ಗುರುಪ್ರಸಾದ್ ಅತ್ತಿದ್ದೇ ನೋಡಿದ್ದೇ ಕಡಿಮೆ; 10 ವರ್ಷದ ಹಿಂದೆ ಬಹಿರಂಗವಾಗಿ ಕಣ್ಣೀರು ಹಾಕಿದ್ದೇಕೆ?
'ಮಠ', 'ಎದ್ದೇಳು ಮಂಜುನಾಥ' ಸಿನಿಮಾದ ನಿರ್ದೇಶಕ ಗುರುಪ್ರಸಾದ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಹಲವು ವೇದಿಕೆಗಳಲ್ಲಿ ಬದುಕಿನ ಬಗ್ಗೆ ಮಾತಾಡುತ್ತಿದ್ದ ಗುರುಪ್ರಸಾದ್ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಊಹಿಸಿರಲಿಲ್ಲ. ಒಬ್ಬ ಬುದ್ದಿವಂತ ನಟನನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ಮಾತ್ರ ದೊಡ್ಡ ನಷ್ಟ.
ಗುರುಪ್ರಸಾದ್ ಯಾವಾಗಲೂ ಮನಸ್ಪೂರ್ತಿಯಾಗಿ ನಗುತ್ತಿದ್ದರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಂತೆ ಗುರುಪ್ರಸಾದ್ ನಕ್ಕರೆ ಒಂದು ಕಿಲೋಮೀಟರ್‌ವರೆಗೂ ಕೇಳಿಸುತ್ತಿತ್ತು. ಜಾಲಿಯಾಗಿ ಬದುಕಿದ ಗುರುಪ್ರಸಾದ್ ಬಿದ್ದಿ ಬಿದ್ದು ನಕ್ಕಿದ್ದನ್ನು ನೋಡಿದ್ದಾರೆ. ಅದೇ ಬಿಕ್ಕಿ ಬಿಕ್ಕಿ ಅತ್ತಿದ್ದನ್ನು ನೋಡಿದ್ದು ತೀರಾ ಕಡಿಮೆ.

ತನ್ನೊಳಗಿದ್ದ ನೋವನ್ನು ಅವರು ಎಂದಿಗೂ ಹೇಳಿಕೊಳ್ಳಲಿಲ್ಲ. ಆ ನೋವನ್ನು, ಕಷ್ಟವನ್ನು ಗೇಲಿ ಮಾಡಿ ನಗಿಸುತ್ತಿದ್ದವರು ಗುರುಪ್ರಸಾದ್. ಅವರ ಬಗ್ಗೆ ಗೇಲಿ ಮಾಡಿ ಮಾತಾಡಿದರೂ, ಅವರೊಂದಿಗೆ ಸೇರಿ ನಗುತ್ತಿದ್ದವರು ಇದೇ ಡೈರೆಕ್ಟರ್. ಆದರೆ, ಒಮ್ಮೆ ಬಹಿರಂಗವಾಗಿ ಬಿಕ್ಕಿ ಬಿಕ್ಕಿ ಅಂತಿದ್ದಾರೆ. ಅವರ ಅಗಲಿಕೆ ಬಳಿಕ ಆ ವಿಡಿಯೋ ವೈರಲ್ ಆಗುತ್ತಿದೆ.
ನಿರ್ದೇಶಕ ಗುರುಪ್ರಸಾದ್ ಕ್ಯಾಮರಾ ಮುಂದೆ ಅತ್ತಿದ್ದನ್ನು ನೋಡಿದವರು ತೀರಾ ವಿರಳ. ತಮ್ಮ ಕಷ್ಟಗಳನ್ನು ಹೇಳಿಕೊಂಡು, ನೋವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದೇ ಯಾರಿಗೂ ನೆನಪು ಇದ್ದಂತೆ ಇಲ್ಲ. ಯಾಕಂದ್ರೆ, ಅವರ ಹೈ ವೋಲ್ಟೇಜ್ ನಗುವೇ ಹೆಚ್ಚಾಗಿ ನೋಡುವುದಕ್ಕೆ ಸಿಗುತ್ತೆ. ಆದರೆ, ಒಮ್ಮೆ ಕ್ಯಾಮರಾ ಮುಂದೆ ಗಳಗಳನೇ ಕಣ್ಣೀರು ಹಾಕಿದ್ದರು. ಆ ಕ್ಷಣ ಅವರು ಬಿಗ್ ಬಾಸ್‌ಗೆ ಹೋಗಿದ್ದಾಗ ನಡೆದಿತ್ತು.

ಗುರುಪ್ರಸಾದ್ ಬಿಗ್‌ಬಾಸ್ ಸೀಸನ್ 2ರ ಸ್ಪರ್ಧಿಯಾಗಿದ್ದರು. ಪ್ರಬಲ ಪೈಪೋಟಿ ಕೊಟ್ಟು ಕೊನೆಯ ಹಂತದವರೆಗೂ ಉಳಿದುಕೊಂಡಿದ್ದರು. ಎರಡನೇ ಸೀಸನ್‌ನಲ್ಲಿಯೇ ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಿದ್ದರು. ಆ ಸೀಸನ್‌ನಲ್ಲಿ ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ನೀತು, ಆದಿ ಲೋಕೇಶ್, ಬುಲೆಟ್ ಪ್ರಕಾಶ್ ಎಲ್ಲರೂ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಯಾವುದೋ ಒಂದು ಕ್ಷಣದಲ್ಲಿ ಕಣ್ಣೀರು ಹಾಕಿದ್ದರು.
ಬಿಗ್‌ಬಾಸ್‌ನಲ್ಲಿ ಗುರುಪ್ರಸಾದ್ ಜರ್ನಿಯನ್ನು ಸ್ಟಾರ್ ಸುವರ್ಣ ಚಿಕ್ಕದೊಂದು ತುಣುಕಾಗಿ ಪ್ರಸಾರ ಮಾಡಿತ್ತು. ಅದರಲ್ಲಿ ಗುರುಪ್ರಸಾದ್ ಕುಚೆಷ್ಟೆ, ಕೋಪದಿಂದ ಹಿಡಿದು ಕಣ್ಣೀರು ಹಾಕಿದ್ದ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಆ ವೇಳೆ ಗುರುಪ್ರಸಾದ್ ಆಡಿದ ಕೆಲವು ಜನಪ್ರಿಯ ಮಾತುಗಳನ್ನು ಬಿಂಬಿಸಿತ್ತು. ಅದು ಹೀಗಿದೆ.
"ಯಾರಿಗೆ ಇಷ್ಟ ಆಗಬೇಕು. ನನಗೆ ಇಷ್ಟ ಆಗುವ ಹಾಗೆ, ನನ್ನ ಮನ:ಸಾಕ್ಷಿಗೆ ಇಷ್ಟ ಆಗುವ ಹಾಗೆ, ನನ್ನ ಆರೋಗ್ಯಕ್ಕೆ ಇಷ್ಟ ಆಗುವ ಹಾಗೆ ಬದುಕುತ್ತೇನೆ ನಾನು", ಹಾಗೇ "ಒಳ್ಳೆಯದು ಬಂದಾಗ ಗುರುತಿಸಬೇಡಿ. ಇಂತಹವನ್ನು ಇಟ್ಟುಕೊಂಡು ಆಟ ಆಡುತ್ತೇನೆ ಅಂದರೆ, ಅದಕ್ಕೆ ಉತ್ತರಗಳು ನನ್ನ ಹತ್ತಿರವಿದೆ." ಎಂದು ಖಡಕ್ ಆಗಿ ಮಾತಾಡಿದ್ದರು.
ಇನ್ನೊಂದು ಸಂದರ್ಭದಲ್ಲಿ "ಮಲಗಿರುವ ಹೆಣಗಳಿಗೆ ನಾನು ಕಥೆ ಹೇಳಲ್ಲ" ಎಂದಿದ್ದರು. "ಕಕ್ಕ ತಡೆದುಕೊಳ್ಳಬೇಕು, ನಿದ್ದೆ ತಡೆದುಕೊಳ್ಳಬೇಕು. ಇವನ್ನೆಲ್ಲ ಮಾಡಿದರೆ, ಬಿಗ್‌ಬಾಸ್‌ನಲ್ಲಿ ಅವನಿಗೆ ಪಟ್ಟ" ಎಂದು ಬಿಗ್ ಬಾಸ್ ವಿರುದ್ಧ ತಿರುಗಿಬಿದ್ದಿದ್ದರು.
ಬಿಗ್‌ಬಾಸ್‌ನಲ್ಲಿ ಇಂತದ್ದೇ ಒಂದು ಸಂದರ್ಭದಲ್ಲಿ ಕಥೆ, ಸಂಭಾಷಣೆ ಬಗ್ಗೆ ಮಾತಾಡುವಾಗ ನಿರ್ದೇಶಕ ಗುರುಪ್ರಸಾದ್ ಕಣ್ಣೀರು ಹಾಕಿದ್ದರು. ರೂಮ್‌ನಿಂದ ಹೊರ ಬಂದು ತಾನು ಅತ್ತಿದ್ದೇಕೆ ಅನ್ನೋದನ್ನು ಮನಸ್ಸು ಬಿಚ್ಚಿ ಹೇಳಿಕೊಂಡಿದ್ದರು. "ಎಷ್ಟೋ ವರ್ಷಗಳ ನಂತರ ನನ್ನ ಕಣ್ಣಲ್ಲಿ ನೀರು ಬಂದಿತ್ತು" ಎಂದಿದ್ದರು. ಹಾಗೇ ಮತ್ತೊಂದು ಸಂದರ್ಭದಲ್ಲಿ ಬಿಗ್ ಬಾಸ್ ಮನೆಯೊಳಗೆ ಮಗಳು ಬಂದು ತಬ್ಬಿಕೊಂಡಾಗಲೂ ಕಣ್ಣೀರು ಗುರು ಪ್ರಸಾದ್ ಹಾಕಿದ್ದರು.


Click it and Unblock the Notifications










