"ನಮಗೆ ವಿಕೃತಕಾಮಿ ಮುಖ್ಯ ಅಲ್ಲ.. 2 ಸಾವಿರ ಹೆಣ್ಣು ಮಕ್ಕಳು ಮುಖ್ಯ"; ಹುಬ್ಬಳ್ಳಿಯಲ್ಲಿ ಪ್ರಕಾಶ್ ರಾಜ್ ಕಿಡಿ
ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಸಂಚಲ ಸೃಷ್ಟಿಸಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಪ್ರಜ್ವಲ್ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಈಗಾಗಲೇ ಪ್ರಜ್ವಲ್ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ವಿರುದ್ಧ ಸಮಸ್ಸ್ ನೀಡಲಾಗಿದೆ.
ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಜಂಟಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಈ ಹಿಂದೆನೇ ಕಿಡಿಕಾರಿದ್ದರು. ಈಗ ಮತ್ತೆ ಹುಬ್ಬಳ್ಳಿಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಅಮಿತಾ ಶಾ ವಿರುದ್ಧ ಧ್ವನಿ ಎತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್ ಪ್ರಕರಣ ದಿನದಿಂದ ದಿನಕ್ಕೆ ಉಗ್ರಸ್ವರೂಪ ತಾಳುತ್ತಿದೆ. ಕಾಂಗ್ರೆಸ್ ಮುಖಂಡರು ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಸಮರ ಸಾರುತ್ತಿದ್ದಾರೆ. ಇತ್ತ ಸಿನಿಮಾ ತಾರೆಯರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಸಂತ್ರಸ್ತ ಮಹಿಳೆಯರ ಪರ ನಿಂತಿದ್ದಾರೆ. ಹುಬ್ಬಳ್ಳಿಯ ಸಮಾರಂಭದಲ್ಲಿ ಪ್ರಕಾಶ್ ರಾಜ್ ಕೂಡ "2 ಸಾವಿರ ಹೆಣ್ಣು ಮಕ್ಕಳು ಮುಖ್ಯ. ವಿಕೃತ ಕಾಮಿಯಲ್ಲ ಎಂದು ಹೇಳಿದ್ದಾರೆ.
"ಈ ಕೃತ್ಯ ಎಸಗಿದವನದ್ದೂ ಹೇಗೆ ತಪ್ಪೋ.. ಹಾಗೇ ಆ ಹೆಣ್ಣು ಮಕ್ಕಳ ವಿಡಿಯೋ ಹಂಚಿದವನೂ ಅಷ್ಟೇ ತಪ್ಪು ಮಾಡಿದ್ದಾನೆ. ನಮ್ಮ ಸೂಕ್ಷ್ಮತೆ ಹೇಗಿರಬೇಕು. ಅವರವರ ರಾಜಕೀಯ ವಿಷಯಗಳು ಬೇರೆ. ನಮ್ಮ ಸೂಕ್ಷ್ಮತೆ ಆ ಹೆಣ್ಣು ಮಕ್ಕಳ ಬಗ್ಗೆ ಯೋಚನೆ ಮಾಡಬೇಕು. " ಎಂದು ಪ್ರಕಾಶ್ ರಾಜ್ ಹುಬ್ಬಳಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದೇ ವೇಳೆ ಅಮಿತ್ ಶಾ ವಿರುದ್ಧವೂ ಕಿಡಿಕಾರಿದ್ದಾರೆ. ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ. ಹಾಗೇ ಪ್ರಜ್ವಲ್ ರೇವಣ್ಣನನ್ನು ವಿಕೃತಕಾಮಿ ಅಂತ ಕರೆದಿದ್ದು, ಆ ಎರಡು ಸಾವಿರ ಸಂತ್ರಸ್ತೆಯರು ಮುಖ್ಯ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

"ಇವತ್ತು ಚಾಣಕ್ಯ ಅಮಿತ್ ಶಾ ಅವರು ಬಾಯಿ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದವರು ಏನೂ ಮಾಡುವುದಕ್ಕೆ ಆಗಲ್ಲ. ರಾಜ್ಯ ಸರ್ಕಾರದವರು ಮಾಡಬೇಕು. ಮಾನ ಮರ್ಯಾದೆ ಬೇಡ್ವಾ? ನಿನ್ನ ಪಕ್ಷದ ಜನರನ್ನು, ನಿನ್ನ ಪಕ್ಷದ ಮಹಿಳೆಯರನ್ನು ಪ್ರತಿಭಟನೆ ಮಾಡುವುದಕ್ಕಾದರೂ ಹೇಳಪ್ಪ. ನಮಗೆ ವಿಕೃತಕಾಮಿ ಮುಖ್ಯ ಅಲ್ಲ. ಎರಡು ಸಾವಿರ ಹೆಣ್ಣು ಮಕ್ಕಳು ಮುಖ್ಯ." ಎಂದು ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಸದ್ಯ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೆನ್‌ಡ್ರೈವ್ ಹೇಗೆ ಹಂಚಿ ಆಯ್ತು? ಹೆಣ್ಣು ಮಕ್ಕಳ ಗೌರವವನ್ನು ಯಾಕೆ ರಕ್ಷಣೆ ಮಾಡಿಲ್ಲ? ಇಂತಹದ್ದೇ ಒಂದಿಷ್ಟು ವಿಷಯಗಳ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದಾರೆ.
"ಆ ಪೆನ್ ಡ್ರೈವ್ ನೋಡಿ ನಮಗೆ ಸಂಬಂಧವಿಲ್ಲ ಅಂತ. ಇವರು ಯಾರೋ ಬಿಜೆಪಿಯವರಿಗೆ ಕೊಟ್ಟರಂತೆ. ಕಾಂಗ್ರೆಸ್‌ವರಿಗೆ ಮುಂಚೆನೇ ಕೊಟ್ಟು ಬಿಟ್ಟರು ಅಂತ. ಈಗ ಆ ಡ್ರೈವರ್ ಹೊರಗಡೆ ಬಂದಿದ್ದಾನೆ. ನಾನು ಕಾಂಗ್ರೆಸ್‌ಗೆ ಕೊಟ್ಟಿಲ್ಲ. ಆಗ ಕಾಂಗ್ರೆಸ್, ಜೆಡಿಎಸ್ ಒಟ್ಟಿಗೆ ಇತ್ತು. ಇವರು ರೇವಣ್ಣನ ಹತ್ತಿರ ಸೋತಿದ್ರಲ್ಲ ಇವರಿಗೆ ಮಾತ್ರ ಕೊಟ್ಟೆ, ಇವರು ಮೋಸ ಮಾಡಿ, ನನಗೆ ಮೋಸ ಮಾಡುತ್ತಿದ್ದಾರೆ ಅಂತಿದ್ದಾನೆ. ಯಾರನ್ನು ನಂಬೋದು ಈ ದೇಶದಲ್ಲಿ. ಯಾರನ್ನು ಹೇಗೆ ನಂಬೋದು?" ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











