"ಎದ್ದೇಳು ಮಂಜುನಾಥ 2 ಗುರುಪ್ರಸಾದ್ 100ನೇ ಜನ್ಮದಿನದಂದು ರಿಲೀಸ್"
'ಎದ್ದೇಳು ಮಂಜುನಾಥ' ಗುರು ಪ್ರಸಾದ್ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾವನ್ನು ಸಿನಿಪ್ರಿಯರು ಅದೆಷ್ಟೇ ವರ್ಷ ಆದರೂ ಮರೆಯೋದಿಲ್ಲ. ಅದೇ 'ಎದ್ದೇಳು ಮಂಜುನಾಥ 2' ಮೂಲಕ ಮತ್ತೆ ಚಿತ್ರರಂಗದಲ್ಲಿ ಎದ್ದು ನಿಲ್ಲಬೇಕು ಅಂತ ಗುರು ಪ್ರಸಾದ್ ಪಣ ತೊಟ್ಟಿದ್ದರು. ಅದಕ್ಕೆ ಅವರೇ ನಿರ್ದೇಶಕರು. ಅವರೇ ಹೀರೋ.
'ರಂಗನಾಯಕ' ಸಿನಿಮಾದಿಂದ ಹೀನಾಯವಾಗಿ ಸೋಲು ಕಂಡಿದ್ದ ಗುರುಪ್ರಸಾದ್ ಸಂಕಷ್ಟಕ್ಕೆ ಸಿಲುಕಿದ್ದರು. ಹೇಗಾದರೂ ಮಾಡಿ ಮತ್ತೆ ಗೆಲ್ಲಬೇಕು ಅಂತಿತ್ತು. ಆದರೆ, 'ಎದ್ದೇಳು ಮಂಜುನಾಥ 2' ಸಿನಿಮಾ ಮುಗಿಸಿ ಕೆಟ್ಟ ನಿರ್ಧಾರಕ್ಕೆ ಕೈ ಹಾಕಿದ್ದರು. ಈ ಸಿನಿಮಾ ಗುರುಪ್ರಸಾದ್ ಅವರ ಕೊನೆಯ ಸಿನಿಮಾ. ಕನ್ನಡ ಪ್ರತಿಭಾವಂತ ನಿರ್ದೇಶಕನ ಕೊನೆಯ ಸಿನಿಮಾ ಇಂದು (ಫೆಬ್ರವರಿ 21)ರಂದು ರಿಲೀಸ್ ಆಗಬೇಕಿತ್ತು. ಬಿಡುಗಡೆಗೆ ಇನ್ನೇನು ಒಂದು ದಿನ ಬಾಕಿ ಇದೆ ಅನ್ನುವಾಗಲೇ ವಿವಾದಕ್ಕೆ ಸಿಕ್ಕಿಕೊಂಡಿದೆ.

ಗುರುಪ್ರಸಾದ್ ಪತ್ನಿ ಸುಮಿತ್ರಾ ನಿರ್ಮಾಪಕರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದರು. ತನ್ನ ಗಂಡನಿಗೆ ಸಂಭಾವನೆ ರೂಪದಲ್ಲಿ ಬರಬೇಕಿದ್ದ ಹಣ ಕೊಟ್ಟಿಲ್ಲ. ಗುರುಪ್ರಸಾದ್ ಅವರು ತಮ್ಮ ನಿರ್ಮಾಣ ಸಂಸ್ಥೆ ಗುರುಪ್ರಸಾದ್ ಇಂಕ್ ಮೂಲಕ ಬಿಡುಗಡೆ ಮಾಡಬೇಕು ಅಂತಿದ್ದರು. ಆದರೆ, ಈಗ ರಿಲೀಸ್ ಮಾಡಲು ಮುಂದಾಗಿರುವವರು ನಿರ್ಮಾಣ ಸಂಸ್ಥೆಯ ಹೆಸರನ್ನೇ ಬದಲಿಸಿದ್ದಾರೆ ಅಂತ ಒಂದಿಷ್ಟು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದರಿಂದ ಇಂದು (ಫೆಬ್ರವರಿ 19) 'ಎದ್ದೇಳು ಮಂಜುನಾಥ 2' ರಿಲೀಸ್ ಆಗಿಲ್ಲ. ಈ ಸಂಬಂಧ ನಿರ್ಮಾಪಕರು ಮಾಧ್ಯಮಗಳಿಗೆ ಕಳುಹಿಸಿದ ಸಂದೇಶ ವೈರಲ್ ಆಗುತ್ತಿದೆ.
'ಎದ್ದೇಳು ಮಂಜುನಾಥ 2' ಸಿನಿಮಾವನ್ನು ಗುರುಪ್ರಸಾದ್ ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣ ಮಾಡಿದ್ದರು. ಈಗ ಈ ಸಿನಿಮಾವನ್ನು ಮೈಸೂರು ರಮೇಶ್ ಎಂಬುವವರು ಬಿಡುಗಡೆ ಮುಂದಾಗಿದ್ದರು. ಆದ್ರೀಗ ಗುರುಪ್ರಸಾದ್ ಪತ್ನಿ ಸುಮಿತ್ರಾ ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಕೋರ್ಟ್ ಮೊರೆ ಹೋಗಿದ್ದು, ಪತಿಗೆ ಸೇರಬೇಕಾದ ಸಂಭಾವನೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಕೋರಟ್ ತಡೆಯಾಜ್ಞೆ ನೀಡಿದ್ದರಿಂದ ನಿರ್ಮಾಪಕ ಮೈಸೂರು ರಮೇಶ್ ಕಳುಹಿಸಿದ ಸಂದೇಶ ಹೀಗಿದೆ. "ಪ್ರಿಯ ಸಿನಿಮಾ ಅಭಿಮಾನಿಗಳೆ, ಗುರುಪ್ರಸಾದ್ ಅವರ ಕೊನೆಯ ಸಿನಿಮಾ 'ಎದ್ದೇಳು ಮಂಜುನಾಥ 2' ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕಾಗಿ ತಯಾರಿ ನಡೆಸಿದ್ದೆವು. ಅವರ ಧರ್ಮಪತ್ನಿಯ ಸ್ವಇಚ್ಛೆಯಂತೆ ಸಿನಿಮಾವನ್ನು ಕೊನೆಯ ಕ್ಷಣದಲ್ಲಿ ಪ್ರದರ್ಶನ ಮಾಡದಂತೆ ಅವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಸದರಿ ಸಿನೆಮಾವನ್ನು ನಿಮ್ಮ ಮುಂದೆ ತರಲು ವಿಫಲರಾಗಿದ್ದೇವೆ. ಮುಂದೆ ಗುರು ಪ್ರಸಾದ್ ಅವರ 100ನೇ ಜನ್ಮದಿನದಂದು ರಿಲೀಸ್ ಮಾಡಲು ಈ ಚಿತ್ರವನ್ನು ಕಾಯ್ದಿರಿಸಿದ್ದೇವೆ. ವಂದನೆಗಳೊಂದಿಗೆ, ಮೈಸೂರು ರಮೇಶ್, ನಿರ್ಮಾಪಕರು" ಎಂದು ನಿರ್ಮಾಪಕರು ಕಳಿಸಿರುವ ಸಂದೇಶ ವೈರಲ್ ಆಗುತ್ತಿದೆ.
ಹಾಗಿದ್ದರೆ, 'ಎದ್ದೇಳು ಮಂಜುನಾಥ 2' ಸಿನಿಮಾವನ್ನು ರಿಲೀಸ್ ಮಾಡುವುದಿಲ್ಲವೇ? ಇಲ್ಲ ಇದು ಕೇವಲ ನಿರ್ಮಾಪಕರ ಆಕ್ರೋಶದ ನುಡಿಗಳಾ? ಇಂತಹದ್ದೊಂದು ಅನುಮಾನ ಮೂಡುವುದಕ್ಕೆ ಶುರುವಾಗಿದೆ. ಎಲ್ಲಾ ಸರಿಯಾಗಿ ಇದ್ದಿದ್ದರೆ, ಈ ಸಿನಿಮಾ ಇಂದು ರಿಲೀಸ್ ಆಗಬೇಕಿತ್ತು. ಆರಂಭದಲ್ಲಿ ಇದನ್ನು ಪಬ್ಲಿಸಿಟಿ ಗಿಮಿಕ್ ಎಂದು ಭಾವಿಸಲಾಗಿತ್ತು. ಆದ್ರೀಗ ಮ್ಯಾಟರ್ ಸೀರಿಯಸ್ ಆಗಿರುವಂತೆ ಕಾಣುತ್ತಿದೆ.
ಇನ್ನು ಗುರುಪ್ರಸಾದ್ ಪತ್ನಿ ಸುಮಿತ್ರಾ ನಿರ್ಮಾಪಕ ಮುಂದೆ ಎಷ್ಟು ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಇತ್ತ ನಿರ್ಮಾಪಕರು ಮೊದಲೇ ಅಗ್ರಿಮೆಂಟ್ ಮಾಡಿಕೊಂಡಂತೆ ಬಂದ ಲಾಭದಲ್ಲಿ ಶೇ.51ರಷ್ಟನ್ನು ಸಂಭಾವನೆ ರೂಪದಲ್ಲಿ ನೀಡಲಾಗುತ್ತೆ ಎಂದು ಹೇಳುತ್ತಿದ್ದಾರೆ. ಸದ್ಯ ಈ ಪ್ರಕರಣ ಈಗ ಕೋರ್ಟ್ ಕಟಕಟೆಯಲ್ಲಿದೆ. ಮುಂದೇನಾಗುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











