ಹರ್ಷಿಕಾ-ಭುವನ್ ಮಗಳಿಗೆ 'ತ್ರಿದೇವಿ' ಎಂದು ನಾಮಕರಣ; ಈ ಹೆಸರನ್ನೇ ಯಾಕಿಟ್ಟರು ಅನ್ನೋದು ಗೊತ್ತೇ?
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಸಂಭ್ರಮದಲ್ಲಿದ್ದಾರೆ. ಇಂದು (ಮೇ 3) ತಮ್ಮ ಪುತ್ರಿಯ ನಾಮಕರಣ ಸಮಾರಂಭವನ್ನು ಕೊಡಗಿನ ವಿರಾಜಪೇಟೆಯಲ್ಲಿ ಇಟ್ಟುಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಹರ್ಷಿಕಾ ಹಾಗೂ ಭುವನ್ ದಂಪತಿ ಕಳೆದ ವರ್ಷ (2024) ಅಕ್ಟೋಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇಂದು (ಮೇ 3) ತಮ್ಮ ಊರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮ ಪುತ್ರಿಗೆ ನಾಮಕರಣ ಮಾಡುತ್ತಿದ್ದಾರೆ. ಈಗಾಗಲೇ ಪುತ್ರಿಗೆ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಡಲಾಗಿದೆ. ಈಗಾಗಲೇ ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಹೆಸರನ್ನು ರಿವೀಲ್ ಮಾಡಿದ್ದಾರೆ. ಕೊಡವ ಸಂಪ್ರದಾಯದಂತೆ ಇಂದು ವಿರಾಜಪೇಟೆಯಲ್ಲಿ ಮಗಳ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮಗಳ ನಾಮಕರಣದಲ್ಲಿ ಸ್ಯಾಂಡಲ್‌ವುಡ್‌ನ ಸಿನಿಮಾ ತಾರೆಯರು ಹಾಗೂ ಸ್ನೇಹಿತರು ಭಾಗವಹಿಸುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ದಂಪತಿ ತಮ್ಮ ಮಗಳಿಗೆ 'ತ್ರಿದೇವಿ' ಎಂದೇ ಯಾಕೆ ಹೆಸರಿಟ್ಟರು. ಈ ಹೆಸರಿನ ಹಿಂದಿರುವ ಅರ್ಥವೇನು? ಇದೆಲ್ಲದಕ್ಕೂ ಈ ಜೋಡಿಯೇ ಉತ್ತರವನ್ನು ಕೂಡ ಕೊಟ್ಟಿದೆ. ಹಾಗಿದ್ದರೆ, ಹರ್ಷಿಕಾ ಭುವನ್ ಮಗಳಿಗೆ ತ್ರಿದೇವಿ ಎಂದು ಯಾಕೆ ಹೆಸರಿಟ್ಟರು? ತಿಳಿಯಲು ಮುಂದೆ ಓದಿ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಅದೂ 2024, ಅಕ್ಟೋಬರ್ ತಿಂಗಳು ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗುವನ್ನು ತಮ್ಮ ಪ್ರಪಂಚಕ್ಕೆ ಈ ದಂಪತಿ ಸ್ವಾಗತಿಸಿದ್ದರು. ಅಂತಹ ಶ್ರೇಷ್ಠ ದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಮಗಳಿಗೆ ಹೆಸರನ್ನು ಕೂಡ ದೇವಿಯ ಹೆಸರಲ್ಲೇ ಇಡಬೇಕು ಎಂದು ತೀರ್ಮಾನಿಸಿದ್ದರು. ಅಷ್ಟಕ್ಕೂ ತ್ರಿದೇವಿ ಎಂದು ಹೆಸರು ಇಟ್ಟಿದ್ದಕ್ಕೆ ಕಾರಣವನ್ನು ಅವರೇ ಹೇಳಿಕೊಂಡಿದ್ದಾರೆ.
ಹೆಣ್ಣು ಮಗು ಜನಿಸಿದ ದಿನದಿಂದ ಮಗುವಿನ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಾಮಕರಣ ಮಾಡಿ, ತಮ್ಮ ಅಭಿಮಾನಿಗಳಿಗೆ ಪುತ್ರಿಯ ಮುಖವನ್ನು ತೋರಿಸಿದ್ದಾರೆ. ಹಾಗೇ ಭುವನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ "ಇವತ್ತು ಮಗಳಿಗೆ ವಿಶೇಷ ದಿನ. ಅವಳ ನಾಮಕರಣದ ದಿನ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭಾಶಯಗಳು ಬೇಕು. ಮುಂದೆ ಅವಳು ಮಾನವೀಯತೆಯನ್ನು ಪ್ರಪಂಚಕ್ಕೆ ಹಂಚುವವಳಾಗಬೇಕು" ಎಂದಿದ್ದಾರೆ.
ಹಾಗೆಯೇ ತಮ್ಮ ಮಗಳಿಗೆ ಈ ಹೆಸರನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವುದಕ್ಕೂ ಕಾರಣಗಳನ್ನು ತಿಳಿಸಿದ್ದಾರೆ. ಹಿಂದುತ್ವದ ಪ್ರಕಾರ, ಮೂವರು ಪ್ರಮುಖ ದೇವಿಗಳನ್ನು 'ತ್ರಿದೇವಿ' ಎಂದು ಕರೆಯುತ್ತಾರೆ. ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ (ದುರ್ಗಾ) ಇವರಿಗೆ ತ್ರಿದೇವಿ ಎನ್ನುತ್ತಾರೆ. ಹಾಗೆಯೇ ಇವರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಶಿವನ ಪತ್ನಿಯರು. ಇವರು ಜ್ಞಾನ, ಸಂಪತ್ತು ಹಾಗೂ ಪ್ರೀತಿಯನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ.
ತ್ರಿದೇವಿ ಎಂದು ಹೆಸರು ಇಡುವುದಕ್ಕೆ ಇನ್ನೂ ಒಂದು ಕಾರಣವಿದೆ. ತ್ರೀ (3) ಅಂತ ಹೆಸರನ್ನು ಆರಂಭ ಮಾಡಿದ್ದಕ್ಕೆ ಕಾರಣ ಪುತ್ರಿಯ ಹುಟ್ಟಿದ ದಿನ ಹಾಗೂ ಸಮಯ ಕೂಡ ಕಾರಣ. ಅಕ್ಟೋಬರ್ 4ನೇ ತಾರೀಕಿನಂದು ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಪುತ್ರಿಗೆ ಜನ್ಮ ನೀಡಿದ್ದರು. ಇನ್ನು ದೇವಿ ಹೆಸರು ಇಟ್ಟಿದ್ದಕ್ಕೆ ಕಾರಣ ನವರಾತ್ರಿಯ ಮೊದಲ ದಿನ ಜನಿಸಿದ್ದು ಒಂದಾದರೆ, ಇನ್ನೊಂದು ಮೂಕಾಂಬಿಕೆಯ ಆಶೀರ್ವಾದದಿಂದಲೇ ಮಗು ಜನಿಸಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಪೊನ್ನಕ್ಕ ಎನ್ನುವುದನ್ನು ಪೊನ್ನಣ್ಣ ಹಾಗೂ ಹರ್ಷಿಕಾ ಹೆಸರನ್ನು ಸೇರಿಸಿ ಇಡಲಾಗಿದೆ ಎಂದಿದ್ದಾರೆ.


Click it and Unblock the Notifications











