ಮೊದಲ ಬಾರಿ ಉಪ್ಪಿಗೆ ಜೋಡಿಯಾಗ್ತಿದ್ದಾರೆ ಹರಿಪ್ರಿಯಾ
ಇತ್ತೀಚೆಗಷ್ಟೇ 'ಅಮೃತಮತಿ' ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಖುಷಿ ಹಂಚಿಕೊಂಡಿದ್ದ ನಟಿ ಹರಿಪ್ರಿಯಾ, ರಿಯಲ್ ಸ್ಟಾರ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
Recommended Video
ಉಪೇಂದ್ರ ಸದ್ಯ, 'ಕಬ್ಜ' ಮತ್ತು 'ಬುದ್ಧಿವಂತ 2' ಚಿತ್ರಗಳಲ್ಲಿ ನಟಿಸುತ್ತಿದ್ದು, ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದರಲ್ಲಿ ಅವರಿಗೆ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ 12 ವರ್ಷಗಳ ಬದುಕಿನಲ್ಲಿ ಹರಿಪ್ರಿಯಾ ಇದೇ ಮೊದಲ ಬಾರಿ ಉಪೇಂದ್ರ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಕೆ. ಮಾದೇಶ್ ಅವರ ಮುಂಬರುವ ಚಿತ್ರದಲ್ಲಿ ಉಪ್ಪಿ-ಹರಿಪ್ರಿಯಾ ಜತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಜಾಹೀರಾತಿನಲ್ಲಿ ಉಪೇಂದ್ರ ಜತೆ ಹರಿಪ್ರಿಯಾ ನಟಿಸಿದ್ದರು. ಈಗ ಸಿನಿಮಾದಲ್ಲಿಯೂ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಕಥೆ ಕೇಳಿ ಹರಿಪ್ರಿಯಾ ಖುಷ್
'ಉಪೇಂದ್ರ ಅವರೊಂದಿಗೆ ನಟಿಸುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ. ನೈಜತೆಯ ಅಂಶಗಳುಳ್ಳ ಸಿನಿಮಾ ಇದು. ಇಂದಿನ ಜಗತ್ತಿನ ಕಥೆಯನ್ನು ಇದು ಹೇಳಲಿದೆ. ನನಗೆ ಕಥೆ ವಿವರಿಸಿದ ನಿರ್ದೇಶಕ ಮಾದೇಶ್, ಈ ಪಾತ್ರ ನಿಮಗೆ ತುಂಬಾ ಹೊಂದಿಕೆಯಾಗುತ್ತದೆ. ನೀವೇ ಅಭಿನಯಿಸಬೇಕು ಎಂದಾಗ ನಿಜಕ್ಕೂ ಸಂತೋಷವಾಯಿತು. ಈ ಚಿತ್ರದಲ್ಲಿ ನಟನೆಗೆ ಬಹಳ ಅವಕಾಶವಿದೆ' ಎಂದು ಹರಿಪ್ರಿಯಾ ಸಂತಸ ಹಂಚಿಕೊಂಡಿದ್ದಾರೆ.

ಆಸಕ್ತಿಕರ ಕಥೆ
'ನಾವು 'ಉಪ್ಪಿ ರುಪ್ಪಿ'ಯಲ್ಲಿ ಜತೆಯಾಗಿ ಕೆಲಸ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ವಿಳಂಬವಾಗಿದೆ. ಈಗ ನಾವು ಒಂದು ಆಸಕ್ತಿಕರ ಕಥೆಯೊಂದಿಗೆ ಜತೆಯಾಗಿದ್ದೇವೆ. ಇದು ಜಾಗತಿಕ ಕಥೆಯನ್ನು ಹೊಂದಿದೆ. ಮೇ ಅಂತ್ಯದಲ್ಲಿ ಸಿನಿಮಾ ಆರಂಭಿಸಲು ಚಿಂತನೆ ನಡೆಸಿದ್ದೇವೆ' ಎಂದು ಮಾದೇಶ್ ಹೇಳಿದ್ದಾರೆ.

ಬರುತ್ತಿದ್ದಾರೆ ಸಾಧು ಕೋಕಿಲ ಮಗ
ಮೊದಲ ಬಾರಿಗೆ ಉಪೇಂದ್ರ-ಹರಿಪ್ರಿಯಾ ಜೋಡಿ ಅಭಿಮಾನಿಗಳಿಗೆ ರಸದೌತಣ ನೀಡುವುದಲ್ಲದೆ, ಮಾದೇಶ್ ಮತ್ತೊಂದು ಹೊಸ ಪರಿಚಯವನ್ನೂ ಚಿತ್ರರಂಗಕ್ಕೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಾಧುಕೋಕಿಲ ಹಾಗೂ ಅವರ ಮಗ ಸುರಾಗ್ ಕೋಕಿಲ ಇಬ್ಬರೂ ಸೇರಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಉಪ್ಪಿ ಕೈಯಲ್ಲಿ ಹಲವು ಸಿನಿಮಾಗಳು
ಉಪೇಂದ್ರ ಸದ್ಯ ಚಂದನವನದಲ್ಲಿ ಬಿಜಿಯಾಗಿರುವ ನಟರಲ್ಲಿ ಒಬ್ಬರು. ಅವರ 'ಹೋಮ್ ಮಿನಿಸ್ಟರ್' ಬಿಡುಗಡೆಗೆ ಸಿದ್ಧವಾಗುತ್ತಿದೆ. ಅವರ 'ರವಿಚಂದ್ರ' ಮತ್ತು ಬುದ್ಧಿವಂತ 2 ಚಿತ್ರಗಳು ಅಂತಿಮ ಹಂತದ ಚಿತ್ರೀಕರಣದಲ್ಲಿವೆ. 'ಕಬ್ಜ' ಚಿತ್ರದ ಚಿತ್ರೀಕರಣ ಎರಡನೆಯ ಹಂತದಲ್ಲಿ ಸಾಗುತ್ತಿದೆ. ಜತೆಗೆ 'ಕರ್ವ' ಖ್ಯಾತಿಯ ನಿರ್ದೇಶಕ ತರುಣ್ ಶಿವಪ್ಪ ಮತ್ತು ಶಶಾಂಕ್ ಜತೆಗೆ ಉಪ್ಪಿ ನಟಿಸಬೇಕಿದೆ.


Click it and Unblock the Notifications











