"ರಾಮಾಚಾರಿ, ಹಳ್ಳಿ ಮೇಷ್ಟ್ರು ತರ ಸಿನಿಮಾ ಮಾಡಿ ಅಂತಿದ್ರಿ..ನೀವ್ಯಾಕೆ ಸರ್ ಮಾಡ್ತಿಲ್ಲ"; ರವಿಚಂದ್ರನ್‌ಗೆ ಹಂಸಲೇಖ ಪ್ರಶ್ನೆ
ಹಂಸಲೇಖ ಅವರಿಗೆ ಇಂದು (ಜೂನ್ 23) ಹುಟ್ಟುಹಬ್ಬದಂದು ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ನಾದ ಬ್ರಹ್ಮ ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಇಲ್ಲಿವರೆಗೂ ತಮ್ಮ ಸಂಗೀತದಿಂದಲೇ ಜನರನ್ನು ರಂಜಿಸಿದ್ದ ಹಂಸಲೇಖ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮ ಬರ್ತ್‌ಡೇಯಂದೇ ಹಂಸಲೇಖ ಹೊಸ ಸಿನಿಮಾಗೆ ಚಾಲನೆಯನ್ನೂ ನೀಡಿದ್ದಾರೆ. ಆ ಸಿನಿಮಾಗೆ 'OK' ಅಂತ ಟೈಟಲ್ ಕೂಡ ಇಟ್ಟು ಮುಹೂರ್ತ ಕೂಡ ಮಾಡಿದ್ದಾರೆ.
ಹಂಸಲೇಖ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ, ರವಿಚಂದ್ರನ್ ಅಲ್ಲಿ ಇರದೇ ಹೋದರೆ ಹೇಗೆ? ಕ್ರೇಜಿಸ್ಟಾರ್ ಸ್ವತ: ಹಂಸಲೇಖ ಅವರೇ ವಿಶೇಷ ಆಹ್ವಾನವನ್ನು ನೀಡಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಶೂಟಿಂಗ್‌ನಲ್ಲಿ ಇದ್ದರೂ ರವಿಚಂದ್ರನ್ ಬಿಡುವು ಮಾಡಿಕೊಂಡು ಈ ಸಮಾರಂಭಕ್ಕೆ ಹಾಜರಾಗಿದ್ದರು. ಹಂಸಲೇಖ ಹಾಗೂ ರವಿಚಂದ್ರನ್ ಒಂದೇ ವೇದಿಕೆಯಲ್ಲಿ ಬಹಳ ದಿನಗಳ ಬಳಿಕ ಕಂಡಿದ್ದು ಇಬ್ಬರ ಅಭಿಮಾನಿಗಳಿಗೂ ಥ್ರಿಲ್ಲಿಂಗ್ ಆಗಿತ್ತು.

ಈ ವೇಳೆ ವೇದಿಕೆ ಮೇಲೆ ನಾದ ಬ್ರಹ್ಮ ಹಾಗೂ ಕ್ರೇಜಿಸ್ಟಾರ್ ಮಾತುಗಳು ಇನ್ನಷ್ಟು ಕಿಕ್ ಕೊಟ್ಟಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಯಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಹಂಸಲೇಖ ಕೆಲವು ವಿಷಯಗಳನ್ನು ಹೊರ ಹಾಕಿದ್ದಾರೆ. ತಮ್ಮ ಸಿನಿಮಾದ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದಾರೆ. ಈ ಮಧ್ಯೆ ರವಿಚಂದ್ರನ್‌ಗೆ ನೀವ್ಯಾಕೆ 'ರಾಮಾಚಾರಿ', 'ಹಳ್ಳಿ ಮೇಷ್ಟ್ರು' ಅಂತಹ ಸಿನಿಮಾ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ನೀವ್ಯಾಕೆ ಮಾಡುತ್ತಿಲ್ಲ ಸರ್?
ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಒಂದು 10 ಕೆಜಿ ತೂಕವನ್ನ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮತ್ತೆ "ಯಾರಿವಳು ಯಾರಿವಳು" ಅಂತ ತೆರೆಮೇಲೆ ಹಾಡಬೇಕು ಎಂದು ಕೇಳಿಕೊಂಡಿದ್ದಾರೆ. "ನೀವು ಮೊನ್ನೆ ಹೇಳುತ್ತಿದ್ರಿ. ರಾಮಾಚಾರಿಯ ಹಾಗೆ ಸಿನಿಮಾ ಮಾಡಿ. ಹಳ್ಳಿ ಮೇಷ್ಟ್ರು ತರ ಸಿನಿಮಾ ಮಾಡಿ, ರಾಜಾ ಹುಲಿತರ ಸಿನಿಮಾ ಮಾಡಿ ಅಂತಿದ್ರಿ. ನೀವ್ಯಾಕೆ ಸರ್ ಮಾಡುತ್ತಿಲ್ಲ." ಎಂದು ಹಂಸಲೇಖ ಪ್ರಶ್ನೆ ಮಾಡಿದ್ದಾರೆ.
ಯೌವ್ವನದ ಮಹಿಳೆಯರೆಲ್ಲ ಇಷ್ಟ ಪಡ್ತಾರೆ
"ನೀವು ಒಂದು ಹತ್ತು ಕೆಜಿ ಕಮ್ಮಿ ಮಾಡಿಬಿಟ್ರೆ, ಇವತ್ತೂ ಸ್ಪುರದ್ರೂಪಿ ಸುಂದರ ನಟ. ಇವತ್ತೂ ನಿಮ್ಮನ್ನು ಹೆಣ್ಣು ಮಕ್ಕಳು ಇಷ್ಟ ಪಡುವಷ್ಟು ಮತ್ಯಾವ ಹೀರೋಗೂ ಇಷ್ಟ ಪಡುವುದಿಲ್ಲ. ಇಡೀ ಕರ್ನಾಟಕದಲ್ಲಿ ಯೌವ್ವನದ ಮಹಿಳೆಯರೆಲ್ಲ ಇಷ್ಟ ಪಡುತ್ತಾರೆ. ಜಸ್ಟ್ 10 ಕೆಜಿ ಕಟ್, ಬ್ಯಾಚುಲರ್ಸ್ ಬಾಯ್ಸ್ ಬಿಟ್ಟು ಬಿಡು. ಯಾರಿವಳು ಯಾರಿವಳು ಅಂತ ಹಾಡಿದರೆ ಜನರು ಕಿತ್ಕೊಂಡು ಬಂದು ಬಿಡುತ್ತಾರೆ ಸರ್." ಎಂದು ಹಂಸಲೇಖ ಹೇಳಿದ್ದಾರೆ.
ರವಿಚಂದ್ರನ್ ಅವರದ್ದು ದೊಡ್ಡ ಪರಂಪರೆ
"ರವಿಚಂದ್ರನ್ ಅವರು ಅಂದುಕೊಂಡಿದ್ದನ್ನು ಮಾಡಿದ್ದಾರೆ. ಅಂದುಕೊಂಡಿದ್ದನ್ನು ಮಾಡಿ ತೋರಿಸಿದ್ದಾರೆ. ಆಮೇಲೆ ನನ್ನನ್ನು ಇಮಿಟೇಟ್ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಮಟ್ಟಕ್ಕೆ ತಂತ್ರಜ್ಞಾನವನ್ನು ಉದ್ಯಮಕ್ಕೆ ಕೊಟ್ಟಿದ್ದಾರೆ. ಇವತ್ತು ಒಂದು ಪ್ರೇಮಲೋಕ, ರಣಧೀರ ದಂತಹ ಸಿನಿಮಾ ಮಾಡೋಣ ಅಂತ ಒಬ್ಬರೂ ಕನ್ನಡದಲ್ಲಿ ಯೋಚನೆ ಕೂಡ ಮಾಡಿಲ್ಲ. ಅಂತಹ ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ಇದ್ದಂತಹವರು. ಅವರಿಗೆ ಬೆನ್ನೆಲುಬು ಅವರ ತಂದೆ. ಹೀಗೆ ಅವರದ್ದು ಒಂದು ದೊಡ್ಡ ಪರಂಪರೆಯಿದೆ." ಎಂದು ರವಿಚಂದ್ರನ್ ಬಗ್ಗೆ ಮಾತಾಡಿದ್ದಾರೆ.
ಸಿನಿಮಾದ ಕಥೆಯೇನು?
"ಈ ಕಥಾ ಸಾರಾಂಶದ ಬಗ್ಗೆ ನಿಮಗೆಲ್ಲರಿಗೂ ಕುತೂಹಲವಿರುತ್ತೆ. ಒಂದು ಸಣ್ಣ ಎಳೆಯಲ್ಲಿ ನಿಮಗೆ ಹೇಳುತ್ತೇನೆ. ನಮ್ಮ ಸಮಾಜದಲ್ಲಿ ಭ್ರೂಣ ಪತ್ಯೆ, ಮತ್ತು ಹೆಣ್ಣು ಭ್ರೂಣ ಹತ್ಯೆ ಇವೆರಡೂ ಸಂವಿಧಾನಿಕವಾಗಿ ನಿಷೇಧವಾಗಿದೆ. ನಿಷೇಧವಿದ್ದರೂ, ಇದು ಇಡೀ ಭಾರತದಲ್ಲಿ ಸಾಮಾಜಿಕ ಪಿಡುಗು ಆಗಿದೆ. ಇದರ ಹಿಂದೆ ಆರ್ಥಿಕ ಸಮಸ್ಯೆಗಳು, ಸಾಂಸಾರಿಕ ಪಿಡುಗುಗಳು, ಜಾತಿ ಸಮಸ್ಯೆಗಳು, ಇವೆಲ್ಲ ಸೇರಿಕೊಂಡು ಒಂದು ಸಾಮಾಜಿಕ ಪಿಡುಗು ಆಗಿದೆ. ಕೇಂದ್ರದವರು 'ಬೇಟಿ ಬಚಾವೋ' ಅಂತ ಮಾಡಿದ್ದಾರೆ. ನಾವು ಸಿನಿಮಾದವರು ಆ ಬಗ್ಗೆ ಗಮನ ಹರಿಸಿಲ್ಲ. ನಾವು ಈ ಎಳೆಯನ್ನು ಇಟ್ಟುಕೊಂಡು ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ಕೊಡಬೇಕು ಎನ್ನುವ ಆಶಯದಲ್ಲಿ ಈ ಕಥೆಯನ್ನು ತೆಗೆದುಕೊಂಡಿದ್ದೇನೆ." ಎಂದು ಹಂಸಲೇಖ ತಮ್ಮ ನಿರ್ದೇಶನದ ಸಿನಿಮಾದ ಕಥೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.


Click it and Unblock the Notifications











