"ನಿಮ್ಮ ಸಿನಿಮಾದಲ್ಲಿ ಹೀರೋಗಳ ಕಾಲು ತೋರಿಸಬೇಡಿ"; ಶಿಷ್ಯರಿಗೆ ಹೀಗ್ಯಾಕೆ ಅಂತಿದ್ರು ಗುರುಪ್ರಸಾದ್?
ಗುರುಪ್ರಸಾದ್ ನೇಣಿಗೆ ಶರಣಾಗಿದ್ದ ಶಾಕ್‌ನಿಂದ ಇನ್ನು ಚಿತ್ರರಂಗ ಹೊರಬಂದಿಲ್ಲ. ಗುರುಪ್ರಸಾದ್ ಸಾವಿನ ಬಳಿಕ ಚಿತ್ರರಂಗದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದಾರೆ. ಕೆಲವರಿಗೆ ಗುರುಪ್ರಸಾದ್ ಮೇಲೆ ಸಿಟ್ಟಿದೆ. ಅದೇ ಮತ್ತೆ ಕೆಲವರಿಗೆ ಬೇಸರವಿದೆ. ಈ ನಿರ್ದೇಶಕ ಎಷ್ಟೆಲ್ಲ ಸಾಧನೆ ಮಾಡಬಹುದಿತ್ತು. ಆದರೆ, ಹೀಗೆ ಅನ್ಯಾಯವಾಗಿ ಹೋಗಿಬಿಟ್ಟರಲ್ಲ ಅನ್ನೋ ಬೇಸರವೂ ಇದೆ.
ಕನ್ನಡದ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕರಲ್ಲಿ ಪಟ್ಟಿಯಲ್ಲಿ ಗುರುಪ್ರಸಾದ್ ಅವರಿಗೆ ವಿಶೇಷವಾದ ಸ್ಥಾನ ಇದ್ದೇ ಇರುತ್ತೆ. ಅವರ ವೈಯಕ್ತಿಕ ಬದುಕು ಏನಾಗಿತ್ತು? ಎಷ್ಟು ಸಾಲ ಮಾಡಿಕೊಂಡಿದ್ದರು? ಬದುಕಿನಲ್ಲಿ ಎಲ್ಲಿ ಎಡವಿದರು ಅನ್ನೋದನ್ನು ಚರ್ಚೆ ಆಗುತ್ತಿರುವುದೇನೋ ಸರಿ. ಆದರೆ, ಗುರುಪ್ರಸಾದ್ ಇವೆಲ್ಲವನ್ನೂ ಪಕ್ಕಕ್ಕಿಟ್ಟು ಬರೀ ಸಿನಿಮಾ ಅಂತಲೇ ಬದುಕಿದವರು.

ಪ್ರತಿಕ್ಷಣ ಸಿನಿಮಾದ ಬಗ್ಗೆನೇ ಮಾತಾಡುತ್ತಿದ್ದ ಗುರುಪ್ರಸಾದ್‌ಗೆ ಬೇರೆ ಏನೂ ಬೇಕಿರಲಿಲ್ಲ. ಅದೆಷ್ಟೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಸಿನಿಮಾ ವಿಷಯಕ್ಕೆ ಬಂದರೆ ಅವರ ಪ್ರಪಂಚವೇ ಬೇರೆ. ತನ್ನ ಜೊತೆಗಿದ್ದ ಎಷ್ಟೋ ಮಂದಿಗೆ ಸಿನಿಮಾ ಬಗ್ಗೆ ಕೆಲವು ವಿಷಯಗಳನ್ನು ಹೇಳಿಕೊಟ್ಟು ಹೋಗಿದ್ದಾರೆ. ಅವರಿಗೆ ಇದ್ದ ಆಸೆಗಳು ಕೂಡ ಅವರಷ್ಟೇ ವಿಚಿತ್ರ. ಅವರನ್ನು ಹತ್ತಿರದಿಂದ ಬಲ್ಲವರು ಇದೇ ವಿಷಯವನ್ನು ನೆನಪಿಸಿಕೊಂಡು ಇಂದು ಮರುಗುತ್ತಾರೆ.
ಆರಂಭದ ದಿನಗಳಲ್ಲಿ ಗುರುಪ್ರಸಾದ್ ಜೊತೆ ಸಿನಿಮಾ ಮೇಕಿಂಗ್ ಕಲಿಯಬೇಕು ಅಂತ ಬಂದವರು ಒಬ್ಬಿಬ್ಬರಲ್ಲ. ಇವರಿಗೆ ದೊಡ್ಡ ಶಿಷ್ಯವೃಂದವೇ ಇದೆ. ಸಿನಿಮಾ ಬಗ್ಗೆ ಹೇಳಿಕೊಡುವಾಗ ಗುರುಪ್ರಸಾದ್ ತಮ್ಮ ಶಿಷ್ಯಂದಿರಿಗೆ ಕೆಲವು ಸಲಹೆಗಳನ್ನು ನೀಡಿದ್ದರು. ಅದನ್ನು ಈ ಕಹಿ ಘಟನೆಯ ವೇಳೆ ಕೆಲವು ನೆನಪಿಸಿಕೊಂಡಿದ್ದಾರೆ. ಅದರಲ್ಲೊಂದು ನಿಮ್ಮ ಸಿನಿಮಾದಲ್ಲಿ ಹೀರೋಗಳ ಕಾಲು ತೋರಿಸಬೇಡಿ ಎನ್ನುತ್ತಿದ್ದ ವಿಷಯ ಕೂಡ ಒಂದು.
ಹೌದು, ಜೊತೆ ಸಹಾಯಕರಾಗಿ ಕೆಲಸ ಮಾಡಿದ ಕೆಲವು ಶಿಷ್ಯಂದಿರಿಗೆ ಇಂತಹದ್ದೊಂದು ಸಲಹೆ ಕೊಟ್ಟಿದ್ದರಂತೆ. ನೀವು ನಿರ್ದೇಶನ ಮಾಡುವ ಯಾವುದೇ ಸಿನಿಮಾದಲ್ಲಿ ಬಿಲ್ಡಪ್‌ಗಾಗಿ ಹೀರೋಗಳ ಕಾಲನ್ನು ಪ್ರೇಕ್ಷಕರಿಗೆ ತೋರಿಸಬೇಡಿ ಎನ್ನುತ್ತಿದ್ದರು. ಹೀರೋಗಳ ಕಾಲನ್ನು ತೋರಿಸಿದರೆ, ಸಿನಿಮಾ ನೋಡಲು ದುಡ್ಡುಕೊಟ್ಟು ಬರುವ ಪ್ರೇಕ್ಷಕರಿಗೆ ಅವಮಾನ ಮಾಡಿದಂತೆ ಆಗುತ್ತೆ. ಸಿನಿಪ್ರಿಯರ ಗೌರವಕ್ಕೆ ಧಕ್ಕೆ ತಂದಂತೆ ಆಗುತ್ತೆ ಎಂದು ಹೇಳುತ್ತಿದ್ದರು ಎಂಬುವುದುನ್ನು ಈ ಸಂದರ್ಭದಲ್ಲಿ ಅವರ ಶಿಷ್ಯಂದಿರು ನೆನಪಿಸಿಕೊಂಡಿದ್ದಾರೆ.
ಗುರುಪ್ರಸಾದ್ ಕೂಡ ತಮ್ಮ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೀರೋಗಳ ಕಾಲನ್ನು ತೋರಿಸಲಿಲ್ಲ. ಈ ಸಿದ್ದಾಂತವನ್ನು ಅವರ ಸಿನಿಮಾದಲ್ಲೂ ಪಾಲಿಸಿಕೊಂಡು ಬಂದಿದ್ದರು. ಗುರು ಪ್ರಸಾದ್ ಸ್ಕ್ರೀನ್ ಪ್ಲೇ ಹೇಳಿಕೊಡುವುದಕ್ಕೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅವರಿಗೂ ಕೂಡ ಕೆಲವು ಸಲಹೆಗಳನ್ನು ನೀಡಿದ್ದರು. ಅವರ ತರಬೇತಿ ಶಾಲೆಗೆ ಹೋಗುವಾಗ ಚಪ್ಪಲಿಯನ್ನು ಹೇಗೆ ಬೇಕೋ ಹಾಗೆ ಇಡುವಂತೆ ಇರಲಿಲ್ಲ. ಚಪ್ಪಲಿಯನ್ನೇ ನೆಟ್ಟಗೆ ಇಡದವನು ಸಿನಿಮಾವನ್ನು ಹೇಗೆ ಶ್ರದ್ದೆಯಿಂದ ಮಾಡುತ್ತಾನೆ ಅನ್ನೋದು ಅವರ ನಂಬಿಕೆಯಾಗಿತ್ತು.
ಗುರು ಪ್ರಸಾದ್ ತನ್ನ ಬಳಿಕ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಈ ಮಾತನ್ನು ಹೇಳಿದ್ದಷ್ಟೇ ಆ ಜಾಗದಲ್ಲಿ ಅವರ ಶಿಷ್ಯಂದಿರು ಚಪ್ಪಲಿಯನ್ನು ಎಲ್ಲೆಂದರಲ್ಲಿ ಬಿಡುವುದನ್ನು ನಿಲ್ಲಿಸಿದ್ದರು. ಹೀಗೆ ಸಿನಿಮಾದ ಬಗ್ಗೆ ಅಗಾಧ ಪ್ರೀತಿ ಇಟ್ಟುಕೊಂಡಿದ್ದ ಗುರುಪ್ರಸಾದ್ ಕೆಲವು ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗುರುಪ್ರಸಾದ್ ವಿಶೇಷವಾಗಿ ನಿಲ್ಲುತ್ತಾರೆ.


Click it and Unblock the Notifications











