ಆರು ತಿಂಗಳಿನಿಂದ ಅವರಿಗೆ ಕಾಮಿಡಿ ಶೋಗಳು ಸಿಗುತ್ತಿಲ್ಲ. ಅವಕಾಶಗಳು ಇಲ್ಲದೆ ಅವರು ತಮ್ಮ ಹಳೇ ವೃತ್ತಿಗೆ ಮರಳಿದ್ದಾರೆ. 17 ವರ್ಷಗಳ ಹಿಂದೆ ಗಾರೆ ಕೆಲಸ ಮಾಡುತ್ತಿದ್ದ ಚಂದ್ರಪ್ರಭ ಮತ್ತೆ ಅದೇ ವೃತ್ತಿಗೆ ಮರಳಿದ್ದಾರೆ.

ಕಳೆದ ಎರಡು ತಿಂಗಳಿಂದ ಬೆಂಗಳೂರು ತೊರೆದು ಹುಟ್ಟೂರು ಸೇರಿಕೊಂಡಿದ್ದಾರೆ. ಅಲ್ಲಿ ಕಳೆದ ಎರಡು ತಿಂಗಳಿನಿಂದ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ಮೇಸ್ತ್ರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 600 ರೂಪಾಯಿ ಸಂಬಳ ಸಿಗುತ್ತಿದೆ. ಅವಕಾಶ ಸಿಗದೇ ಮತ್ತೆ ಗಾರೆ ಕೆಲಸಕ್ಕೆ ಮರಳಿದ್ದರ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಎಕ್ಸ್‌ಕ್ಲ್ಯೂಸಿವ್ ಆಗಿ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇದೇ ನನ್ನ ಒರಿಜಿನಲ್ ಕೆಲಸ
"ಮೊದಲು ಇದೇ ಕೆಲಸ ಮಾಡುತ್ತಿದ್ದೆ. ಗಾರೆ ಕೆಲಸದಿಂದಲೇ ಅಲ್ಲಿಗೆ ಹೋಗಿದ್ದೆ. ಪುನ: ಅಲ್ಲಿಂದ ಇಲ್ಲಿಗೆ ಬಂದಿದ್ದೀನಿ. ಇದೇ ನನ್ನ ಒರಿಜಿನಲ್ ಕೆಲಸ. ಈ ಕೆಲಸ ಮಾಡಿ ಸುಮಾರು 17 ವರ್ಷ ಆಗಿತ್ತು. ಏನು ಟಚ್ ಬಿಟ್ಟು ಹೋಗಿಲ್ಲ. ಇಲ್ಲೊಂದು ಕಾಂಪೌಂಡ್ ಕಟ್ಟಬೇಕಂತೆ .ಆ ಕೆಲಸ ಮಾಡುತ್ತಿದ್ದೇನೆ. ಸುಮಾರು ಎರಡು ತಿಂಗಳಿನಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿ ಕಿಟ್ಟಪ್ಪ ಅಂತ ಮೇಸ್ಟ್ರಿ ಇದ್ದಾರೆ. ಅವರೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ." ಎಂದು ಚಂದ್ರಪ್ರಭ ಹೇಳಿದ್ದಾರೆ.
ಏನು ಗಾರೆ ಕೆಲಸ ಯಾಕೆ ಅಂತ ಕೇಳ್ತಾರೆ?
"ಏನಪ್ಪ ಟಿವಿಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಗಾರೆ ಕೆಲಸ ಮಾಡುತ್ತಿದ್ದೀಯಾ ಅಂತ ಎಲ್ಲರೂ ಕೇಳ್ತಾರೆ. ನಾನು ಮೊದಲು ಈ ಕೆಲಸದಿಂದಾನೇ ಅನ್ನ ತಿನ್ನುತ್ತಿದ್ದೆ. ನಮ್ಮ ತಂದೆ ನನಗೆ ಮೊದಲು ಕಲಿಸಿಕೊಟ್ಟಿದ್ದೇ ಈ ಕೆಲಸ. ನಮ್ಮ ತಂದೆ ಜೊತೆ ಈ ಕೆಲಸ ಮಾಡುತ್ತಿದ್ದೆ. 17 ವರ್ಷದಿಂದ ಈ ಕೆಲಸ ಮಾಡಿರಲಿಲ್ಲ. ಬೆಂಗಳೂರಿಗೆ ಬಂದು ಹೆಚ್ಚು ಕಡಿಮೆ ಹತ್ತು ವರ್ಷ ಆಗಿತ್ತು. ಅದಕ್ಕಿಂತ ಮುನ್ನ ಮೈಸೂರು ರಂಗಾಯಣದಲ್ಲೆಲ್ಲ ಇದ್ದೆ." ಎನ್ನುತ್ತಾರೆ.
2 ದಿನ ಬಹಳ ಹಿಂಸೆ ಆಯ್ತು
"ಸಿಂಗಲ್ ಆಗಿದ್ದರೆ ಅದೊಂತರ. ಈಗ ಮದುವೆ ಬೇರೆ ಆಗಿದ್ದೇನೆ. ಬಾಡಿಗೆ ಎಲ್ಲಾ ಜಾಸ್ತಿ. ಅದಕ್ಕೆ ಮತ್ತೆ ಗಾರೆ ಕೆಲಸ ಮಾಡಬೇಕು ಅಂತ ಅನಿಸಿತು. ಒಳ್ಳೆಯ ಮೇಸ್ತ್ರಿ ಸಿಕ್ಕಿದ್ದಾರೆ ಕಿಟ್ಟಪ್ಪ ಅಂತ. ಅವರು ಬೈಯ್ಯೋದಿಲ್ಲ. ಕೆಲವರಾದರೆ ಬೈಯ್ಯುತ್ತಾರೆ. ಬೇಗ ಆಗಲಿ, ನೀಟ್ ಆಗಿ ಕೆಲಸ ಕಲಿಯಲಿ ಅಂತ. ಬೈಯ್ಯಲಿಲ್ಲ ಅಂದರೆ, ನೀಟ್ ಆಗಿ ಕೆಲಸ ಕಲಿಯುವುದಕ್ಕೆ ಆಗುವುದಿಲ್ಲ. ಗಾರೆ ಕೆಲಸ ಮಾಡುವುದಕ್ಕೆ ಎರಡು ದಿನ ಸ್ವಲ್ಪ ಹಿಂಸೆ ಆಯ್ತು. ಆ ಮೇಲೆ ಗ್ರಿಪ್ ಸಿಕ್ಕಿದೆ." ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಜನ ಏನಂತಾರೆ ಅಂದ್ಕೊಂಡ್ರೆ ಬದುಕು ನಡೆಯಲ್ಲ
"ಮೇಲಿಂದ ಕೆಳಗೆ ಹೋಗುತ್ತಿದ್ದೇನೆ ಅಂತ ಅಂದುಕೊಂಡರೆ, ನಾವು ಜೀವನದಲ್ಲಿ ಬದುಕುವುದಕ್ಕೆ ಆಗುವುದಿಲ್ಲ. ಕೆಟ್ಟ ಕೆಲಸ ಮಾಡುವುದಕ್ಕೆ ಸಂಕೋಚ ಪಟ್ಟುಕೊಳ್ಳಬೇಕು. ಮುಜುಗರ ಪಟ್ಟುಕೊಳ್ಳಬೇಕು. ನಾನು ದುಡಿಯುತ್ತಿದ್ದೇನೆ. ಅಲ್ಲಿಗೆ ಕೆಲಸ ಸಿಕ್ಕರೆ ಹೋಗುತ್ತೇನೆ. ಅಲ್ಲೀಗ ಸ್ವಲ್ಪ ಕೆಲಸ ಕಮ್ಮಿ ಆಗಿದೆ. ಆದ್ದರಿಂದ ನನ್ನ ಹಳೆ ಕೆಲಸ ಏನಿತ್ತು ಅದನ್ನು ಮಾಡುತ್ತಿದ್ದೇನೆ. ಟಿವಿಯಲ್ಲಿ ಮಾಡಿದ್ದೀನಿ ಜನ ಏನು ಅಂದುಕೊಳ್ಳುತ್ತಾರೆ ಅಂದುಕೊಂಡರೆ, ಜೀವನ ಮಾಡುವುಕ್ಕೆ ಆಗುವುದಿಲ್ಲ. ನಾವು ಗಾರೆ ಕೆಲಸವನ್ನು ಅಷ್ಟೇ ಖುಷಿಯಲ್ಲಿ ಮಾಡಬೇಕು. ಬಣ್ಣ ಹಚ್ಚಿ ಸ್ಟೇಜ್ ಮೇಲೆ ಹೋದರೂ ಅಷ್ಟೇ ಖುಷಿಯಿಂದ ಮಾಡಬೇಕು." ಎನ್ನುತ್ತಾರೆ.
ಈಗ ಆಫರ್ ಕಡಿಮೆ ಆಗಿದೆ
"ಈಗ ಮಳೆ ಬರುತ್ತಿದೆ. ಶೂಟಿಂಗ್ ಕಡಿಮೆ. ಸಿಕ್ಕಿದ ಆಫರ್‌ಗಳೂ ಪೋಸ್ಟ್‌ಪೋನ್ ಆದವು ಅಂತ ಸುಮಾರು ಜನ ಹೇಳಿದರು. ಸುಮ್ಮನೆ ಯಾಕೆ ಕೂರೋದು? ಆರಾಮಾಗಿ ಗಾರೆ ಕೆಲಸ ಮಾಡೋದು ಅಷ್ಟೇ." ಎಂದು ಗಾರೆ ಕೆಲಸ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಕೊಟ್ಟಿದ್ದಾರೆ.
"₹500ಗೂ ಕೆಲಸ ಮಾಡಿದ್ದೇನೆ"
"ಲಾಕ್‌ಡೌನ್ ಆಗಿತ್ತಲ್ಲ. ಆಗ ಬೆಂಗಳೂರಿನಲ್ಲಿ ಇದ್ದವನು ಊರಿಗೆ ಬಂದೆ. ಅಲ್ಲೂ ನಾನು ಒಂದು ಅಂಗಡಿಯಲ್ಲಿ 500 ರೂಪಾಯಿಗೆ ಕೆಲಸ ಮಾಡಿದೆ. ಆಗ ನಾನು ಕಲರ್ಸ್ ಕನ್ನಡದಲ್ಲಿ ಮಾಡುತ್ತಿದ್ದೆ. ಅವರೂ ನಿಮಗೆ ಕೆಲಸನಾ ಸರ್. ನೀವು ಟಿವಿಯಲ್ಲಿ ಬರೋರು ಅಂದರು. ಇಲ್ಲಾ ಕೊಡಿ ಕೆಲಸ ಮಾಡುತ್ತೇನೆ ಅಂದೆ. ನಿಮಗೆ ಸಿಗುವಷ್ಟು ಹಣ ಕೊಡುವುದಕ್ಕೆ ಆಗುವುದಿಲ್ಲ ಅಂದರು, ನಿಮಗೆ ಎಷ್ಟು ಕೊಡುವುದಕ್ಕೆ ಆಗುತ್ತೋ ಅಷ್ಟು ಕೊಡಿ ಎಂದು ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದೆ. ಈಗ ಗಾರೆ ಕೆಲಸ ಮಾಡೋಣ ಅಂತ ಅನಿಸಿತು. ಯಾಕಂದ್ರೆ, ಪ್ರತಿ ದಿನ ಕೆಲಸ ಮಾಡುತ್ತೇನೆ ಅಂದರೂ, ಪ್ರತಿ ದಿನವೂ ಕೆಲಸ ಸಿಗುತ್ತೆ." ಎನ್ನುತ್ತಾರೆ.
ಇಲ್ಲಿ ಹೆಲ್ಪರ್.. ಪ್ರತಿ ದಿನ ಸಂಬಳ ಸಿಗುತ್ತೆ
"ಇಲ್ಲಿ ಗಾರೆ ಕೆಲಸ ಮಾಡಿದರೆ, ದಿನಕ್ಕೆ 1000 ದಿಂದ 1200 ರೂಪಾಯಿ ಸಿಗುತ್ತೆ. ನಾನು ಸಹಾಯಕರಾಗಿ ಮಾಡುತ್ತೇವೆ ಅಂದರೆ, 600 ರೂಪಾಯಿ ಕೊಡುತ್ತಾರೆ. ಈಗ ಹೆಲ್ಪರ್ ಆಗಿ ಮಾಡುತ್ತಿದ್ದೇನೆ. 600 ರೂಪಾಯಿ ಸಂಬಳ ಕೊಡುತ್ತಾರೆ. ಈ ಇರುವ ರೂಲ್ಸ್ ಏನಂದ್ರೆ, ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಕೊಡುತ್ತಾರೆ. ಕೆಲಸ ಮುಗಿದ ಬಳಿಕ ಎಣ್ಣೆ ಕುಡಿಯುತ್ತೇನೆ ಅಂದರೆ ಎಣ್ಣೆ ಕೊಡಿಸುತ್ತಾರೆ. ಬೆಳಗ್ಗೆ ಒಂದು 8.30ಕ್ಕೆ ಕೆಲಸ ಶುರುವಾಗುತ್ತೆ." ಎಂದು ತಮ್ಮ ಗಾರೆ ಕೆಲಸದ ಬಗ್ಗೆ ಹೇಳಿಕೊಂಡಿದ್ದಾರೆ.
"ಜನರ ಮಾತಿಗೆ ಕಿವಿಗೊಡಬಾರದು"
"ಜನರು ಏನು ಮಾತಾಡಿತ್ತಾರೋ ಆ ಕಡೆಗೆ ಕಿವಿ ಕೊಡುವುದಕ್ಕೆ ಹೋಗಬಾರದು. ಇದು ನಮ್ಮ ಬದುಕು. ಒಂದು ಒಳ್ಳೆ ದಾರಿಯಲ್ಲಿ ಹೋಗಬೇಕಾಗುತ್ತೆ ಅಷ್ಟೇ. ಅವರು ಹಾಗಂತಾರೆ ಅಂತ ಕಾರಿನಲ್ಲೇ ಒಡಾಡುತ್ತಿದ್ದೆ. ಇಸ್ತ್ರಿ ಮಾಡಿದ ಬಟ್ಟೆಯನ್ನೇ ಹಾಕಿತ್ತಿದ್ದೆ ಅನ್ನೋ ರೀತಿ ಲೈಫ್ ನಡೆದುಕೊಂಡು ಹೋಗುವುದಕ್ಕೆ ಸಾಧ್ಯವೇ ಇಲ್ಲ. ಏರಿಳಿತಗಳು ಆಗಲೇ ಬೇಕು. ಆಗಲೇ ಬದುಕು ಅನ್ನೋದು ಅರ್ಥ ಆಗೋದು. ಶೂಟಿಂಗ್‌ಗೆ ಹೋದಾಗ ಎಲ್ಲಾ ಸೇರಿ 2 ಸಾವಿರ ರೂಪಾಯಿ ಕೊಡೋರು. ಇಲ್ಲಿ 600 ರೂಪಾಯಿ ಕೊಡುತ್ತಾರೆ." ಎನ್ನುತ್ತಾರೆ.
ಡಬಲ್ ಮೀನಿಂಗ್ ಅಂದ್ರೆ ಇಷ್ಟ
"ಫ್ಯಾನ್ಸ್ ಬಂದು ಅಯ್ಯೋ ಸರ್ ನೀವು ಡಬಲ್ ಮೀನಿಂಗ್ ಮಾಡಬೇಕು ಅಂತಾರೆ. ಅದೇನೋ ಗೊತ್ತಿಲ್ಲ, ಅವರಿಗೆ ನಾನು ಮಾಡುವ ಡಬಲ್ ಮೀನಿಂಗ್ ಇಷ್ಟ. ಡ್ಯಾನ್ಸ್, ಡಬಲ್ ಮೀನಿಂಗ್ ಅದೇ ಇಷ್ಟ. ಇದೂವರೆಗೂ ನಾನು ಯಾವುದರಲ್ಲಿ ಡಬಲ್ ಮೀನಿಂಗ್ ಮಾಡಿದ್ದೇನೋ ಅದು ಇಷ್ಟ. ಯಾವುದು ಮಾಡಿಲ್ಲವೋ ಅದು ಇಷ್ಟವಿಲ್ಲ. ಎಷ್ಟೊ ಜನ ಬೈತಾರೆ. ಆದರೆ, ಮಿಲಿಯನ್ ಗಟ್ಟಲೆ ವಿಡಿಯೋ ಓಡಿದೆ. ಜನಕ್ಕೆ ಅದೇ ಬೇಕಲ್ಲ." ಎನ್ನುತ್ತಾರೆ ಚಂದ್ರಪ್ರಭ.
ಹಣೆ ಬರಹವೇ ಸರಿಯಿಲ್ಲ
"ಯಾರಾದರೂ ಕರೆದರೆ ಬಂದು ನಟಿಸುತ್ತೇನೆ. ಇಲ್ಲಾ ಅಂದರೆ, ಇಲ್ಲೇ ಸೆಟಲ್ ಆಗುತ್ತೇನೆ. ಆರು ತಿಂಗಳಾಯ್ತು. ನಮ್ಮ ಹಣೆ ಬರಹವೇ ಸರಿಯಿಲ್ಲವೇನೋ? ಈ ವರ್ಷ ನನಗೆ ಅವಕಾಶಗಳೇ ಕಡಿಮೆ ಆದಂಗೆ ಆಗೋಯ್ತು. ಅದು ನನಗೆ ಬಹಳ ನೋವಿದೆ. ಅದು ಏನಕ್ಕೆ ಅಂತಾನೇ ಗೊತ್ತಾಗುತ್ತಿಲ್ಲ. ಒಂದು ಟೈಮ್‌ನಲ್ಲಿ 60-70 ಸಿನಿಮಾ ಮಾಡಿದ್ದೀನಿ. ಈ ವರ್ಷ ಒಂದೂ ಸಿನಿಮಾ ಮಾಡಿಲ್ಲ. ಒಂದು ಸೀರಿಯಲ್ ಮಾಡಿಲ್ಲ. ಜೀವನ ಬಹಳ ಜಿಗುಪ್ಸೆ ಆದಂತೆ ಆಗಿಬಿಟ್ಟಿದೆ." ಎಂದು ಬೇಸರ ಹೊರ ಹಾಕಿದ್ದಾರೆ ಚಂದ್ರಪ್ರಭ.


Click it and Unblock the Notifications











