»   » ಸಕಲಕಲಾವಲ್ಲಭ ಕಮಲ್ ಮರೆಯಲಾಗದ ಪಾತ್ರಗಳು

ಸಕಲಕಲಾವಲ್ಲಭ ಕಮಲ್ ಮರೆಯಲಾಗದ ಪಾತ್ರಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಕಲಕಲಾವಲ್ಲಭ, ಯೂನಿವರ್ಸಲ್ ಸ್ಟಾರ್ ಕಮಲ ಹಾಸನ್ ಅವರಿಗೆ ಇಂದು 59ನೇ ಹುಟ್ಟುಹಬ್ಬದ ಸಂಭ್ರಮ. ಚಿತ್ರರಂಗದಲ್ಲಿ ನಡೆದಾಡುವ ವಿಶ್ವಕೋಶದಂತೆ ಬೆಳಗುತ್ತಿರುವ ಅಪ್ರತಿಮ ಪ್ರತಿಭಾವಂತ ಕಮಲ್ ಕೈಯಾಡಿಸದ ಕಲಾ ವಿಭಾಗವೇ ಇಲ್ಲ ಎನ್ನಿಸುತ್ತದೆ. ನಟನೆ, ನಿರ್ದೇಶನ, ಚಿತ್ರಕಥೆ, ಹಿನ್ನೆಲೆ ಗಾಯನ, ನೃತ್ಯ, ಸಾಹಸ, ಸಾಹಿತ್ಯ ಹೀಗೆ ಎಲ್ಲ ವಿಭಾಗಗಳಲ್ಲೂ ಸೈ ಎನಿಸಿಕೊಂಡ ಕಮಲ್ ಎಂದಿಗೂ ಪ್ರಸ್ತುತವಾಗಬಲ್ಲ ನಟ.

ಚಿತ್ರರಂಗದಲ್ಲಿ 50 ವಸಂತಗಳನ್ನು ಕಂಡಿರುವ ಕಮಲ್ ಅನೇಕ ಬಾರಿ ಏಳುಬೀಳುಗಳನ್ನು ಕಂಡಿದ್ದಾರೆ. ಅದರೆ, ಪ್ರತಿಬಾರಿ ವಿಭಿನ್ನ, ವಿಶಿಷ್ಟ ಪಾತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. 17 ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದ ಕಮಲ್ ಇನ್ನು ಸಾಕು ಯುವ ಪ್ರತಿಭೆಗಳಿಗೆ ನೀಡಿ ಎಂದು ದೊಡ್ಡತನ ಮೆರೆದಿದ್ದಾರೆ.

ಬಾಲನಟನಾಗೇ ರಾಷ್ಟ್ರಪತಿಗಳ ಪದಕ ಕೊರಳಿಗೇರಿಸಿಕೊಂಡ ಕಮಲ್ ಚಿತ್ರರಂಗದಲ್ಲಿ ಬೆಳೆದಂತೆ ಹಲವರ ಹೊಟ್ಟೆಕಿಚ್ಚಿಗೆ ಸಿಲುಕಿಗೆ ವಿವಾದಗಳಿಗೆ ಆಹಾರವಾದವರು ಆದರೆ ಎಲ್ಲಕ್ಕೂ ತಮ್ಮ ಕಲೆ ಮೂಲಕವೇ ಉತ್ತರ ನೀಡಿದವರು.

ಕನ್ನಡ ಸೇರಿದಂತೆ ಬೆಂಗಾಳಿ, ಹಿಂದಿ, ಮಲೆಯಾಳಂ, ತೆಲುಗು, ತಮಿಳು ಚಿತ್ರಗಳು ಸೇರಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡ ಕಮಲ್ ಅವರ ಕನಸಿನ ಚಿತ್ರಗಳಾದ ಮರುಧನಾಯಗಂ, ಮರ್ಮಯೋಗಿ ತೆರೆ ಕಾಣುವ ಭಾಗ್ಯ ಕೂಡಿ ಬರಲೇ ಇಲ್ಲ. ಸದ್ಯಕ್ಕೆ ಅಭಿಮಾನಿಗಳು ವಿಶ್ವರೂಪಂ 2 ಹಾಗೂ ಉತ್ತಮ ವಿಲನ್ ಚಿತ್ರಕ್ಕಾಗಿ ಕಾತುರದಿಂದ ಕಾದಿದ್ದಾರೆ. ಸದ್ಯಕ್ಕೆ ಕಮಲ್ ಅವರ ಅನೇಕ ವಿಭಿನ್ನ ಪಾತ್ರಗಳ ನಡುವೆ ಜನ ಗುರುತಿಸದೇ ಹೋದ ಪಾತ್ರಗಳ ಕಿರು ಪರಿಚಯ ಇಲ್ಲಿದೆ ತಪ್ಪದೇ ಓದಿ.. (ಐಎಎನ್ಎಸ್ ಮಾಹಿತಿ ಆಧಾರ)

ಅವಳ್ ಅಪ್ಪಡಿಥಾನ್

1978ರಲ್ಲಿ ತೆರೆಕಂಡ ಅವಳ್ ಅಪ್ಪಡಿಥಾನ್ ಚಿತ್ರದಲ್ಲಿ ಅರುಣ್ ಪಾತ್ರದಲ್ಲಿ ಕಮಲ್ ಮಿಂಚಿದರು . ಕಮಲ್ ಜತೆಗೆ ರಜನಿಕಾಂತ್, ಶ್ರೀಪ್ರಿಯ, ಸರಿತಾ ಇದ್ದರು. ಆ ಕಾಲಕ್ಕೆ ಒಗ್ಗದ ಕಥಾವಸ್ತು ಎನ್ನಬಹುದಾದರೂ ಡಾಕ್ಯುಮೆಂಟರಿ ನಿರ್ದೇಶಕನಾಗಿ ಕಮಲ್ ಮೊನಚು ಡೈಲಾಗ್, ಚಿತ್ರರಂಗ ನೈಜ ಚಿತ್ರಣ ಎಲ್ಲವೂ ಕಮಲ್ ಹೊರ ಹಾಕಿದ್ದರು.

ಇಲ್ಲಿ ಬಳಸಿರುವುದು ಮರೋಚರಿತಂ ಚಿತ್ರದ ಸ್ಟಿಲ್

ಅನ್ಬೆ ಶಿವಂ

ಎಡಪಂಥೀಯ ಧೋರಣೆ, ನಿರೀಶ್ವರವಾದ ಮೂಲ ಕಥೆಯನ್ನುಳ್ಳ ಅನ್ಬೆ ಶಿವಂ ಚಿತ್ರದಲ್ಲಿ ಮಾನವತಾವಾದದ ಮಜಲನ್ನು ಕಮಲ್ ತಮ್ಮ ಪಾತ್ರದ ಮೂಲಕ ಪ್ರದರ್ಶಿಸಿದರು. 2003ರಲ್ಲಿ ತೆರೆ ಕಂಡ ಚಿತ್ರದಲ್ಲಿ ಮಾಧವನ್ ಗೆ ನಟನೆಯ ಪಾಠ ಹೇಳಿಕೊಟ್ಟಂತೆ ಇದ್ದ ಕಮಲ್ ಪಾತ್ರ ಬಂಡವಾಳಶಾಹಿಗಳ ವಿರುದ್ಧ ಎಲ್ಲರೂ ಸೆಟೆದು ನಿಲ್ಲುವಂತೆ ಮಾಡುವಷ್ಟು ಪ್ರಭಾವಶಾಲಿಯಾಗಿತ್ತು. ನಿರೀಶ್ವರವಾದದ ತತ್ವ ತಪ್ಪಾಗಿ ನಿರೂಪಣೆಯಾಗಿದೆ ಎಂದು ಅನೇಕರು ತಿಳಿದು ಚಿತ್ರದ ಮಹತ್ವವನ್ನು ಹಾಳುಗೆಡವಿದರು.

ರಾಜ ಪಾರ್ವೈ

ಕಮಲ್ ಅವರ ನೂರನೇ ಚಿತ್ರ ನಿರೀಕ್ಷಿಸಿದ್ದಷ್ಟು ಹೆಸರು ಗಳಿಸಲಿಲ್ಲ. ಪ್ರಶಸ್ತಿ ಹುಡುಕಿಕೊಂಡು ಬಂದರೂ ನಟನೆ ಗುರುತಿಸಲಿಲ್ಲ ಎಂಬ ಕೊರಗು ಕಮಲ್ ಗೆ ಇದ್ದೇ ಇದೆ. ನೋವನ್ನು ನುಂಗಲು ಪಿಟೀಲು ಬಾರಿಸುವಂತೆ ಸಿಂಗೀತಂ ಶ್ರೀನಿವಾಸ ರಾವ್ ಕಮಲ್ ರಿಂದ ಉತ್ತಮ ಅಭಿನಯ ತೆಗೆಸಿದ್ದರು.

ವಿರುಮಾಂಡಿ

ಅಪ್ಪಟ ದೇಸಿ ಕಥೆಯುಳ್ಳ ವಿರುಮಾಂಡಿ ಚಿತ್ರ ಜಪಾನಿನ ರಾಶೋಮನ್ ಮಾದರಿ ಚಿತ್ರವಾಗಿತ್ತು. ಆದರೆ, ಚಿತ್ರ ತಮಿಳರ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಯಿತು. ಪಶುಪತಿಯಂಥ ಉತ್ತಮ ನಟನಿಗೆ ಬ್ರೇಕ್ ನೀಡಿದ್ದೊಂದೆ ಕಮಲ್ ಗೆ ಸಮಾಧಾನ ನೀಡಿತು.

ಹೇ ರಾಮ್

ಸಾಕೇತ್ ರಾಮ್ ಪಾತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಬಂದಿದ್ದು ಬಿಟ್ಟರೆ ಬರೀ ವಿವಾದಗಳನ್ನೇ ಕಮಲ್ ಎದುರಿಸಬೇಕಾಯಿತು. ಮಹಾತ್ಮಗಾಂಧೀಜಿ ಹತ್ಯೆ ಹಾಗೂ ಆನಂತರ ಕುರಿತಾದ ಘಟನೆಗಳನ್ನು ಸಮರ್ಥವಾಗಿ ನಿರೂಪಿಸಿದ್ದ ಕಮಲ್ ಅವರ ಚಿತ್ರ ಬರೀ ವೈಫಲ್ಯವನ್ನೇ ಕಾಣಬೇಕಾಯಿತು. ಹಿಂದೂ ಪರ ವಿರೋಧಿಗಳು ಸಾಕೇತ ರಾಮನನ್ನು ಇವ ನಮ್ಮವ ಎನ್ನುತ್ತಾ ವಿವಾದಗಳನ್ನು ಬೆಳೆಸುತ್ತಾ ಹೋದರು.

ಗುಣ

ಹುಚ್ಚುಪ್ರೇಮಿಯಾಗಿ 'ಗುಣ' ಪಾತ್ರಧಾರಿ ಕಮಲ್ ಗೆ ಫಿಲಂಫೇರ್ ಬಂದರೂ ಚಿತ್ರ ಸೋಲು ಕಂಡಿತು. ಪ್ರೀತಿ ಅರ್ಥ ವಾಗುವ ಮಾನವರಿಗೆ ಮಾತ್ರ ಇದು ಮನುಷ್ಯರ ಪ್ರೀತಿಯಲ್ಲ ಇದು ದೈವಿಕ ಪ್ರೇಮ ಎಂಬ ಸಾಲು ಚಿತ್ರ ಹಾಗೂ ಪಾತ್ರದ ಆಧಾರವಾಗಿತ್ತ್ತು ಅದರೆ, ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಯಿತು.

ವರುಮಾಯಿನ್ ನಿರಂ ಸಿವಪ್ಪು

1980ರ ದಶಕದ ನಿರುದ್ಯೋಗ ಸಮಸ್ಯೆ ಕುರಿತ ಚಿತ್ರ ಇದಾಗಿದ್ದು, ಗುರು ಕೆ ಬಾಲಚಂದರ್ ಜತೆಗೂಡಿ ಕಮಲ್ ಅದ್ಭುತ ಚಿತ್ರವನ್ನು ತೆರೆಗೆ ತಂದಿದ್ದರು. ಬಡತನದ ಬಣ್ಣ ಕೆಂಪು ಎಂದು ಚಿತ್ರದ ಹೆಸರನ್ನು ಅರ್ಥೈಸಬಹುದು. ಸಮಾಜವಾದ, ಆಡಳಿತಶಾಹಿಗಳ ಕಿತ್ತಾಟದತ್ತ ಕಮಲ್ ಬೆಳಕು ಚೆಲ್ಲಿದ್ದರು.

ಮಹಾನದಿ

ನಗರವಾಸಿಗಳು ಹಳ್ಳಿಗನೊಬ್ಬನ ಸ್ಥಿರ ಚರ ಆಸ್ತಿ ದೋಚುವುದು ಕುಟುಂಬ ಬೀದಿಗೆ ತರುವ ಕಥೆ ಇದಾಗಿದ್ದು, ಅಪ್ಪನಾಗಿ ತನ್ನ ಕಳೆದುಹೋದ ಮಕ್ಕಳು ಹಾಗೂ ಜೀವನದ ಅಸ್ತಿತ್ವ ಹುಡುಕುವ ಪಾತ್ರದಲ್ಲಿ ಕಮಲ್ ಮನೋಜ್ಞ ಅಭಿನಯ ನೀಡಿದ್ದಾರೆ.

ಸ್ವಾತಿ ಮುತ್ಯಂ

ಟಾಮ್ ಹಾಂಕ್ಸ್ ಅವರ ಫಾರೆಸ್ಟ್ ಗಂಪ್ ನ ಪಾತ್ರಕ್ಕೆ ಹೋಲಿಸಬಹುದಾದ ಪಾತ್ರವನ್ನು ಕಮಲ್ ಸಲೀಸಾಗಿ ನಿಭಾಯಿಸಿದರು. ತೆಲುಗಿನ ಚಿತ್ರಕ್ಕೆ ನಂದಿ ಪ್ರಶಸ್ತಿ ಗೆದ್ದ ಕಮಲ್ ತಮಿಳಿಗೆ ಡಬ್ ಆದ ಚಿತ್ರದಲ್ಲಿ ಪ್ರೇಕ್ಷಕರನ್ನು ಗೆಲ್ಲಲಾಗಲಿಲ್ಲ.

ಮೈಕಲ್ ಮದನ್ ಕಾಮರಾಜನ್

90ರ ದಶಕದಲ್ಲಿ ಹಾಸ್ಯದ ಹೊನಲು ಹರಿಸಿದ ಈ ಚಿತ್ರದಲ್ಲಿ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಂಡ ಕಮಲ್ ಅವರು ವೈವಿಧ್ಯಮಯ ನಟನೆ ನೀಡಿದರೂ ಹೆಚ್ಚು ಚಿತ್ರ ಹೆಚ್ಚಾಗಿ ಗುರುತಿಸಿಕೊಳ್ಳಲಿಲ್ಲ

English summary
Happy Birthday to Universal Star Kamal Haasan. Actor-filmmaker Kamal Haasan, who turned 59 Thursday has given best performance in some under rated films which gone unnoticed. Here are the list of such movies
Please Wait while comments are loading...