"ಪ್ಯಾನ್ ಇಂಡಿಯಾ ಅಂತ ಹೋದ್ರೆ, ಬಾಡಿ, ದಾಡಿ ಬೆಳೆಯುತ್ತೆ ಅಷ್ಟೇ"; ಯಶ್‌ಗೆ ಟಾಂಗ್ ಕೊಟ್ರಾ ಹಂಸಲೇಖ?
ಪ್ಯಾನ್ ಇಂಡಿಯಾ ಸಿನಿಮಾ ಬೆನ್ನುಬಿದ್ದಿರೋ ಕನ್ನಡ ಚಿತ್ರರಂಗಕ್ಕೆ ವಕ್ರದೃಷ್ಟಿ ಬಿದ್ದಿದೆ. ಯುವ ಪ್ರತಿಭೆಗಳ ಸಿನಿಮಾಗಳು, ಸ್ಮಾಲ್ ಬಜೆಟ್ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರುತ್ತಿಲ್ಲ. ಕಳೆದ ಒಂದೂವರೆ ಎರಡು ವರ್ಷಗಳಿಂದ ಸ್ಯಾಂಡಲ್‌ವುಡ್‌ನ ಪರಿಸ್ಥಿತಿ ಸಿಕ್ಕಾಪಟ್ಟೆ ಶೋಚನೀಯವಾಗಿದೆ.
ಕನ್ನಡದ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಕ್ಸಸ್ ಕಂಡ ಮೇಲೆ ಅಂತಹದ್ದೇ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಡೀ ಭಾರತಕ್ಕೂ ಸಲ್ಲುವ ಸಿನಿಮಾಗಳನ್ನು ಮಾಡುವುದರ ಕಡೆಗೆ ಗಮನ ಹರಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಾಡುವ ಭರಾಟೆಯಲ್ಲಿ ಕನ್ನಡದ ಬೇರನ್ನೇ ಮರೆಯುತ್ತಿದ್ದಾರೆ ಅನ್ನೋ ಆರೋಪ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ.

ಈಗ ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಸೂಪರ್‌ಸ್ಟಾರ್‌ಗಳ ವಿರುದ್ಧ ಕಿಡಿಕಾರಿದ್ದಾರೆ. ಪ್ಯಾನ್ ಇಂಡಿಯಾ ಮಾಡುವ ಹುಚ್ಚಿನಿಂದ ಕನ್ನಡ ಬೇರುಗಳನ್ನು ಕಟ್ ಮಾಡಿಕೊಂಡಿದ್ದಾರೆ. ಅವರಲ್ಲೊಂದು ಭ್ರಮೆಯಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪರೋಕ್ಷವಾಗಿ ಯಶ್ ವಿರುದ್ಧ ನಾದಬ್ರಹ್ಮ ಹಂಸಲೇಖ ಕಿಡಿಕಾರಿದ್ದಾರೆ.
ಗೌರಿ ಸಿನಿಮಾದ ವೇದಿಕೆ ಮೇಲೆ ಹಂಸಲೇಖ ಕನ್ನಡ ಸೂಪರ್‌ಸ್ಟಾರ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಪ್ಯಾನ್ ಇಂಡಿಯಾ ಅನ್ನುವ ಹುಚ್ಚು ಬಂದಿದ್ದರಿಂದ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಕನ್ನಡದ ಬೇರುಗಳು ಕಟ್ ಆಗಿಬಿಟ್ಟಿದೆ. ಇವರಿಗೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಅನ್ನೋ ಭ್ರಮೆಯಿದೆ." ಎಂದು ನಾದಬ್ರಹ್ಮ ಹಂಸಲೇಖ ಕಿಡಿಕಾರಿದ್ದಾರೆ.
ಇದೇ ವೇದಿಕೆ ಮೇಲೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೆ ಬಾಲಿವುಡ್‌ನಲ್ಲಿ ನೆಲೆ ನಿಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. "ದಕ್ಷಿಣದಿಂದ ಯಾರಾದರೂ ಸುಂದರವಾದ ಹೀರೋಯಿನ್ ಇದ್ದರೆ, ಹೋಗಿ ಉತ್ತರ ಭಾರತದಲ್ಲಿ ಒಂದು ಇಪ್ಪತ್ತು ವರ್ಷ ಬದುಕಬಹುದು. ರಜನಿಕಾಂತ್ ಆಗಲಿ, ಕಮಲ್ ಹಾಸನ್ ಆಗಲಿ, ಮಮ್ಮುಟಿ ಆಗಲಿ, ಮೋಹನ್ ಲಾಲ್ ಆಗಲಿ ಬಾಂಬೆಗೆ ಹೋದರೆ ಎರಡು ವರ್ಷ ಇರುವುದಕ್ಕೆ ಆಗಲ್ಲ ವಾಪಸ್ ಬರುತ್ತಾರೆ. ಆದ್ದರಿಂದ ನಮ್ಮ ಹೀರೊಗಳ ಸದ್ಯದ ಶೋಕಿ. ಒಂಥರಾ ಹನಿಮೂನ್‌ನಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸುತ್ತಾಕಿಕೊಂಡು ಬರಲಿ. ಎಲ್ಲಿ ಸುತ್ತಿದರೂ, ಕನ್ನಡಕ್ಕೆ ಬರಲೇಬೇಕಾಗುತ್ತೆ." ಎಂದು ಹಂಸಲೇಖ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್ ಅಂದರೆ ಗಂಧದ ಪರಿಮಳ. ಗಂಧದ ಮರದ ಗುಣವೇ ಬೇರೆ. ಗಂಧದ ಸಸಿಯನ್ನು ಒಂಟಿಯಾಗಿ ನೆಟ್ಟರೆ ಐವತ್ತು ವರ್ಷ ಆದರೂ ಅದು ಬೆಳೆಯುವುದಿಲ್ಲ. ಅದರ ಸುತ್ತಮುತ್ತ ಇನ್ನೂ 20 ರಿಂದ 30 ಸಸಿಗಳನ್ನು ನೆಟ್ಟರೆ ಮಾತ್ರ ಬೆಳೆಯುತ್ತೆ. ಅಂದರೆ, ಎಲ್ಲರನ್ನೂ ಒಳಗೊಂಡು ಬೆಳೆಯುವುದೇ ಸ್ಯಾಂಡಲ್‌ವುಡ್. ನಾವೊಬ್ಬರೇ ಬೆಳೆಯುವುದು ಸ್ಯಾಂಡಲ್‌ವುಡ್ ಅಲ್ಲ ಎಂದು ಹಂಸಲೇಖ ಸೂಪರ್‌ಸ್ಟಾರ್‌ಗಳಿಗೆ ಕಿವಿ ಮಾತನ್ನು ಆಡಿದ್ದಾರೆ.
ಹಾಗೇ "ಭಾಷೆಯಿಂದಲೇ ಕನ್ನಡ ಚಿತ್ರರಂಗವನ್ನು ಬೆಳೆಸಿದ ದೊಡ್ಡ ಪರಂಪರೆಯಿದೆ. ಆ ಪರಂಪರೆಯನ್ನು ಬಿಟ್ಟು ಪ್ಯಾನ್ ಇಂಡಿಯಾ ಅಂತ ಹೋದರೆ ಹೇಗೆ? ಹೋಗಬೇಡಿ ಅಂತ ಹೇಳುವುದಿಲ್ಲ. ಸ್ವಲ್ಪ ವ್ಯಾಪಾರ ಅದು ಇದು ಅಂತ ಜಾಸ್ತಿ ಆಗುತ್ತೆ. ದಾಡಿಗಿಡಿ ಜಾಸ್ತಿ ಬೆಳೆಯುತ್ತೆ ಅಷ್ಟೇ ಹೊರತು ಇನ್ನೇನು ಬೆಳೆಯಲ್ಲ. ಬಾಡಿ ಬೆಳೆಯುತ್ತೆ ದಾಡಿ ಬೆಳೆಯುತ್ತೆ ಅಷ್ಟೇ." ಎಂದು ಹಂಸಲೇಖ ಹೇಳಿದ್ದಾರೆ. ಈ ಮಾತುಗಳು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇದು ಯಶ್‌ಗೆ ಹಂಸಲೇಖ ಟಾಂಗ್ ಕೊಟ್ಟಿದ್ದಾರೆಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











